ಇನ್ನೂ ಅರ್ಥಾಗಲಿಲ್ಲೇನ್ನಿನ್ಗೆ
ನಾಕಕ್ಸರಾ ಬಾಯಾಗಿಟಗಂಡು
ನಾಕ ಪುಸ್ತಕಾ ತಲೆಯಾಗಿಟ್ಟುಗಂಡು
ನಾಕ ಕಾಸ ಕೈಯಾಗಿಟಗಂಡು
ಯಾಕ ಮೆರೀತಿಯಲೇ
ಬಾಯಾಗೇ ಅಂತ್ರಕ್ಕೇಣೀ ಹಾಕ್ತೀ
ಸಮತಾ, ಸೋದರತಾ, ಗಾಂಧಿ ತಾತಾ
ಅಂತಾ ಬಂಗಾರದೊಳ್ಳೊಳ್ಳೆ ನಾಣ್ಣಿಗಳನ್ನ
ಒದರಿ ಒದರೀ ಒಡಕು ಬೋಕಿ ಮಾಡಿಬಿಟ್ಟಿ
ಗುಂಪು ಸೇರ್ಸಿ ಶಂಖಾ ಊದ್ತಿ
ಕೇಳಾವರ್‍ನ ನೋಡಾವರ್‍ನ
ಕುರೀಗಳನ ಮಾಡೀಯೇನ್ಲೆ
ನಿನ್ನ ತಲೀ ದೊಡ್ಡದಿರುಭೌದು
ಲೇ ಕೈ ಕಾಲ್ಸಣ್ಯಾ
ಆದರೆ ದುಡಿಯೋದು ತೋಳು
ನೆನಪಿರ್‍ಲಿ
ಅನ್ನಾ ಮೊದಲು ಹೋಗಬೇಕು ಹೊಟ್ಟಿಗೆ
ಅಲ್ಲಿಂದ ಜೀರ್ಣಾಗಿ ರಕ್ತಾಗಿ
ಹರೀಬೇಕೆಲ್ಲಾ ಕಡೀಗೆ
ತಲಿಗು ಕೂಡಾ
ನಾ ಮಾತಾಡದೇ ಇರಭೌದು
ಆದರೆ ಒಮ್ಮೆಲೇ ಮಾಡಿ ತೋರಿಸ್ತೀನಿ
ಎಚ್ಚರಾ
*****