ಅಯ್ಯ, ನಾ ಮರ್ತ್ಯದಲ್ಲಿ ಹುಟ್ಟಿ,
ಕಷ್ಟ ಸಂಸಾರಿ ಎನಿಸಿಕೊಂಡೆ.
ಕತ್ತಲೆಯಲ್ಲಿ ಮುಳುಗಿದೆ.
ಕರ್ಮಕ್ಕೆ ಗಿರಿಯಾಗುತಿದ್ದರೆ,
ಹೆತ್ತ ತಾಯಿ ಎಂಬ ಗುರುಸ್ವಾಮಿ
ಎನ್ನ ಕೊರಳಿಗೆ ಗಂಡನೆಂಬ ಲಿಂಗಕಟ್ಟಿದನು.
ತಂದೆ ಎಂಬ ಜಂಗಮಲಿಂಗವು
ಎನ್ನ ಪ್ರಾಣಕ್ಕೆ ಪ್ರಸಾದವ ಊಡಿದನು.
ಪ್ರಾಣಕ್ಕೆ ಪ್ರಸಾದವನೊಡಲಾಗಲೆ,
ಕತ್ತಲೆ ಹರಿಯಿತ್ತು. ಕರ್ಮ ಹಿಂಗಿತ್ತು.
ಮನ ಬತ್ತಲೆಯಾಯಿತ್ತು.
ಚಿತ್ತ ಸುಯಿಧಾನವಾಯಿತ್ತು, ನಿಶ್ಚಿಂತವಾಯಿತ್ತು.
ನಿಜನ ನೆಮ್ಮಿ ನೋಡುವನ್ನಕ್ಕ,
ಎನ್ನ ಅತ್ತೆ ಮಾವನು ಅರತು ಹೋದರು.
ಅತ್ತಿಗೆ ನಾದಿನಿಯರು ಎತ್ತಲೋಡಿ ಹೋದರು.
ಸುತ್ತಲಿರುವ ಬಂಧುಗಳೆಲ್ಲ ಬಯಲಾದರು.
ಎನ್ನ ತಂದೆ ತಾಯಿ ಕಟ್ಟಿದ
ಚಿಕ್ಕಂದಿನ ಗಂಡನ ದಿಟ್ಟಿಸಿ,
ನೋಡುವ ನೋಟ ಹೋಗಿ,
ಎನ್ನ ಮನಕ್ಕೆ ಸಿಲ್ಕಿತ್ತು.
ಅಂಗಲಿಂಗವೆಂಬ ಉಭಯವಳಿಯಿತ್ತು.
ಸಂಗಸುಖ ಹಿಂಗಿತ್ತು.
ಮಂಗಳದ ಮಹಾಬೆಳಗಿನಲ್ಲಿ
ಓಲಾಡಿ ಸುಖಿಯಾದೆನಯ್ಯ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****