ಇನ್ನು ನೀನೆನ್ನವನು

ಇನ್ನು ನೀನೆನ್ನವನು
ನಾನಿನ್ನು ನಿನ್ನವನು
ಇಂದಿನಿಂದೆ,
ಇಂದಿನಿಂದ ಮುಂದೆ.

ನಿನ್ನ ನೆನವುದೆ ಚನ್ನ,
ನಿನ್ನ ಕನವುದೆ ನನ್ನ
ದಿನದ ಬಾಳು,
ನನ್ನ ಮನದ ಕೂಳು.

ಮಳೆಯೆ ಬೇಸಗೆಯಾಸೆ
ಯಂತೆ ನನ್ನ ಪಿಪಾಸೆ
ಯೆದೆಯ ನೀನೆ
ತಣಿಪ ಸೊದೆಯ ಸೋನೆ.

ಮುಚ್ಚುಕಿಟಿಕಿಯ ಮುಂತೆ
ಕಾವ ತಂಬೆಲರಂತೆ
ನನ್ನ ಕಾವೆ
ಮನದಿ ನಿನ್ನ ತೀವೆ.

ತನ್ನ ದೃಷ್ಟಿಯ ಕಾಣ
ದಂಬಕದೊಲೇಂ ಜಾಣ
ನೆನ್ನ ಬಳಿಯೆ
ಸುಳಿವ ನಿನ್ನ ತಿಳಿಯೆ?

ಒಳಮಿಂಚು ಹೊರಮಿರುಗು
ವರಮಂಬುದಂ ತಿರುಗು
ವಂತೆ ನಿನ್ನ
ನರಿಯದಾಂತೆ ಬನ್ನ

ಜೇನನಿಳಿಸದ ಮುನ್ನ
ಜ್ಯೋತಿ ಮಯಣದೊಳೆನ್ನ?
ಮೋಹವಿಳಿಸು
ನಿನ್ನ ನೇಹ ಬೆಳಸು.

ನಿನ್ನ ಗುರುತೆದೆಗಿಲ್ಲ
ದೆಡನಾಣ್ಯವಿದು ಸಲ್ಲ
ದೊತ್ತು ನಿನ್ನ
ಅಚ್ಚನೆತ್ತು ನನ್ನ.

ನುಡಿಗೆ ಬಾರದ ಬಾಸೆ
ಯಿಂದ ಬೇಡುವುದಾಸೆ
ನಿನ್ನ ನೋಡೆ,
ನಿನಗೆ ನನ್ನ ನೀಡೆ.

ರವಿಯ ತೋರಿಸೆ ರವಿಯೊ?
ಮಿಣುಕು ಬತ್ತಿಯ ಛವಿಯೊ?
ನೋಡಲೆನ್ನ
ಮನಕೆ ಮೂಡು ಮುನ್ನ.

ಹಗಲೊಡನೆ ಮಸೆವಂತೆ
ಇರುಳೆ ಹಗಲಿಸುವಂತೆ,
ನಿನ್ನ ಮಲೆವೆ
ನಾದಡೆನ್ನ ಕಲೆವೆ.

ತಂದೆ ಗದ್ದಿಸದೆನ್ನ,
ತಾಯೆ ಮುದ್ದಿಸುತೆನ್ನ
ಕೇಡ ಮರೆಯ,
ನನಗೆ ನೀಡ ಮರೆಯ.

ನಿನ್ನನಲ್ಲದೆ ಸಲ್ಲ
ದೇನ ನಿನ್ನೊಡನೆಲ್ಲ
ಬೇಡಲಿಲ್ಲ!
ನಿನ್ನ ಕಾಡಲಿಲ್ಲ!

ಇಲ್ಲ ವೆನದದನೆಲ್ಲ
ನನಗೊದವಿಸಿದೆಯಲ್ಲ!
ಎರೆದೆನೆಂತು
ದೂರವರಿದೆನಂತು!

ಇನ್ಯಾವುದಂ ಬೇಡ
ಲೊಲ್ಲೆ; ನನಗೇಂ ಬೇಡ-
ಬೇಡಲಿಂತು
ನಿನ್ನ ಕೂಡಲೆಂತು?

ಏನೆನಗೆ ಬೇಕಿಲ್ಲ,
ನೀನೆನಗೆ ಸಾಕಲ್ಲ ?
ನೀನೆ ಬೇಕು
ನನಗೆ ನೀನೆ ಸಾಕು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ಪ್ರೇಮ
Next post ಎಲೆಕ್ಟ್ರೋ ಸೋಲಾರ ಬೈಕ್

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಸಂಬಂಧ

    ದೆಹಲಿಯಲ್ಲಿ ವಿಪರೀತ ಚಳಿ. ಆ ದಿನ ವಿಪರೀತ ಮಂಜು ಕೂಡಾ ಕವಿದಿತ್ತು. ದೆಹಲಿಗೆ ಬರುವ ವಿಮಾನಗಳೆಲ್ಲಾ ತಡವಾಗಿ ಬರುತ್ತಿದ್ದವು. ಸರಿಯಾಗಿ ಲ್ಯಾಂಡಿಂಗ್ ಮಾಡಲಾಗದೆ ಫೈಲೆಟ್‌ಗಳು ಒದ್ದಾಡುತ್ತಿದ್ದರು. ದೆಹಲಿಯಿಂದ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…