ತ.ರ.ಸು ಕಾದಂಬರಿಗಳಾಧರಿತ ಚಲನಚಿತ್ರಗಳು

ಸಿನಿಮಾ ಒಂದು ಅದ್ಭುತವಾದ ಕಲೆ. ಎಂಥವರನ್ನೂ ತನ್ನತ್ತ ಆಕರ್ಷಿಸುವ ಅಪಾರ ಸಾಮರ್ಥ್ಯ, ಅದ್ವಿತೀಯ ಶಕ್ತಿಯನ್ನು ಪಡೆದಿರುವ ಪ್ರಬಲ ಮಾಧ್ಯಮವೆಂದರೆ ಅತಿಶಯೋಕ್ತಿಯಾಗಲಾರದು.

೧೯೩೧ರಲ್ಲಿ ನಿರ್ಮಿಸಿದ ‘ಆಲಂಆರಾ’ ಮೊತ್ತಮೊದಲ ಟಾಕಿ ಚಿತ್ರವಾಗಿ ಅತ್ಯಂತ ಯಶಸ್ಸಿನ ಹಾದಿಯಲ್ಲಿ ಸಾಗಿ ಟಾಕಿ ಚಿತ್ರಗಳ ಯುಗವನ್ನೇ ನಮ್ಮ ಮುಂದೆ ತೆರೆದಿಟ್ಟಿತು. ಇದು ಮುಂಬೈ ಮಾತಾಯಿತು. ಕನ್ನಡದಲ್ಲಿ ಟಾಕಿ ಚಿತ್ರ ಒಂದು ಬರಲು ಮತ್ತೆ ಮೂರು ವರ್ಷ ಕಾಯಬೇಕಾಯಿತು. ೧೯೩೪ರಲ್ಲಿ ಕನ್ನಡದ ಪ್ರಪ್ರಥಮ ವಾಕ್ಚಿತ್ರವು ‘ಸತಿ ಸುಲೋಚನಾ’ ತೆರೆಕಂಡಿತು. ದಿಗ್ದರ್ಶನ ಮಾಡಿದವರು ವೈ.ವಿ.ರಾವ್. ಈ ವೈ.ವಿ.ರಾವ್ ಯಾರು ಗೊತ್ತೆ? ನಟಿ ಜಯಲಕ್ಷ್ಮಿಯ ತಂದೆ. ಚಿತ್ರದಲ್ಲಿ ಆರ್. ನಾಗೇಂದ್ರರಾವ್, ಸುಬ್ಬಯ್ಯ ನಾಯ್ಡು, ಲಕ್ಷ್ಮಿಬಾಯಿ, ತ್ರಿಪುರಾಂಬ, ಇತ್ಯಾದಿ ನಟನಟಿಯರು ನಟಿಸಿದ್ದರು.

ಆ ಕಾಲದಲ್ಲೇ ಚಲನಚಿತ್ರಗಳಿಗೆ ವಿದ್ವಾಂಸರುಗಳು ಚಿತ್ರಕತೆ ಸಂಭಾಷಣೆ ಹಾಡು ಬರೆದದ್ದುಂಟು. ಉದಾಹರಣೆಗೆ ಬೆಳ್ಳಾವೆ ನರಹರಿ ಶಾಸ್ರಿಗಳು ಮತ್ತು ದೇವುಡು (ಮಯೂರ ಮಹಾಬ್ರಾಂಡ್ ಖ್ಯಾತಿ) ಅವರು ಕೂಡ ಸಿನಿಮಾಗಳಿಗೆ ಯಾವುದೇ ಬಿಂಕವಿಲ್ಲದೆ ಸಾಹಿತ್ಯ ರಚನೆ ಮಾಡಿದರು. ೧೯೩೫ರಲ್ಲಿ ಕನ್ನಡದ ಮೊದಲ ಸಾಮಾಜಿಕ ಚಿತ್ರ ? ‘ಸಂಸಾರ ನೌಕೆ’ ಸಿನಿಮಾ ಬಂತು. ಅದೇ ಹೆಸರಿನ ನಾಟಕವನ್ನು ಸಿನಿಮಾ ಮಾಡಿದ್ದರು. ಅದುವರೆಗೂ ಪೌರಾಣಿಕ ಚಿತ್ರಗಳ ಯುಗದಲ್ಲಿದ್ದ ಕನ್ನಡಿಗರು ಸಾಮಾಜಿಕ ಸಿನಿಮಾ ಕಂಡಿದ್ದರು. ಆ ಚಿತ್ರದಲ್ಲಿ ಬಿ.ಆರ್.ಪಂತಲು, ಎಂ.ವಿ. ರಾಜಮ್ಮ, ಡಿಕ್ಕಿ ಮಾಧವರಾವ್, ಪದ್ಮಾದೇವಿ ನಟಿಸಿದ ಚಿತ್ರವನ್ನು ಎಚ್.ಎಲ್.ಎನ್. ಸಿಂಹ ದಿಗ್ದರ್ಶಿಸಿದ್ದರು. ಇದೇ ಎಚ್.ಎಲ್.ಎನ್. ಸಿಂಹ ಅವರೇ ಇಂದಿನ ಏಕಮೇವಾ ದ್ವಿತೀಯ ಮೇರು ನಟ ಡಾ|| ರಾಜಕುಮಾರರನ್ನು ಪರಿಚಯಿಸಿದ ಖ್ಯಾತನಾಮರು ಎಂಬುದಿಲ್ಲಿ ಉಲ್ಲೇಖನಾರ್ಹ.

ಬಿ.ಆರ್.ಪಂತುಲು, ಆರ್.ನಾಗೇಂದ್ರರಾವ್, ಹೊನ್ನಪ್ಪ ಭಾಗವತರ್ ಹೀರೋಗಳಾಗಿ ಮೆರೆಯುತ್ತಿದ್ದ ಕಾಲವದು. ಅದೆಲ್ಲಿದ್ದರೋ “ಬೇಡರ ಕಣ್ಣಪ್ಪ”ನಾಗಿ ಬಂದ ರಾಜಕುಮಾರ್ ಚಿತ್ರರಂಗದ ಸ್ಥಿತಿಗತಿಗಳನ್ನೇ ಬದಲಾಯಿಸಿಬಿಟ್ಟರು. ಮೊದಮೊದಲು ಪೌರಾಣಿಕ, ಐತಿಹಾಸಿಕ, ಭಕ್ತಿ ಪ್ರಧಾನ ಪಾತ್ರಗಳಿಗಷ್ಟೇ ಲಾಯಕ್ಕೂ ಎಂದು ಬ್ರಾಂಡ್ ಆಗಿದ್ದ ರಾಜ್ ಕಡೆಗೆ ಜಾನಪದ, ಸಾಮಾಜಿಕ ಚಿತ್ರಗಳಲ್ಲೂ ಜಯಿಸಿ ಬ್ರಾಂಡ್ ಆಗಿಯೂ ಮೆರೆದರು. ಅವರ ಬೆಳವಣಿಗೆಯೇ ಕನ್ನಡ ಚಿತ್ರಗಳ ಬೆಳವಣಿಗೆ, ಕನ್ನಡ ಚಲನಚಿತ್ರ ಚರಿತ್ರೆಗೆ ಆಧಾರವಾಗಿ ಹೋಯಿತು.

ಈ ಮಧ್ಯೆ ಸಿನಿಮಾಕ್ಕೆಂದೇ ಕತೆ ಹೆಣೆಯುವರು ಹಾಡು ಹೊಸೆಯುವವರೂ ಹುಟ್ಟಿಕೊಂಡರು. ಅದೇಕೋ ಆಗತಾನೆ ಹೂ ಬಿರಿದು ಕಾಯಾಗಿ ಫಲಭರಿತ ವೃಕ್ಷವಾಗಿದ್ದ ಸಾಹಿತ್ಯ ಕ್ಷೇತ್ರ, ಅದರಲ್ಲಿನ ಸಾಹಿತಿಗಳು ಸಿನಿಮಾಕ್ಕೆ ಬರೆಯಲು ಹಿಂಜರಿಯುತ್ತಿದ್ದದೂ ಕಂಡು ಬಂತು. ಆಗ ಚಿತ್ರರಂಗ ಕಥೆ ಸಾಹಿತ್ಯಕ್ಕಾಗಿ ಎಂ.ಡಿ. ಸುಂದರ್, ಷಣ್ಣುಗಸುಂದರಂ, ಪುಷ್ಯಾನಂದರಂತಹ ತಮಿಳು ಕಥೆಗಾರರ ಮೊರೆ ಹೋದರು. ನಮ್ಮವರೇ ಆದ ಪಂತಲು, ಹುಣಸೂರು ಕೃಷ್ಣಮೂರ್ತಿ, ಚಿ. ಉದಯಶಂಕರ್ ಕೂಡ ಕಥೆಗಾರರಾಗಿ ಸಾಹಿತ್ಯ ಗೀತ ರಚನೆಕಾರರಾಗಿ ಬೆಳೆದರು. ಚಿತ್ರರಂಗವನ್ನೂ ಬೆಳಗಿಸಿದರು.

೧೯೬೦ರ ಸುಮಾರಿಗೆ ಸಿನಿಮಾದವರು ತಮ್ಮ ಶೈಲಿ ಬದಲಿಸುವ ಅವಶ್ಯಕತೆ ಒದಗಿಬಂತು. ಕೆಲವರ ಕಣ್ಣು ಕನ್ನಡ ಕಾದಂಬರಿಗಳತ್ತ ಹೊರಳಿತು. ಆಗ ಬಂದಿದ್ದೇ ‘ಕರುಣೆಯೇ ಕುಟುಂಬದ ಕಣ್ಣು’ ಅನ್ನೋ ಮೊದಲ ಕಾದಂಬರಿ ಆಧಾರಿತ ಚಿತ್ರ ‘ಧರ್ಮ ದೇವತೆ’ ಅನ್ನೋ ಕಾದಂಬರಿಯನ್ನು ಆಧರಿಸಿ ತಯಾರಿಸಿದ ಆ ಚಿತ್ರ ಅತ್ಯಂತ ಯಶಸ್ವಿಯಾಯಿತು. ಆ ಚಿತ್ರದಲ್ಲೂ ಡಾ|| ರಾಜ್, ಲೀಲಾವತಿ, ಬಾಲಕೃಷ್ಣ, ನ.ರಾಜು ಇತರರು ಇದ್ದರು. ‘ಧರ್ಮ ದೇವತೆ ’ ಕಾದಂಬರಿಯ ಕರ್ತ ಯಾರು ಗೊತ್ತೆ?

ಕೃಷ್ಣಮೂರ್ತಿ ಪುರಾಣಿಕರು. ಮತ್ತೆ ಅವರದ್ದೆ ಕಾದಂಬರಿ ಆಧಾರಿತ ‘ಕುಲವಧು’ ಚಲನಚಿತ್ರವಾಗಿ ತೆರೆಗೆ ಬಂತು. ಜನ ಮುಗಿಬಿದ್ದು ನೋಡಿದರು. ಅದರಲ್ಲಿ ಎಗೇನ್… ಲೀಲಾವತಿ ಇದ್ದರು. ಈಗ ಸಿನಿಮಾ ಜನರ ಕಣ್ಣು ಕನ್ನಡದಲ್ಲಿ ಬರೆಯುವ ಅತ್ಯಂತ ಜನಪ್ರಿಯ ಸಾಹಿತಿಗಳತ್ತ ಫೋಕಸ್ ಆಯಿತು. ದಿಢೀರನೆ ಕಂಡವರು ಅ.ನ.ಕೃ., ತ.ರಾ.ಸು. ಅ.ನ. ಕೃಷ್ಣರಾಯರ ‘ಸಂಧ್ಯಾರಾಗ’ ಕಾದಂಬರಿ ಅದೇ ಹೆಸರಿನಲ್ಲಿ ಚಿತ್ರವಾಯಿತು. ಸಂಗೀತ ಪ್ರಧಾನ ಸದಭಿರುಚಿಯ ಚಿತ್ರವಿದು. ನಿಮ್ಮಲ್ಲಿ ಕೆಲವರಾದರೂ ನೋಡಿರಬಹುದು. ಆಮೇಲೆ ‘ಗುರುವಿನ ಮಿಂಚಿನ ಶಿಷ್ಯಡು’ ಎಂದೇ ಖ್ಯಾತರಾದ ತ.ರಾ.ಸು. ಕಾದಂಬರಿಗಳತ್ತ ಚಿತ್ರರಂಗ ಕಣ್ಣು ಹಾಯಿಸಿತು. ತ.ರಾ.ಸು. ಕಾದಂಬರಿ ಆಧಾರಿತ ‘ಚಂದವಳ್ಳಿಯ ತೋಟ’ ಚಲನಚಿತ್ರವಾಯಿತು. ಎಗೇನ್ ರಾಜಕುಮಾರ್ ಇದ್ದರು. ಜೊತೆಗೆ ಕಲಾ ಕೇಸರಿ ಉದಯಕುಮಾರ್ ಕೂಡ ಇದ್ದರು. ‘ಚಂದವಳ್ಳಿಯ ತೋಟ’ ಗ್ರಾಮೀಣ ಹಿನ್ನೆಲೆಯ ಸರಸ, ವಿರಸಗಳನ್ನು ಚಿತ್ರಿಸಿದ ದುರಂತ ಚಿತ್ರ. ಅದರಲ್ಲಿ ಶಿವನಂಜೇಗೌಡನ ಪಾತ್ರವನ್ನು ಉದಯಕುಮಾರ್ ಅದ್ಭುತವಾಗಿ ನಿರ್ವಹಿಸಿದ್ದರು. ಚಿತ್ರ ಯಶಸ್ವಿಯಾಯಿತು. ಅದಕ್ಕೆ ತ.ರಾ.ಸು. ಅವರ ಸಾಹಿತ್ಯವಿತ್ತು. ‘ಓ ನನ್ನ ಬಾಂಧವರೆ ಕನ್ನಡದ ಕುಲಪುತ್ರರೇ’ ಎಂಬ ಹಾಡನ್ನು ಹಳೆ ಜಮಾನದವರು ಮರೆತಿರಲಾರರು ಅಂದ್ಕೋತೇನೆ. ಅದನ್ನು ಬರೆದವರು ತ.ರಾ.ಸು.

ನಂತರ ‘ಚಕ್ರತೀರ್ಥ’ ವೆಂಬ ಚಿತ್ರ ತೆರೆಗೆ ಬಂತು. ಅದು ಕೂಡ ತ.ರಾ.ಸು. ಕಾದಂಬರಿ ಆಧರಿಸಿದ ಕೌಟುಂಬಿಕ ಚಿತ್ರ, ಈ ಚಿತ್ರದ ಆರಂಭದಲ್ಲಿ ತ.ರಾ.ಸು. ಕಾಣಿಸಿಕೊಂಡು ನಾಲ್ಕು ಮಾತನ್ನು ಕೂಡ ಆಡಿ ಚಿತ್ರದ ಆರಂಭಕ್ಕೆ ನಾಂದಿ ಹಾಡುತಾರೆ. ಆಮೇಲೆ ‘ಮಾರ್ಗದರ್ಶಿ’ ಅನ್ನೋ ಚಿತ್ರ ತೆರೆಕಂಡಿತು. ಇದಕ್ಕೆ ತ.ರಾ.ಸು ಸಂಭಾಷಣೆ ಗೀತೆಗಳಿದ್ದವು. ಚಿತ್ರ ಪ್ರಸಿದ್ದ ನಟರಿದ್ದರೂ ಅಷ್ಟೇನು ಯಶಸ್ಸು ಕಾಣಲಿಲ್ಲ, ತ.ರಾ.ಸು. ಕಾದಂಬರಿ ‘ಸಾಕುಮಗಳು’ ಆಧಾರಿತ ‘ಪುನರ್ಜನ್ಮ’ ಚಲನಚಿತ್ರವಾಯಿತು. ಅಷ್ಟೇನು ಸದ್ದು ಮಾಡಲಿಲ್ಲ. ಇವೆಲ್ಲಕ್ಕೂ ಮೊದಲು ತ.ರಾ.ಸು. ಅವರ ಹಂಸಗೀತೆ ಆಧರಿಸಿ ಹಿಂದಿಯಲ್ಲಿ ‘ಬಸಂತ್ ಬಹಾರ್’ ಎಂಬ ಸಂಗೀತ ಪ್ರಧಾನ ಚಿತ್ರವಾಗಿದ್ದು ತಡವಾಗಿ ತಿಳಿದು ಬಂದ ಸುದ್ದಿ. ಆ ಚಿತ್ರದಲ್ಲಿ ಆಗಿನ ಖ್ಯಾತನಟ ಭರತ ಭೂಷಣ್ ಹಿರೋ ಆಗಿದ್ದರು.

ಆಮೇಲೆ ಅದೇನಾಯಿತೋ ಏನು ಕಥೆಯೋ ಸಿನಿಮಾದವರು ಕನ್ನಡ ಕಾದಂಬರಿಗಳನ್ನು ಸಾಹಿತಿಗಳನ್ನು ಮರೆತರು. ಮತ್ತದೇ ತಮಿಳು ಸಾಹಿತಿಗಳೇ ಕಥೆ ನೇಯ್ಯಲಾರಂಭಿಸಿದರು. ಕನ್ನಡ ಚಿತ್ರರಂಗವೀಗ ಡಿಶುಂ ಡಿಶುಂ ರಂಗವಾಗಿತ್ತು. ಸದಭಿರುಚಿಯ ಚಿತ್ರಗಳಿಗೆ ಆಗ ಬರಗಾಲ. ಒಳ್ಳೆಯ ನಟರಿದ್ದರೂ ಅವರನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುವ ಸಾಮರ್ಥ್ಯವಿದ್ದ ನಿರ್ದೇಶಕರ ಕೊರತೆ ಎದ್ದುಕಾಣುತ್ತಿತ್ತು.

೧೯೭೦ ರ ಸುಮಾರಿನಲ್ಲಿ ಪಕ್ಕಾ ಕಮರ್ಷಿಯಲ್ ಆಗಿದ್ದ ಚಿತ್ರರಂಗಕ್ಕೆ ಹೊಸ ಅಲೆ ಕಾಲಿಟ್ಟಿತು. ಎಕ್ಸ್‌ಪೆರಿಮೆಂಟಲ್ ಸಿನಿಮಾ ಬಂದು ಷಾಕ್ ಕೊಟ್ಟಿತು. ಸಂಸ್ಕಾರ, ವಂಶವೃಕ್ಷ, ಕಾಡು, ಪಲ್ಲವಿ, ಎಲ್ಲಿಂದಲೋ ಬಂದವರು, ಘಟಶ್ರಾದ್ಧದಂತಹ ಪ್ರಯೋಗಾತ್ಮಕ ಚಿತ್ರಗಳು ಧಾಳಿಯಿಟ್ಟವು. ಒಮ್ಮೆಲೆ ಸಾಹಿತ್ಯವರೇಣ್ಯರಾದ ಅನಂತಮೂರ್ತಿ, ಬೈರಪ್ಪ, ಆಲನಹಳ್ಳಿ ಕೃಷ್ಣ, ಲಂಕೇಶ್, ಎಂ.ಕೆ.ಇಂದಿರಾ ಮಿಂಚತೊಡಗಿದರು. ಗಿರಿಶ್ ಕಾರ್ನಾಡ್, ಕಾರಂತ್, ಗಿರಿಶ್ ಕಾಸರವಳ್ಳಿ, ಲಂಕೇಶ್ ರಂತಹ ನಿರ್ದೆಶಕರು ಬುದ್ಧಿಜೀವಿಗಳ ಮನಗೆದ್ದು ಸುದ್ದಿ ಮಾಡಿದರು. ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಕೊಳ್ಳೆ ಹೊಡೆದ ಕನ್ನಡ ಚಿತ್ರರಂಗಕ್ಕೆ ಇಂಟರ್ ನಾಶನಲ್ ಮಟ್ಟದಲ್ಲಿ ಕೀರ್ತಿತಂದವರು ಇವರು.

ಆದರೆ ಏಕತಾನತೆಯ ಬೋರ್ ಹೊಡೆಸುವ ಇಂತಹ ಚಿತ್ರಗಳನ್ನು ಪ್ರೇಕ್ಷಕ ಮಹಾಶಯ ಮೂಸಿಯೂ ನೋಡಲಿಲ್ಲ. ಬರೀ ಪ್ರಶಸ್ತಿಗಳನ್ನು ಪಡೆದದ್ದಷ್ಟೇ ಪಡೆದವರಿಗೆ ಖುಷಿ ತಂದುಕೊಟ್ಟಿತು. ಆದರೆ ದುಡ್ಡು ಹಾಕಿದ ನಿರ್ಮಾಪಕ ಬೀದಿಗೆ ಬಿದ್ದ ಪ್ರಯೋಗಾತ್ಮಕ ಚಿತ್ರಗಳು ಬಂದಷ್ಟು ರಭಸದಲ್ಲೇ ನವ್ಯ ಕಾವ್ಯದಂತೆ ಮಾಯವಾದವು. ಮತ್ತೆ ಕನ್ನಡ ಚಿತ್ರರಂಗಕ್ಕೊಂದು ಟರ್ನಿಂಗ್ ಪಾಯಿಂಟ್ ನೀಡಬಲ್ಲವರು ಬೇಕಿದ್ದರು. ಅವರು ಹೊರಗಡೆ ಎಲ್ಲಿಂದಲೋ ಬರಲಿಲ್ಲ, ಆವರೆಗೂ ಚಿತ್ರರಂಗದಲ್ಲೇ ಇದ್ದು ಡಾ|| ರಾಜ್ ಆವರನ್ನು ಬಳಸಿಕೊಂಡೇ ಬೆಳೆದ ನಿರ್ದೇಶಕರು. ಅವರಲ್ಲಿ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ದೊರೆ-ಭಗವಾನ್ ಅವರು ಇಲ್ಲಿ ಮುಖ್ಯರು. ಅದೇ ಡಾ|| ರಾಜ್, ಜಯಂತಿ, ಲೀಲಾವತಿ, ಕಲ್ಪನಾರನ್ನು ಇಟ್ಟುಕೊಂಡೇ ಒಳ್ಳೆ ಚಿತ್ರಗಳನ್ನು ಮಾಡಿ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿಕೊಂಡು ಕಮರ್ಶಿಯಲ್ ಚಿತ್ರರಂಗದಲ್ಲೊಂದು ಸದಭಿರುಚಿಯ ಅಲೆಯನ್ನು ಎಬ್ಬಿಸಿದರು. ಇದಕ್ಕೆ ಕಾರಣವಾದದ್ದು ಮತ್ತದೇ ನಮ್ಮ ಕನ್ನಡ ಕಾದಂಬರಿಕಾರರು. ಅವರ ಜನಪ್ರಿಯ ಕಾದಂಬರಿಗಳು ಅನ್ನೋದು ಅತ್ಯಂತ ಹೆಮ್ಮೆಯ ವಿಷಯ.

ಪುಟ್ಟಣ್ಣ ಕಣಗಾಲ್ ರಂತಹ ಸಂಪ್ರದಾಯವಾದಿ ಜಾಣ ನಿರ್ದೆಶಕ, ತ್ರಿವೇಣಿ ಕಾದಂಬರಿಗಳಿಗೆ ಜೋತು ಬಿದ್ದರು. “ಶರಪಂಜರ”ದ ವರೆಗೆ ಎಲ್ಲಾ ನೆಟ್ಟಗಿತ್ತು.  ಆಮೇಲೆ ಪುಟ್ಟಣ್ಣನವರ ಚಿತ್ರಗಳು ಹೆಸರಾಂತ ನಟನಟಿಯರಿದ್ದೂ ಸೋತು ಬಸವಳಿದವು. ಅವರಿಗೂ ಅಳಿವು ಉಳಿವಿನ ಪ್ರಶ್ನೆ. ಇದುವರೆಗೂ ಹೀರೋಯಿನ್ ಓರಿಯೆಂಟೆಡ್ ಸಿನಿಮಾ ನೋಡಿ ಅಭಾಸವಾದವರು ಈಗ ಹೀರೋ ಓರಿಯೆಂಟೆಡ್ ಸಿನಿಮಾ ಮಾಡುವ ಬಗ್ಗೆ ಯೋಚಿಸಬೇಕಾಯಿತು. ಕಾರಣ ಕಲ್ಪನಾ ಪುಟ್ಟಣ್ಣರಲ್ಲಿ ವಿರಸ ಉಂಟಾಗಿತ್ತು. ಆರತಿ ಇನ್ನೂ ಸರಿಯಾಗಿ ಹೆಜ್ಜೆ ಹಾಕುವುದನ್ನೇ ಕಲಿತಿರಲಿಲ್ಲ. ಡಾ|| ರಾಜ್ ಅವರನ್ನು ಡಾಮಿನೇಟ್ ಮಾಡುವುದು ಪುಟ್ಟಣ್ಣರಿಂದ ಆಗದಮಾತು. ಹೊಸ ನಟನಟಿಯರತ್ತ ಅವರು ತಡಕಾಡಿದರು. ಹೊಸಬರನ್ನು ಹಾಕಿದಾಗ ಅದು ಪ್ರೇಮಕಥೆ ಯಾಗಿರಲೇಬೇಕು. ಅದೊಂದು ಸಿನಿಮಾದವರ ಯಶಸ್ಸಿನ ಸೂತ್ರಗಳಲ್ಲೊಂದು. ಆಗಲೂ, ಈಗಲೂ ಅಷ್ಟೆ ಇಂತಹ ಚಿತ್ರ ಮಾಡುವಾಗ ಅತ್ಯುತ್ತಮ ಕಥೆಯೊಂದು ಅಗತ್ಯವಾಗಿ ಬೇಕು. ಪುಟ್ಟಣ್ಣ ಹುಡುಕಾಡಿದರು. ಅವರಿಗೆ ತ.ರಾ.ಸು ಅವರ ಮೂರು ಕಾದಂಬರಿಗಳು ಕಣ್ಣಿಗೆ ಬಿದ್ದವು. ಅವರಲ್ಲಿ ಮತ್ತೊಂದಿಷ್ಟು ಚೈತನ್ಯ ಅದಮ್ಯ ಶೃತಿ ತುಂಬಿದ್ದು ಚಿತ್ರದುರ್ಗದ ಕೋಟೆ ಕೊತ್ತಲಗಳ ಬುರುಜು ಬತೇರಿಗಳು ಕಡೆಗೆ ಸೋ೦ದಿಗೊ೦ದಿ ಗಲ್ಲಿಗಳನ್ನೂ ಬಿಡಲಿಲ್ಲ ‘ನಾಗರಹಾವು’ ವಿನ ಸೃಷ್ಟಿ ಚಿತ್ರದುರ್ಗದಲಾಯಿತು. ‘ನಾಗರಹಾವು’ ಚಿತ್ರ ಓಡದೆ ಹೋಗಿದ್ದರೆ ಪುಟ್ಟಣ್ಣರ ಭವಿಷ್ಯ ಅಲ್ಲಿಗೇ ಮೊಟಕಾಗಿಬಿಡುವ ಅಪಾಯ. ಆಪತ್ತಿನ ದಿನಗಳವು. ಜೊತೆಗೆ ಚಿತ್ರ ತೋಪಾದರೆ ವಿಷ್ಣುವರ್ಧನ್ ಆದರೂ ಎಲ್ಲಿರುತ್ತಿದ್ದರು? ಚಿತ್ರ ತೆರೆಕಂಡ ದಿನ ಪುಟ್ಟಣ್ಣ ಊಟ ಕೂಡ ಮಾಡಿರಲಿಲ್ಲವಂತೆ, ಚಿತ್ರ ಜನಮನ ಗೆದ್ದಿತು. ಈ ಮಧ್ಯೆ ತ.ರಾ.ಸು ದುಡುಕಿದ್ದರು. ಚಿತ್ರವನ್ನು ಅಡಿಯಿಂದ ಮುಡಿಯವರೆಗೂ ತೆಗಳಿ ಇದು ನಾಗರಹಾವಲ್ಲ ಕ್ಯಾರೆ ಹಾವು ಎಂದೇ ಲೇವಡಿ ಮಾಡಿ ಪತ್ರಿಕೆಗಳಿಗೆ ಬರೆದು ಚಿತ್ರರಂಗಕ್ಕೆ ದೊಡ್ಡ ‘ಶಾಕ್’ಕೊಟ್ಟುಬಿಟ್ಟರು. ಕಥಾ ಲೇಖಕ ಅದೂ ಜನಪ್ರಿಯ ಲೇಖಕ ತ.ರಾ.ಸು ತಮ್ಮ ಕಥೆ ಆಧಾರಿತ ಚಿತ್ರವನ್ನೇ ಹೀಗಳೆದರೆ ಜನ ಚಿತ್ರ ನೋಡಿಯಾರೆ ಎಂದು ಪುಟ್ಟಣ್ಣ ನಡುಗಿಹೋದರು. ವಿಷುವರ್ಧನ್ ಅವರ ದೇಹಾದ್ಯಂತ ಬೆವರಿಳಿದಿರಬೇಕು. ಆದರೆ ಚಿತ್ರದ ಅದ್ಭುತ ಯಶಸ್ಸು ತ.ರಾ.ಸು. ಅವರಿಗೇ ಮತ್ತೊಂದು ಬಗೆಯ ಶಾಕ್ ನೀಡಿತು. ಇದು ನನ್ನ ಕಥೆಯೇ ಅಲ್ಲವೆಂದು ಗುಡುಗಿದ್ದ ತ.ರಾ.ಸು. ಮೌನವಾದರು.

ಆದರೆ ಚಿತ್ರ ಓಡಲಾರಂಭಿಸಿದಾಗ ಗೆಲುವಿನ ಮುಖ ಕಂಡ ಪುಟ್ಟಣ್ಣ ವಿಚಾರ ಸಂಕೀರ್ಣಗಳಲ್ಲಿ ಈ ಬಗ್ಗೆ ಮಾತನಾಡಲಾರಂಭಿಸಿದ್ದರು. ಪುಟ್ಟಣ್ಣ ಕನ್ನಡ ಲೇಖಕರನ್ನು ಲೇವಡಿಮಾಡಿದ್ದುಂಟು. ನಾನು ತ.ರಾ.ಸು ಅವರ ಮೂರು ಕಾದಂಬರಿಗಳನ್ನೂ ಓದಿ ಬದಿಗಿಟ್ಟು ನನ್ನದೇ ಆದ ಚಿತ್ರಕಥೆ ತಯಾರಿಸಿದೆ. ಅದಕ್ಕೆ ನನ್ನದೇ ಅಭಿವ್ಯಕ್ತಿ ಕೊಟ್ಟೆ ಹೊಸ ಛಾಪು ಮೂಡಿಸಿದೆ ಎಂದರು. ಅದು ಅವರ ತಾಕತ್ತು ಕೂಡ. ಕಾದಂಬರಿಯನ್ನು ಬದಲಾವಣೆಮಾಡಿಕೊಳ್ಳುವ ಸ್ವಾತಂತ್ರ ಸಿನಿಮಾ ನಿರ್ದೆಶಕನಿಗಿದೆ. ಯಾಕೆಂದರೆ ಮಾಧ್ಯಮಗಳು ಬೇರೆ ಬೇರೆಯಲ್ಲವೆ, ನಾವೇನಿದ್ದರೂ ಲೇಖಕರ ಬಳಿ ಹಾಳೆ ಮೇಲೆ ಬರೆಯೋರು. ಆದರೆ ನಿರ್ದೆಶಕರು ಬೆಳ್ಳಿ ತೆರೆಯ ಮೇಲೆ ಬರೆಯೋರು. ಕಾದಂಬರಿಗಳಲ್ಲಿದ್ದ ಹೈಸ್ಕೂಲ್ ಹುಡುಗ ರಾಮಾಚಾರಿ ಸಿನಿಮಾದಲ್ಲಿ ಕಾಲೇಜ್ ಹುಡುಗನಾಗಿದ್ದ, ಅಲಮೇಲುವನ್ನು ತ್ಯಜಿಸುವಾಗಿನ ದೃಶ್ಯಗಳನ್ನು ಪುಟ್ಟಣ್ಣ ಮನೋಜ್ಞವಾಗಿ ಹೇಳಿದ್ದರು. ಪುಟ್ಟಣ್ಣನವರ ಸಾಮರ್ಥಕ್ಕೆ ‘ನಾಗರಹಾವು’ ಚಿತ್ರದ ಒಂದೇ ಒಂದು ದೃಶ್ಯ ಹೇಳಿಬಿಡುತ್ತೇನೆ ಸಾಕು.

ಕೋಪದಿಂದ ಮಾರ್ಗರೇಟ್ ಮನೆಗೆ ನುಗ್ಗಿದ ರಾಮಾಚಾರಿ ಅವಳನ್ನು ಚುಂಬಿಸಿ ಬಿಡುತ್ತಾನೆ. ಅದನ್ನು ಆ ಕಾಲದಲ್ಲಿ ಯಾವುದೇ ಆಕ್ಷೇಪಗಳು ಬಾರದಂತೆ ಅಸಹ್ಯವಾಗದಂತೆ ಕಲಾತ್ಮಕವಾಗಿ ಚಿತ್ರಿಸಿದ್ದಾರೆ ಪುಟ್ಟಣ್ಣ. ಚುಂಬಿಸಿ ಅಲ್ಲಿಟ್ಟಿದ್ದ ಗಾಸಿನಲ್ಲಿನ ಹಾಲನ್ನು ಗಟಗಟನೆ ಕುಡಿದು ಗ್ಲಾಸ್ ಇಟ್ಟು ಬಂದಷ್ಟೇ ರಭಸವಾಗಿ ಹೋಗಿಬಿಡುತ್ತಾನೆ! ಅದುವರೆಗೂ ಅವನನ್ನು ವಿಚಿತ್ರವಾಗಿ ದ್ವೇಷಿಸುತ್ತಿದ್ದ ಮಾರ್ಗರೇಟ್ ಮೌನವಾಗಿ ಆ ಗ್ಲಾಸನ್ನು ಎತ್ತಿ ಉಳಿದ ಹಾಲಿನ ಒಂದೆರಡು ಹನಿಗಳಷ್ಟನ್ನು ತನ್ನ ನಾಲಿಗೆಯ ಮೇಲೆ ಹನಿಸಿಕೊಂಡು ವಿಚಿತ್ರವಾದ ಆನಂದ ತೃಪ್ತಿಯನ್ನು ಅನುಭವಿಸುತ್ತಾಳೆ. ಸೇಡಿನ ಮುಖದಲ್ಲೀಗ ಸುಖ, ಹಗೆ ಹೊತ್ತ ತುಟಿಗಳಲ್ಲಿ ನಗೆ, ಪಾಷಾಣದಂತಾಗಿದ್ದ ಹೃದಯದಲ್ಲಿ ಕ್ಷಣಾರ್ಧದಲ್ಲೇ ಪ್ರೇಮಾಂಕುರ. ಲೇಖಕನೊಬ್ಬ ಹತ್ತಾರು ಪುಟಗಳಲ್ಲಿ ಹೇಳುವುದನ್ನೇ ಒಂದೇ ಒಂದು ಶಾಟ್ ನಲ್ಲಿ ಪುಟ್ಟಣ್ಣ ಹೇಳಿದ್ದಾರೆ. ನಿಮಗೀಗ ಆ ದೃಶ್ಯಗಳು ಕಣ್ಣುಮುಂದೆ ಬಂದಿರಬಹುದಲ್ಲವೆ. ಪುಟ್ಟಣ್ಣ ಜನರನ್ನು ಆಕರ್ಷಿಸಲು ಮತ್ತೊಂದು ಗಿಮಿಕ್ ಮಾಡಿದ್ದರು. ವೀರ ವನಿತೆ ಒನಕೆ ಓಬವ್ವ ಮದಕರಿ ನಾಯಕನನ್ನೂ ಉಪಯೋಗಿಸಿಕೊಂಡು ಹಾಡೊಂದನ್ನು ಚಿತ್ರೀಕರಿಸಿದ್ದರು. ಚಿತ್ರದ ಯಶಸ್ಸಿನಲ್ಲಿ ಅವರ ಶ್ರಮದ ಪಾಲು ಬಹಳವಿದೆ. ಹೀಗೆ ಸಿನಿಮಾ ಮಾಧ್ಯಮಕ್ಕೆ ಅನುಗುಣವಾಗಿ ಪುಟ್ಟಣ್ಣ ಕಾದಂಬರಿ ದುಡಿಸಿಕೊಂಡಿದ್ದಾರೆ. ಈ ಮೊದಲೆ ತ.ರಾ.ಸು ಕಾದಂಬರಿಗಳನ್ನೇನೂ ಯಾರೂ ಇದ್ದಂತೆಯೇ ಚಿತ್ರ ಮಾಡಿರಲಿಲ್ಲ, ಮಾಡಲಿಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ತ.ರಾ.ಸು ಯಾಕೆ ಕೆರಳಿದರು, ಬುಸುಗುಟ್ಟಿದರು? ಅದಕ್ಕೆ ಕಾರಣವಿದೆ. ಇಲ್ಲಿ ಹೇಳುವುದು ಅಪ್ರಸ್ತುತ. ನಂತರ ಚಿತ್ರ ನೂರುದಿನ ಓಡಿತು ೨೫ ವಾರವೂ ಓಡಿತು. ತ.ರಾ.ಸು. ಸಮಾರಂಭದಲ್ಲಿ ಪಾಲ್ಗೊಂಡು ಫಲಕವನ್ನು ಪಡೆದಾಗ ಪುಟ್ಟಣ್ಣನಂತವರ ಮೋರೆಯಲ್ಲಿ ವ್ಯಂಗ್ಯ ನಗೆ ಇತ್ತು, ತದನಂತರ ಅವರು ಪತ್ರಿಕೆಯವರಲ್ಲಿ ಈ ಬಗ್ಗೆ ಆಡಿದ್ದುಂಟು. ಚಿತ್ರ ಸೋತರೆ ನನ್ನ ಕಥೆ ಕೆಡಿಸಿದ್ದಾರೆ ಅನ್ನೋ ಕಾದಂಬರಿಕಾರರು, ಚಿತ್ರ ಗೆದ್ದಾಗ ಅದು ನನ್ನ ಕಥೆಯ ಶಕ್ತಿ ಅನ್ನುತಾರೆ. ನನ್ನ ಕಥೆಯೇ ಅಲ್ಲ ಎಂದವರೂ ಯಶಸ್ಸಿನಲ್ಲಿ ಭಾಗಿಯಾಗುತ್ತಾರೆ ಎಂದು ಕೆಂಡಕಾರಿದರು. ಅದೇನೇ ಇರಲಿ ‘ನಾಗರಹಾವು’ ಚಿತ್ರದ ಯಶಸ್ಸಿನ ನಂತರ ಚಿತ್ರದುರ್ಗ, ದುರ್ಗದಕೋಟೆ, ಕರ್ನಾಟಕದ ಮನೆಮಾತಾಯಿತು. ಪ್ರವಾಸಿಗರ ಸಂಖ್ಯೆ ಒಮ್ಮೆಲೆ ದ್ವಿಗುಣಿಸಿತು. ಕಾಲ್ಪನಿಕ ಪಾತ್ರಗಳಿಂದ್ಲೇ ಕೋಟೆ ಪ್ರದೇಶಗಳನ್ನು ಗುರುತಿಸುವಂತಾಯಿತು. ಜನ ಇತಿಹಾಸವನ್ನೇ ಮರೆಯುವಷ್ಟು ಮೋಡಿ ಹಾಕಿದ್ದರು ಪುಟ್ಟಣ್ಣ.

ಈವತ್ತು ತ.ರಾ.ಸು. ಕಾದಂಬರಿಗಳಿಂದಾಗಿ ಚಿತ್ರದುರ್ಗ ಪ್ರಸಿದ್ದವಾಯಿತು ಅನ್ನುವವರು ಪುಟ್ಟಣ್ಣ ಕಣಗಾಲರನ್ನು ಖಂಡಿತ ಮರೆಯುವಂತಿಲ್ಲ. ಚಿತ್ರದುರ್ಗವನ್ನು ಅವರು ಸೆರೆಹಿಡಿದಿದ್ದ ರೀತಿ ಬಳಸಿಕೊಳ್ಳುವಾಗಿನ ಚಾತುರ್ಯ ದುರ್ಗಕ್ಕೆ ಹೊಸ ರೂಪವನ್ನೇ ನೀಡಿತು. ಚಿತ್ರದುರ್ಗ ಪ್ರಸಿದ್ಧವಾಗಲು ಪುಟ್ಟಣ್ಣನವರು ಸಹ ತ.ರಾ.ಸು ವಷ್ಟೇ ಕಾರಣರಾಗಿದ್ದಾರೆ. ಅಂತೆಯೇ ಚಿತ್ರದುರ್ಗವೆಂಬ ಐತಿಹಾಸಿಕ ನೆಲದ ಪ್ರಭಾವದಿಂದಾಗಿ ತ.ರಾ.ಸು, ಪುಟ್ಟಣ್ಣ, ವೇಣು ಸಹ ಪ್ರಸಿದ್ದಿ ಪಡೆದರು ಎಂಬುದು ಅಷ್ಟೇ ಸತ್ಯ ಈ ನೆಲದ ತಾಕತ್ತೇ ಅಂತದ್ದು.

‘ನಾಗರಹಾವು’ ನಾಲ್ಕು ಭಾಷೆಗಳಲ್ಲಿ ಚಿತ್ರವಾಯಿತು. ತೆಲುಗಿನಲ್ಲಿ ಕೊಡನಾಗ, ತಮಿಳಿನ ಹೆಸರು ಮರೆತಿದ್ದೇನೆ ಹಿಂದಿಯಲ್ಲಿ ‘ಜಹ್ರಿಲಾ ಇನ್ಸಾನ್’. ಆದರೆ ಬೇರೆ ಭಾಷೆಗಳಲ್ಲಿ ಚಿತ್ರ ಯಶಸ್ಸು ಕಾಣಲಿಲ್ಲ ಕಾರಣ ಕಾಲೇಜ್ ಹುಡುಗ ಹುಡುಗಿಯರ ಪ್ರೇಮ ಕಥೆ ಕನ್ನಡ ಸಿನಿಮಾಕ್ಕೆ ಆಗ ಹೊಸದು. ಬೇರೆ ಭಾಷೆಗಳಲ್ಲಿ ಕಾಲೇಜ್ ಆಗಲೆ ಬಳಸಿಯಾಗಿದ್ದದ್ದು ಕಾರಣವಾಗಿರಬಹುದು. ಮತ್ತೊಂದು ಕಾರಣವೂ ಇರಬಹುದು. ಪುಟ್ಟಣ್ಣನವರ ತಲೆ ತಿರುಗಿದ್ದು, ಈ ಕಾದಂಬರಿಯಿಂದ ಒಂದು ಪುಟ ತೆಗೆದುಕೊಂಡಿದ್ದೇನೆ. ಆ ಕಾದಂಬರಿಯಿಂದ ನಾಲ್ಕು ಸಾಲು ಮಾತ್ರದಿಂದಲೆ ಸ್ಪೂರ್ತಿ ಪಡೆದಿದ್ದೇನೆ ಎಂದೆಲ್ಲಾ ಕಾದಂಬರಿಕಾರರನ್ನು ಉದಾಸೀನ ಮಾಡುವಷ್ಟು ಪುಟ್ಟಣ್ಣ ಬೆಳೆದರು. ಕಡೆಗೆ ಅದೇ ಅವರಿಗೆ ಮುಳ್ಳಾಯಿತು. ಅದಿರಲಿ ಬಿಡಿ. ಎಲ್ಲರಲ್ಲೂ ದೌರ್ಬಲ್ಯಗಳಿರುತ್ತವೆ.

‘ನಾಗರಹಾವು’ ನಂತರ ತ.ರಾ.ಸು ಅವರಿಗೆ ಅವರ ಕಾದಂಬರಿಗಳಿಗೆ ಸ್ಟಾರ್ ವಾಲ್ಯೂ ಬಂತು. ಇದೀಗ ಕನ್ನಡದ ಮತ್ತೊರ್ವ ಪ್ರಸಿದ್ದ ನಿರ್ದೆಶಕ ಜೊಡಿ ದೊರೆ ಭಗವಾನ್ ಅವರ ಕಣ್ಣುಗಳು ತ.ರಾ.ಸು. ಕಾದಂಬರಿಗಳನ್ನು ರಾಶಿ ಹಾಕಿಕೊಂಡು ಓದಲಾರಂಭಿಸಿದವು. ಇದರಲ್ಲಿ ಸಿನಿಮಾಕ್ಕೆ ಯಾವುದು ಸೂಟ್ ಆಗುತ್ತದೆಂದು ಭೂತಗನ್ನಡಿ ಹಿಡಿದವು.

ಈ ಮಧ್ಯೆ ತ.ರಾ.ಸು ಅವರ ‘ಹಂಸಗೀತೆ’ ಕಾದಂಬರಿ ಆಧರಿಸಿ ಅದೇ ಹೆಸರಿನ ಚಿತ್ರವನ್ನು ಖ್ಯಾತ ನಿರ್ದೆಶಕ ಜಿ.ವಿ. ಅಯ್ಯರ್ ಚಿತ್ರದುರ್ಗದಲ್ಲೇ ಕೂಡ ಮಾಡಿದ್ದರು. ಪುಟ್ಟಣ್ಣನವರಿಗಿಂತ ಒಂದು ಕೈ ಹೆಚ್ಚೆ ದುರ್ಗದ ಲೊಕೇಶನ್‌ಗಳನ್ನು, ಕೋಟೆ ಕೊತ್ತಲುಗಳ ಸೊಬಗನ್ನು ಸೂರೆಯೂ ಮಾಡಿದ್ದರು. ಆದರೆ ಚಿತ್ರ ಪ್ರಯೋಗಾತ್ಮಕ ಧಾಟಿಯಲ್ಲಿತ್ತು, ಜನ ಸ್ವೀಕರಿಸಲಿಲ್ಲ. ಅಯ್ಯರ್ ಕೊರಳಿಗೆ ಮಾತ್ರ ಪ್ರಶಸ್ತಿ ಬಿತ್ತು.

ಮತ್ತೆ ತ.ರಾ.ಸು ಕಾದಂಬರಿಯನ್ನು ಜನರಿಗೆ ಮುಟ್ಟಿಸಿದ ಕೀರ್ತಿ ದೊರೆ-ಭಗವಾನ್‌ ಅವರಿಗೇ ಸಲ್ಲಬೇಕು. ಚಂದನದ ಗೊಂಬೆ, ಗಾಳಿಮಾತು, ಬೆಂಕಿಯಬಲೆ, ಬಿಡುಗಡೆಯ ಬೇಡಿ ಹೀಗೆ ಒಂದಾದ ಮೇಲೊಂದರಂತೆ ತ.ರಾ.ಸು ಕಾದಂಬರಿಗಳನ್ನು ಚಿತ್ರಕ್ಕೆ ಅಳವಡಿಸಿದರು. ಈ ಕಾದಂಬರಿಗಳನ್ನು ಜನ ಓದಿದಾಗ ಇವೇನು ಮಾಮೂಲಿ ಕಾದಂಬರಿಗಳು ಅಂತ ಹಲವರಿಗೆ ಅನ್ನಿಸಿದ್ದಿರಬಹುದು. ಅಲ್ಲಿನ ಕಥೆಗಳಲ್ಲಿ ಮಾಮೂಲಾಗಿ ಬ್ರಾಹ್ಮಣ ಕುಟುಂಬಗಳ ಒಳ ಜಗಳ, ನೋವು-ನಲಿವು, ಬಡತನ-ಸಣ್ಣತನ, ಸ್ತ್ರೀ ಶೋಷಣೆಗಳೇ ಮುಖ್ಯವಾಗಿದ್ದವು. ಮಧ್ಯಮವರ್ಗದವರ ಮನ ಕಲಕುವಂತಹ ದೃಶ್ಯಗಳಿದ್ದವು. ದೊರೆ-ಭಗವಾನ್‌ ಅದನ್ನೇ ಬಂಡವಾಳ ಮಾಡಿಕೊಂಡರು. ಅನಂತನಾಗ್ ಲಕ್ಷ್ಮಿ ಅಭಿನಯ ಕೂಡ ಚಿತ್ರದ ಹೈಲೈಟ್.. ಹಾಗೆ ರಾಜನ್ ನಾಗೇಂದ್ರರ ಇಂಪಾದ ಸಂಗೀತ ಕೂಡ ಪ್ರೇಕ್ಷಕರನ್ನು ಥಿಯೇಟರ್‌ಗಳತ್ತ ಸೆಳೆಯಿತು.

‘ಚಂದನದಗೊಂಬೆ’ ಕೌಟುಂಬಿಕ ಕಥೆಯ ಜೊತೆಗೆ ಹೆಣ್ಣೋಬ್ಬಳ ಅಂತರಂಗದ ನೋವನ್ನು ಪ್ರತಿಬಿಂಬಿಸುವ ಕಥೆಯಾಗಿದ್ದರಿಂದ ಮಹಿಳಾ ಪ್ರೇಕ್ಷಕರು ಮುಗಿಬಿದ್ದರು. ‘ಬೆಂಕಿಯ ಬಲೆ’ ಬಡ ಮೇಷ್ಟ್ರು ಅವನ ಮಡದಿಯ ಬಡತನದ ದುರಂತ ಚಿತ್ರಣವಿದ್ದು ಕಣ್ಣೀರಿನ ಬಲದಿಂದಲೇ ಚಿತ್ರ ನೂರುದಿನ ಓಡಿ ದಾಖಲೆ ಗಳಿಸಿತು. ‘ಗಾಳಿಮಾತು’ ಹೆಣ್ಣೊಬ್ಬಳ ಚಾರಿತ್ಯವನ್ನು ಸ್ವಾರ್ಥಿಯೊಬ್ಬ ಕೇವಲ ಗಾಳಿಮಾತುಗಳಿಂದಲೇ (ಗಾಸಿಪ್) ಹೇಗೆ ಹಾಳುಮಾಡಿ ಅವಳ ಜೀವನವನ್ನು ಮೂರಾಬಟ್ಟೆ ಮಾಡಬಹುದೆಂಬುದನ್ನು ಮನ ಕಲಕುವಂತೆ ಚಿತ್ರಿಸಿದ್ದ ದೊರೈ ಭಗವಾನ್ ಇಲ್ಲೂ ಗೆದ್ದಿದ್ದರು. ನಂತರ ದೊರೈ-ಭಗವಾನ್ ಆರಿಸಿಕೊಂಡಿದ್ದು Once again ತ.ರಾ.ಸು. ಕಾದಂಬರಿ ‘ಬಿಡುಗಡೆಯ ಬೇಡಿ’ ಮತ್ತದೇ ಅನಂತನಾಗ್ ಲಕ್ಷ್ಮಿ ಜೋಡಿ. ಕಾದಂಬರಿ ಸ್ತ್ರೀ ಸ್ವಾತಂತ್ರ್ಯದ ಬಗ್ಗೆ ಅವಳ ಅಭಿಮಾನ ಬಗ್ಗೆ ಹೇಳುವ ತ.ರಾ.ಸು ಕಾದಂಬರಿಗಳಲ್ಲೇ ಹೊಸ ಬಗೆಯ ವಸ್ತುವನ್ನು ಧ್ವನಿಸುವಂತದ್ದಾಗಿತ್ತು. ಅದಕ್ಕೆ ಸಂಭಾಷಣೆ ಬರೆಯಲು ದೊರೈ-ಭಗವಾನ್ ನನ್ನನ್ನು ಕೇಳಿಕೊಂಡರು. ನಾನಾಗಲೇ ಚಿತ್ರರಂಗದಲ್ಲಿಯೂ ಸಾಕಷ್ಟು ಪಳಗಿದ್ದೆ. ನಾನು ತ.ರಾ.ಸು ಕಾದಂಬರಿ ಆಧರಿಸಿದ ಚಿತ್ರಕ್ಕೆ ಸಂಭಾಷಣೆ ಮಾಡುತ್ತೇನೋ ಇಲ್ಲವೋ ಎಂಬ ಸಂಕೋಚ, ಆತಂಕ ಅವರಲ್ಲಿ ಮನೆ ಮಾಡಿತ್ತು. ನನ್ನನ್ನೂ ಮದರಾಸಿಗೆ ಕರೆಸಿದ ಅವರು. ಅದನ್ನವರು ಆಡಿಯೂ ತೋರಿಸಿಬಿಟ್ಟರು.

ಮದಕರಿನಾಯಕನ ಬಗ್ಗೆ ಐತಿಹಾಸಿಕ ಕಾದಂಬರಿ ಬರೆವ ವಿಷಯದಲ್ಲಿ ನನಗೂ ಮತ್ತು ತ.ರಾ.ಸು. ಅವರ ಮಧ್ಯೆ ಒಂದಿಷ್ಟು ವೈಮನಸ್ಯ ಉಂಟಾಗಿದ್ದದೂ ನಿಜ. ಆದರೆ ಅವರೇ ಇಲ್ಲವೆಂದಾಗ ದ್ವೇಷ ಮಾಡುವುದಾದರೂ ಯಾರನ್ನೂ? ಎಲ್ಲಿ ? ಹೇಗೆ ? ಅನೇಕರು ವೇಣು, ತ.ರಾ.ಸು ಅವರಿಗೆ ಪ್ರತಿಸ್ಪರ್ಧಿ ಎಂಬಂತೆ ಬಿಂಬಿಸಲು ಪ್ರಯತ್ನ ಮಾಡೋದು. ನನ್ನ ತಲೆ ಮೇಲೆ ಗೂಬೆ ಕೂರಿಸುವ ಹಲವರ ಕುಯುಕ್ತಿ ಬಗ್ಗೆ ನನಗೆ ಗೊತ್ತಿದೆ. ನಿಮಗೂ ಅನೇಕರಿಗೆ ಗೊತ್ತಿರಬಹುದು. ಇದೆಂತಹ ಚೋದ್ಯನೋಡಿ! ಸತ್ತವರಿಗೆ ಪ್ರತಿಸ್ಪರ್ಧೆ ನೀಡಬೇಕೆಂದರೆ ನಾನೂ ಅಲ್ಲಿಗೆ ಹೋಗಬೇಕಾಗುತ್ತಷ್ಟೆ. ನಾನಂತೂ ಬದುಕಿರೋವರೆಗೂ ಸ್ಪರ್ಧಿಯಲ್ಲ ಸಧ್ಯಕ್ಕೆ ನನಗೂನೂ ಯಾರೂ ಪ್ರತಿಸ್ಪರ್ಧಿ ಗಳಿಲ್ಲ, ಆದರೆ ಸ್ಪರ್ಧೆಬೇಕು. ಅದು ಆರೋಗ್ಯಕರವಾಗಿರಬೇಕಷ್ಟೆ.

ಇಷ್ಟಾಯಿತಲ್ಲ. ‘ಬಿಡುಗಡೆಯ ಬೇಡಿ’ ಚಿತ್ರಕ್ಕೆ ನಾನು ಛಾಲೆಂಜ್ ಆಗಿ ಸ್ವೀಕರಿಸಿ ಸೊಗಸಾದ ಸಂಭಾಷಣೆಯನ್ನೇ ಬರೆದೆ. ಚಿತ್ರ ಬಿಡುಗಡೆಯಾದಾಗ ಅದನ್ನು ನೋಡಲು ತ.ರಾ.ಸು ಅವರೇ ಇರಲಿಲ್ಲ. ನನಗಂತೂ ತುಂಬಾ ನಿರಾಶೆ ಕಾಡಿತು. ಆ ನಿರಾಶೆ ಎಂತದ್ದು ಅಂತ ನನಗೆ ಮಾತ್ರ ಗೊತ್ತು.

ಆಮೇಲೆ ಬಹಳ ಕಾಲದ ನಂತರ ತ.ರಾ.ಸು ಅವರ ‘ಮಸಣದ ಹೂವು’ ಕಾದಂಬರಿಯನ್ನು ಪುಟ್ಟಣ್ಣ ಮತ್ತೆ ಚಿತ್ರ ಮಾಡುವುದರ ಮೂಲಕ ತ.ರಾ.ಸು. ಅವರೊಂದಿಗೆ ರಾಜಿಯಾಗಿದ್ದರು. ವೇಶ್ಯೆಯರ ಜೀವನದ ಏಳು ಬೀಳುಗಳನ್ನು ಅಭಿವ್ಯಕ್ತಿಗೊಳಿಸಿದ ‘ಮಸಣದ ಹೂವ’ನ್ನು ಪುಟ್ಟಣ್ಣನಂತಹ ಸಂಪ್ರದಾಯಸ್ಥ ಮನಸ್ಸಿನ ವ್ಯಕ್ತಿ ಆರಿಸಿದ್ದೇ ‘ರಾಂಗ್ ಸೆಲೆಕ್ಷನ್’ ಅಂದಿತು – ಚಿತ್ರರಂಗದ ಹಣೆಬರಹ ಬರೆವ ಗಾಂಧಿನಗರ, ಚಿತ್ರ ತೆರೆಕಂಡಾಗ ತ.ರಾ.ಸು ಪುಟ್ಟಣ್ಣ ಇಬ್ಬರೂ ಇರಲಿಲ್ಲ. ಚಿತ್ರ ಅಂದುಕೊಂಡಂತೆಯೇ ಆಗಿತ್ತು.

ಮತ್ತಷ್ಟು ವರ್ಷಗಳ ನಂತರ ಡಾ||ರಾಜ್ ಅವರೆ ಸೆಕೆಂಡ್ ಇನ್ನಿಂಗ್ಸ್ ಆರಂಭವಾದಾಗ ನಾಗಾಭರಣ ಹುಡುಕಿದ್ದು ತ.ರಾ.ಸು ಕಾದಂಬರಿಗಳನ್ನೇ ‘ಆಕಸ್ಮಿಕ’ ಚಿತ್ರವಾಗಿ ಹೊರಬಂತು. ಚಿತ್ರ ಸುಮಾರಾಗಿದ್ದರೂ ರಾಜ್ ಇದ್ದರು ಹಂಸಲೇಖರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಅನ್ನೋ ಕನ್ನಡಗೀತೆ ಚಿತ್ರವನ್ನು ಮೇಲೆತ್ತಿ ಹಿಡಿಯಿತು. ಒಟ್ಟಿನಲ್ಲಿ ಚಿತ್ರರಂಗದಿಂದ ತ.ರಾ.ಸು ಬೆಳಗಿದರು ಚಿತ್ರರಂಗವನ್ನೂ ಬೆಳಗಿಸಿದರು ಎಂಬ ಮಾತು ನಿರ್ವಿವಾದ. ಮೊದಲಲ್ಲಿ ಅವರೂ ಸಂಭಾಷಣೆ ಹಾಡುಗಳನ್ನು ಬರೆವ ಕಾರ್ಯ ಮಾಡಿದ್ದುಂಟು. ಅವರದ್ದು ಸುಧೀರ್ಘ ಸಂಭಾಷಣೆಯಾಗುತ್ತದೆಂಬ ಆರೋಪ ಚಿತ್ರರಂಗದವರಿಂದ ಕೇಳಿಬಂತು. ತ.ರಾ.ಸು ತಮ್ಮ ಕಾದಂಬರಿಗಳಿಗೆ ತಾವೇ ಸಂಭಾಷಣೆ ಬರೆಯಬೇಕೆಂದು ಹಠ ಹಿಡಿಯಲಿಲ್ಲ. ಅವರಿಗೆ ಚಲನಚಿತ್ರ ಮಾಧ್ಯಮದ ಸಾಹಿತ್ಯಕ ಭಾಷೆಯ ರಹಸ್ಯ ಅರ್ಥವಾಗದ್ದರಿಂದ ಕಾದಂಬರಿಗಳನ್ನು ಕೊಟ್ಟು ಕೈ ತೊಳೆದುಕೊಂಡರು.

ಸಿನಿಮಾಗಳಿಗೆ ಚಿತ್ರಕಥೆ ಸಂಭಾಷಣೆ ರಚಿಸುವುದು ಸಹ ಒಂದು ಅಪೂರ್ವ ಕಲೆ, ಅದಕ್ಕೆ ಸ್ಪೆಷಲ್ ಬ್ರೇನ್ ಬೇಕಾಗುತ್ತೆ. ತ.ರಾ.ಸು ಚಿತ್ರರಂಗವನ್ನು ಉಪೇಕ್ಷಿಸಲಿಲ್ಲವೆಂಬುದು ಇಲ್ಲಿ ಗಮನಾರ್ಹ. ಅವರನ್ನು ಸಹ ‘ಜನಪ್ರಿಯ ಸಾಹಿತಿ’ ಎಂದು ಬ್ರಾಂಡ್ ಮಾಡಿಬಿಟ್ಟಿದ್ದರು ಒಂದು ವರ್ಗದ ಜನ. ಅದನ್ನೂ ಅವರು ಪ್ರಿಯವಾಗೇ ತೆಗೆದುಕೊಂಡಿದ್ದರು.

ಇದಿಷ್ಟು ಹಿರಿತೆರೆಯ ಸುದ್ದಿಯಾದರೆ ಕಿರುತೆರೆಯಲ್ಲೂ ತ.ರಾ.ಸು ಮಿಂಚದೇ ಇಲ್ಲ. ಅವರ ಅನೇಕ ಕಥೆಗಳು ಕಿರುತೆರೆ ಅಂದರೆ ಟಿ.ವಿ. ಗಳಲ್ಲಿ ಸೀರಿಯಲ್ ಟೆಲಿಫಿಲ್ಮ್‌ಗಳಾಗಿವೆ. ನಿಮಗೆ ಈವತ್ತು ಮತ್ತೊಂದು ಸಂತೋಷದ ಸುದ್ದಿ ಕೂಡ ಕಾದಿದೆ. ತ.ರಾ.ಸು ಅವರ ‘ದುರ್ಗಾಸ್ತಮಾನ’ ಕಾದಂಬರಿ ಮೆಗಾ ಸೀರಿಯಲ್‌ ಆಗಿ ನಿಮ್ಮ ಮುಂದೆ ಬರಲಿದೆ ಅದರ ನಿರ್ದೇಶಕರು ಖ್ಯಾತ ನಿರ್ದೆಶಕ ನಾಗಾಭರಣ ಅವರು. ಸೀರಿಯಲ್ ನ ಚಿತ್ರಕಥೆ ಸಂಭಾಷಣೆ ಬರೆಯೋರು ಯಾರು ಗೊತ್ತೆ ? ರಿಚರ್ಡ್‌ಲೂಯಿಸ್… ಅಲ್ಲ ನಿಮ್ಮ ಊರಿನ ಹುಡುಗ ಇವನೇ ಈ ಬಿ.ಎಲ್.ವೇಣು. ಸಂತೋಷವಾಯ್ತಾ..? ಕೆಲವರಿಗೆ ಬಿಟ್ಟರೆ ಬಹಳಷ್ಟು ಜನಕ್ಕೆ ನಾನು ಬರೆಯೋದು ಸಂತೋಷದ ವಿಷಯವೇ.. ‘ಯಾರೇ ಕೂಗಾಡಲಿ, ಊರೇ ಹೋರಾಡಲಿ ನಿನ್ನ ನೆಮ್ಮದಿಗೆ ಭಂಗವಿಲ್ಲ’ ಎಮ್ಮೆ ಹಾಡು ಗೊತ್ತಲ್ಲ … ಹಾಗೇ ನಾನು ನನ್ನನ್ನು ನನ್ನ ಜನಪ್ರಿಯತೆಯನ್ನು ಕಂಡು ಯಾರು ಏನು ಬೇಕಾದ್ರೂ ಲೇವಡಿ ಮಾಡ್ಲಿ… I Won’t bother, ನಾನು ಕಥೆ, ಕಾದಂಬರಿ, ಲೇಖನಗಳು, ನಾಟಕ, ಸಿನಿಮಾ, ದೂರದರ್ಶನ ಎಲ್ಲಿ ಅವಕಾಶ ಸಿಕ್ಕರೂ ಬಿಡೋದಿಲ್ಲ. ದುರ್ಗದ ಬಂಧುಗಳ ಆಶೀರ್ವಾದ, ಗಂಡುಮೆಟ್ಟಿನ ನಾಡಿನ ನೆಲದ ಬಲ ಇರೋವರ್ಗೂ ಸೋಲೋ ಮಾತೇ ಇಲ್ಲ. ನನಗೆ ಈ ಸಮಾರಂಭದ ಮಹನೀಯರು ಕೊಟ್ಟ ವಸ್ತುವನ್ನು ನನಗೆ ಸಿಕ್ಕ ಅತ್ಯಲ್ಪಕಾಲದಲ್ಲೇ ಇಷ್ಟರ ಮಟ್ಟಿಗೆ ನಿಮ್ಮ ಮುಂದೆ ಇಟ್ಟಿದ್ದೇನೆ.

ಕೊನೆಯ ಮಾತು. ನನಗಂತೂ ತುಂಬಾ ಅಸೂಯೆ ಆಗ್ತಾ ಇದೆ. ಯಾಕೆಂದರೆ ನಾನೇಕೆ ಏಪ್ರಿಲ್ ತಿಂಗಳಲ್ಲಿ ಹುಟ್ಟಲಿಲ್ಲ ಅಂತ. ನಾನಷ್ಟೇ ಅಲ್ಲ, ಯಾರಾದ್ರೂ ಅಸೂಯೆ ಪಡೋ ಅಂತ ವಿಷಯ. ಯಾಕೆ ಅನ್ನೋದನ್ನ ನಾನೀಗ ಹೇಳಿದರೆ ನೀವು ಅಸೂಯೆ ಪಡ್ತಿರಿ. ಏಪ್ರಿಲ್ ತಿಂಗಳಲ್ಲಿ ಅಂದರೆ ಈ ತಿಂಗಳಲ್ಲಿ ಎಂತೆಂತಹ ಮಹನೀಯರು ಗಣ್ಯರು ಮೇಧಾವಿಗಳು, ಕಲಾಕಾರರು ಹುಟ್ಟಿದ್ದಾರೆ ನೋಡಿ, ಶಂಕರಾಚಾರ್ಯರು ಹುಟ್ಟಿದ ತಿಂಗಳಿದು. ಇದೇ ತಿಂಗಳಲ್ಲಿ ಶಂಕರ ಜಯಂತಿ ಬರುತ್ತೆ. ಹಾಗೆ ರಾಮಾನುಜಾಚಾರ್ಯರ ಜಯಂತಿ, ಮಹಾವೀರ ಜಯಂತಿ, ಅಂಬೇಡ್ಕರ್ ಜಯಂತಿ, ಮಹಾನ್‌ ಮಾನವತಾವಾದಿ ಬಸವ ಜಯಂತಿ, ಡಾ|| ರಾಜ್ ಮೇರುನಟ ಹುಟ್ಟಿದ್ದು ಇದೇ ತಿಂಗಳು. ಡಾ|| ರಾಜ್ ಜಯಂತಿ, ಕ್ರಿಕೆಟ್ ಹೀರೋ ಸಚಿನ್ ತೆಂಡೂಲ್ಕರ್ ಹುಟ್ಟಿದ ಜಯಂತಿ, ತ.ರಾ.ಸು. ಜಯಂತಿ, ಬಹಳ ಸಂತೋಷ ಸಾಹಿತಿಯೊಬ್ಬರನ್ನು ನೀವು ಇಷ್ಟೊಂದು ಪ್ರೀತಿಸೋದು ನಿಮ್ಮಗಳ ದೊಡ್ಡಗುಣ. ತ.ರಾ.ಸು ನಾಡು ಕಂಡ ಅಪರೂಪದ ಸಾಹಿತಿ, ಅವರ ಬಸಂತಬಹಾರ್, ಹಂಸಗೀತೆ, ಚಂದವಳ್ಳಿ ತೋಟ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಬಂದಿದೆ. ನಾಗರಹಾವು, ಚಂದನದ ಗೊಂಬೆ, ಸಿನಿಮಾ ಕಥೆಗಾಗಿ ಪ್ರಶಸ್ತಿ ಬಂದಿದೆ. ಸತ್ತಮೇಲೆ ಅವಂದಾಯ್ತಪ್ಪ ಅವನಿಗೇನಿದೆ ಡಿಮಾಂಡು? ಸತ್ತವರನ್ನು ಯಾರು ಕೇಳ್ತಾರೆ ಮನೆಯವರೇ ನೆನಪು ಮಾಡಿಕೊಳ್ಳೋದು ಕಷ್ಟ ಅಂತಾರೆ ಅಂತಹ ವಿಚಿತ್ರ ಪ್ರಪಂಚ ಇದು. ಅಂತದ್ದರಲ್ಲಿ ನಾವೆಲ್ಲಾ ತ.ರಾ.ಸು. ಜನ್ಮದಿನಾಚರಣೆ ಆಚರಿಸ್ತಾ ಇರೋದು ವೈಶಿಷ್ಟ್ಯ ಪೂರ್ಣವಲ್ಲವೆ. ಸತ್ತವರಿಗೆ ಎಲ್ಲಿದೆ ಡಿಮಾಂಡು? ಅನ್ನೋ ಮಾತು ಸುಳ್ಳುಮಾಡಿದವರು ತ.ರಾ.ಸು. ಈಗಲೂ ಅವರಿಗೆ ಅವರ ಕಾದಂಬರಿಗಳಿಗೆ ಡಿಮಾಂಡ್ ಇದ್ದೇ ಇದೆ ಅಂದರೆ ಉತ್ಪ್ರೇಕ್ಷೆಯಾಗಲಾರದು ಇಷ್ಟೊಂದು ಡಿಮಾಂಡ್ ಇರೋ ದುರ್ಗದ ಈ ಡೈಮಂಡ್ ಸಾಯಲು ಸಾಯಲು ಸಾಧ್ಯವೆ? ಖಂಡಿತ ಇಲ್ಲ. ತ.ರಾ.ಸು. ತಮ್ಮ ಕೃತಿಗಳಿಂದ ಇಂದಿಗೂ ಎಂದಿಗೂ ಅಮರರಾಗಿರುತ್ತಾರೆ. ಕೆಲವರು ಬದುಕಿಯೂ ಸತ್ತಂತೆ ಇರುತ್ತಾರೆ. ಹಲವರು ಸತ್ತು ಬದುಕಿರುತ್ತಾರೆ. that’s is ತ.ರಾ.ಸು.
(ತ.ರಾ.ಸು ಜನ್ಮದಿನದ ಸಮಾರಂಭದಲ್ಲಿ ಮಂಡಿಸಿದ ಪ್ರಬಂಧ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನುಕರಣೆ
Next post ಹೊಟ್ಟೆ ಪಾಡು

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

cheap jordans|wholesale air max|wholesale jordans|wholesale jewelry|wholesale jerseys