ನಿನ್ನ ಅನರ್ಘ್ಯ ಸೊಬಗು ಸಿಡಿಮದ್ದಿನಂತೆ
ಹೊಡೆಯುವುದರಿಂದ ಬಹುಪಾಲು
ಜನರ ಎದೆ ತಲ್ಲಿಣಿಸುವುದಂತೆ
ತತ್ತರಿಸುವುದಂತೆ ಕೈಕಾಲು
ಕವಿಗಳಿಗೆ ಕೂಡ ಬರದು ಕವಿತೆಯ ಸಾಲು
ಹೀಗಿರುತ್ತ ಕೇವಲ ನಿನ್ನ ಛಾಯಾಚಿತ್ರ
ನೋಡಿಯೋ ಪರವಶನಾಗಿ ಸಂಪೂರ್‍ಣ
ಮೈಮರೆವ ಮೊದಲೆ ಬರೆಯುವೆನೀ ಪತ್ರ,
ಎಷ್ಟೋ ವರ್ಷಗಳಿಗೊಬ್ಬಳು ಕ್ಲಿಯೋಪಾತ್ರ
ಸೃಷ್ಟಿ ಅಪರೂಪಕ್ಕೆ ನಡೆಸುವ ಸಂಚು
ಅನಿಸುವುದು ನನಗೆ ಕೆಲವೊಮ್ಮೆ ಸೌಂದರ್ಯವೆಂದರೆ
ನಮ್ಮ ನಿರಾಶೆಗಳು ತಲಪುವ ತೀವ್ರತೆಯ ಅಂಚು
ದಟ್ಟ ಮೋಡಗಳಲ್ಲಿ ಘಟಿಸುವ ಮಿಂಚು
ಕಾದು ಸೋತು ಇನ್ನಿಲ್ಲವೆಂದಾಗ ಬರುವ ಮಳೆ
ಬೆಂದ ನೆಲದ ಪರಿಮಳವನ್ನು ಇತಿಹಾಸದ
ನೆನಪುಗಳನ್ನು ಒಯ್ಯುವ ಹೊಳೆ
ನಿನ್ನಿರವಿಗಿದೇ ಗುಟ್ಟು ಇದೇ ಸೆಳೆ
ಕೆಲವರಿಗೆ ಮೂರ್ಛೆಯನ್ನು ತರಬಹುದು
ಅದೂ ಪಡೆಯುವ ಒಂದು ವಿಧಾನ
ಎಷ್ಟೋ ಕ್ಷುದ್ರತೆಗಳನ್ನು ಹಾಯ್ದು
*****