ಕಲ್ಲು ಗುಡ್ಡದಲ್ಲೂ ಕದರು ಕಂಡವರು
ಹಾಗಾಗೆ ಬರಡು ಭೂಮಿ ಈಗ
ನಂದನವನ
ದಾರಿಹೋಕರಿಗೆ ಹೊರಗಿನ ಚೆಂದ
ಕಾಣುವುದಷ್ಟೇ
ಆದರೆ ಅವರುಂಡಿದ್ದು ಬರಿಯ
ಕಷ್ಟ-ನಷ್ಟ ಮಾತ್ರ
ಬಿತ್ತುವುದಿಲ್ಲ ಎನ್ನುತ್ತಾ ಮತ್ತೆ
ಬಿತ್ತಿದರು, ಊಳಿದರು
ಅರಿ ಮಾಡಿದರು
ಹೀಗಿದ್ದು
ಕಣಜ ತುಂಬಿ ರತ್ನಗಂಬಳಿ
ಹೊದ್ದುಕೊಳ್ಳಲಿಲ್ಲ
ಬದಲು ಒಡಲ ಹಾಹಾಕಾರಕ್ಕೆ
ಹಾರೈಕೆಯಾದರು.
ತಂಪುಣಿಸಿ ತಣಿಸಿದರು ನೆಲದವ್ವನ
ಧಮನಿಯೊಳಗಣ ರುಧಿರ
ಬೆವರಹನಿ ಹರಿಸಿ
ದಿನದಿನಕ್ಕೆ ಕುಣಿಕೆಯ
ಬಲ ಒತ್ತಾಯ ಹೆಚ್ಚಾಗಿತ್ತೋ?
ಕೈಯ ಬಲ ನೆಲಮುಖಿಯಾಯ್ತೋ?
ನೆಲದ ಚೆಲುವು ಶಾಶ್ವತವೆನಿಸಿತೋ?
ಒಂದು ಅಳಿದರೆ ಮತ್ತೊಂದು
ಉಳಿದಿತೆಂದೋ?
ಬಿಗಿದುಕೊಂಡರು ಕೊರಳ ಸೆರೆ
ಬಿಟ್ಟು ಹೊರಟರು ಎಲ್ಲ ಹೊರೆ
*****

Latest posts by ನಾಗರೇಖಾ ಗಾಂವಕರ (see all)