ಕಲ್ಲುಹೋಯಿತು-ಹಣ್ಣಿಲ್ಲ!

ಮಾಮರದ ಕೊನರೆಲೆ ಅಂಚಿನಲಿ ಮಿನುಗುವ
ಸಿಹಿಮಾವು ಒಂದು ನೋಡಿ,
ಕಣ್ಣರಳಿ ಮನವುರುಳಿ ತನ್ನಲ್ಲೆ ಚಿಂತಿಸಿತು-
ಬೀಳಿಸಲೆ ಬೇಕು ಎಂದು!

ಮರ ಏರಿ ಇನಿವಣ್ಣ ಕೈಯ್ಯಾರೆ ತರಲೆಂದು
ಯೋಚಿಸಿದೆ ತಲೆಯನೆತ್ತಿ;
ಬೆಳೆದಿತ್ತು ಎತ್ತರಕೆ ತೆಂಗು ಕೌಂಗನು ಮೀರಿ
ನೋಡಿದೆ ನಿರಾಶನಾದೆ!

ಅಹೊ ನೋಡು ತನಿವಣ್ಣು ಹಸುರಳಿದು ಬೆಳೆಸಾಗಿ
ಕಾಣುವುದು ತೂಗಿ ಮೇಲೆ,
ಹಾರೆನೋ ಅದು ಸಾಗ!  ನಾನೊರ್ವ ಅಳಿಮನುಜ
ಜೊಲ್ಲರಿಸಿ ನೋಡಿದೆ ನಾ!

ಭೂರಸ ಸತ್ವವನ್ನಡಗಿಸಿ ಹೆಮ್ಮೆಯಿಂ
ಜೋಲುತಿಹೆ ಮಾವೆ ನೀನು;
ನೆನೆದೊಡೇಂ ನಿನ್ನನೂ ದರ್ಪದಲಿ ಇರಿತಾಗ
ಹಣ್ಗಳಾ ‘ಮಾಂವ’-ಎಂದು!

ನೋಡ್ನೋಡಿ ಬೆಂಡಾಗಿ ಕರತಲದಿ ಕಲ್ಚೂರು
ಒಂದಿಡಿದು ಪೇಳ್ದೆ ನಾನು,
ಎಲೆ ಕಲ್ಲೆ, ನೀ ಹಾರಿ ನುಣುಪಾದ ಆ ಹಣ್ಣ
ತಾರೊ ನೀ ಅಂತೆ ನೀನು!

ನೋವ್ಗೀವು ಮಾಡಬೇಡ, ರಭಸದಿ ಹೊಡಿಬೇಡ
ತೆಳ್ದೂಗಲು ಸುಲಿಯಬೇಡ;
ನನಗಾಗಿ ಹಣ್ಣಿಡಿದ ಇಳಿಕೊಂಬೆಯನು ತಾಗಿ
ಬೀಳಿಸೆಲೊ ಹಣ್ಣ ನೀನು!

ಇದೊ ನಾನು ಕಾಯುವೆನು, ಹಿಡಿದಪ್ಪಿಕೊಳ್ಳುವೆನು,
ನಿನಗಂತು ಋಣಿಯೆ-ಎಂದು
ಬೀಸಿದೆ ನಾ ಕೈಯ್ಯನ್ನು ಹಾರಿಸಿದೆ ಕಲ್ಲನ್ನು
ನೋಡಿದೆನು-ಆ ಹಣ್ಣನ್ನು!

ಅಯ್ಯಯ್ಯೊ ಕಲ್ಲೋಯ್ತು, ಹಣ್ಣಲ್ಲೆ ಇರಿತುಂಟು-
ಬೆಪ್ಪನೇ-ನಾನಾದೆನೊ!
ಅಳಿಮನದ ಹಿರಿಯಾಸೆ-ಕರತಲದ ಕಲ್ಮಣಿಯ
ಕಳಕೊಂಡ ದೀನ ನಾನು!

ಹಣ್ಣದೋ ದರ್ಪದಲಿ ಅಣಕಿಪುದು ನನ್ನೋಡಿ,
ತೂಗುತಿಹುದದೊ ನೋಽಡು!
ಸಿಗಲಾರೆ-ಎಂದು ಅದು ಕೊನರೆಲೆ ಮಧ್ಯದಲಿ
ತಲೆ ಅಲ್ಲಾಡಿಸುತಲಿಹುದು

ಸಾಹಸದ ಸಂಕಲ್ಪದವಸಾನ ಇಷ್ಟರಲಿ
ಕಲ್ಲೋಯ್ತು-ಹಣ್ಣಽಲ್ಲ!
ಹಿರಿದಾದ ಆಸೆಯದು ಜಾರುವುದು-ವಿಧಿನಿಯಮ,
ಯತ್ನದಾ ಮೆಟ್ಟಲಿಂದ!!

ಚಂದಿರನ ಹಿಡಿಯಲು ಕೈಲಾಸ ಆಳಽಲು
ಲೋಕಗಳ ಸುತ್ತಲೆಂದು,
ಹುಸಿಯಾಸೆ ರತ್ನಗಳ ತಾಗೈವ ಯತ್ನದಲಿ
ಬೆರೆಸಽಲು-ಆಗದೇನು?

ಜ್ಞಾನಿಗಳ ಆ ನೀತಿ, ಋಷಿಗಳ ಆ ಸೂಕ್ತಿ
ಗಳಿಗೆ ನಾ ಶರಣು ಇಂದು!
ಮರಳಿ ಯತ್ನವ ಮಾಡಿ, ಮರಳಿ ಸಾಧಿಸು-ಎಂದು
ಪೇಳಲದೊ ಶರಣಾದೆನೊ!!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೪
Next post ನನ್‌ ಲಚ್ಮಿ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…