ಇಲ್ಲಿ ಅವನು ಅಲ್ಲಿ ಅವಳು
ಹೊಸಿಲ ಕುದುರೆಯೇರಿ ಹಸುಳೆ ಆಡುತಿರುವನು.
ಅದರ ಲಲ್ಲೆಯಲ್ಲಿ ನಲವಿ-
ನೆಲ್ಲೆಯನ್ನು ಕಾಣುತವನು ಲಲ್ಲೆಗರೆವನು.
ಬಿಸಿಲ ಹೊಳಪನೊಳಗೆ ಚೆಲ್ಲಿ
ನೋಟದಿಂದ ಆಸೆಸರಳನವಳಿಗೆಸೆಯುತ
ನಡೆವನೊಬ್ಬ ಗುಡಿಯ ಕಡೆಗೆ,
ಮನದ ಗೂಡ, ನೆನಪುದುಂಬಿಯೇಳೆ, ಕೆದಕುತ.
ಎಲೆಗೆ ಕಡ್ಡಿ ಹಚ್ಚಿ ಮುರಿವ
ತಾಳಕೊಂದಿ ನಡೆವುದವಳ ಭವದ ಭಾವನೆ
ಇವನೊಳಿಲ್ಲ ಅವನೊಳಿಲ್ಲ
ಎಳೆಯನಲ್ಲಿ ಮಾತ್ರ ಅರ್ಧ ಅವಳ ಕಾಮನೆ.
ಹತ್ತು ವರ್ಷ ಒಟ್ಟಿಗಿದ್ದೂ
ಮನವ ಮನವ ಒಲುಮೆಕಾವು ಬೆಸೆಯಲಿಲ್ಲವು.
ನಗೆಯ ಜಾಣ ಸಿಡುಕ ಕಾಣ
ಆಕೆಯೆಂದರವಗೆ ಪ್ರಾಣ-ಅವಳೆ ಎಲ್ಲವು.
ಮಂದ್ರದಲ್ಲಿ ಇವನ ಮಿಡಿತ
ತಾರದಲ್ಲಿ ಅವಳ ನುಡಿತ-ಶ್ರುತಿಯೆ ಸೇರದು
ಅವಳಾಸೆಯನೀತನೆಟುಕ
ಆಕೆಗಿವನೊಳಾಯ್ತು, ಮರುಕ-ಭಾವವೇರದು.
ಹಸುಳೆ ಅವನದಲ್ಲ-ಎಲ್ಲ
ಜನಕು ಅವರ ಕನಸ ತೋರ್ವ ಗುಡಿಯ ಗುಟ್ಟಿದು.
ಪ್ರಕೃತಿಯ ಹಿಮ್ಮೇಳವಾಗಿ
ಕಾಮನಂದು ಬಾಜಿಸಿದ್ದ ಹಾಡ ಮಟ್ಟಿದು.
ಒಲವನರಿಯದಾಸೆಪುರುಕ
ಇದರ ತಂದೆ; ಕೆಂಡಕಣ್ಣಿನಾಡುದಾಡಿಯ
ಋಷಿಜನಂಗಳಿದರ ಹಿಂದೆ
ತೋರಿ ಮಿಡಿವರಿವಳ ಮನದ ಧರ್ಮನಾಡಿಯ.
ಮರುಳು ಗಂಡ ನೆರೆಯ ಹೊರೆಯ
ಚುಚ್ಚು ಮಾತನರಿಯಲಾರ-ಪ್ರೇಮಬಧಿರನು;
ನೇಹದಿಂದ ಅವಳ ಪೊರೆದು
ಉತ್ಸವದೊಳೆ ಭವಕೆ ತಂದನಾಸೆಕದಿರನು.
ಅಜ್ಞನಲ್ಲ ಪ್ರಾಜ್ಞನಲ್ಲ
ಅನಸೂಯನು ಸಹನಶೀಲ ಸ್ನೇಹಪೂರ್ಣನು;
ಉನ್ನತಮತಿ ಸತ್ಯಕಾಮೆ
ಆದೊಡಸತಿ-ಎಂತು ಬಾಳ್ವಳೆರಡು ಬಾಳನು?
ಒಮ್ಮೆ ನಲಿವಳೊಮ್ಮೆ ಮುನಿವ-
ಳೊಮ್ಮೆ ಅಂಜುತೆದೆಗೆ ಹಸುಳೆಯವಿಚಿಕೊಳುವಳು.
ನಗಲು ನಗುವಳತ್ತು ಕಾಡೆ
ವಿಟನ ಬಗೆಯ ಕಂಡು ಹೇಸುವಂತೆ ಹೊಡೆವಳು.
ಎಳೆಯಗೊಲಿಯೆ ತನಗೆ ಒಲಿವ-
ಳೆನುತ, ಮುಳಿಯೆ ತನಗೆ ಮುಳಿವಳೆನ್ನುತೀತನು
ಹಸುಳೆ ನೋಯೆ ತನಗೆ ನೊಂದ-
ನೆಂದು ನೊಂದು ಮುದ್ದಿನಿಂದ ಮುದ್ದುಗೈವನು.
ನೇಹವೊಂದನರಿತ ಮುಗ್ಧ
ಸಲಿಗೆ ತೋರದೊಲಿಯಬಲ್ಲ ಸರಳನೀ ಪತಿ.
ತನ್ನರಲ್ಲ- ತಾನೆ ಇವರಿ-
ಗೆಂಬ ರೀತಿ ಪ್ರೀತಿಯಿಡಲು ಬಲ್ಲನೀ ಪತಿ.
ಇಂಥ ಶುದ್ಧ ಸತ್ತ್ವನಿಂದ
ಆಕೆಗಾಯ್ತು ಅವಳೆ ನಾಚುವಂಥ ಬಾಳುವೆ.
ಬಾಳ ದಡವ ಮೀರಿ ಹರಿದ
ಕಾಮದೆಡರ ದಾಟಲಾದನಿವನೆ ಸೇತುವೆ.
ಕಾಮಿಯ ಕೆಡುನೋಟ ಸೋಕಿ
ಮನ ಮೈಲಿಗೆಯಾದ ಪರಿಯೊಳಾಕೆ ಈ ದಿನ
ಶುದ್ಧಿ ಗೆಳಸಿ ದಿಟ್ಟಿಸುವಳು
ಸುತನ ಜತೆಗೆ ಲಲ್ಲೆಯಾಡುತಿರುವ ಗಂಡನ.
ಪೊಲ್ಲಾಸೆಯ ನೂರು ಬಲಿಯ
ನೆನೆದು ನೋಳ್ಪಳಿವನ-ತಣ್ಣನೊಲುಮೆಯವನನು,
ತನ್ನ ವಿಷವನೆಲ್ಲ ಕುಡಿದ
ಇಂದುಧರನೆ ಈತನೆಂಬ ಬೆರಗೊಳಿವನನು.
ಅನ್ಯಳಿಂದು ತನ್ನಳಾದ-
ಳೇನೊ ಎನುವ ತೆರದೊಳಾಕೆಯಾರ್ದ್ರ ದೃಷ್ಟಿಗೆ
ಮರುದಿಟ್ಟಿಯನಿಡುವನೀತ
ಹಸುಳೆ ಎಸೆವ ತೊದಲುನುಡಿಯ ಪುಷ್ಪವೃಷ್ಟಿಗೆ.
*****