ಹುಟ್ಟುವುದಿದ್ದರೆ ಮರುಜನುಮದಲಿ
ಕನ್ನಡ ನಾಡಲ್ಲೆ ಈ
ಚಿನ್ನದ ಬೀಡಲ್ಲೆ
ಹುಟ್ಟದಿದ್ದರೂ ಮಾನವನಾಗಿ
ಕಾವೇರಿಯಲಿರುವೆ – ಅಲ್ಲಿ
ಹನಿಹನಿಯಾಗಿರುವೆ – ಕನ್ನಡ
ಹೊಂಬೆಳೆ ಸಿರಿ ತರುವೆ
ಹಾಡದಿದ್ದರೂ ಗಾಯಕನಾಗಿ
ಕೋಗಿಲೆಯಾಗಿ ಇರುವೆ – ಉಲಿವ
ಸ್ವರಸ್ವರದಲೂ ಬೆರೆವೆ – ಕನ್ನಡ
ಝೇಂಕಾರವ ಗೈವೆ
ಕುಣಿಯದಿದ್ದರೂ ನರ್ತಕನಾಗಿ
ಗಿರಿ ನವಿಲಲಿ ಇರುವೆ – ಅದರ
ಹೆಜ್ಜೆಗಳಲಿ ಮಿಡಿವೆ – ಕನ್ನಡ
ತಾಳಕೆ ನಾ ನಲಿವೆ
ಹುಟ್ಟದಿದ್ದರೆ ಮರುಜನುಮದಲಿ
ಚಿಂತೆಯು ನನಗಿಲ್ಲ – ಅನ್ಯ
ನೆಲವೇ ಬೇಕಿಲ್ಲ – ಕನ್ನಡ
ಇಲ್ಲದೆ ನಾನಿಲ್ಲ
*****