‘ಮಾಸ್ತಿಯವರಾಸ್ತಿ ಆ ಸಣ್ಣ ಕತೆಗಳೆ’ ಎಂದು
ಸಾಂಬಶಾಸ್ತ್ರಿಗಳ ಸಿದ್ಧಾಂತ. ಕೇಶವಮೂರ್ತಿ
‘ಶ್ರೀನಿವಾಸರ ಕವಿತೆ ಒಣ ಗದ್ಯವೇ ’ ಎಂದು
ಎಗರಿ ಬೀಳುವನು. ಈ ಸಂಶಯವೆ ಕವಿಕೀರ್ತಿ.
ಪರಿಚಿತ ಕವಿಗಳೆಲ್ಲ ಬರಿದೆ ರಾರಾಜಿಪರು
ಪ್ರಾಚೀನ ಪ್ರಾರಬ್ಧ ಹೊತ್ತು. ಅದ ಹೊಗಳುವರು
ಶ್ರೀನಿವಾಸರ ಕೃತಿಯನೇನೆಂದು ಮೆಚ್ಚುವರು?
ಗಡವಿಲ್ಲ, ದಲ್ಲಿಲ್ಲ, ಮೇಣ್-ಬತ್ತಿ ಹೊಗೆಯಿಲ್ಲ;
ಅಪ್ರಕೃತ ಸಂಸ್ಕೃತದವಾಂತರದ ಧಗೆಯಿಲ್ಲ.-
ಇಲ್ಲಿ ಜೀವನದಂತೆ ಕವಿತೆ: ಜೀವದ ಉಸಿರು
ಮಳೆಬಿದ್ದ ಸಂಜೆ ಬೀದಿಯಲಿ ಸಾವಿರ ಬೆಳಕು,
ಹಸುರು ನಗೆ, ಕೆಂಪು ಗಾಯಗಳು. ಬಂಡೆಯನುತ್ತು
ಬೆಳೆದ ಮೂಗಿಂಗೆ ಈ ಸಹಜ ಕವಿತೆಯ ಮುತ್ತು
ಗ್ರಾಹ್ಯವಾದೀತೆ? ಇದಕಿಲ್ಲ ಕವಿತೆಯ ಹೆಸರು!
*****

Latest posts by ನರಸಿಂಹಸ್ವಾಮಿ ಕೆ ಎಸ್ (see all)