ನಿನ್ನನೆಲ್ಲಿ ನಿಂದಿಸಿದೆ, ಎಲ್ಲಿ ನಿನ್ನ ಹಂಗಿಸಿದೆ?
ಇಲ್ಲದರ್ಥ ಕಲ್ಪಿಸುವೆ ಏನೊ ಮಾತಿಗೆ;
ಯಾಕೆ ಇಂಥ ಇರಿವ ನೋಟ
ನೂರು ದೂರ ಹೊರಿಸುವಾಟ
ಮೂದಲಿಸುವ ಕಹಿವ್ಯಂಗ್ಯ ಮಾತು ಮಾತಿಗೆ?

ಸೆಳಿದು ತಬ್ಬಿ ತೋಳಿನೊಳಗೆ
ಬಾ ಅಪ್ಸರೆ ಎಂದ ಗಳಿಗೆ
ನಾಚಿ ಎದೆಗೆ ಒರಗುತಿದ್ದೆ ಕೆನ್ನೆಯುಬ್ಬಿಸಿ
ಕಣ್ಣಿನೊಳಗೆ ಕಣ್ಣ ಹೂಡಿ
ಸುಳ್ಳು ಮುನಿಸು ತೋರಿ ದೂಡಿ
ಮತ್ತೆ ಅಲ್ಲೆ ನಿಲ್ಲುತಿದ್ದೆ ಏಕೊ ಕಾಯುತ

ಎಲ್ಲಿ ಈಗ ಆ ಪ್ರೀತಿ, ಕಿಲಕಿಲ ನಗೆ ಸುರಿವ ರೀತಿ
ತೋಳು ಜಗ್ಗಿ ಕಾಡುವಾಟ ಏಕೆ ಮರೆಯಿತು?
ಕಿವಿಗೆ ಬಿದ್ದ ಹುಸಿಮಾತಿಗೆ
ಬಿಸಿಯಾಗುವರೇನು ಹೀಗೆ
ಮುಖಕೆ ಮುಖವ ಕೊಟ್ಟು ನೋಡು ಗೆಲಲಿ ನಂಬಿಕೆ.

ಚೆಲುವೆ ಬೇರೆ ಇಲ್ಲ ನನಗೆ
ನೀನೊಬ್ಬಳೆ, ನಿನ್ನ ಒಳಗೆ
ಬೆಳಗುತಿರುವ ಒಲವೆ ನನ್ನ ಬಾಳ ದೀವಿಗೆ;
ಯಾರೊ ಬಿತ್ತಿದಂಥ ಸುಳ್ಳು
ಶಂಕೆ ಸರಿಸಿ ಬಾ ಒಲವೆ
ನಿನಗಾಗೇ ಚಾಚಿ ನಿಂತ ಪ್ರಿಯನ ತೋಳಿಗೆ.
*****
ಪುಸ್ತಕ: ನಿನಗಾಗೇ ಈ ಹಾಡುಗಳು

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)