ಶಬರಿ – ೧೫

ಶಬರಿ – ೧೫

ಹೋರಾಟದೊಳಗೊಂದು ಒಂಟಿತನ;
ಕ್ರಿಯೆಯೆ ತಾಯ್ತನ;
ತಾಯ್ತನಕ್ಕೆ ಕರುಳುಂಟು;
ಕರುಳು ಕೊರಳಾದಾಗ ಅರ್ಥವುಂಟು;
ಅಂತಃಕರಣ ಆಕ್ರೋಶವಾದಾಗ ಆಳವುಂಟು.
ಕೊರಳು ಕರುಳನ್ನು ನುಂಗಿದರೆ?
ಸಂಕಟವಿಲ್ಲದ ಸಿಟ್ಟು ಅಟ್ಟ ಏರಿದರೆ?

-ಶಾಲೆಯೊಳಗೆ ಕೂತ ಸೂರ್ಯನ ಒಳಗೊಂದು ಕಡೆಗೋಲು. ಬೆಳಗ್ಗೆ ಎದ್ದವನೆ ಬಂದು ಕೂತಿದ್ದ.

ಮುಖ್ಯಘಟ್ಟಕ್ಕೆ ಬಂದು ತಲುಪುತ್ತಿರುವ ಬಳವಣಿಗೆಗಳನ್ನು ಒಂದೊಂದಾಗಿ ತುಂಬಿಕೊಳ್ಳುತ್ತ, ತರ್ಕಿಸುತ್ತ ತತ್ವವಾಗುತ್ತ, ನಿರೀಕ್ಷೆಯ ನೋಟದಲ್ಲಿ ಶಾಲೆಯನ್ನೊಮ್ಮೆ ಅವಲೋಕಿಸಿದ.

ಅನೇಕರು ಸ್ಲೇಟು, ಪುಸ್ತಕಗಳನ್ನು ಇಲ್ಲೇ ಇಟ್ಟಿದ್ದಾರೆ. ಮನೆಗೆ ಕೊಂಡೊಯ್ದು ಓದುವ ಬಿಡುವು ಇಲ್ಲವೆಂಬ ಖಾತರಿ ಅವರಿಗೆ. ಕೆಲವರು ಮಾತ್ರ ಮನೆಗೆ ಕೊಂಡೂಯ್ದಿದ್ದಾರೆ. ಅವರಲ್ಲಿ ಶಬರಿ, ಗೌರಿ, ಹುಚ್ಚೀರ ಸೇರಿದ್ದಾರೆ. ಸೂರ್ಯ ನೋಡುತ್ತಲೇ ಇದ್ದ; ಇಲ್ಲಿ ಖಾಲಿಯಾಗಿರುವ ಶಾಲೆ; ಹಟ್ಟಿ ಜನರ ಮನಸ್ಸಿಗೆ ಸ್ಥಳಾಂತರಗೊಂಡ ಶಾಲೆ, ಇದೇ ಒಂದು ಇತಿಹಾಸ. ಅಕ್ಷರ ಇತಿಹಾಸಕ್ಕೆ ಅಲಿಖಿತ ಇತಿಹಾಸ ಸೇರಿದಾಗ ಅದಕ್ಕೆ ಪೂರ್ಣ ವಿನ್ಯಾಸ. ವಿನ್ಯಾಸದ ಒಳಹಾದಿಯಲ್ಲಿ ಚಲನಶೀಲ ಹಜ್ಜೆಗಳು.

ಸೂರ್ಯ, ಚಿಂತನೆಯ ಮೂಸಯೆಲ್ಲಿ ಒಳದನಿಗಳಿಗೊಂದು ವಿನ್ಯಾಸ.
ಒಬ್ಬನೇ ಕೂತಷ್ಟೂ ಯೋಚನೆ-ಯಾತನೆ; ಎದ್ದು ಹೂರಟ.
ಸೂರ್ಯನಿಗೆದುರಾಗಿ ಹುಡುಗರು ಓಡಿಬಂದರು.

“ಆಲ್ ಗಲಾಟೆ ಆಗ್ತಾ ಐತೆ. ಸ್ಯಬರಕ್ಕ ನಿನ್ ಕರ್‍ಕಂಡ್‌ ಬಾ ಅಂಬ್ತ ಕಳ್ಸಿದ್ಲು?” ಎಂದು ಗಾಬರಿಯಿಂದ ಹೇಳಿದರು.

“ಎಲ್ಲಿ? ಎಲ್ಲಿ ಗಲಾಟೆ?” – ಸೂರ್ಯನೂ ಗಾಬರಿಗೊಂಡು ಕೇಳಿದ.
“ಅದೇ ತೋಪಿನ್ತಾವ”- ಹುಡುಗರು ಉತ್ತರಿಸಿದರು.
ನಿಜ; ತೋಪಿನಲ್ಲಿ ಗಲಾಟೆ ನಡೆದಿತ್ತು.

ಶಬರಿ ತೋಪಿನತ್ತ ಹೋಗುತ್ತಿದ್ದಳು. ಅಲ್ಲಿ ಮೂರ್ನಾಲ್ಕು ತರಾವರಿ ವಾಹನಗಳು ಬಂದು ನಿಂತಿದ್ದವು. ಪೋಲಿಸರ ಚಿಕ್ಕ ವ್ಯಾನೊಂದು ಇತ್ತು. ನಾಲ್ಕೈದು ಜನ ಬಿಳಿಯರು, ಧರ್ಮಯ್ಯ, ನರಸಿಂಹರಾಯಪ್ಪ, ಜೋಯಿಸರು ಇದ್ದರು. ಪೋಲಿಸರು ವ್ಯಾನಿನಿಂದ ಇಳಿದು ಬಂದೂಕು ಸಮೇತ ನಿಲ್ಲತೊಡಗಿದ್ದರು. ಕೆಲವರ ಕೈಯ್ಯಲ್ಲಿ ಲಾಠಿಗಳಿದ್ದವು-

ಶಬರಿಗೆ ಕತೂಹಲವಾಯಿತು. ಇವತ್ತು ತೋಪಿಗೆ ಏನೂ ಆಗುತ್ತದೆಯೆಂಬ ಆತಂಕದಿಂದ ಹತಿರ ಹೋದಳು.

ಆಧುನಿಕ ಗರಗಸದಲ್ಲಿ ತೋಪಿನ ಮರಗಳನ್ನು ಕಡಿದುಹಾಕುವ ಸಿದ್ಧತೆ ನಡದಿತ್ತು. ಶಬರಿ ಹತ್ತಿರ ಬರುವುದಕ್ಕೂ ಗರಗಸ ಮರದ ಬುಡಕ್ಕೆ ಹೋಗುವುದಕ್ಕೂ ಸರಿಯಾಗಿತ್ತು.

ಅದೇನು ಆವೇಶ ಬಂದಿತೊ, ಶಬರಿ- “ಕೊಯ್‌ಬ್ಯಾಡ್ರಿ, ಮರ ಕೊಯ್‌ ಬ್ಯಾಡ್ರಿ” ಎಂದು ಓಡಿ ಬಂದು ಮರವನ್ನು ಅಪ್ಪಿಕೊಂಡಳು. “ಮರ ಕೂಯ್ಯಾಕ್‌ ನಾನ್‌ ಬಿಡಾಕಿಲ್ಲ; ನನ್‌ ಜೀವ ತಗೆದ್ರೂ ಬಿಡಾಕಿಲ್ಲ” ಎಂದು ಕಿರುಚಿದ್ದಲ್ಲದೆ “ಸಣ್ಣೀರ. ಹುಚ್ಚೀರ, ಮರಿಯಮ್ಮ, ಲಕ್ಷ್ಮಕ್ಕ, ಕಾಳವ್ವ, ಬರ್ರವ್ವೋ ಬರ್ರಿ” ಎಂದು ಅವೇಶಭರಿತಳಾಗಿ ಒಂದೇ ಸಮ ಕೂಗಿಕೊಂಡಳು. ಅಲ್ಲಿದ್ದವರಿಗೆ ಅನಿರೀಕ್ಷಿತ ಆಫಾತ. ಬಿಳಿಯರಿಗೆ ಬೇಸರ.

“ಏನಿದು? ವಾಟ್ ಈಸ್ ಹ್ಯಾಪೆನಿಂಗ್? ಎಂದು ಕೇಳಿದರು.
“ಅವ್ಳ್‍ನ್ ಎಳೆದಾಕ್ರಿ” ಎಂದು ಅಬ್ಬರಿಸಿದ ಧರ್ಮಯ್ಯ, ಬಿಳಿಯರಿಗೆ- “ಏನೂ ಆಗೊಲ್ಲ. ನಥಿಂಗ್ ವಿಲ್ ಹ್ಯಾಪೆನ್” ಎಂದು ಆಶ್ವಾಸನೆ ಕೂಟ್ಟ.

ಪೋಲಿಸರು ಶಬರಿಯ ಹತ್ತಿರ ಬಂದರು. “ಈಕಡೆ ಬರ್‍ತಿಯೋ ಇಲ್ವೊ?” ಎಂದು ಗದರಿಸಿದರು.

“ಆಗ್ಲೇ ಯೇಳ್ಳಿಲ್ವ? ಜೀವ ವೋದ್ರು ಸರೀನೆ ಈ ಮರದ್‌ ಜೀವ ಕಳ್ಯಾಕ್ ಬಿಡಾಕಿಲ್ಲ” ಎಂದವಳೆ, ಶಬರಿ ಮತ್ತೆ ತನ್ನವರನ್ನೆಲ್ಲ ಕೂಗಿದಳು. ಅಲ್ಲಲ್ಲೇ ಇದ್ದ ಅವರೆಲ್ಲ ಓಡೋಡಿ ಬಂದರು. ಹುಡುಗರು ಓಡಿಹೋಗಿ ಕೆಲವರನ್ನು ಕರೆತಂದರು. ಬಂದವರು ಶಬರಿಯತ್ತ ನೋಡಿದರು.

“ಏನ್ ಸುಮ್ಕೆ ನೋಡ್ತೀರ? ಈ ತೋಪ್‌ ನಮ್ದು. ಇವ್ರೆಲ್ಲ ಮರ ಕೊಯ್ಯಾಕ್‌ ಬಂದವ್ರೆ, ಒಬ್ಬೊಬ್ರೂ ಮರ ಇಟ್ಕಳ್ಳಿ” ಎಂದು ಶಬರಿ ಕೂಗಿದಳು. ಪೋಲಿಸರು ಎಳೆಯುವುದು, ಶಬರಿ ಕೂಗುವುದು, ಧರ್ಮಯ್ಯನ ಕಿರಚಾಟ, ಬಿಳಿಯರ ಪೇಚಾಟ- ಇವುಗಳ ಮಧ್ಯೆ ಹುಚ್ಚೀರನ ಮೂಕ ಆಕ್ರೋಶ-ಆಕ್ರಂದನ.

ಜನರೆಲ್ಲ ತೋಪಿಗೆ ನುಗ್ಗಿದರು. ಒಬ್ಬೊಬ್ಬರು ಒಂದೊಂದು ಮರವನ್ನು ಅಪ್ಪಿಕೊಂಡರು. ಕೂಡಲೆ ಮತ್ತಷ್ಟು ಉತ್ಸಾಹಿತಳಾದ ಶಬರಿ “ಈ ಭೂಮಿ ನಮ್ಮದು ಈ ತೋಪು ನಮ್ಮದು” ಎಂದು ಹೇಳತೂಡಗಿದಳು. ಉಳಿದವರೂ ಅದನ್ನೇ ಹೇಳತೂಡಗಿದರು. ಶಬರಿ ಕೂಗಿದಳು- “ಯೇ ಹುಡುಗ್ರ ಸೂರ್ಯನ್‌ ಕರ್ಕಂಡ್‌ ಬರ್ರಿ ಸೂರ್ಯನ್ನ.

ಹುಡುಗರು ಅತ್ತ ಓಡುತ್ತಿರುವಾಗ ಇತ್ತ ಹುಚ್ಚೀರ ಶಬರಿ ಹತ್ತಿರ ಬಂದ. ಆಕೆಯನ್ನು ಎಳದಾಡುತ್ತಿದ್ದ ಪೋಲಿಸರನ್ನು ಹಿಡಿದು ಎಳಯತೊಡಗಿದ. ಅವರು ಆತನನ್ನು ನೂಕಿದರು. ಬಿದ್ದವನು ಎದ್ದ. ಮತ್ತೆ ಪೋಲಿಸರನ್ನು ಹಿಡಿದೆಳದ. ಪೋಲಿಸರು ಉಳಿದವರನ್ನು ಎಳಯಲು ಯತ್ನಿಸುತ್ತಿದ್ದರು. “ಈ ಭೂಮಿ ನಮ್ಮದು ಈ ತೋಪು ನಮ್ಮದು” ಘೋಷಣೆ ಮೊಳಗುತ್ತಿತ್ತು ಬಿಳಿಯರ ಬೇಸರ ಹೆಚ್ಚಾಯಿತು. ಅವರು ಎಂ.ಎಲ್‌.ಎ. ಧರ್ಮಯ್ಯನಿಗೆ ತಾಕೀತು ಮಾಡಿದರು. ಆತ ನರಸಿಂಹರಾಯಪ್ಪನನ್ನು ಗದರಿಕೊಂಡ.

“ಏನ್ರಿ ಇದೆಲ್ಲ? ಇಲ್ಲಿ ಇಷ್ಟೊಂದ್ ವಿರೋಧ ಇದೆ ಅಂತ ಮೊದ್ಲೇ ನೀವ್ ಹೇಳಿದ್ರೆ ಇನ್ನಷ್ಟು ಪೋಲಿಸ್ ತರ್‍ತಾ ಇದ್ವಿ” ಎಂದ. ನರಸಿಂಹರಾಯಪ್ಪ “ಇಂಗಾಯ್ತದೆ ಅಂಬ್ತ ನಂಗೇನ್‌ ಗೊತ್ತು ಸಾಯೇಬ್ರ” ಎಂದು ಕೈಕೈ ಹಿಚುಕಿಕೊಂಡು ಜೋಯಿಸರ ಕಡೆ ನೋಡಿದ. ಅವರು “ನನ್‌ ಏನಪ್ಪ ನೋಡ್ತೀಯ? ಅಲ್‌ ಸೂರ್ಯ ಓಡ್ ಬರ್‍ತಾ ಅವ್ನೆ. ಆತನ್‌ ಕಡೆ ನೋಡು. ಇನ್ನೂ ಏನೀನ್‌ ಆಗುತ್ತೊ!” ಎಂದರು. ನರಸಿಂಹರಾಯಪ್ಪ, ಧರ್ಮಯ್ಯ ಆಕಡೆ ನೋಡಿದರು.

ಸೂರ್ಯ ಹುಡುಗರೊಂದಿಗೆ ಓಡೋಡಿ ಬರುತ್ತಿದ್ದ.

“ಇವ್ನೇ ಇವ್ನೇ ಇದೆಲ್ಲ ಮಾಡ್ಸಾದು” ಎಂದು ಗಡಿಬಿಡಿಯಿಂದ ಹೇಳಿದ- ನರಸಿಂಹರಾಯಪ್ಪ.

“ಅದನ್ನೇ ನಾನ್‌ ಬಡ್ಕಂಡಿದ್ದು. ಇವ್ನ್‌ ಇಲ್ಲಿ ಎಷ್ಟು ಪ್ರಭಾವಶಾಲಿ, ಈ ಜನರ ಶಕ್ತಿ ಏನು ಎಲ್ಲಾ ಹೇಳ್‌ಬೇಕಿತ್ತು ಅಲ್ವ? ಈಗ್ ನೋಡು, ಕಡಿಮೆ ಪೋಲಿಸ್ರಿದಾರೆ. ಏನಾಗುತ್ತೆ ಅವ್ರ್ ಕೈಲಿ?” ಎಂದು ಧರ್ಮಯ್ಯ ಚಡಪಡಿಸಿದ.

ಅಷ್ಟರಲ್ಲ ಸೂರ್ಯ ಬಂದ. ಜನರೆಲ್ಲ ಮತ್ತಷ್ಟು ಗಟ್ಟಿಯಾಗಿ “ಈ ಭೂಮಿ ನಮ್ಮದು” ಎಂದು ಕೂಗಿದರು.

ಸೂರ್ಯನಿಗೆ ಸನ್ನಿವೇಶದ ಅರಿವಾಯಿತು. ತಾವೆಲ್ಲ ಸರಿಯಾಗಿ ಸಿದ್ಧವಾಗುವುದಕ್ಕೆ ಮುಂಚೆಯೇ ಕೆಲಸ ಮುಗಿಸಬೇಕೆಂದು ಇವರೆಲ್ಲ ಬಂದಿದ್ದಾರೆ ಎಂಬ ಅರಿವಾಯಿತು. ಆತನೂ ಜನರೊಂದಿಗೆ ಘೋಷಣೆ ಕೂಗತೊಡಗಿದ. ಹುಡುಗರೂ ಸೇರಿಕೊಂಡರು. ಈ ವೇಳೆ ಪೂಜಾರಪ್ಪ, ತಿಮ್ಮರಾಯಿ ದಡಬಡನೆ ಬಂದರು. ಜನರನ್ನು ಸೇರಿಕೊಂಡರು! ಸುದ್ದಿ ಊರ ಬಡವರಿಗೂ ತಿಳಿದು ಅವರೂ ಓಡೋಡಿ ಬಂದರು.

ಸೂರ್ಯ ಘೋಷಣೆ ಕೂಗುತ್ತಲೇ ಬಿಳಿಯರ ಬಳಿಗೆ ಬಂದ.

ಮೊದಲೇ ಬೇಸರಗೊಂಡಿದ್ದ ಅವರು “ಸ್ಟಾಪ್ ಆಕ್ಷನ್, ಸ್ಟಾಪ್ ಆಕ್ಷನ್” ಎಂದು ಕೂಗಿದರು. ಆಗ ಧರ್ಮಯ್ಯ “ಸಾಹೇಬ್ರು ಹೇಳ್ತಿರೋದ್‌ ಕೇಳುಸ್ಲಿಲ್ವೇನಯ್? ಇನ್‌ಸ್ಪೆಕ್ಟರ್‌, ಎಳೆಯೋದು ಹೂಡೆಯೋದು ನಿಲ್ಸಿ” ಎಂದು ಕಿರುಚಿದ.

ಪೋಲಿಸರು ನಿಲ್ಲಿಸಿದರು. ಅದರೆ ಜನರು ಮರಗಳನ್ನು ಅಪ್ಪಿಕೊಂಡೇ ಇದ್ದರು. ಬಿಳಿಯರ ಬಳಿಗೆ ಬಂದ ಸೂರ್ಯ ಕೇಳಿದ – “ವಾಟ್ ಈಸ್ ಗೋಯಿಂಗ್ ಆನ್? ದಿಸ್ ಈಸ್ ಆಂಟಿ ಡೆಮೊಕ್ರಾಟಿಕ್.” ಅವರು ಧರ್ಮಯ್ಯನ ಕಡೆ ತೋರಿಸಿದರು.

ಸೂರ್ಯ ಧರ್ಮಯ್ಯನ ಬಳಿ ಬಂದು “ನೋಡಿ ಈ ತೋಪನ್ನ ಕಡಿಯೋದಾಗ್ಲಿ, ಕಿತ್ತುಕೂಳ್ಳೋದಾಗ್ಲಿ ಯಾವತ್ತೂ ಆಗೋದಿಲ್ಲ… ಈ ಪ್ರಯತ್ನ ಈಗ್ಲೇ ಬಿಟ್‌ ಬಿಡಿ.”

“ಅದೆಂಗ್ರಿ ಬಿಡೋಕಾಗುತ್ತೆ. ಇವ್ರು ಕೋಟ್ಯಾಂತರ ರೂಪಾಯಿ ಹಾಕಿ ಇಲ್ಲಿ ಒಂದು ಮೈನ್ಸ್ ಕಂಪನಿ ತೆಗೀತಾ ಅವ್ರೆ. ಈ ಏರಿಯಾ ಅನ್ಕೂಲವಾಗಿದೆ ಅಂತ ಪರೀಕ್ಷೆ ಮಾಡಿತಿಳ್ಕೊಂಡಿದಾರೆ. ಈ ತೋಪಿನ ಜಾಗ್ದಲ್ಲಿ ಆಫೀಸು ವಗೈರೆ ಎಲ್ಲಾ ಮಾಡ್ತಾರೆ. ಈ ಬೆಟ್ಟದಲ್ಲೂ ಒಳ್ಳೆ ಗ್ರಾನೈಟ್ ಇದ್ಯಂತೆ. ಎಲ್ಲಕ್ಕೂ ಸರ್ಕಾರದ ಒಪ್ಪಿಗೆ ಇದೆ. ಯೂ ಕೆನಾಟ್ ಗೊ ಅಗೇನ್‍ಸ್ಟ್ ಲಾ ಆಫ್ ದ್ ಲ್ಯಾಂಡ್” ಎಂದು ಜೋರಾಗಿ ಒಂದೇ ಸಮನೆ ಹೇಳಿದ ಧರ್ಮಯ್ಯ ಸರಿಯಾಗಿ ಹೇಳಿದ್ದೇನೆ ಎಂಬಂತೆ ಬಿಳಿಸಾಹೇಬರ ಕಡೆ ನೋಡಿದ. ಅವರು ತಲೆಯಾಡಿಸಿದಾಗ ಸಂತೋಷಿಸಿದ. ಮತ್ತೊಮ್ಮೆ ಸೂರ್ಯನಿಗೆ “ಯೂ ಮಸ್ಟ್ ಗಿವ್ ರೆಸ್ಪೆಕ್ಟ್ ಟು ಲಾ ಆಫ್ ದಿ ಲ್ಯಾಂಡ್” ಎಂದು ಹೆಮ್ಮಯಿಂದ ಆದೇಶಿಸಿದ.

ಸೂರ್ಯ ಆಸ್ಫೋಟಿಸಿದ- “ಯಾವ್ದು ಲಾ ಆಫ್‌ ದಿ ಲ್ಯಾಂಡ್? ದುಡಿಯೋರ್‍ಗೆ ಭೂಮಿ ವಂಚನೆ ಮಾಡೋದು ಲಾ ಆಫ್‌ ದಿ ಲ್ಯಾಂಡ? ಈ ತೋಪನ್ನೆಲ್ಲ ಬೆಳ್ಸಿರೋ ಜನರಿಂದ ಅದನ್‌ ಕಿತ್ಕೊಳ್ಳೋದು ಈ ನೆಲದ ಕಾನೂನ? ಫೋಲಿಸ್ನೋರ್‌ ಹತ್ರ ಬಡಿಸೋದು ಈ ನೆಲದ ಪುಣ್ಯಾನ? ದಲಿತ್ರನ್ನ, ಬಡವರನ್ನ ಹೆಣಮಾಡಿ ಅಧಿಕಾರ ನಡ್ಸೋದು ನಿಮ್ಮ ಮೋಕ್ಷ ಸಾಧನೇನ? ಹೇಳಿಸ್ವಾಮಿ ಹೇಳಿ. ಈ ಜನ ಏನ್ ತಪ್ ಮಾಡಿದಾರೆ ಹೇಳಿ. ಬಸುರಿ ಥರಾ ಬೆಳೆದು ನಿಂತಿರೊ ಈ ಮರಗಳ್ನ ಕಡೀ ಬೇಡಿ ಅನ್ನೋದು ತಪ್ಪಾ?”

ಸೂರ್ಯನ ಸ್ಟೋಟಕ್ಕೆ ಶಬ್ದವೆಲ್ಲ ನಿಶ್ಶಬ್ಬವಾಯಿತು.
ಮೌನ ಮುತ್ತಿಕೊಂಡಿತು.

ಆಗ ಸೂರ್ಯನ ಹತ್ತಿರ ಬಂದ ಪೋಲಿಸ್ ಇನ್ಸ್‌ಪೆಕ್ಟರ್‌ “ನಿನ್‌ ಹಸರೇನು?” ಎಂದು ಕೇಳಿದ. ಆತನಲ್ಲಿ ಸೂರ್ಯನನ್ನು ಎಲ್ಲೋ ನೋಡಿದ ಭಾವವತ್ತು.

“ಬಹುವಚನ್ದಲ್ ಕೇಳಿ ಹೇಳ್ತೀನಿ” ಎಂದ ಸೂರ್ಯ.

“ಈ ಪ್ರೊಟೆಸ್ಟ್ ಮಾಡೋರ್‍ದೆಲ್ಲ ಇದೇ ಧಿಮಾಕು” ಎಂದು ಗೊಣಗಿಕೊಂಡ ಪೋಲಿಸ್‌ ಇನ್ಸ್‌ಪೆಕ್ಟರ್‌ “ಆಲ್ ರೈಟ್ ವಾಟ್ ಈಸ್ ಯುವರ್ ನೇಮ್” ಎಂದು ಕೇಳಿದ.

“ಇಂಗ್ಲೀಷ್‌ನಲ್ಲಿ ಬಹುವಚನಾನ ಮುಚ್‌ಹಾಕ್ಬೇಡಿ. ಕನ್ನಡದಲ್ ಕೇಳಿ” ಎಂದು ದಿಟ್ಟ ಮಾತಾಡಿದ- ಸೂರ್ಯ.

“ಬಹಳ ಜಾಸ್ತಿ ಆಯ್ತು” ಎಂದು ಬೇಸರದಿಂದಲೇ “ಏನ್ ನಿಮ್ಮ ಹಸರು?” ಎಂದು ಇನ್ಸ್‌ಪೆಕ್ಟರ್‌ ಪ್ರಶ್ನಿಸಿದ.

“ಸೂರ್ಯ”- ಸೂರ್ಯನ ಉತ್ತರ.

“ಸೂರ್ಯ! ಓ.ಕೆ ಮೊದ್ಲು ಎಲ್ಲಿದ್ರಿ? ಇದೇ ಥರಾ ಕೆಲ್ಸ ಎಂದಾದ್ರೂ ಮಾಡಿದ್ರಾ?”- ಇನ್ಸ್‍ಪೆಕ್ಟರ್ ಪ್ರಶ್ನೆ.

“ಅದೆಲ್ಲ ಈಗ್ ಯಾಕೆ? ಇದೇನ್ ಕೋರ್ಟಲ್ಲ?”- ಸೂರ್ಯ ಕಟುವಾಗಿ ಉತ್ತರ ನೀಡಿದ.

ಅಷ್ಟರಲ್ಲಿ ಧರ್ಮಯ್ಯ ಬೇಸರದಿಂದ “ರೀ ಇನ್ಸ್‍ಪೆಕ್ಟರೇ ಇಲ್ ನಾವ್ ಯಾಕ್ರಿ ಎಂ.ಎಲ್.ಎ. ಅಂತ ಇರೋದು? ಎಲ್ಲಾ ನೀವೇ ಮುಗುಸ್ತಿರೇನು?” ಎಂದು ರೇಗಿದ. ಇನ್ಸ್‍ಪೆಕ್ಟರ್ ಸುಮ್ಮನೆ ನಿಂತ.

ಬಿಳಿ ಸಾಹೇಬರು ಧರ್ಮಯ್ಯನಿಗೆ ಸದ್ಯಕ್ಕೆ ವಾಪಸ್‌ ಹೋಗುವುದು ಉತ್ತಮವೆಂದು ಸೂಚಿಸಿದರು. ಆನಂತರ ಚರ್ಚೆಸಿ ತೀರ್ಮಾನಿಸೋಣ ಎಂಬುದು ಅವರ ಅಭಿಪ್ರಾಯವಾಗಿತ್ತು. ಅವರೇ ಹಾಗೆ ಹೇಳಿದ ಮೇಲೆ ತನ್ನ ಪೌರುಷ
ಪ್ರದರ್ಶನ ಬೇಕಿಲ್ಲವೆಂದು ಧರ್ಮಯ್ಯ ನಿರ್ಧರಿಸಿದ.

ಎಲ್ಲರೂ ವಾಹನಗಳಲ್ಲಿ ಹೂರಟುಹೋದರು.

ಹೋಗುವಾಗ ಬಿಳಿಯರು- ಎಲ್ಲಾ ಬೇಗ ತೀರ್ಮಾನವಾದರೆ ಸರಿಯೆಂದೂ ಇಲ್ಲದಿದ್ದರೆ ಬೇರೆ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದಾಗಿಯೂ ಹೇಳಿದರು. ಧರ್ಮಯ್ಯ ಸ್ವಲ್ಪ ಕಾಲಾವಕಾಶ ಕೇಳಿದ. ತಾನು ಇಲ್ಲೇ ಇದ್ದು ನರಸಿಂಹರಾಯಪ್ಪ, ಜೋಯಿಸರು ಮತ್ತು ಪೋಲಿಸರೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದ.

ಇಲ್ಲಿ ತೋಪಿನಲ್ಲಿ ಸಂಭ್ರಮವೋ ಸಂಭ್ರಮ ಎಲ್ಲರೂ ಹೊಸ ಅನುಭವದಿಂದ ಪುಳಕಿತರಾಗಿದ್ದರು. ಸನ್ನಿವೇಶವೇ ಸಂಘಟನೆ ಮತ್ತು ಸ್ಥೈರ್ಯವನ್ನು ಸ್ಥಾಪಿಸಿತ್ತು. ಅಳುಕು ದೂರವಾಗಿತ್ತು. ಏನಾದರಾಗಲಿ ಎದುರಿಸಲೇಬೇಕಲ್ಲ ಎಂಬ ಭಾವನೆ ಬೆಳದಿತ್ತು. ಸೂರ್ಯನಂತೂ ಸಂತೋಷಭರಿತನಾಗಿದ್ದ. ಎಲ್ಲರೂ ಹಟ್ಟಿಯ ಕಡೆ ಹೊರಟರು. ಊರಿನವರು ‘ನಾವು ನಿಮ್ ಜತೆ ಇರ್‍ತೀವಿ’ ಎಂದು ಹೇಳಿ ಹೋದರು.

ಹಟ್ಟಿಗೆ ಬಂದಾಗ ಭಾವಾವೇಶ ಇಳಿದಿತ್ತು.

ಎಲ್ಲರೂ ನೆಲದ ಮೇಲೆ ಕೂತರು. ಆಗಿಹೋದದ್ದನ್ನು ಮೆಲುಕು ಹಾಕಿದರು. ಮುಂದೆ ಏನೆಲ್ಲ ಆಗಬಹುದೆಂದು ಚರ್ಚಿಸಿದರು. ಸೂರ್ಯ ಧೈರ್ಯದ ಮಾತಾಡಿದ. ಎಲ್ಲರೂ ಮುಂದಿನದನ್ನು ಎದುರಿಸುವ ಅನಿವಾರ್ಯವನ್ನು ಮನಗಂಡಿದ್ದರು. ಅಳುಕು ಅಳದಿತ್ತು.

ತನ್ನ ಸ್ನೇಹಿತರನೇಕರು ನವಾಬನ ಜೂತೆ ಬರುವ ವಿಷಯವನ್ನು ಸೂರ್ಯ ಹೇಳಿದ. ಅನಂತರ ಹೋರಾಟಕ್ಕೆ ಮತ್ತಷ್ಟು ಹುರುಪು ತುಂಬುವ ಬಗ್ಗೆ ಮಾತನಾಡಿದ. ಎಲ್ಲರೂ ಒಟ್ಟಿಗೆ ಊಟಮಾಡಬೇಕೆಂದು ಶಬರಿಯು ಸಲಹೆ ನೀಡಿ ಸಿದ್ಧತಗೆ ತೊಡಗಿದಳು. ಹೆಂಗಸರೆಲ್ಲ ತಂತಮ್ಮ ಮನೆಗಳಿಂದ ರಾಗಿಹಿಟ್ಟು ಸೊಪ್ಪು, ಬೇಳೆ ಮುಂತಾದವನ್ನು ತಂದರು. ಮೂರುಕಲ್ಲು ಗುಂಡುಗಳನ್ನಿಟ್ಟು ಒಲೆ ಮಾಡಿ ಅಡುಗೆ ಮಾಡಲು ಅಣಿಯಾದರು.

ಸೂರ್ಯ “ಈ ಭೂಮಿ ನಮ್ಮದು” ಹಾಡು ಹೇಳತೂಡಗಿದ.
ಹುಚ್ಚೀರ ಕುಣಿಯತೊಡಗಿದ. ಹುಡುಗರು ಹೆಜ್ಜೆ ಹಾಕಿದರು.
* * *

ರಾತ್ರಿ ಎಲ್ಲರೂ ಮಲಗಿದ್ದಾರೆ-ಸೂರ್ಯ ಮತ್ತು ಶಬರಿಯನ್ನು ಹೊರತುಪಡಿಸಿ, ತೊಡೆಯ ಮೇಲೆ ತಲೆಯಿಟ್ಟು ಮಲಗಿದ್ದ ಶಬರಿಗೆ ಸೂರ್ಯ ಮೆಚ್ಚುಗೆಯ ಮಾತನಾಡಿದ- “ಇವತ್ತು ಏನೇನ್‌ ನಡೀತು ಅದೆಲ್ಲ ನಿನ್ನಿಂದ. ನೀನೇ ಇವತ್ತು ಒಂದು ಶಕ್ತಿ ಆಗ್‌ಬಿಟ್ಟಿದ್ದೀಯ. ನನ್‌ ಕನಸು ನಿನ್ನಲ್ಲಿ ನನಸಾಗಿ ನಿಂತ್‌ಬಿಟ್ತು.’ ಶಬರಿ ಆತನ ಕೈಬೆರಳುಗಳನ್ನು ನೇವರಿಸುತ್ತಾ “ಅದೆಲ್ಲ ಏನೂ ಹೇಳ್‌ಬ್ಯಾಡ. ನನ್‌ ಇಂಗ್‌ ಮಾಡಿದ್ದೇ ನೀನು. ಎಲ್ಲಾ ನಿಂಗೇ ಸೇರ್‌ಬೇಕು” ಎಂದು ಆತನಿಗೇ ಅದರ ಗೌರವವನ್ನು ಅರ್ಪಿಸಿದಳು. ಜೊತೆಗೆ “ಈಗ ನಾನ್‌ ನಿನ್‌ ತರಾನೇ ಆಗಿವ್ನಿ ಅಲ್ವಾ?” ಎಂದು ಪ್ರಶ್ನಿಸಿದಳು. “ಯಾಕೆ? ಅನ್ಮಾನಾನ?” ಎಂದ.

“ಅಂಗಲ್ಲ ನಾವ್‌ ಇನ್‌ಮ್ಯಾಕ್‌ ತಡ ಮಾಡ್‌ಬಾರ್‍ದು. ಅದ್ಕೇ ಅಂಬ್ತ ಕೇಳ್ದೆ.”
“ಯಾವ್ ವಿಷ್ಯ ಹೇಳ್ತಿದ್ದಿಯ?”
“ಮದ್ವೆ ವಿಷ್ಯ. ಎಂಗಿದ್ರೂ ಗೌರಿ ಮದ್ವೆ ಆಗೈತಲ್ಲ, ಇವಾಗ್ ಯಾರೂ ಏನು ಅಂದ್ಕಮಲ್ಲ. ಬ್ಯಾಗ್‌ ಯೇಳ್‌ಬಿಟ್ಟು ಮದ್ವೆ ಆಗಾನ.”
“ತೋಪಿನ ವಿಷ್ಯ ಒಂದು ತೀರ್ಮಾನ ಆದ್‌ ಕೂಡ್ಲೇ ಆಗೋಣ.”
“ಅದ್ದ್ಕೂ ಇದ್ಕೂ ಯಾಕ್‌ ಗಂಟ್ ಆಕ್ತೀಯ?”
“ಹಾಗೇನಿಲ್ಲ. ಈಗ ಹೋರಾಟ ಬಿರುಸಾಗ್‌ ಶುರುವಾಗಿದೆ. ಮಧ್ಯೆ ಮದ್ವೆ ವಿಷ್ಯ ತರೋದ್ ಬೇಡ ಅಂತ ಹಾಗಂದೆ.”
“ಅದೂ ದಿಟ. ವೋಗ್ಲಿ ಮುಂದುಟ್ಟೋ ಮಗೂಗೆ ಏನ್‌ ಯೆಸ್ರಿಡಾನ” ಯಾವ್ದಾನ ವೊಸಾ ಯಸ್ರಿಡ್ಬೇಕು. ಆ?”
“ಹುಟ್ಟೋದು ಗಂಡೋ ಹಣ್ಣೋ ಗೊತ್ತಿಲ್ಲ. ಈಗ್ಲೇ ಹಸ್ರಿನ್‌ ವಿಷ್ಯ ಯಾಕೆ?”
“ಎಲ್ಲದ್ಕೂ ಯಾಕೆ ಯಾಕೆ ಅಂದ್ರೆ ಕನಸು ಬೀಳಾದಾದ್ರು ಯಾಕೆ ಯೇಳು?”- ಶಬರಿ ಬೇಸರದಿಂದಲೇ ಕೇಳಿದಳು.
ಸೂರ್ಯ ಬೆಚ್ಚಿದ-ಅವಳ ತೋಳು ಹಿಡಿದು ಕೂಡಿಸಿ ದಿಟ್ಟಿಸಿದ.
“ಬೇಸರ ಮಾಡ್ಕೋಬೇಡ. ಹೆಸರು ತಾನೆ? ಹೇಳ್ತೀನಿ” ಎಂದು ಯೋಚಿಸಿ “ಗಂಡಾಗ್ಲಿ ಹಣ್ಣಾಗ್ಲಿ ಹೊಂದಿಕೊಳ್ಳೋ ಹೆಸರುಬೇಕು ಅಲ್ವಾ? ತೇಜ; ತೇಜ ಅಂತ ಇಟ್ರೆ? ಅಥವಾ ಉದಯ?” ಎಂದು ಕೇಳಿದ.
“ತೇಜ ಅಂಬಾದೆ ಚಂದಾಗೈತೆ. ಯೇಳಾಕೆ ಕೇಳಾಕೆ ಎಲ್ಲಾದ್ದಕೂ ಚಂದಾಗೈತೆ. ಅಂಗಂದ್ರೇನು?”
ಸೂರ್ಯ ಅರ್ಥವನ್ನು ವಿವರಿಸಿದ.
ಶಬರಿ ಸಂತೋಷದಿಂದ ಆತನ ತೋಳಲ್ಲಿ ಸೇರಿದಳು.
* * *

ಬೆಳಗಿನ ಜಾವ ಹೂರಗೆ ಗದ್ದಲ.
ಬಾಗಿಲು ಬಡಿದ ಸದ್ದು. “ಸೂರ್ಯ ಸೂರ್ಯ” ಎಂಬ ಕೂಗು.
ಸೂರ್ಯ, ಶಬರಿ, ತಿಮ್ಮರಾಯಿ, ಬಾಗಿಲು ತಗೆದು ಹೊರಗೆ ಬಂದರು.
ಪೋಲಿಸ್‌ ಇನ್ಸ್‌ಸ್ಪೆಕ್ಟರ್‌! ಜೊತಗೆ ಐವತ್ತಕ್ಕೂ ಹೆಚ್ಚು ಪೋಲಿಸರು! ಇವರ ಗದ್ದಲಕ್ಕೆ ಹೊರಬಂದು ನಿಂತ ಜನರು!
ಸೂರ್ಯನಿಗೆ ಅಪಾಯದ ಮುನ್ಸೂಚನೆ ಕಂಡಿತು.
“ನಿನ್ನನ್ನ ಅರೆಸ್ಟ್‌ ಮಾಡೋಕ್‌ ಬಂದಿದ್ದೀವಿ” ಎಂದ ಇನ್‌ಪಕ್ಟರ್‌ ಪೋಲಿಸರಿಗೆ “ಕೋಳ ತೊಡ್ಸಿ? ಎಂದು ಅಜ್ಞಾಪಿಸಿದ.
ಶಬರಿ ಬೆಚ್ಚಿದಳು- “ಇಲ್ಲ ನಾವ್‌ ಬಿಡಾಕಿಲ್ಲ; ಸೂರ್ಯನ್ ಬಿಡಾಕಿಲ್ಲ” ಎಂದು ಚಡಪಡಿಸಿದಳು.
“ನೀನ್ ಬಿಡಲ್ಲ ಅಂದ್ರೆ ಯಾರ್‌ ಕೇಳ್ತಾರೆ? ಕೋಳಿ ಕೇಳ್‌ ಖಾರ ಅರ್‍ಯೋಕ್ ಬಂದಿಲ್ಲ ನಾವು… ಹಾಕ್ರೋ ಕೋಳ” ಎಂದು ಇನ್ಸ್‌ಪೆಕ್ಟರ್‌ ಗದರಿದ.
ಸೂರ್ಯ ಗಾಬರಿಗೊಳ್ಳದೆ ಕೇಳಿದ- “ಅರೆಸ್ಟ್ ಮಾಡೋಕೆ ಏನ್‌ ಕಾರಣ? ಎಲ್ಲದೆ ವಾರಂಟು?”
“ಇಲ್ಲಿದೆ ನೋಡು” ಎಂದು ವಾರಂಟನ್ನು ತೋರಿಸಿದ ಇನ್ಸ್‌ಪೆಕ್ಟರ್‌ ಎಲ್ಲರನ್ನು ಉದ್ದೇಶಿಸಿ ಹೇಳಿದ- “ನೋಡಿ ಈ ಸೂರ್ಯ ಕೊಲೆಗಾರ. ಒಂದು ಕೊಲೆ ಕೇಸಿನಲ್ಲಿ ಸಿಕ್ಕಿಹಾಕ್ಕೊಂಡು, ತಪ್ಪಿಸ್ಕೊಂಡು ಇಲ್ ಬಂದ್ ಸೇರಿ ನಿಮ್ಮನ್ನೆಲ್ಲ ಹಾದಿ ತಪ್ಸಿದಾನೆ. ತೋಪಿನಹತ್ರ ನೋಡ್ದಾಗ್ಲೇ ನಂಗನ್ಮಾನ ಬಂತು. ಇವ್ನ ಫೋಟೋ ನೋಡಿದ್ದೆ. ಈಗ ನಿಮ್ಗೆಲ್ಲ ಹೇಳ್ತಾ ಇದ್ದೀನಿ. ನೀವ್ಯಾರಾದ್ರೂ ಅಡ್ಡಬಂದ್ರೆ ನೀವೂ ಕೊಲೆಕೇಸಿಗ್ ಸೇರ್‍ಕೊತೀರಿ. ಹುಷಾರ್.”

ಶಬರಿಗೆ ನಂಬಲಾಗಲಿಲ್ಲ. “ಎಲ್ಲಾ ಸುಳ್‍ಸುಳ್ಳೆ ಯೇಳ್‍ಬ್ಯಾಡ್ರಿ. ಸೂರ್ಯ ಅಂತಾ ಮನ್ಸ ಅಲ್ಲ.” ಎಂದು ಅಳತೂಡಗಿದಳು.

“ಹೂಂಕಣ್‌ ಬುದ್ದಿ. ಬೋಲ್ ಒಳ್ಳೆ ಮನ್ಸ” ಎಂದ ಸಣ್ಣೀರ.

ಪೂಜಾರಪ್ಪನೂ ದನಿ ಸೇರಿಸಿದ. ತಿಮ್ಮರಾಯಿಯಂತೂ “ಈಯಪ್ನಿಂದ ನಮ್‌ ಜನಕ್ಕೆ ಅಕ್ಷರ ಬಂತು, ಬುದ್ದಿ ಬಂತು. ಇಂಗೆಲ್ಲ ಕರ್‍ಕಂಡ್ ವೋಗ್‍ಬ್ಯಾಡಿ ಬುದ್ದೇರ” ಎಂದು ಬೇಡಿದ.

ಇನ್ಸ್‌ಪೆಕ್ಟರ್‌ ಒಂದೇ ಮಾತಲ್ಲಿ ಹೇಳಿದ- “ಸರ್ಕಾರದ ಅಜ್ಞೆ ನಾನೇನೂ ಮಾಡೊ ಹಾಗಿಲ್ಲ. ನಮಿಗ್‌ ದಾರಿ ಬಿಟ್‌ಬಿಡಿ.”

ಪೋಲಿಸರು ಸೂರ್ಯನಿಗೆ ಕೋಳ ತೊಡಿಸಿದರು.
ಅಧೀರನಾಗದೆ ಸೂರ್ಯ ಎಲ್ಲರಿಗೂ ಕೈಮುಗಿದ.

“ನಾನ್ ಮತ್ತೆ ಬಂದೇ ಬರ್‍ತೀನಿ. ಹೋರಾಟ ಮಾಡೋರ್‍ಗೆ ಸುಳ್ಳು ಆರೋಪ ಹೊರ್‍ಸೋದು ನಮ್‌ ದೇಶದ ಒಂದು ಸಂಪ್ರದಾಯ; ಸರ್ಕಾರದ ಸಂಪ್ರದಾಯ. ಈಗ ತೋಪು, ಬಯಲು ಎಲ್ಲಾ ಬೇಕು ಅಂತ ನೀವ್‌ ಕೇಳಿದ್ದಕ್ಕೆ ನನ್‌ ಕೈಯ್ಯಿಗ್ ಕೋಳ ಹಾಕಿದಾರೆ. ಆದ್ರೆ ನೀವು ಯಾವತ್ತೂ ನಮ್‌ ತೋಪನ್ನ ಬಿಟ್‌ಕೊಡ್‌ಬೇಡಿ. ಭೂಮಿ ಬಿಟ್ಟ ಕೂಡ್‌ಬೇಡಿ. ಚನ್ನಾಗ್ ನೆನಪಿರ್‍ಲಿ. ನಾನ್ ಬರ್‍ತೀನಿ” ಎಂದು ಹೊರಡುತ್ತ ಅಳುತ್ತಿದ್ದ ಶಬರಿಯನ್ನು ಸಂತೈಸಿದ. “ನೀನೇ ಅಳ್ತಾ ಇದ್ರೆ ಹೇಗೆ ಶಬರಿ? ನಾನು ಮತ್ತೆ ಬಂದೇ ಬರ್‍ತೀನಿ. ನೀನೇ ಎಲ್ರಿಗೂ ಧೈರ್‍ಯ ತುಂಬ್‌ಬೇಕು. ಎಲ್ಲ ಈಗ ಹೇಳು- ಈ ಭೂಮಿ ನಮ್ಮದು, ಈ ತೋಪು ನಮ್ಮದು- ಹೇಳು ಶಬರಿ ಹೇಳು” ಎಂದು ಹುರಿದುಂಬಿಸಿದ.

ಶಬರಿ ಅಳುತ್ತಲೇ “ಈ ಭೂಮಿ ನಮ್ಮದು” ಹಾಡಿನ ಎರಡು ಸಾಲು ಹೇಳುತ್ತ ಸಮಾಧಾನ ಸ್ಥಿತಿಗೆ ಬಂದಳು. ಸೂರ್ಯ ಮುಂದಡಿಯಿಟ್ಟ. ಪೋಲಿಸರು ಕರೆದೊಯ್ಯುತ್ತಿದ್ದರು. ಶಬರಿ ಗಟ್ಟಿಯಾಗಿ ಹಾಡತೊಡಗಿದಳು. ಉಳಿದವರೂ ಕಣ್ಣು ತುಂಬಿಕೊಂಡು ದನಿಗೂಡಿಸಿದರು. “ಈ ಭೂಮಿ ನಮ್ಮದು ಆಕಾಶ ನಮ್ಮದು ಈ ತೋಪು ನಮ್ಮದು ಬಯಲು ನಮ್ಮದು” ಮೊಳಗತೊಡಗಿತು. ಸೂರ್ಯ ಮರೆಯಾಗುವವರೆಗೆ ಮೊಳಗುತ್ತಲೇ ಇತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆಲಮುಖಿ
Next post ದುಃಖ

ಸಣ್ಣ ಕತೆ

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys