ಬಾಳಿನ ಕಡಲಲ್ಲಿ
ಮಿಂದು ಬಂದೆ ನಾನು
ಹೊಸ ವರುಷದ ಹೊಸ ಹರುಷದ
ಹೊನಲಲಿ
ನಗುವ ಹೂವಾಗಿ ಬಂದೆ ನಾನು||

ಕವಲೊಡೆದ ಸಸಿಯಂತೆ
ಹೊಲ ಮರ ನೆಲಗಿಡ ಹಸಿರ ಹಾಸಿಗೆ
ಬರಸೆಳೆಯುವಂತೆ ಬಯಕೆಗಳ ಹೊತ್ತು
ಯೌವನ ಸಿರಿಯ ತೋರುವಂತೆ ಬಂದೆ ನಾನು||

ಬಳೆಗಾರನ ಬಳೆ ಸದ್ದಲ್ಲಿ ಅಡಗಿದ
ಬಯಲು ಸೀಮೆ ಒಡಮಾಲೆ ತೊಟ್ಟು
ವಧುವಾಗಿ ಬಂದೆ ಸಿರಿಯಾಗಿ ನಿಂತೆ ನಾನು||

ಜೋಗದ ಸಿರಿ ಜೋಕಾಲಿಯಾಡಿ
ರಂಗೋಲಿ ಬಿಡಿಸಿ ಮಲ್ಲೆ ಜಾಜಿ
ಸೇವಂತಿ ವಸಂತನ ಕರೆಯುತ ಬಂದೆ ನಾನು||

ನವರಾಗ ನವರಸ ತಳಿರು ತೋರಣ
ಸಿಂಗರಿಸಿ ವಧುವಾಗಿ ಬಂದೆ
ಹಸೆಮಣೆ ಏರಿ ಹಾಡುತ
ಮೆಲುದನಿಯಲಿ ಇಂಪಾಗಿ ಬಂದೆ ನಾನು
*****