ಹೇಗೆ ಹೇಳಲೇ ಗೆಳತಿ
ದಿನವಿಡಿ ಹರಿಯದೇ ಧ್ಯಾನ,
ಈ ಕಳ್ಳನ ಮಾಯೆಗೆ ಸಿಕ್ಕಿ
ಕಳೆದುಕೊಂಡೆನೇ ಮಾನ

ಇವನಿಗೆ ಕಾದೂ ಕಾದೂ
ಮೈಯೆಲ್ಲಾ ಬಿಸಿ ಬಾಣಲೆ
ಬತ್ತ ಸಿಡಿಸಿದರು ಸಾಕು
ಅರಳಾಗುವುದೇ ಕೂಡಲೆ

ಹೇಳದೆ ಬಂದೇ ಬಿಡುವ
ಕರೆದರೂ ಬಾರದ ಹುಡುಗ,
ಮರುಳು ಮಾಡಿಯೇ ಬಿಡುವ
ಹಾಲು ಬೆಣ್ಣೆಗಳ ತುಡುಗ.

ಏನು ಧೀರನೇ ಪೋರ
ದಿನ್ನೆಯ ಸಲೀಸು ಏರುವ
ಎಲ್ಲರ ಕಣ್ಣೂ ತಪ್ಪಿಸಿ
ಕಣಿವೆಯ ತಳಕೂ ಇಳಿವ

ಈ ದಿನ ಸಿಕ್ಕೇ ಸಿಗುವ
ಎನ್ನಿಸುವುದು ಭ್ರಮೆಯಲ್ಲಿ
ಸಿಗುವುದೇನೊ ಹರಿ ನಿಜವೇ
ತಪ್ಪದೆ ರಾತ್ರಿ ಕನಸಲ್ಲಿ.
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)