ಕಾಲ ಬಂದಿದೇ ಅಣ್ಣ ನಮ್ಮ ಕಾಲ ಬಂದಿದೆ ಅಣ್ಣಾ                           ||ಪ||

ಸಾವಿರ ಸಾವಿರ ವರ್ಷದ ಕತ್ತಲೆ ಸಾವು ನೋವುಗಳ ಕಾಲವು ಹೋಗಿ
ಮೂಡಲ ಕೆಂಪಿನ ಕಂಪಿನ ಗಾಳಿಯ ಬೆಳಕಿನ ಕಾಲವು ಅಣ್ಣಾ           ||೧||

ಬೆಳಕನೆಲ್ಲ ಬಚ್ಚಿಟ್ಟುಕೊಂಡು ಬರಿ ಕೊಳಕ ಕುಡಿಸಿದವರ
ಥಳುಕಿನಿಂದ ಕಂಗಳನು ಕುಕ್ಕಿ ಕುರುಡು ಮಾಡಿದವರ                   ||೨||

ಬಯಲಿಗೆಳೆದು ಬೆತ್ತಲೆಯಗೊಳಿಸಿ ಚಮ್ಮಟಿಗೆಯಿಂದ ಥಳಿಸು
ನಯದ ವಂಚಕರ ಸವರಿ ವರೆಸಿ ಮನೆಯನ್ನು ಸ್ವಚ್ಛಗೊಳಿಸು         ||೩||

ಧರ್ಮ ಧರ್ಮವೆಂದಂಧಕಾರವನೆ ರಾಜ್ಯವಾಳಿಸಿದರು
ಕಾಲು ಕೈಗಳನು ಕಟ್ಟಿದ೦ಥ ಕಟ್ಟುಗಳ ಕಿತ್ತು ಎಸೆವ                     ||೪||

ಮೇಲು ಕೀಳುಗಳ ಮಡಿಯ ಮೈಲಿಯ ಕಟ್ಟುಪಾಡು ಕಸವ
ಕಾಲು ಕೈಗಳನು ಕಟ್ಟಿದಂಥ ಕಟ್ಟುಗಳ ಕಿತ್ತು ಎಸೆವ                      ||೫||

ಹೊಸ ಸೆಲೆಯು ಇಲ್ಲದಿರುವಂಥ ಹಳಸು ನೀರಿರುವ ಮೌಢ್ಯ ಹೊಂಡ
ನಿಶೆಯನ್ನು ಉಸಿರು ನೀರೆಂದು ತಿಳಿವ ಅಜ್ಞಾನವಾಯ್ತು ಹೆಂಡ      ||೬||

ನೀತಿ ಶಾಸ್ತ್ರಗಳು ಕೋತಿ ಶಾಸ್ತ್ರಗಳು ನಮಗೆ ಹೇಳಲಿಕ್ಕೆ
ಮಾತು ಬೋಧೆ ತತ್ವಾರ್ಥವೆಲ್ಲ ನಮ್ಮ ಹೂಳಲಿಕ್ಕೆ                      ||೭||

ಪರಮ ಧರ್ಮ ಅಹಿಂಸೆ ಎಂದು ಒತ್ತಿ ಒತ್ತಿ ಸಾರಿ
ಕೊರಡು ಬಡಿದು ಪೌರುಷಪ ಕೊಂದು ಮಾಡಿದರು ಸವಾರಿ          ||೮||

ದಾಸನಾಗು ನಿನ್ನೆಲ್ಲ ಒಪ್ಪಿಸುತ ಕಾಲ ಕೆಳಗೆ ಹೊರಳು
ಭಕ್ತಿ ಮುಕ್ತಿ ಇದೆ ಎಂದು ಕತ್ತಲಲಿ ಎಳೆದರಲ್ಲ ಉರುಲು                ||೯||

ಸ್ನಾನದಂತೆ ಕುಂಯ್ಗುಡುತ ಕಾಲುಗಳ ನೆಕ್ಕಿದ್ದಿನ್ನು ಸಾಕು
ಆನೆಯಂತೆ ಮದ್ದಾನೆಯಂತೆ ತುಳಿದವರ ತುಳಿದು ನೂಕು           ||೧೦||

ಅಂಜಿ ಅಂಜಿ ಕುರಿ ಮಂದೆಯಂತೆ ಇದ್ದವರು ಸಿಂಹದಂತೆ
ಜೂಲು ಕೇಸರವ ಕೆದರಿ ಗರ್ಜಿಸುವ ಸಿಡಿಲು ಮೊಳಗಿದಂತೆ         ||೧೧||

************************************************
೧೧-೬-೮೭