ಇದ್ದಿಲಂಗಡಿ ಕೆಲಸದ ಪೆಂಟಯ್ಯನಿಗೆ
ಇದ್ದುದು ಒಂದೇ ಒಂದು ಅಂಗಿ.  ಗಿರಾಕಿಗಳ ಮನೆಗೆ
ಇದ್ದಿಲು ಸಪ್ಲೈ ಮಾಡುವಾಗಲೂ ರಾತ್ರಿ

ನಿದ್ದೆ ಮಾಡುವಾಗಲೂ, ಪೇಟೆಕಡೆ ಹೋಗುವಾಗಲೂ
ಇದೇ ಅಂಗಿ.  ಮೂಸಿನದಿಯ ಕೊಚ್ಚೆಯಲ್ಲಿ
ಅದ್ದಿ ತೆಗೆದಂಥ ಬಣ್ಣ, ಇದರಿಂದ

ಬೇಸರಗೊಂಡ ಪೆಂಟಯ್ಯ ಕಾಸಿಗೆ
ಕಾಸು ಸೇರಿಸಿ ಖರೀದಿಸಿದ ಅನೇಕದಿನಗಳ ತನ್ನ
ಆಸೆಯಂತೆ ಒಂದು ಹೊಚ್ಚಹೊಸ ಅಂಗಿ.  ಎಂದೋ

ಹೋಗಬೇಕೆಂದಿದ್ದ ಅಡವಿರಾಮುಡು ಚಿತ್ರಕ್ಕೆ ಈ ಸಂಜೆಯೆ
ಹೋಗಿಬಿಡುವುದು ಎಂದುಕೊಂಡ-ಪೋಲೀಸು ಪಠೇಲನ ಮನೆಗೆ
ಅರ್ಜೆಂಟಾಗಿ ಬೇಕಾಗಿದ್ದ ಇದ್ದಿಲ ಸಂಗತಿಯನ್ನು ಮರೆತು.

ಗರಿಗರೀ ಬಿಳಿ ಅಂಗಿ.  ಮುಟ್ಟಿದರೆ ಎಲ್ಲಿ
ಮುರಿಯುತ್ತದೋ, ತೊಟ್ಟರೆ ಎಲ್ಲಿ ಇಸ್ತ್ರಿಯ ಗೆರೆಗಳು
ಮಾಯುತ್ತವೋ ಎಂದುಕೊಂಡೇ ಹಾಕಿ ಹೊರಟಿದ್ದ.

ಇದ್ದಿಲಂಗಡಿಗೂ ತನಗೂ ಏನೇನೂ ಸಂಬಂಧವಿಲ್ಲದಂತೆ
ಇದ್ದಿಲಂಗಡಿಯ ಪಕ್ಕದಲ್ಲೇ ನಡೆದು ಹೋದ.  ಇನ್ನೇನು ಗೆದ್ದೆ-
ನೆನ್ನುವಷ್ಟರಲ್ಲಿ ಎದುರಾದ್ದು ಮತ್ತಾರು ಅಲ್ಲ ಪೋಲಿಸ್‌ಪಠೇಲ!

ಅಂದಿನಿಂದ-ಅಂದಿನಿಂದ ಯಾತಕ್ಕೆ, ಆ ಕ್ಷಣ.
ದಿಂದ ಪೆಂಟಯ್ಯನ ಬಳಿ ಅಂಗಿ
ಎಂದೂ ಬಿಳಿಯಂಗಿಯಾಗಿರಲಿಲ್ಲ.
*****