ನನಗೆ ಅರವತ್ತು ವರ್ಷ
ನಮ್ಮವರಿಗೆ ಎಪ್ಪತ್ತು
ಏನೋ ಇಬ್ಬರಿಗೂ ಬೇಜಾರಾದಾಗೆಲ್ಲ
ನನ್ನ ಎಪ್ಪತ್ತರಲ್ಲಿ ನಿನ್ನ ಅರವತ್ತು ಕಳೆ
ಉಳಿದ ಹತ್ತರಲ್ಲಿ
ನೀನೈದು ವರ್ಷದವಳು ನಾನೈದು ವರ್ಷದವ
ಬಾ ಎಂದು ಕೈಹಿಡಿದು
ನನ್ನ ಮೊಮ್ಮಕ್ಕಳು ಸಾಕಿರುವ
ನಾಯಿಯ ಮರಿಯ ಹತ್ತಿರವೋ
ಬೆಕ್ಕಿನ ಮರಿಗಳ ಹತ್ತಿರವೋ ಒಯ್ದು
ಮರಿಗಳನ್ನು ನನ್ನ ಹೆಗಲ ಮೇಲೆಯೋ
ಕಾಲ ಹತ್ತಿರವೋ ಹಾಕಿದಾಗ
ಖುಷಿಯಾಗಿ ನನ್ನ ಕಣ್ಣಲ್ಲಿನೀರು ಬರುತ್ತದೆ
ಮೊಮ್ಮಕ್ಕಳು
‘ಹೋ ಅಜ್ಜಿ ಅಜ್ಜಿ ಅಳ್ತಾ ಇದೆ
ಎಂದು ಚಪ್ಪಾಳೆ ತಟ್ಟಿ ಆನಂದಿಸುವಾಗ
ನನ್ನವರು ಐದರಲ್ಲಿ ಇನ್ನೊ ಅರ್ಧವಾಗಿ
ಮೊಮ್ಮಕ್ಕಳ ಹಿಂದೆ ಓಡುತ್ತಾರೆ
ಸಂತೋಷದ ಕಣ್ಣೀರು ನನಗೆ ಉಕ್ಕಿ ಬಂದಾಗ
ಅಯ್ಯೋ ಪಾಪ ಅಜ್ಜಿ ಅಳ್ತಾ ಇದೆ, ಎಂದು
ಮೊಮ್ಮಕ್ಕಳೆಲ್ಲ ಮೆತ್ತಗೆ
ಒಳಗೆ ಒಯ್ದು
ಮೆತ್ತನೆಯ ಹಾಸಿಗೆಯ ಮೇಲೆ
ಮಲಗಿಸಿ
ಮಮ್ಮಿ
ಅಜ್ಜಾ- ಅಜ್ಜಿಗೆ ಬಿಸಿ ಕಾಫಿ
ಎಂದು ಆರ್ಡರ್ ಮಾಡಿದಾಗ
ನಾವು ಮೊಮ್ಮಕ್ಕಳಲ್ಲಿ
ಮರಿ ಮಕ್ಕಳಂತೆ ಕರಗಿ ಹೋಗಿದ್ದೆವು.
(ನಮ್ಮ ಪಕ್ಕದ ಮನೆಯ ಅಜ್ಜಿ ತನ್ನ ವಿಷಯವಾಗಿ ಒಂದು ಕವನ ಬರೆಯಲು ಹೇಳುತ್ತಿದ್ದರು. ಪ್ರತಿ ಸಲ ಬಂದಾಗ ವಿಚಾರಿಸುತ್ತಿದ್ದರು. ಅವರ ಅರವತ್ತರ ಹುಟ್ಟುಹಬ್ಬಕ್ಕೆ ಅವರ ವಿಷಯವೇ ಬರೆದುಕೊಟ್ಟಾಗ ನಿಜವಾಗಿಯೂ ಅವರ ಕಣ್ಣಲ್ಲಿ ಆನಂದ ಭಾಷ್ಪವು ಬಂದವು)
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)