ಎಲ್ಲಾ ಚಂದದ ಕನಸುಗಳೂ
ಮಾಗಿಯಲೇ ಯಾಕೆ ಬರುತಾವೆ
ಬಂದೆಮ್ಮ ನಿದ್ದೆಯ ಕೆಡಿಸುತ್ತಾವೆ
ಹೊರಗೋ ತುಂತುರು ಹೇರಳ ಮಂಜು
ಹಗಲೋ ಇರುಳೋ ತಿಳಿಯೋದೆ ಇಲ್ಲ
ನಿದ್ದೆಯು ಒಂದೇ ಎಚ್ಚರವು ಒಂದೇ
ಎನಿಸುವುದೇ ಕುಳಿರ್‍ಗಾಳಿಯಲಿ
ಹೊದ್ದಿಕೆ ಎರಡ್ಮೂರಿದ್ದರು ಒಂದೇ
ಕತೆಗಳೆಷ್ಟಿದ್ದರೂ ಕಾರಣ ಒಂದೇ
ಎಲ್ಲಾ ಕೂತು ಅಗ್ಗಿಷ್ಟ್ಕೆ ಮುಂದೆ
ತೊಪ್ಪದಲಿರುವಂತೆ ಕುರಿಗಳ ಮಂದೆ
ಹೂವಿಗೆ ಬಂದರೆ ರತ್ನ ಕಿರೀಟ
ಸುಳಿದಾವು ಅಲ್ಲಿ ಚಿನ್ನದ ಕೀಟ
ತೋಟದಲಾಮೇಲೆ ಬೆಳದಿಂಗಳೂಟ
ಗಿಡಮರಗಳ ಮರೆ ಬೇರೊಂದು ಆಟ
ಅದು ಎಂಥ ಆಟವೊ
ಅದು ಕೋಲಾಟವೊ
ಕಾಲ್ತೆಗೆದೋಟವೊ
ಅದು ಕಳ್ಳ ನೋಟವೊ
ಕಡೆಗಣೋಟವೊ
ಅದು ಕಣ್ಣಮುಚ್ಚಾಲೊ
ಅದು ಬಾಯ್ಮುಚ್ಚಾಲೊ
ಏ ಬೆಡಗಿ ನೀ ಎಲ್ಲಿಂದ ಬಂದಿ
ನಿನ್ನ ಹೆಸರೇನಂದಿ
ಮಾಗಿಯಲೇ ಯಾಕೆ ಹುಡುಕಾಡಿ ಬಂದಿ
ಮಾಗಿಯಲೇ ಯಾಕೆ ಕನಸುಗಳ ತಂದಿ
ಮಾಗಿಯಲೇ ಯಾಕೆನ್ನ ಮಾಡಿದಿ ತೋಳ್ಬಂದಿ
ಮಾಗಿಯಲೇ ಯಾಕೆ ನಿದ್ದೆ ಕೆಡಿಸಿದಿ
ಮಾಗಿಯಲೇ ಯಾಕೆ ಎದ್ದು ಕೂಡಿಸಿದಿ
ಮಾಗಿಯಲೇ ಯಾಕೆ
ಹುಚ್ಚೆದ್ದು ಕುಣಿಸಿದಿ
ಮಾಗಿಯಲೇ
ಎಲ್ಲ ಮಾಗಿಯಲೇ
*****