ಬಂದನೂ ಬಂದನೂ ಚಂದ ಮಾಮಣ್ಣ
ತಂದನೂ ಜಗಕೆಲ್ಲ ಹಾಲಿನಾ ಬಣ್ಣ
ಕುಳಿತಳು ನಮ್ಮಜ್ಜಿ ಅಂಗಳಕೆ ಬಂದು
ಹಾಕಿದೆನು ನಾನಿಂತು ಕುಣಿವ ಕೂಗೊಂದು

ಪಾರ್ವತೀ ಜಯಲಕ್ಷ್ಮೀ ಕೋಮಲೇ ಸೀತೆ
ಸಾವಿತ್ರಿ ಕಾವೇರಿ ರುಕ್ಮಿಣೀ ಲಲಿತೆ
ನಿರ್ಮಲಾ ಕುಂತಳಾ ಕುಮುದಿನೀ ರಾಧೆ
ಭಾರತೀ ಕೌಸಲ್ಯ ವನಜಾಕ್ಷಿ ಶಾರದೆ

ಬನ್ನಿರೇ ಆಡುವಾ ಕಣ್ಣುಮುಚ್ಚಾಲೆ
ಸರಿಸಿರೇ ಕಾಲ್ಗಡಗ ರುಳಿಗಳನು ಮೇಲೆ
ಓಡಿರೇ ಕೈಬಳೆಯ ಸಪ್ಪುಳವ ನಿಲಿಸಿ
ಹಾಡಿರೇ ಗೀತೆಗಳ ಒಂದಾಟ ಮುಗಿಸಿ

ತಟ್ಟಿರೇ ಗುಬ್ಬಿಗಳ ಶ್ರೀ ತುಳಸಿ ಸುತ್ತು
ಮುಡಿಯಿರೇ ಅರಳುತಿಹ ಮೊಗ್ಗುಗಳ ಕಿತ್ತು
ಅಜ್ಜಿ ಮುಚ್ಚುವಳಂತೆ ಕಣ್ಣುಗಳ ನಮಗೆ
ತುತ್ತು ಹಾಕುವಳಂತೆ ಬೆಳ್ದಿಂಗಳೊಳಗೆ

ಆಡಿದೆವು ಆಟಗಳ ನಾವೆಲ್ಲ ಕಲೆತು
ಮಾಡಿದೆವು ಊಟಗಳ ಒಟ್ಟಾಗಿ ಕುಳಿತು
ತೀಡಿದನು ತಣ್ಗದಿರ ನಮ್ಮೆಲರೊಳಗೆ
ಹಾಡಿದೆವು ನಾವಿಂತು ಪೂರ್ಣಚಂದ್ರನಿಗೆ

ಬಾರಣ್ಣ ಚಂದದಾ ಚೆಲುವಿನಾ ಕಣಿಯೆ
ಬಾರಣ್ಣ ತಾರೆಗಳ ಧರಿಸಿರುವ ದಣಿಯೆ
ಬಾರಣ್ಣ ರಸಿಕರಾ ಬಾಳಿನಾ ತಿರುಳೆ
ಬಾರಣ್ಣ ಅನುರಾಗದುತ್ಸಹದ ಪ್ರಭೆಯೆ

ಬಾರಣ್ಣ ಪುಷ್ಪಗಳನರಳಿಸುವ ದೊರೆಯೆ
ಬಾರಣ್ಣ ಜಗವೆಲ್ಲ ಬೆಳಗಿಸುವ ಪ್ರಭುವೆ
ಬಾರಣ್ಣ ಬೇಸರವ ನೀಗಿಸುವ ಉಸಿರೆ
ಬಾ ಬಾರ ಜನಕಜೆಯ ಜೀವನವ ನಲಿಸು
*****