ಏಕೆ ಅವನ ಕಂಡೆನೋ
ಪ್ರೇಮದ ಸವಿಯುಂಡೆನೋ!
ಇಲ್ಲವಾಯಿತದೇ ಗಳಿಗೆ ನನ್ನದೆಲ್ಲವೂ,
ನಲ್ಲನನ್ನು ಬಿಟ್ಟು ಮನಸ್ಸು ಹೃದಯ ನಿಲ್ಲವು

ನೂರು ಕಡೆಗೆ ಹಾಯುತಿದ್ದ
ಹೃದಯ ಇದೇ ಏನು?
ನೂರು ರುಚಿಯ ಬಯಸುತಿದ್ದ
ಮನಸು ಇದೇ ಏನು?
ಬಿಗಿದ ನಲ್ಲ ನನ್ನ ತನ್ನ ಸ್ಮರಣೆಯೊಂದಕೇ
ಸೆಳೆದನಲ್ಲ ನನ್ನ ಕಣ್ಣ ತನ್ನ ಚಂದಕೇ!

ಮುಗಿಲ ಹನಿಗೆ ಕಾಯುತಿರುವ
ಚಕ್ರವಾಕ ನಾನು,
ಚಂದ್ರಿಕೆಗೇ ಬೇಯುವಾ
ಚಕೋರಪಕ್ಷಿ ನಾನು,
ಯಾರು ಕಂಡರೇನು, ಏನು ಅಂದರೇನು?
ಲಜ್ಜೆ ತೊರೆದು ಹೆಜ್ಜೆಯಿಡುವ ಅವನ ದಾಸಿ ನಾನು
*****

ಪುಸ್ತಕ: ನಿನಗಾಗೇ ಈ ಹಾಡುಗಳು

 

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)