ಕರಿ ಘನ ಅಂಕುಶ ಕಿರಿದೆನ್ನಬಹುದೆ
ಬಾರದಯ್ಯಾ
ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ
ಬಾರದಯ್ಯಾ
ಮರಹು ಘನ ನಿಮ್ಮ ನೆನೆವ ಮನವ ಕಿರಿದೆನ್ನಬಹುದೆ
ಬಾರದಯ್ಯಾ
ಕೂಡಲಸಂಗಮದೇವಾ
[ಕರಿ-ಆನೆ, ಘನ-ದೊಡ್ಡದು, ತಮಂಧ-ಕತ್ತಲು]
ನಮ್ಮ ತಿಳಿವಳಿಕೆ ಸ್ಥೂಲವಾದ್ದನ್ನು ಗಮನಿಸುವಷ್ಟು ಸುಲಭವಾಗಿ ಸೂಕ್ಷ್ಮವಾದದ್ದನ್ನು ಗಮನಿಸಲಾರದು. ದೊಡ್ಡ ಆನೆ ಕಣ್ಣಿಗೆ ಕಾಣುತ್ತದೆ, ಅದನ್ನು ನಿಯಂತ್ರಿಸುವ ಅಂಕುಶ ಕಾಣುವುದಿಲ್ಲ. ದಟ್ಟವಾದ ಕತ್ತಲು ಮಾತ್ರವೇ ಮುಖ್ಯವಾಗುತ್ತ ಸ್ವಲ್ಪವಾದರೂ ಬೆಳಕು ನೀಡುವ ಹಣತೆ ಗಮನಕ್ಕೆ ಬರುವುದಿಲ್ಲ. ಆಯಾ ಕ್ಷಣದ ಬದುಕಿನ ಜಂಜಡವೇ ಘನವಾಗಿ ಕಾಣುತ್ತ, ಅಂಥ ಜಂಜಡದ ನಡುವೆಯೂ ಉದಾತ್ತವಾದದ್ದನ್ನು ನೆನೆಯಬಲ್ಲ ಮನಸ್ಸು ಗಮನಕ್ಕೆ ಬರುವುದಿಲ್ಲ.
ಮನಸ್ಸು ಮುಖ್ಯವಲ್ಲ, ಮನಸ್ಸಿಗೆ ಇರುವ ಸಾಧ್ಯತೆಗಳು ಮುಖ್ಯವಲ್ಲ, ಮುಖ್ಯವಾದದ್ದು ಏನಿದ್ದರೂ ಸ್ಥೂಲವಾಗಿ ಎಲ್ಲರಿಗೆ ಎದ್ದು ಕಾಣುವಂಥ ಸಂಗತಿಗಳು ಅಷ್ಟೇ ಎಂಬ ಮನೋಧರ್ಮ ನಮ್ಮ ಕಾಲದಲ್ಲಿ ಪ್ರಬಲಿಸುತ್ತಿದೆ. ಆನೆಯ ಅಪಾರವೆನ್ನಿಸುವ ಶಕ್ತಿಯನ್ನು ನಿಯಂತ್ರಿಸುವುದು ಪುಟ್ಟದೆಂದು ತೋರುವ ಅಂಕುಶ. ಕತ್ತಲೆಯನ್ನು ಕರಗಿಸುವುದು ಪುಟ್ಟ ಹಣತೆ. ಮನಸ್ಸು ಅಂಕುಶವೂ ಹೌದು ಬೆಳಕೂ ಹೌದು. ವ್ಯಕ್ತಿಯ ಮತ್ತು ಸಮಾಜದ ದುರಂತಕ್ಕೆ ಕಾರಣವಾಗಬಹುದಾದ ಮರವೆಯನ್ನು ತೊಲಗಿಸುವ ಶಕ್ತಿಯೂ ಹೌದು. ಮನಸ್ಸನ್ನು ಕಿರಿದು ಎಂದು ತಿಳಿದರೆ ನಮ್ಮ ದೊಡ್ಡ ದೊಡ್ಡ ಸಾಧನೆಗಳೆಲ್ಲವೂ ಅರ್ಥಹೀನವಾಗುತ್ತವೆ.
ಈ ವಚನದಲ್ಲಿ ಬಂದಿರುವ `ನಿಮ್ಮ ನೆನೆವ ಮನ’ ಎಂಬ ಮಾತನ್ನು ಬೇರೆ ರೀತಿಯಲ್ಲೂ ಅರ್ಥ ಮಾಡಿಕೊಳ್ಳಬಹುದು. ನಮ್ಮ ಮನಸ್ಸು ಸಾಮಾನ್ಯವಾಗಿ ಕೇವಲ ನಮ್ಮ ಬಗ್ಗೆಯೇ ಯೋಚಿಸುತ್ತಿರುತ್ತದೆ. ನಮ್ಮ ಎಲ್ಲ ಚಿಂತನೆಗಳ ಕೇಂದ್ರ ನಾವೇ! ನಾನು ಎಂಬುದನ್ನು ಬಿಟ್ಟು ಕ್ಷಣಕಾಲವಾದರೂ ನೀನು ಎಂಬುದನ್ನು ಅಂದರೆ ಇನ್ನೊಬ್ಬ ವ್ಯಕ್ತಿ, ಜನಸಮುದಾಯ, ಲೋಕ, ದೇವರು ಇತ್ಯಾದಿ, ಆಲೋಚಿಸ ಬಲ್ಲ ಅರಿಯಬಲ್ಲ ಮನಸ್ಸು ಮಾತ್ರವೇ ಘನವಾಗಬಲ್ಲುದು. ಹಾಗೆ ಆಗುವುದಕ್ಕೂ ಸೂಕ್ಷ್ಮವಾದ ನಮ್ಮ ಮನಸ್ಸಿನ ಬಗ್ಗೆಯೇ ನಮಗೆ ಎಚ್ಚರ ಮೂಡಬೇಕು ಅಲ್ಲವೆ!
*****