ಹಾಡಬೇಕು

ಹಾಡು ಹಾಡಬೇಕು ಹೀಗೆ ಹಾಡು ಹಾಡಬೇಕು
ಮನಸಿನ ಮೂಸೆಯ ಭಾವದ ಕುದಿಗಳು
ಉಕ್ಕಿ ಹರಿಯಬೇಕು ಹಾಡಿನ ಪಾಡು ಪಡೆಯಬೇಕು      ||ಪ||

ಅಂತರಂಗದಲಿ ರಿಂಗಣಗುಣಿಯುತ
ಒಲವು ಉಲಿಯಬೇಕು ಸಹಜದ ಲಯವು ನಲಿಯಬೇಕು
ಒಳ ತಲ್ಲಣಗಳ ಪಲ್ಲವಿ ನರಳುತ
ಹೂವು ಅರಳಬೇಕು ಸುಗಂಧ ಸುತ್ತ ಹರಡಬೇಕು        ||೧||

ಎಲ್ಲ ದಿಕ್ಕುಗಳ ಎಲೆ ಕಡ್ಡಿಗಳನು
ತಂದು ಹೆಣೆಯಬೇಕು ಕನಸಿನ ಗೂಡು ಕಟ್ಟಬೇಕು
ಆಶೆಯ ಮರಿಗಳ ಹಸಿವು ನೋವುಗಳ
ಅಳುವು ನಿಲ್ಲಬೇಕು ನಗುವಿನ ಹಕ್ಕಿ ಹಾಡಬೇಕು          ||೨||

ಛಿದ್ರ ಭಿದ್ರ ತುಂಡುಗಳ ಜೋಡಿಸುತ
ಕನ್ನಡಿ ನಗಬೇಕು ತಿಳಿವಿನ ಬಿಂಬ ಕಾಣಬೇಕು
ಸಂದು ಗೊಂದುಗಳ ಕಂದಕ ಸೆರೆಗಳ
ತೂರಿ ಚಿಮ್ಮಬೇಕು ಹಾಡಿನ ಹೊಳೆಯು ಹೊಮ್ಮಬೇಕು  ||೩||

ಹರಿದು ಕೊಳೆಯುವೀ ಎಳೆಗಳ ಕಲೆಸುತ
ಬಟ್ಟೆ ನೇಯಬೇಕು ಬಾಳಿಗೆ ಬಟ್ಟೆದೋರಬೇಕು
ಗೊಬ್ಬರ ಕೊಳೆಗಳ ಈ ನೆಲದಿಂದಲೆ
ಗಿಡವು ಮೂಡಬೇಕು ಜೀವನ ರಸಫಲ ಬಿಡಬೇಕು       ||೪||

ದಿನ ದಿನ ಸಾಗುವ ಸಂಜೆ ಬೆಳಗುಗಳ
ಬಣ್ಣ ಬಳಸಬೇಕು ಸಂಧ್ಯಾ ರಾಗ ಹರಿಯಬೇಕು
ಮುದಿ ಸಂಜೆಗೆ ಹಸುಗಂದನ ಎಳೆ ನಗೆ
ಬೆಸುಗೆಯಾಗಬೇಕು ಚೇತನ ಸೆಲೆಯು ಸದಾ ಬೇಕು    ||೫||

ಹೇಡಿತನದ ಹುಳು ಹತ್ತಿದ ಜೀವಕೆ
ಜೀವ ಸತ್ವ ಬೇಕು ಹಾಡಿನ ಶಕ್ತಿ ತುಂಬಬೇಕು
ದೇಶದ ಹೃದಯವು ದುಡಿಯುವ ಕೈಗಳ
ನಾಡಿ ಹಿಡಿಯಬೇಕು, ಜನಮನದಾಳ ಮಿಡಿಯಬೇಕು   ||೬||

ಕಣ್ಣೀರಿನ ಧಾರೆಗಳನು ಒರೆಸುವ
ಕೈಯಿದಾಗಬೇಕು ದುಡಿಯುವ ಕೈಗೆ ಬಾಗಬೇಕು
ಒಣಗಿದ ಮರುಭೂಮಿಗಳೆದೆಯೊಳಗಡೆ
ಒಲವು ಹರಿಯಬೇಕು ಹಿಗ್ಗಿನ ತೋಟವರಳಬೇಕು         ||೭||

ದುಷ್ಟ ಶಕ್ತಿಗಳ ಮುಳ್ಳುಕಳ್ಳಿಗಳ
ಕೊಚ್ಚಿ ಹಾಕಬೇಕು ಹಾಡಿದು ಕತ್ತಿಯಾಗಬೇಕು
ಮೋಸ ವಂಚನೆಯ ಸ್ವಾರ್ಥ ಚಿಂತನೆಯ
ಕಸವ ಸುಡಲು ಬೇಕು ಬೆಂಕಿಯು ಹಾಡಿದಾಗಬೇಕು       ||೮||

ದುರ್ಬಲರಿಗೆ ಬಲವೀಯುತ ಕೊಬ್ಬಿದ
ಖೂಳರೆದೆಗೆ ಬಾಣಾ ಸಾರ್ಥಕ ಹಾಡಿನ ಪರಿ ಕಾಣಾ
ದಿನ ದಿನ ಹೊಸ ಹೊಸ ಚೆಲುವನು ತಾಳುತ
ಹಾಡು ಕುಣಿಯಬೇಕು ಕಾಲದ ಹೆಜ್ಜೆ ಮೇಳಬೇಕು
*****************

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶಿಷ್ಟ ವಸ್ತು ಸಂಗ್ರಹಾಲಯ
Next post ಕಳಪೆ ವಿದೇಶೀ ಬಲ್ಫಗಳು

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…