ಹೇಗೆ ತಿಳಿವೆ ನೀ ಹೇಳೆ ಸಖೀ
ಒಲಿದ ನನ್ನ ಪಾಡು?
ಲೋಕದ ಕಣ್ಣಿಗೆ ನನ್ನೀ ಪ್ರೇಮ
ಶ್ರುತಿಮೀರಿದ ಹಾಡು

ಹಿರಿಯರ ಮೀರಿ ಕೃಷ್ಣನ ಕಂಡೆ
ಕೊಟ್ಟೆ ಬೆಣ್ಣೆ ಹಾಲು
ಸವಿದನು ಎಲ್ಲ ನುಡಿಸಿದ ಕೊಳಲ
ಜುಮ್ಮೆಂದಿತು ಕಾಡು

ಒಂದೇ ಸಮನೆ ಹಳಿವರು ಹಿರಿಯರು
ಪ್ರಾಯದ ಮದ ಎಂದು
ಗಡಿ ಮಡಿ ಲಜ್ಜೆಯ ಹಂಗೇ ಇರದ
ನಡತೆಗೇಡಿ ಎಂದು

ಮಡಿಗಳ ಮೀರದ ಆ ಮೋಹನನ
ಕಾಣಬಹುದು ಹೇಗೆ?
ಗಡಿಗಳ ದಾಟದೆ ನದಿ ಸಾಗರವನು
ಕೂಡಬಹುದು ಹೇಗೆ?
*****