ಹಾಗೇ ನೋಡ್ತಾ ನೋಡ್ತಾ ಹೋದ್ರೆ
ನನ್ ಲಚ್ಮೀನೆ ಒಳ್ಳ್ಯೋಳು |
ಘಟ್ಟ್ಯಾಗೇನೊ ಮಾತಾಡ್ತಾಳೆ
ಆದ್ರೂನೂವೆ ಒಳ್ಳ್ಯೋಳು ||

ಅವ್ಳೂ ಬಂದು ಸಿದ್ದೇ ಎಡ್ವಿ
ಹದ್ನಾರ್ ವರ್ಷ ಹಾರ್ಹೋಯ್ತು |
ಸೇತ್ವೇ ಕೆಳ್ಗೆ ಕಲ್ಮಣ್ ಮುಚ್ಚಿ
ಹೊನ್ನೀರ್ ಕಾಲ್ವೆ ತುಂಬ್ಹೋಯ್ತು||

ತುಂಬಿದ್ ಕಾಲ್ವೆ ತೋಟಿಕ್ ನುಗ್ಗಿ
ಚಿನ್ನದ್ ಸೊಪ್ನಾ ಸುರ್ದಿತ್ತು |
ಬೇಲೀ ಸುತ್ತಾ ಹೂವಿನ್ ಸುಗ್ಗಿ
ಜೀವದ್ ಕಣ್ಣೇ ತೆರ್ದಿತ್ತು ||

ಹಳ್ಳ್ಯೋಳೂಂತಾ ಅನ್ನೋರನ್ಲಿ
ಒಳ್ಳೇ ಹೆಂಡ್ತಿ ನನ್ ಲಚ್ಮಿ|
ಬೆಳ್‌ಬೆಳ್‌ಗಿದ್ದೋರ್‌ ಬೆಳ್ಕೊಂಡ್‌ಬರ್ಲಿ
ಪಚ್ಚೇ ಬಳ್ಳಿ ನನ್ ಲಚ್ಮಿ ||

ತೊಟ್ಲೂ ಬಟ್ಲೂ ತಂದೋರ್ಯಾರು
ಅವ್ಳೇ ತಾನೆ ನನ್ ಲಚ್ಮಿ|
ಬಿಸ್ಲಲ್ ಮಳೇಲ್ ನಕ್ಕೋರ್ಯಾರು
ನೊಂದೋರ್ಯಾರು ನನ್ ಲಚ್ಮಿ||

ಹನ್ನೊಂದ್‌ ಘಂಟೇಗನ್ನಾ ಹಾಕಿ
ಕಾಪಾಡೋಳೇ ನನ್ ಲಚ್ಮಿ|
ಮಕ್ಕಳ್ನೆಲ್ಲಾ ತೂಗಿ ಸಾಕಿ
ಬೆಳ್ಸೋ ದೇವ್ರೆ ನನ್ ಲಚ್ಮಿ ||

ಜೊತೇಲ್‌ಬಂದು ಮರೇಲ್‌ನಿಂತು
ನನ್ನೇ ನೋಡ್ತಾಳ್ ನನ್‌ಲಚ್ಮಿ|
ಮೋಡದ್‌ಮರೇಲ್ ಮುಂಗಾರ್‌ಮಿಂಚು
ಹಾಡಿನ್ ತುಂಬಾ ನನ್ ಲಚ್ಮಿ ||
*****

Latest posts by ನರಸಿಂಹಸ್ವಾಮಿ ಕೆ ಎಸ್ (see all)