ಬ್ರಿಟೀಷ್ ಕಾಲದ ಪೋಲಿಸನ ಮಗಳು ನಮ್ಮಮ್ಮ
ಹಾಗೇ ಕಿತ್ತೂರು ಚೆನ್ನಮ್ಮನ ನಾಡಿನಲ್ಲೇ ಹುಟ್ಟಬೆಳೆದವಳು
ಪೋಲಿಸನ ಕೆಲಸ ಅವನದಾಗಿದ್ದರೆ
ಇವಳ ಕೆಲಸ ಅದೇ ಝೆಂಡಾ ಹಿಡಿದು
ಊರತುಂಬೆಲ್ಲ ಪ್ರಭಾತಪೇರಿ ಹಾಕುತ
ಗಾಂಧಿ ಹೆಸರು ಹಿಡಿದು ಕೂಗುವುದು
ಅದೆಷ್ಟು ಧೈರ್ಯ ಅದೆಷ್ಟು ಶಕ್ತಿ ಅವಳಿಗೆ
ಒಬ್ಬೊಬ್ಬರನು ಎತ್ತಿ ಚಚ್ಚಿ ಬಿಡುವಷ್ಟು-
ಸುಳ್ಳು ಮೋಸ ಏನೇನೂ ನಡೆಯುವುದಿಲ್ಲ
ಎಲ್ಲವೂ ನೇರ ಕಡಾಖಂಡಿತ
ಹೀಗೆಂದು ಒಮ್ಮೊಮ್ಮೆ
ಜಗಳಗಂಟೆಯೂ ಅನಿಸಿಕೊಂಡಿದ್ದಾಳೆ

ಅವಳಪ್ಪ ಉದಾರಿ; ನಮ್ಮಪ್ಪ ಜಿಪುಣ ಸರಳವಾದಿ
ಉಂಡುಟ್ಟು ತಿಂದು ತೇಗಿದ ಮನೆಯಿಂದ
ಬಂಗಾರಕವಚ ತೊಟ್ಟು ಬಂದವಳಿಗೆ
ಇಲ್ಲಿ ಎಲ್ಲದಕೂ ಲೆಕ್ಖಾಚಾರ, ಸೀದಾ ಸಾದಾ
ವಯಸ್ಸಿನ ಶಿಕ್ಷಣದ ಅಂತರ ಇದ್ದ ಅವ್ವ
ಆಗಾಗ ಅಧಿಕಾರಿ ಗಂಡನೊಂದಿಗೆ
ಮಾತುಬಿಟ್ಟು ಮೌನಿ
ಮಾತನಾಡಿದ್ದು ಪುಸ್ತಕಗಳೊಂದಿಗೆ
ಕಲೆತದ್ದು ನಯ ನಾಜೂಕು ಶಿಸ್ತು

ನಿಂತನಿಂತಲ್ಲೇ ಬಟ್ಟೆಗಳ ಸುಕ್ಕು
ಒದ್ದೆ ಕೈಯಲೇ ಬಿಡಿಸುತ
ಇಸ್ತ್ರಿ ಹೊಡೆದಂತೆ ತೀಡಿ ತಿದ್ದಿ
ಯುನಿಫಾರ್ಮ್ ತೊಡಿಸಿ
ಬಿಗಿಯಾಗಿ ಜಡೆಹೆಣೆದು ಶಾಲೆಗೆ ಕಳಿಸುತ-
ಪಾಠ ಪುಸ್ತಕಗಳೊಂದಿಗೆ ಒಂದಾಗಿ ಓದಿ ಚರ್ಚಿಸುತ

ಈಗ ಸಾಹಿತಿಗಳ ರಾಜಕಾರಣಿಗಳ
ಸಮಾನಾಂತರ ಚರ್ಚಿಸುವಳು, ವಾದಿಸುವಳು.
ಅವರಪ್ಪ ನಮ್ಮಪ್ಪ ಇಬ್ಬರೂ
ಆಗಲೇ ದೇವರಪಾದ ಸೇರಿದ್ದಾರೆ
ಬ್ರಿಟೀಷರ ಸೇವೆಮಾಡಿ ಅವರಿಂದ
‘ಬಹದ್ದೂರ’ ಅನಿಸಿಕೊಂಡು ಆತ ಹೋದ
ಸರಕಾರದ ಸೇವೆಮಾಡಿ ಇವರಿಂದ
‘ದಕ್ಷ‌ಅಧಿಕಾರಿ’ ಎಂದೆನಿಸಿಕೊಂಡು ಈತ ಹೋದ
ನನಗೂ ಇನ್ನೊಂದಿಷ್ಟು ಓದಿಸಿದ್ದರೆ
ಸಹಕರಿಸಿದ್ದರೆ ಇವರಿಬ್ಬರನು ಮೀರಿಸುತ್ತಿದ್ದೆ
ಎನುತ ಒಮ್ಮೊಮ್ಮೆ ಅವರನು ಬಯ್ಯುತ

ನಮಗೆಲ್ಲ ಸಮಯಪ್ರಜ್ಞೆ ಸಮಾನತೆ
ಬಗೆಗೆ ಎಚ್ಚರಿಸಿ
ಬೆನ್ನುತಟ್ಟಿ ಆಶೀರ್ವದಿಸುವಳು
ಆಗಾಗ ಮಕ್ಕಳೆಲ್ಲರ ಸಾಧನೆಗೆ
ಕಣ್ಣೀರು ತುಂಬಿಕೊಂಡು
ಭಾವಪರವಶಳಾಗುತ್ತಾಳೆ.

ಆದರೂ ಅವಳೊಳಗೆ ಬೇರುಬಿಟ್ಟ
ಗಾಂಧಿತತ್ವ
ಪೋಲಿಸನ ದರ್ಪ
ಅಧಿಕಾರಿಯ ಮಾತುಗಳು
ಮತ್ತೆ ಮತ್ತೆ ಚಿಗಿಯುತ್ತವೆ
ಸಮಯ ಪ್ರಜ್ಞೆಗೆ ತಾನೂ
ಅವನ್ನೆಲ್ಲಾ ಬಳಸಿಕೊಳ್ಳುತ
ಒಮ್ಮೊಮ್ಮೆ ಗುಡುಗು ಸಿಡಿಲು ಮಳೆಯಾಗಿ ಬಿಡುತ್ತಾಳೆ.

ವಾತ್ಸಲ್ಯ
ಉಡಿತುಂಬ ತುಂಬಿಕಳಿಸಿದ
ನನ್ನವ್ವಳ ಆಶೀರ್ವಾದ
ಹಾಸಿದ್ದೇನೆ ಹೊದ್ದಿದ್ದೇನೆ
ಬಿತ್ತಿ ಬೆಳೆದುಕೊಂಡು
ತೊನೆದಾಡುತ್ತಿದ್ದೇನೆ.
*****

ಪುಸ್ತಕ: ಇರುವಿಕೆ

ಲತಾ ಗುತ್ತಿ
Latest posts by ಲತಾ ಗುತ್ತಿ (see all)