ಮಣ್ಣಿನ ಮಗ ನೀನೆಂಬೋದೇ ರಿಯಲ್ಲು ಗೋಡ್ರುದು ಬರಿ ರೀಲು

ಶರಣು ಶರಣಯ್ಯ ಶರಣು ಗಣಪ,

ವರ್ಸಕ್ಕೊಮ್ಮೆ ತಾಯಿ ಸಮೇತ ಭೂಲೋಕಕ್ಕೆ ಇಳ್ಕಂಬಿಟ್ತಿ. ನಿನಗೂ ಕೈಲಾಸ್ದಾಗಿದ್ದು ಬ್ಯಾಸರ. ಫಾರ್ ಎ ಚೇಂಜ್ ಟೂರ್ ಹಾಕ್ಕಂಡು ಬತಿಬಿಡು. ಮಕ್ಕಳಿಗಂತೂ ನಿನ್ನ ಕಂಡ ಅಗ್ದಿ ಪಿರೂತಿ ಯಾಕಂತಿಯಾ? ನೀನು ಇರೋದೇ ಹಂಗೆ. ಆಟದ ಸಾಮಾನ್ನಂಗೆ. ಆನೆ ಫೇಸ್ ಕಟ್ಟು ಮನುಸ್ಯಾನ ಮೈಕಟ್ಟು! ರಾಜಕಾರಣಿಗಳಿಗಿರೋ ಹಾಂಗೆ ಡೊಳ್ಳು ಹೊಟ್ಟೆ, ಮಜಬೊತಾದ ನಿನ್ನ ಹೊರೋಕೆ ನೀನ್ ಸೆಲೆಕ್ಟ್ ಮಾಡ್ಕೊಂಡಿರೋ ವೆಹಿಕಲ್ಲೋ ಪುಟ್ಟ ಯಾಟು! ಅದೇನೋ ತಂದೆ ನೀನಂದ್ರೆ ಕಲಾವಿದರಿಗೂ ಸಖತ್ ಸ್ಪೂತಿ. ನಿನ್ನ ರೂಪಾನಾ ಮನಬಂದಂಗೆ ವಿಕಾರಗೊಳಿಸಿದ್ದೇ ಹೆಚ್ಚು. ನಿನ್ನಂಗೆ ನಾನಾ ನಮೂನಿ ರೂಪ ಪಡೆದ ದ್ಯಾವ್ರು ವರಲ್ಡ್ ನಾಗೆ ಇಲ್ ಬಿಡು. ಎಲೆಗಳ್ನಾಗೆ
ಜೋಡಿಸಿದ್ರೂ ಆಗೋತು ನಿನ್ನ ಆಕಾರ. ತರಕಾರಿ ಗಣಪ ಅಕ್ಷರ ಗಣಪ ಟೈಪಿಂಗ್ ಗಣಪ ಶಹನಾಯಿ ಗಣಪ ನಾಟ್ಯ ಗಣಪ ಪಂಚಮುಖಿ ಗಣಪ ನವರತ್ನ ಗಣಪ. ಪ್ರಸ್ತುತ ಪರಿಸ್ಥಿತಿಗೂ ಹೋಲೋ ಹಂಗೆ ವೀರಪ್ಪನ್ ಗಣಪ ಡಾ. ರಾಜ್ ಗಣಪ ಪುಢಾರಿ ಗಣಪ ನಕ್ಸಲ್ ಗಣಪ ಕಲಾಂ ಗಣಪ ೪೭ ಗಣಪ! ಅದೆಷ್ಟು ಫ್ಲೆಕ್ಸಿಬಲಯ್ಯ ನೀನು!!

ನನ್ನ ದೃಷ್ಟಿನಾಗೆ ನಿಜವಾದ ಮಣ್ಣಿನ ಮಗ ಅಂದ್ರೆ ದ್ಯಾವೇಗೋಡ್ರು ಅಲ್ಲವೇ ಅಲ್ಲ. ನೀನೆಯಾ. ನಿನ್ನ ಹುಟ್ಟೇ ಅತಿ ರಂಜಕ. ತಾಯಿ ಪಾರ್ವತಮ್ಮ ಜಳಕಕ್ಕೆ ಹೊಂಡ ಬೇಕು. ಈಸ್ವರ ಇನ್ನೂ ಉಣ್ಣಾಕೆ ಬಂದಿಲ್ಲ ಮನೆನಾಗೆ ಬ್ಯಾರೆ ಜನರಿಲ್ಲ. ಬಾಗಿಲು ಮುಚ್ಚಿ ಚಿಲಕ ಹಾಕ್ಯಂಡು ಬಾತ್‍ರೂಮು ಸೇರಕಂಡ್ರೆ ಈಸ್ವರ ಬಂದು ಬಾಗ್ಲದಾಗ ವೇಟ್ ಮಾಡ್ತಾನೆ. ಮೊದ್ಲೆ ಸ್ಮಸಾನದ ಡ್ಯೂಟಿ ಮಾಡಿ ಭೂತ ಪ್ರೇತ ಪಿಶಾಚಿಗಳ ಜೊತೆ ಭಂಗಿ ಹೊಡ್ದು ಬಂದು ಸಿಟ್ಟನಾಗೆ ಬಾಗ್ಲೇ ಮುರಿದಾನು. ಇಲ್ವೆ ಮೂನೆ ಕಣ್ಣು ತೆರೆದರೆ ಅಂಬೋ ಬಯಕ್ಕೆ ಬಿದ್ಳು.  ಹೆಂಗೂ ಅಪರೂಪಕ್ಕೆ ಭಾಳ ತಿಂಗ್ಳುಗಳು ಆದ ಮ್ಯಾಗೆ ಜಳಕಕ್ಕೆ ಹೊಂಟಿದ್ಲು. ಆಲೋಚನೆ ಮಾಡಿದೋಳೆ ಒಂದು ಚರಿಗೆ ನೀರು ಮೈಮ್ಯಾಗೆ ಸುರಕೊಂಡು ಮೈತಿಕ್ತಾ ಕುಂತ್ಕಂಡ್ಳು. ರಗ್ಗಡ ಮಣ್ಣು ಬಂತು. ಆದ್ರಾಗೇ ನಿನ್ನ ತಯಾರ್ ಮಾಡಿದ್ಲಂತೆ. ಅದಕ್ಕೆ ನಾ ಹೇಳಿದ್ದು ನೀನೇ ಸೆಂಟ್ ಪರ್ಸೆಂಟ್ ರಿಯಲ್ ಮಣ್ಣಿನ ಮಗ ಅಂತ.

ಅದೆಂಗಾನಾ ಇಲಿ ವರ್ಷಕ್ಕೊಂದು ದಪ ಲೋಕಕ್ಕೆ ಬರೋ ನೀನು ಅನುಭವಿಸೋ ಪಾಡೋ ಆ ಸಿವನಿಗೇ ಪ್ರೀತಿ ನಿನ್ನ ಹೆಸರು ಹೇಳ್ಕಂಡು ಆರು ವರ್ಷದ ಹಸುಳೆಯಿಂದ ಅರವತ್ತು ವಸದ ಮುದುಕರವರೆಗೊ ಫಂಡ್ ಕಲೆಕ್ಟ್ ಮಾಡ್ತಾವೆ. ಮುಕ್ಕಾಲು ಪಾಲು ಗೋಲ್ ಮಾಲೂ ಆಯ್ತದೆ. ಗಲ್ಲಿಗಲ್ಲಿನಾಗೂ ನಿನ್ನ ಮಡಗಿ ಮೈಕ್ ಹಾಕ್ಕಂಡು ಒದರಿಸ್ತಾ ಮಂದಿ ಪ್ರಾಣ ತಿಂತಾರಯ್ಯ. ನಮ್ಮದೇನೋ ಸಣ್ಣ ಕಿವಿ. ಮೊರದಗಲ ಕಿವಿ ಇರೋ ನೀನ್ ಹೆಂಗಯ್ಯ ಗದ್ದಲ ತಡ್ಕಾತಿಯಾ? ಬರಿ ಫಿಲಿಂ ಗೀತೆಗಳೇ ಒದರಿಸ್ತಾರೆ. ಸಾಲದ್ದಕ್ಕೆ ಆರ್ಕೆಸ್ಟ್ರಾದೋನ ಬ್ಯಾರೆ ಕಸಿ ಕುಣಿಸ್ತಾರೆ. ಅವೋ ನಿನ್ನ ಮುಂದಾಗಡೆ ಹಾಡಬಾರದ್ದನ್ನೆಲ್ಲಾ ಹಾಡ್ತಾವೆ. ‘ಪ್ರೀತ್ಸೆ ಪ್ರೀತ್ಸೆ’ ಅಂತ ಒಬ್ಬ ಕೂಕ್ಕಂಡ್ರೆ, ಇನ್ನೊಬ್ಬ ‘ಹೊಡಿಮಗ ಹೊಡಿ ಮಗ ಬಿಡಬೇಡ ಅವನ್ನಾ’ ಅಂತ ಬಾಯಿ ಬಡ್ಕೊಕಂತಾನೆ. ‘ಭಾ ಬಾರೋ ರಸಿಕ ನೋಡೆನ್ನ ಮೈ ಥಳಕ’ ಅಂತ ಒಬ್ಳು ಚೀರಿದ್ರೆ, ‘ಸುತ್ತಮುತ್ತಲು ಸಂಚೆಗತ್ತಲು ಮೆತ್ತ ಮೆತ್ತಗೆ ಮೈಯ ಮುಟ್ಟಲು’ ಅಂತ ಇನ್ನೊಬ್ಳು ಜೀವ ತಿಂತಾಳೆ. ಹಿಂದೆಲ್ಲಾ ದೇವರ ನಾಮ ಭಜ್ನೆ  ಹಾಡೋರು. ರುಸ್ತುಂ ಹರಿಕಥೆ ಇಡ್ಸೋರು. ಸಂಗೀತ ಕಛೇರಿ ಮಡ್ಗೋರು. ಅಂಥ ಸುಸಂಸ್ಕೃತ ಸಜ್ಜನರು ಈಗೆಲ್ಲಿ ಅದಾರಪ್ಪಾ? ನೀನೀಗ ಹುಚ್ಚು ಪ್ಯಾಲಿಗಳ ಕೈಗೆ ಸಿಕ್ಕು ಹಾಕ್ಕುಂಬಿಟ್ಟಿದಿಯಾ. ರಾತ್ರಿ ನಿನ್ನ ಮುಂದಾಗಡೆನೇ ಕುಂತು ಇಸ್ಪೀಟು ಹಾಡ್ತವೆ ಡ್ರಿಂಕ್ಸು ಮಾಡ್ತವೆ ಬೀಡಿ ಎಳಿತವೆ. ನಿನ್ನ ಸೊಂಡ್ಲಾಗೂ ಬೀಡಿ ಇಕ್ಕಿ ‘ಒಂದು ಧಂ ಎಳಿಯಪ್ಪಾ ಗಣೇಸ’ ಅಂತ ಕುಡಕನೊಬ್ಬ ಕಾಡೋದನ್ನ ನೋಡಿ ಉಳಿದೋರೂ ‘ಧಂ ಅರೆ ಧಂ’ ಅಂತ ಹಾಡ್ತಾ ಕೇಕೆ ಹಾಕಿ ಕುಣಿತಾವೆ. ಎಂಥ ಕಾಲ ಬಂತೋ ನಮ್ಮಪ್ನೆ!

ಲೋಕಮಾನ್ಯ ತಿಲಕರು ರಾಷ್ಟ್ರೀಯ ಭಾವ್ನೆ ಮೂಡಿಸಾಕೆ ಸಂಘಟನೆ ಮಾಡೋಕೆ ಅಂತ ಮನೆಯಾಗಿದ್ದ ನಿನ್ನ ಬಯಲಿಗೆ ತಂದು ಜನಗಳ ಕೈಗೆ ಕೊಟ್ಟರು. ಅದೀಗ ಚಂದಾ ಎತ್ತೋಗೆ ದಾರಿ ಆತು. ಹಿಂಡುಗಟ್ಲೆ ರಸೀದಿ ಬುಕ್ ಹಿಡಿದು ಬರೋ ರೌಡಿಗಳ ದಂಡು ನೋಡೇ ಮನೆಯೋರು ಹೆದರ್ಕೊಂಡು ದುಡ್ಡು ಮಡಗ್ತಾರೆ. ಕೆಲವರು ಮೂರು ದಿನ, ಆರು ದಿನ ನಿನ್ನ ಮಡಗಿ ಜನಗಳ ಜೀವ ತಿಂದ್ರೆ, ಹಲವರು ತಿಂಗಳುಗಟ್ಲೆ ಕೂಸಿ ಫಿಲಂಸ್ಟಾರ‍್ಗಳ್ನ ಕರ್ಸಿ ಹಾರ- ತುರಾಯಿ ಹಾಕಿ ಕುಣ್ಸಿ ನಿನ್ನೇ ಮತೇ ಬಿಡ್ತಾರೆ. ಆಳೆತ್ತರದಿಂದ ಗೇಣು ಉದ್ದದ ನಿನ್ನನ್ನು ಯಾವುದಾರ ಕೆರೆ ಬಾವಿನಾಗೆ ಬಿಡೋ ಪತ್ತಿ. ಹಿಂದೆಲ್ಲಾ ನೀರಿಗೆ ಬರವಿರಲಿಲ್ಲ. ಈಗ ಮಳಿ ಇಲ್ಲ ಕುಡಿಯೋ ನೀರಿಗೇ ತತ್ವಾರ. ಇರೋ ಬೊಗಸೆ ನೀರು ಕೆಟ್ಟು ಹೋಗಬಾರದಂತ ಬಕೀಟ್ನಾಗೆ ಮುಳುಗಿಸಿ ಬಿಡಿ. ನೀರಿನ ಟ್ಯಾಂಕರ್ನಾಗೆ ಹಾಕಿ ಅಂತ ಆಲ್ಡರ್ ಮಾಡವರೆ. ಎಂತ ಗತಿ ಬಂತಪ್ಪಾ ಸ್ವಾಮಿ ನಿನ್ಗೆ. ನಿನ್ನ ಈಗೀಗ ಉಗ್ರಗಾಮಿಗಳು ತಮ್ಮ ಆಕ್ಟಿವಿಟೀಸ್ಗೆ ಯೂಸ್ ಮಾಡಿಕೊಳ್ಳಿಕತ್ತಾರೆ. ನಿನ್ನ ಹೊಟ್ಟೆನಾಗೆ ಬಾಂಬ್ ಮಡಗಿದ್ರೆ ಯಾರಿಗೆ ತಿಳಿದೀತು. ಹಂಗೆ ಸ್ಮಗ್ಲಸ್ ನಿನ್ನ ಹೊಟ್ಟೆನಾಗೆ ವಜ್ರರತ್ನಗಳ ಪೆಟ್ಟಿಗೆ ಇಕ್ಕಿ ನೀನಾಗೆ ಬಿಟ್ಟ ಮೇಲೆ ಬೇರೊಂದು ಗ್ಯಾಂಗಿನೋಗೆ ಸಿಗ್ನಲ್ ಕೊಡ್ತಾರೆ. ಆ ಪಾರ್ಟಿ ನೀನಾಗೆ ಮುಳುಗಿ ಕಳ್ಳ ಮಾಲು ಲಪಟಾಯಿಸ್ತಾರೆ. ನಿನ್ನ ಹಬ್ಬ ಅಂದ್ರೆ ರೌಡೀಸ್ಗು ಟೆರರಿಸ್ಟ್ ಗಳಿಗೂ ಸುಗ್ಗಿ.

ನಿನ್ನ ತಿಂಡಿ ಪೋತನ್ನ ಮಾಡಿ ವೆರೈಟೀಸ್ ಆಫ್ ತಿಂಡಿ ಮಡಗಿ ನಿನಗೆ ನೇವೇದ್ಯ ಮಾಡಿ ತಾವೆ ಜಡಿತಾರೆ. ಬ್ರಾಂಬ್ರು ಜನಿವಾರ ತೊಡ್ಸಿ ನಿನ್ನ ನಮ್ಮೋನು ಅಂತಾರೆ. ಲಿಂಗಾಯತರು ಶಿವದಾರ ಹಾಕಿ ನಮ್ಮೋನು ಅಂತ ಶಂಖ ಹೊಡಿತಾರೆ. ಉಳಿದ ಶೂದ್ರಾತಿ ಶೂದ್ರರು ಉಡಿದಾರ ಕಟ್ಟಿ ನಮ್ಮೋನು ಅಂತ ಬೊಂಬ್ಡಿ ಹೊಡಿತಾರೆ. ಒಟ್ನಾಗೆ ‘ಜಾತ್ಯಾತೀತ ಗಾಡು’ ಕಣಪ್ಪಾ ನೀನು. ವ್ಯಾಪಾರಸ್ಥರಿಂದ ಹಿಡಿದು ಓದೋ ಹೈಕಳವಗೂ ನಿನ್ನ ಪಟ ಮಡಿಕ್ಕಂಡು ಊದು ಬತ್ತಿ ಹಚ್ತಾರೆ. ಭಲೆ ಪಾಪುಲರಯ್ಯ ನೀನು. ಫಾರಿನ್ ಕಂಟ್ರೀಸ್ನಾಗೂ ನಿನ್ನ ಗೊಂಬಿ ಬಲು ಫೇಮಸ್ಸು ಕಾಂಬೋಡಿಯಾ ಬೋಸ್ನಿಯಾ ಟಿಬೆಟ್ ತುರಕಿಸ್ತಾನ ಜಪಾನು ಚೀನಾ ಸುಮಾತ್ರ ಶ್ರೀಲಂಕಾ ಇಲ್ಲೆಲ್ಲ ಬೌದ್ಧರೂಪಿ ನೀನು.

ಈಗೀಗ ಪರದೇಸದೋರು ಭಾಳೋಟು ಮಂದಿ ನಿನ್ನ ಡಿಸೈನ್ ಮೆಚ್ಚಿಕೊಂಡವರೆ. ಪೆಟ್ಟಿಕೋಟ್ ಮ್ಯಾಗೆಲ್ಲಾ ನಿನ್ನ ಚಿತ್ರ ಬಿಡಿಸಲಿಕತ್ತಾರೆ. ಸ್ಲಿಪರ್ಸ್ ಮ್ಯಾಗು ಪ್ರಿಂಟ್ ಹಾಕಿ ಸೇಲ್ ಮಾಡ್ತಾ ಅವೆ. ವಿದೇಶದಾಗೂ ಸಕತ್ ಸೇಲಬಲ್ ವ್ಯಾಲ್ಯೂ ಇರೋ ಓನ್ಲಿ ಒನ್ ಗಾಡಪ್ಪ ನೀನು! ಹಿಂದೂ ಗಾಡ್ಸ್ ಗೆ ಅಪಚಾರ ಮಾಡ್ತಿದಾರೆ ಅಂತ ರಾಂಗ್ ಆದ ಇಲ್ಲಿನ ಭಜರಂಗಿಗಳು ವಿಶ್ವ ಹಿಂದು ಪರಿಷತ್ನೋರು ಆರೆಸೆಸ್ ಮಂದಿ ಎಗರಾಡಿದ್ದೇ ಆಡಿದ್ದು. ಆದರೆ ಇಲ್ಲಿ ಜನವೇ ನಿನ್ನ ಹೆಸನಾಗೆ ಫಂಡ್ ಎತ್ತುತ್ತಾ ದೆವ್ವ ದಾಂದ್ಲೆ ಮಾಡ್ತಾ ನಿನ್ನ ಹಬ್ಬಂವಾ ಸಿನಿಮಾ ಸಾಂಗ್ ಹಾಕ್ಕಂಡು ಗಬ್ಬೆಬ್ಬಿಸ್ತಾ ಇರೋರ ಬಗ್ಗೆ ತುಟಿ ಬಿಚ್ಚಂಗಿಲ್ವೆ? ಮಾನಸಿಕವಾಗಿ ದೈಹಿಕವಾಗಿ ನಿನಗೆ ಹಿಂಸೆ ಕೊಡ್ತಿರೋ ಪಟಾಲಮ್ಮುಗಳ ಬಗ್ಗೆ ಚಕಾರ ಎತ್ತಂಗಿಲ್ವೆ! ನಮ್ಮೋರು ಯಾವ ದೇವನ ಬಿಟ್ಟಾರೇಳು. ಎಲ್ಲಾ ದೇವರನ್ನು ಎಕ್ಸ್‍ಪ್ಲಾಯಿಟ್ ಮಾಡವರೆ. ಶ್ರೀರಾಮನ ಹೆಸರು ಹೇಳಿದ್ರೆ ಸಾಕು. ಬೇರೆ ಧರ್ಮದೋರು ಬೆಚ್ಚಿ ಬೀಳ್ತಾರೆ. ನಿನ್ನ ಹಬ್ಬದಾಗೆ ಮೆರವಣಿಗೆ ನೆಪವಾಗೆ ಕಲ್ಲು ತೂರಿ ಚಪ್ಲಿ ಎಸೆದು ಎಲ್ಡು ಕೋಮಿನ ಮಧ್ಯೆ ದೊಂಬಿ ಎಬ್ಬಿಸಿಬಿಡೋದು ಉಂಟು. ೧೪೪ ಸೆಕ್ಷನ್ ಜಾರಿ ಮಾಡ್ಕೊಂಡು ಪೋಲೀಸ್ ಬಂದೋಬಸ್ತ್‍ನಾಗೆ ಮಾಡೋದೂ ಒಂದು ಹಬ್ಬವಾ? ಹೇಳಪ್ಪಾ? ನಿನ್ನ ಭಕ್ತರಿಗೆ ಬುದ್ಧಿ ಹೇಳೋರು ಯಾರಪ್ಪಾ?
*****
( ದಿ. ೧೪-೦೯-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆತ್ತತಾಯಿ
Next post ಅವ್ವ

ಸಣ್ಣ ಕತೆ

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…