‘ಸತ್ಯದ ಯಜ್ಞಕುಂಡದಲ್ಲಿ ನಾವು
ಎಲ್ಲವನ್ನೂ ಅರ್ಪಿಸಿಬಿಡಬೇಕು’ ಅಂದಿದ್ದೆಯಲ್ಲಾ
ಈಗ ಆಸತ್ಯದ ಬ್ಯಾರಲ್‌ದೊಳಗೆ ಗುಂಡಿನ
ಲಾಬಿಗಳು ಏಳುತ್ತಿವೆಯಲ್ಲ! ಇದಕ್ಕೇನಂತಿ ಯಜ್ಜಾ?


ವಿದೇಶಿ ಬಟ್ಟೆ ಬರೆಗಳನ್ನೆಲ್ಲಾ
ಸುಟ್ಟುಹಾಕಿ ಜೈಕಾರ ಹಾಕಿದ ನಿನ್ನ
ಜನರ ಮೊಮ್ಮಕ್ಕಳೆಲ್ಲ ಈಗ
ವಿದೇಶಿ ಸಾಮಾನುಗಳ ಟಚ್ ಅಪ್
ಎಲ್ಲದಕ್ಕೂ ಬೇಕು ಅನ್ನುತ್ತಾರಲ್ಲ! ಏನ ಹೇಳ್ತಿಯಜ್ಜಾ?


ಮೊನ್ನೆ ಮೊನ್ನೆ ಅಜ್ಜಿ ಕಸ್ತೂರಬಾ ಬಂದು
ಸ್ವಾತಂತ್ರ ಚಳುವಳಿಯೊಳಗ
ನೀ ಬಹಳ ತ್ರಾಸ ಕೊಟ್ಟಿದ್ದಿ ಅಂತಾ
ಲಿಸ್ಟ್ ಕೊಟ್ಟು
‘ಈಗಿನ ನೀವುಗಳೆಲ್ಲಾ ಹೇಗಿದ್ದೀರಿ ನೋಡು’
ಅಂತ ಹೇಳಿ
ಮುದುಕ ಬಂದರೆ ತರಾಟೆ ತಗೋ ಅಂದಳಲ್ಲಾ ಹೌದೇನೋ ಯಜ್ಜಾ?


ಅಪ್ಪ, ಸ್ವತಂತ್ರ ದೇಶದ ಬಗೆಗೆ
ಹೆಮ್ಮೆ ಪಡುತ್ತ ನಿನ್ನ ಸ್ಮರಣೆ
ನಿನ್ನ ವಾಣಿಗಳನ್ನುಚ್ಚರಿಸುತ
ಫೋಟೋಗೆ ನಮಸ್ಕರಿಸುತ್ತಿದ್ದರೆ
ಮಕ್ಕಳು, ಮಮ್ಮಿ ಡ್ಯಾಡಿ
ಅನ್ನುತ್ತ ರಾಕ್ & ರೋಲ್ ಕೇಳುತ್ತ
ಮೈಕಲ್ ಜಾಕ್ಸನ್ ಫೋಟೋಗೆ
ಮುದ್ದಿಸುವದು ನೋಡಿ
ನಾನು ಇವೆರಡರ ಮಧ್ಯ
ಗೊದಮೊಟ್ಟೆಯಾಗುತ್ತಿದ್ದೇನಲ್ಲ; ಯಜ್ಜಾ-


ನಿನ್ನ ಜೊತೆ ಖಾದಿ ಉಟ್ಟು
ಜೇಲಿಗೆ ಹೋಗಿ ಬಂದವರು
ಈಗ ವಿದೇಶಿ ಸ್ಕಾರ್ಪ್
ಸ್ವೆಟ್ಟರ್ ಹಾಕಿಕೊಂಡು
ಸೋಫಾ ಮೇಲಿ ಕಾಲೇರಿಸಿ ಕುಳಿತು
ಗುಂಡು ಹಾಕಿ, ಕ್ಯಾಬರೆ ನೋಡುತ್ತ
ರಾಜಕಾರಣ ಮಾಡುತ್ತಿದ್ದಾರಲ್ಲ! ಥೂ ಯಜ್ಜಾ-


ನೀನು ಅಂದು ಒದ್ದೋಡಿಸಿದ
ಬ್ರಟೀಷರಷ್ಟೇ ಅಲ್ಲ
ಜಗತ್ತಿನ ಜನ ಜಾಗತೀಕರಣದ
ನೆಪದಲ್ಲಿ ಮತ್ತೆ ಬರುತ್ತಿದ್ದಾರೆ
ಒಂದೆಡೆ ಕೂಗಾಟ ಹೋರಾಟ
ಮತ್ತೊಂದೆಡೆ ರ್‍ಎಡ್ ಕಾರ್ಪೆಟ್ ಸ್ವಾಗತ
ದುಃಖಸುತ್ತಿದೀಯಾ! ಯಜ್ಜಾ


ಇಂದಿನ ಏಕೆ ೪೭ ಗನ್
ಮುಂದೆ ಅಂದು
ನೀ ಹೇಳುತ್ತಿದ್ದ ಕೊಡುತ್ತಿದ್ದ ಎಲ್ಲರನ್ನೂ
ಗೆಲ್ಲಬಲ್ಲ ಆಯುಧ ‘ಪ್ರೀತಿ’ ಎನ್ನುತ್ತಿದ್ದ
ತುಂಬು ಹೃದಯದ ನಿನ್ನ ಮಾತು
ಮತ್ತೆಂದಾದರೂ ಕೇಳಿಸಿಕೊಂಡಿವೆಯೇ? ಯಜ್ಜಾ


೫೦ನೆಯ ಸ್ವತಂತ್ರ ವರ್ಷದ
ದೇಶ ನೆನೆಸಿಕೊಂಡು
ಇಲ್ಲೊಬ್ಬ ಅಜ್ಜ ನಿನ್ನ ಹೆಸರು
ಕೂಗಿ, ಕೂಗಿ, ಬೆಚ್ಚಗಿರಲಿಕ್ಕೆ ಹೇಳಿ
ನಿನ್ನ ಫೋಟೋಗೆ ತನ್ನ ಹಳೆಯ ಕೋಟು ಹಾಕಿ
ಕಣ್ಣೀರು ಸುರಿಸುತ್ತ ನಿನ್ನೆಯೇ
ಸತ್ತು ಹೋದನಲ್ಲ!
ಇದೇನು ಯಜ್ಜಾ ಇದರರ್ಥ!!


ಕಣ್ಣು ಕಿವಿ, ಬಾಯಿ ಮುಚ್ಚಿದ
ಮಂಗಗಳನ್ನು ನೀನು ಹೀಗೇ ಇರಗೊಟ್ಟರೆ
ನಾ ಕೇಳಿದ ಪ್ರಶ್ನೆಗೆ
ಒಂದೊಂದೇ ಮಂಗನ್ನ ಸರಿಸುತ್ತ
ನೀ ತಪ್ಪಿಸಿಕೊಂಡಿದ್ದಾದರೆ
ನಾನು, ನೀನು ಬೇತಾಳ ವಿಕ್ರಮಾದಿತ್ಯರಾಗಿ
ಸುಡುಗಾಡಾದಾಗ ಅಡ್ಡಾಡಬೇಕಾದೀತು
ನಾ ಕಾಯೋದಿಲ್ಲ ಯಜ್ಜಾ ಇನ್ನ
“ಬೇಗ ಉತ್ತರ ಹೇಳು”
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)