ಪದ್ಮಗಣ – ಒಂದು ಟಿಪ್ಪಣಿ

ಪದ್ಮಗಣ – ಒಂದು ಟಿಪ್ಪಣಿ

ಪ್ರೊ. ತೀ.ನಂ. ಶ್ರೀಯವರು ನವೋದಯ ಕಾವ್ಯದಲ್ಲಿ ಬಳಕೆಯಾದ ಛಂದೋವಿನ್ಯಾಸಗಳನ್ನು ಕುರಿತ ತಮ್ಮ ಮೂರು ಲೇಖನಗಳಲ್ಲಿ ಅನೇಕ ಮೌಲಿಕವಾದ ಅಂಶಗಳನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದಾರೆ. (ತೀ.ನಂ.ಶ್ರೀಕಂಠಯ್ಯ : ಸಮಾಲೋಕನ, ಪು. ೧೧೭-೨೩೨) ಆ ಕಾವ್ಯದಲ್ಲಿ ಮೂಡಿರುವ ಹೊಸ ಲಯ ವಿನ್ಯಾಸಗಳ ಸ್ವರೂಪವನ್ನು ವಿವರಿಸಿ (ಮುಡಿ, ಕಂಪಿತ, ಪದ್ಮಗಣ, ಮೊದಲಾದ) ಕೆಲವು ಹೊಸ ಪರಿಕಲ್ಪನೆಗಳನ್ನೂ ರೂಪಿಸಿಕೊಟ್ಟಿದ್ದಾರೆ. ಈ ಮೂಲಕ ಆವರೆಗೆ ನಿರೂಪಗೊಂಡು ಬಂದ ಕನ್ನಡ ಛಂದಶಾಸ್ತ್ರದ ಗಡಿಗಳನ್ನು ಕೆಲ ಮಟ್ಟಿಗೆ ವಿಸ್ತರಿಸುವ ಅಮೂಲ್ಯ ಕೆಲಸವನ್ನು ಮಾಡಿದ್ದಾರೆ.

ತಮ್ಮ ‘ಮಾತ್ರೆ, ಮುಡಿ, ಪದ್ಮಗಣ’ ಎಂಬ ಲೇಖನದಲ್ಲಿ ಅವರು ತಿಳಿಸಿರುವ ಪದ್ಮಗಣದ ಬಗ್ಗೆ ಒಂದೆರಡು ಅಂಶಗಳನ್ನು ಚರ್ಚಿಸುವುದು ಈ ಲೇಖನದ ಉದ್ದೇಶ. ಪದ್ಮಗಣದ ಸ್ವರೂಪವನ್ನು ವಿವರಿಸುತ್ತ ಅವರು ಹೇಳಿರುವ ಮಾತುಗಳಲ್ಲಿ ಒಂದೆರಡನ್ನು ಕೆಳಗೆ ಉದ್ಧರಿಸಿದ್ಧೇನೆ.

“ಗಮನಿಸಬೇಕಾದ ವಿಷಯವೆಂದರೆ ಈ ಕೊನೆಯ (ಪದ್ಮ) ಗಣದಲ್ಲಿ ೧ ಗುರುವಿನ (ಅಥವಾ ೨ ಲಘುಗಳ) ಮುಂದೆ ಒಂದೇ ಅಕ್ಷರವಿರಬೇಕು. ಈ ತುದಿಯ ಅಕ್ಷರವು ಸ್ವರೂಪದಲ್ಲಿ ಲಘುವಾದರೂ ಎಳೆದು ಹೇಳುವುದು ಸಾಧ್ಯ. ಹಾಗೆ ಹೇಳುವುದು ರೂಢಿಯೂ ಹೌದು. ಆದರೆ ಅದರ ಬೆಲೆ ಎರಡು ಮಾತ್ರೆಯೆಂಬ ಭಾವನೆಯಿಂದ ಅದರ ಜಾಗದಲ್ಲಿ ಎರಡು ಲಘುಗಳನ್ನಿರಿಸುವ ಹಾಗಿಲ್ಲ. ಎಂದರೆ ಇಲ್ಲಿಯ ಆಂತ್ಯಗಣವು V V.Vಎಂದಾಗಲಿ -Vಎಂದಾಗಲೀ, ಇರಬೇಕು; VVVVಎಂಬಂತೆ ಅಥವಾ -VVಎಂಬಂತೆ ಇರುವುದು ಸಾಧ್ಯವಲ್ಲ.”(ತೀ.ನಂ.ಶ್ರೀಕಂಠಯ್ಯ : ಸಮಾಲೋಕನ, ಪು. ೨೨೧-೨೨೨) “ಬ್ರಹ್ಮಗಣದಂತೆಯೇ ಅದರಲ್ಲಿ (ಪದ್ಮಗಣದಲ್ಲಿ) ಇಂದಿಗೆ ಕೂಡ ಎರಡೇ ಅಂಶಗಳು (V V.V) ಇರುತ್ತವೆ.” (ತೀ.ನಂ.ಶ್ರೀಕಂಠಯ್ಯ : ಸಮಾಲೋಕನ, ಪು. ೨೩೨) ಮೇಲಿನ ಹೇಳಿಕೆಗಳು ನಿರ್ಣಾಯಕವಾದ ಧಾಟಿಯಲ್ಲಿವೆ. ಆವರೆಗೆ ಬಂದ ಹೊಸಗನ್ನಡ ಕಾವ್ಯವನ್ನೆಲ್ಲ ಬಹುಮಟ್ಟಿಗೆ ಗಮನಿಸಿಯೇ ತೀನಂಶ್ರೀಯವರು ಈ ಮಾತುಗಳನ್ನು ಬರೆದಿರಬೇಕು. ಅದರೆ ಅಷ್ಟರ ಆಧಾರದ ಮೇಲೆ ಇಂಥ ನಿರ್ಣಯಗಳಿಗೆ ತಲುಪುವುದು ಸರಿಯಾಗಲಾರದೇನೋ! ಹೀಗೆ ಹೇಳುವ ಮುನ್ನ ಇಂಥ ನಿರ್ದಿಷ್ಟ ಗುರುಲಘುವಿವ್ಯಾಸಗಳಿಂದ ಕೂಡಿರುವ ಶಬ್ದಗಳು ನಮ್ಮ ಭಾಷೆಯಲ್ಲಿ ಇರಲು ಸಾಧ್ಯವೇ ಎಂದು ಪರಿಶೀಲಿಸುವುದು ತಕ್ಕುದೇ ಹೊರತು ಆವರೆಗೆ ರಚಿತವಾಗಿರುವ ಕವನಗಳಲ್ಲಿ ಇಂಥ ಗಣಗಳು ಇವೆಯೇ ಇಲ್ಲವೇ ಎಂದಷ್ಟೇ ಪರಿಶೀಲಿಸಿದರೆ ಸಾಲದು ಎನ್ನಿಸುತ್ತದೆ. -VV ವಿನ್ಯಾಸದ ಗಣವಾಗಲೀ ಅಥವಾ VVVV ರೀತಿಯ ಗಣವಾಗಲೀ ಕನ್ನಡದಲ್ಲಿ ಇರುವುದು ಸಾಧ್ಯ. ಗುರು ಲಘುಗಳ ಈ ನಿರ್ದಿಷ್ಪ ವಿನ್ಯಾಸಕ್ಕೆ ಹೊರಡುವ ಎಷ್ಟೋ ಪ್ರಕೃತಿ ಪದಗಳು ದಿನನಿತ್ಯದ ಕನ್ನಡದಲ್ಲಿಯೇ ಬಳಕೆಯಲ್ಲಿವೆ. ಇಂಥ ಪದಗಳು ಕನ್ನಡದಲ್ಲಿ ಇರುವಾಗ ಕವಿ ಅವುಗಳನ್ನು ಪದ್ಮಗಣದ ಜಾಗದಲ್ಲಿ ಬಳಸುವುದಿಲ್ಲ ಎಂಬ ಭರವಸೆಯೇನು? ಹಾಗೆ ಬಳಸಿದ ಪಕ್ಷಕ್ಕೆ ಮೇಲೆ ನೋಡಿದಂಥ ಹೇಳಿಕೆಗಳು ತಪ್ಪಾಗಿ ಪರಿಣಮಿಸುವುದಿಲ್ಲವೇ?

ಯಾವ ಬಗೆಯ ಪದ್ಮಗಣಗಳು ಇರಲು ಸಾಧ್ಯವಿಲ್ಲವೆಂದು ತೀ.ನಂ.ಶ್ರೀ. ಯವರು ತಿಳಿಸಿದ್ದಾರೆಯೋ ಅದೇ ಬಗೆಯ ಪದ್ಮಗಣಗಳು ಅಲ್ಲಲ್ಲಿ ಕಾಣಸಿಗುತ್ತವೆ. ಈ ನಿದರ್ಶನಗಳನ್ನು ಪರಿಶೀಲಿಸಿ.

ಆ.
ಕೋಟೆಗೋಡೆಗೆ ನಮ್ಮ ಹೆಣಗಳೇ ಮೆಟ್ವಿಲು (-VV)
ನಮ್ಮ ಸಾವೇ ನೋವೆ ಹೊಸನಾಡ ತೊಟ್ವಿಲು (-VV)

ಆದಾವು; ಅಂಜುವೆದೆ ನಮ್ಮದಲ್ಲ
ಸೋಲುಬಗೆ ವೀರನಿಗೆ ಹೊಲ್ಲಸಲ್ಲ.
[ಗೋಪಾಲಕೃಷ್ಣ ಅಡಿಗ-ಕಟ್ಟುವೆವು ನಾವು]

ಆ.
ಗಾಂಧೀಜಿಯ ಭಾವಚಿತ್ರದನಾವರಣದುತ್ಸವ
ನಡೆಯಿತಂತೆ ಈ ಊರೊಳು ಈ ಸುದ್ದಿಯ ಚೋದ್ಯವ (-VV)

[ಜಿ. ಎಸ್. ಶಿವರುದ್ರಪ್ಪ-ಅನಾವರಣ]

ಇ.
ಮಾತುಕತೆ ಮಂದಿಗೆ (-VV)
ಬರಿ ನೆನಪಿನೊಂದಿಗೆ (-VV)
ಋಣ ಹೊತ್ತು ನಿಂತಾಗ
ಋಣ ತೀರಿತೆನಲಾರೆ
ಇರದಿದ್ದರೂ ನನಗೆ ಇರುಳಲ್ಲಿ ಪ್ರತ್ಯಕ್ಷ
ನಿರ್‍ಭಯದ ಧ್ರುವತಾರೆ.
[ನಿಸಾರ್ ಅಹಮದ್-ಆಯ್ದ ಕವಿತೆಗಳು (ಕವನ ‘ತೀನಂಶ್ರೀ’]

ಈ.
ಹೂಹಾರಗಳುರುಳಿದಂತೆ ಮಾತಾಡಿದ ಕೊರಳಿಗೆ (VVVV)
ಗಾಂಧೀಜಿಯ ಪಟ ಸೇರಿತು ಜೇಡನ ಬಲೆ ನೆರಳಿಗೆ (VVVV)
[ಜಿ. ಎಸ್. ಶಿವರುದ್ರಪ್ಪ-ಅನಾವರಣ]

ಮೇಲೆ ಎರಡು ಬಗೆಯ ಪದ್ಮಗಣಗಳಿವೆ. (ಇವುಗಳಲ್ಲಿ ‘ಕಟ್ಟುವೆವು ನಾವು’ ಕವನ ತೀನಂಶ್ರೀ ಯವರು ಈ ಲೇಖನಗಳನ್ನು ಬರೆಯುವ ಮುಂಚೆಯೇ ಪ್ರಕಟವಾಗಿದ್ದ ಕವನ. ಆ ಸಂಕಲನ ಪ್ರಕಟವಾದದ್ದು ೧೯೪೮ರಲ್ಲಿ. ೪ ಮಾತ್ರೆ ಮುಡಿ ಪದ್ಮಗಣ’ ಲೇಖನ ಪ್ರಕಟವಾದದ್ದು ೧೯೫೮ರಲ್ಲಿ.) ಅ, ಆ, ಇ, ಪದ್ಯಭಾಗಗಳಲ್ಲಿರುವ ಪದ್ಮಗಣಗಳು ಮೂರಕ್ಷರಗಳಿಂದ ಕೂಡಿದವು. ತೀನಂಶ್ರೀಯವರ ಪ್ರಕಾರ ಮೂರಕ್ಷರಗಳ ಪದ್ಮಗಣಗಳಲ್ಲಿ ಎರಡೇ ಬಗೆ (V V -ಮತ್ತುV V V) ಇರುವುದು ಸಾಧ್ಯ. (ಆದಿಗುರುವಾದ, ಉಳಿದಂತೆ ಲಘುವಾದ ಮೂರಕ್ಷರಗಳ ಪದ್ಮಗಣ ಇರುವುದು ಸಾಧ್ಯವೇ ಇಲ್ಲ ಎಂದು ಅವರ ನಿಲವು). ಆದರೆ ‘ಅ’ ಮತ್ತು ‘ಆ’ ಗಳಲ್ಲಿರುವ ಪದ್ಮಗಣಗಳು ಅವರ ಹೇಳಿಕೆಗೆ ಹೊರತಾದ -V V ಗಣಗಳು. ಅವು ಉಳಿದ ಪದ್ಮಗಣಗಳಷ್ಟೇ ಸಹಜವಾಗಿವೆ.

VVVV ಎಂಬ ಪದ್ಮಗಣ ಸಹ ಇರುವುದು ಸಾಧ್ಯವಿಲ್ಲ ಎಂದು ತೀನಂಶ್ರೀಯವರ ಹೇಳಿಕೆ. ‘ಈ’ ಪದ್ಯಭಾಗದಲ್ಲಿ ಅಂಥ ಗಣಗಳು ಬಂದಿವೆ. “ಬ್ರಹ್ಮಗಣದಂತೆಯೇ ಅದರಲ್ಲಿ (ಪದ್ಮಗಣದಲ್ಲಿ) ಇಂದಿಗೂ ಕೂಡ ಎರಡೇ ಅಂಶಗಳಿರುತ್ತವೆ” ಎಂಬ ಮಾತಿಗೆ ಮೇಲಿನ ಎರಡೂ ಬಗೆಯ ಪದ್ಮಗಣಗಳು ಹೊರತಾಗಿವೆ.

* * *

‘ಮಾತ್ರೆ ಮುಡಿ ಪದ್ಮಗಣ’ ಲೇಖನದಲ್ಲಿಯೇ ಬಂದಿರುವ ಇನ್ನೊಂದು ಅಂಶವನ್ನೂ ಇಲ್ಲಿ ಪರಿಶೀಲಿಸಬಹುದು. “ಮೂರು ಮಾತ್ರೆಯ ಮತ್ತು ನಾಲ್ಕು ಮಾತ್ರೆಯ ಗಣಗಳ ಮುಂದೆ ಮುಡಿ ಬರುವಂತೆ ಪದ್ಮಗಣ ಬರುವುದೂ ಅಶಕ್ಯವಲ್ಲ” ಎಂದು ತಿಳಿಸಿ ಲೇಖಕರು ಅದಕ್ಕೆ ನಿದರ್ಶನವಾಗಿ ಬೇಂದ್ರೆಯವರ ‘ನಾನು ಬಡವಿ ಆತ ಬಡವ’ ಕವನದ ಒಂದು ನುಡಿಗೆ ಪ್ರಸ್ತಾರ ಹಾಕಿ ತೋರಿಸಿದ್ದಾರೆ. (ಸಮಾಲೋಕನ, ಪುಟ ೨೨೬) ಅದನ್ನು ಕೆಲವರು ಮೂರು ಮಾತ್ರೆಗಳ ಲಯದಲ್ಲಿಯೂ ಇನ್ನು ಕೆಲವರು ಮೂರುನಾಲ್ಕು ಮಾತ್ರೆಗಳ ಲಯದಲ್ಲಿಯೂ ಓದುವುದುಂಟು ಎಂದು ಹೇಳಿ ಎರಡೂ ಬಗೆಯ ಲಯಕ್ರಮಗಳನ್ನು ವಿವರಿಸಿದ್ದಾರೆ. ನಾನು ಇಲ್ಲಿ ಚರ್ಚಿಸಲಿರುವ ವಿಷಯಕ್ಕೆ ಇದರಲ್ಲಿ ಯಾವುದಾದರೂ ಒಂದು ಲಯಕ್ರಮದ ಉದಾಹರಣೆ ಸಾಕಾಗುವುದರಿಂದ ಮೂರು ಮಾತ್ರೆಯ ಲಯದ ಪ್ರಸ್ತಾರ ಕ್ರಮವನ್ನಷ್ಟೇ ಇಲ್ಲಿ ತೆಗೆದುಕೊಳ್ಳುತ್ತೇನೆ. ತೀನಂಶ್ರೀಯವರು ಸೂಚಿಸಿರುವಂತೆ ಆ ಪದ್ಮ ಭಾಗದ ಪ್ರಸ್ತಾರ ಕ್ರಮ ಹೀಗಿದೆ.

ಆತ ಕೊಟ್ಟ ವಸ್ತು ಒಡವೆ ೩೩೩೩
ನನಗೆ ಅವಗೆ ಗೊತ್ತು ೩೩ ಪ
ತೋಳುಗಳಿಗೆ ತೋಳ ಬಂದಿ ೩೩೩೩
ಕೆನ್ನೆ ತುಂಬ ಮುತ್ತು ೩೩ ಪ

ಮೂರು ಮಾತ್ರೆಗಳ ಗಣಗಳಿಂದ ಕೂಡಿರುವ ಈ ಪ್ರಸ್ತಾರದಲ್ಲಿ ಮೂರು ಮಾತ್ರೆಗಳ ಪದ್ಮಗಣವೇ ಬಂದಿದೆ. ಇದು ಸಾಧ್ಯವೇ ಎನ್ನುವುದು ಯೋಚಿಸಬೇಕಾದ ವಿಷಯ. ಪದ್ಮಗಣ ತನ್ನ ಅಕ್ಕಪಕ್ಕದ ಗಣಗಳಿಗಿಂತ ಮಾತ್ರಾ ಪ್ರಮಾಣದಲ್ಲಿ ಚಿಕ್ಕದಾಗಿರುವ ಗಣ. ಕಾಲಮಾನದ ದೃಷ್ಟಿಯಿಂದ ಮಾತ್ರವೇ ಅದು ಆ ಗಣಗಳಿಗೆ ಸಮಾನವಾದದ್ದು; ಐದು ಮಾತ್ರೆಯ ಗಣಗಳಿರುವ ಪದ್ಯದಲ್ಲಿ ಒಂದು ಪದ್ಮಗಣ ಬಂದಿದೆಯೆಂದು ಭಾವಿಸೋಣ. ಅಲ್ಲಿ ಅದು ಮಾತ್ರಾ ಪ್ರಮಾಣದಲ್ಲಿ ಮೂರೋ ಇಲ್ಲವೇ ನಾಲ್ಕೋ ಮಾತ್ರೆಗಳ ಗಣವಾಗಿದ್ದು ಕಡಿಮೆಬಿದ್ದ ಮಾತ್ರೆಗಳನ್ನು ಕೊನೆಯ ಅಕ್ಷರ ಪಲುಕಿನಿಂದಲೋ ಅಥವಾ ಮೌನದಿಂದಲೋ ತುಂಬಿಕೊಂಡು ಪದ್ಯದಲ್ಲಿ (ಐದು ಮಾತ್ರೆಯ) ಇತರ ಗಣಗಳಿಂದ ಭಿನ್ನವಾಗಿದ್ದು, ಪದ್ಮಗಣ ಎಂಬ ಹೊಸ ಹೆಸರಿಗೆ ಪಾತ್ರವಾಗಿರುತ್ತದೆ. ಈ ಲಕ್ಷಣವಿದ್ದಾಗ ಮಾತ್ರವೇ ಅದು ಸಾವಕಾಶವಾದ ಮುಕ್ತಾಯವನ್ನು ತಂದು ಲಯದ ಸಂಬಂಧವಾಗಿ ತನಗಿರುವ ಏಕಮೇವ ಕಾರ್ಯವನ್ನು ಪೂರೈಸುತ್ತದೆ. ಹೀಗಿರುವ ಕಾರಣದಿಂದಲೇ ತೀನಂಶ್ರೀ ಅದನ್ನು ವಿಶೇಷ ಲಕ್ಷಣದ ಗಣ ಎಂದು ಕರೆದಿದ್ದಾರೆ. ಸಾಲೊಂದರ ಕಡೆಯಲ್ಲಿ ಬರುವ ಪದ್ಮಗಣ ಮಾತ್ರಾಪ್ರಮಾಣದಲ್ಲಿ ಇತರ ಗಣಗಳಿಗೆ ಸಮಾನವಾಗಿದ್ದರೆ ಅದು ಮುಂದಿನ ಚರಣದ ಆಕಾಂಕ್ಷೆಯನ್ನು ತರುತ್ತದೆಯೇ ಹೊರತು ಮುಕ್ತಾಯದ ಭಾವನೆಯನ್ನು ತರುವುದಿಲ್ಲ. ಆಗ ಅದನ್ನು ಪದ್ಮಗಣವೆಂದು ಕರೆಯಲು ಯಾವ ಕಾರಣವೂ ಇರುವುದಿಲ್ಲ. ಉಳಿದ ಗಣಗಳಂತೆಯೇ ಅದು ಸಮಾನ ಮಾತ್ರಾಪ್ರಮಾಣದ ಒಂದು ಗಣವಾಗುತ್ತದೆ.

ಹೀಗೆ ನೋಡಿದಾಗ ಮೂರು ಮಾತ್ರೆಗಳ ಗಣಗಳಿರುವ ಪದ್ಯದಲ್ಲಿ ಮೂರು ಮಾತ್ರೆಗಳ ಒಂದು ಪದ್ಮಗಣವೇ ಇದೆಯೆಂಬ ವಿಚಾರ ಸಾಧುವಾಗಿ ಕಾಣುವುದಿಲ್ಲ (ಪದ್ಮಗಣ ಮೂರು ಮಾತ್ರೆಗಳಿಗಿಂತ ಕಡಿಮೆ ಇರುವುದು ಸಾಧ್ಯವಿಲ್ಲ) ಆದರೆ ಒಂದು ವಿಚಿತ್ರ. ಮೇಲಿನ ಸಾಲುಗಳನ್ನು ಓದಿಕೊಂಡಾಗ ಕಡೆಯ ಗಣ ಪದ್ಮಗಣದಂತೆ ಕೆಲಸ ಮಾಡುತ್ತಿರುವುದು ಕಿವಿಗೆ ತಿಳಿಯುತ್ತದೆ! ಇನ್ನೂ ಒಂದು ವಿಷಯ. ಕೆಲವರು ‘ಗೊತ್ತು’ ‘ಮುತ್ತು’ ಎಂಬ ಪದ್ಮಗಣಗಳನ್ನು ‘ಗೊಽತ್ತು’ ‘ಮುಽತ್ತು’ (೩+ಮುಡಿ) ಎಂದು ಓದುವುದನ್ನು ತೀನಂಶ್ರೀ ತಿಳಿಸುತ್ತಾರೆ. (ಇನ್ನು ಕೆಲವರು ಗೊತ್ತು ಮುತ್ತುಗಳಲ್ಲಿನ ‘ತ್ತು’ ವನ್ನು ಎಳೆದು ಗುರು ಮಾಡಿ ಹೇಳುವುದೂ ಉಂಟು). ಹಾಗೆ ಮಾಡಿದಾಗಲಂತೂ ಅದು ನಾಲ್ಕು ಮಾತ್ರೆಗಳಷ್ಟು ಕಾಲಕ್ಕೆ ಹರಡಿಕೊಳ್ಳುತ್ತದೆ. ಪದ್ಮಗಣದಂತೆ ವರ್ತಿಸುವ ಈ ಗಣ ಉಳಿದ ಗಣಗಳಿಗಿಂತ ಮಾತ್ರಾ ಪ್ರಮಾಣದಲ್ಲಿ ಚಿಕ್ಕದಾಗುವ ಬದಲು ದೊಡ್ದದಾದದ್ದು ಹೇಗೆ? ಇದಕ್ಕಿರುವ ಉತ್ತರ ಒಂದೇ. ವಾಸ್ತವವಾಗಿ ‘ನಾನು ಬಡವಿ’ ಪದ್ಯ ಅರು ಮಾತ್ರೆಯ ಲಯದ ಪದ್ಯ. ಕವಿ ಅದನ್ನು ಅಚ್ಚಿಟ್ಟಿರುವ ರೀತಿಯಲ್ಲೇ ತೀನಂಶ್ರೀ ಪದ್ಯದ ಭಾಗವನ್ನು ಮೊದಲು ಉದ್ದರಿಸಿದ್ಧಾರೆ. ಅದರಲ್ಲಿ ಮೇಲಿನ ಮಾತಿಗೆ ಸೂಚನೆಯಿದೆ. ‘ನನಗೆ ಅವಗೆ’ ‘ಕೆನ್ನೆ ತುಂಬ’ ಎಂಬ ಆರು ಮಾತ್ರೆಗಳ ಮಾತುಗಳಾದ ಮೇಲೆ ಕವಿ ಒಂದು ಲಂಬರೇಖೆ ಹಾಕಿದ್ದಾರೆ. ಪದ್ಯದ ನಡಿಗೆ ಆರು ಮಾತ್ರೆಯದೆಂದು ಕವಿಯೂ ಅಭಿಪ್ರಾಯ ಪಟ್ಟಿರುವುದಕ್ಕೆ ಅದು ಒಂದು ಗುರುತು. ಚಿಕ್ಕ ಚಿಕ್ಕ ಪದಗಳಿಂದ ಕೂಡಿರುವ ಇಲ್ಲಿನ ಪದ ಜೋಡಣೆಯಲ್ಲಿ ಆರು ಮಾತ್ರೆಯ ಗಣವು ಹಲವು ಕಡೆ ಮೂರು ಮಾತ್ರೆಗಳ ಎರಡು ಪದಗಳಿಂದ ಕೂಡಿದ್ದು ಅದು ಮೂರು ಮಾತ್ರೆಯ ಗಣದ ನಡಿಗೆಯೆಂಬ ಭಾವನೆ ಬರಲು ಕಾರಣವಾಗಿದೆ ಅಷ್ಟೆ. ಯಾವ ತೊಂದರೆಯೂ ಇಲ್ಲದೆ ಅದನ್ನು ಆರು ಮಾತ್ರೆಯ ಗಣಗಳಾಗಿ ಓದಿಕೊಳ್ಳಬಹುದು. ಹಾಗೆ ಮಾಡಿದಾಗ ಪದ್ಮಗಣದ ಸಮಸ್ಯೆ ಪರಿಹಾರವಾಗುತ್ತದೆ. ಆರು ಮಾತ್ರೆಗಳ ಎರಡು ಗಣಗಳು ಪ್ರತಿಪಾದದಲ್ಲಿ ಬರುವುದು ಈ ಪದ್ಯದ ನಡಿಗೆಯ ರೀತಿ. ಮುಕ್ತಾಯದ ಭಾವ ತರುವ ಸಮಸಂಖ್ಯೆಯ ಸಾಲುಗಳಲ್ಲಿ ಮಾತ್ರ ಆರು ಮಾತ್ರೆಯ ಎರಡನೆಯ ಗಣದ ಭಾಗದಲ್ಲಿ ಮೂರು ಮಾತ್ರೆಯ (ಅಥವಾ ಕೆಲವರ ಓದಿನಂತೆ ನಾಲ್ಕು ಮಾತ್ರೆಗಳ) ಪದ್ಮಗಣ ಬಂದಿದೆ. ಮಾತ್ರಾಪ್ರಮಾಣದಲ್ಲಿ ಇದು ಇತರ (ಆರು ಮಾತ್ರೆಗಳ) ಗಣಗಳಿಗಿಂತ ಚಿಕ್ಕದಾಗಿದ್ದು ಕಾಲಮಾನದ ದೃಷ್ಟಿಯಿಂದ ಅವುಗಳಿಗೆ ಸಮನಾಗಿದೆ. ಹೀಗೆ ತೆಗೆದುಕೊಂಡಾಗ ಈ ಗಣ ಪದ್ಮಗಣದ ಎಲ್ಲ ಲಕ್ಷಣಗಳನ್ನೂ ಪಾಲಿಸುವ ಗಣವಾಗಿ ತೋರುತ್ತದೆ. ಕೆಳಗೆ ಆ ಕ್ರಮದಲ್ಲಿಯೇ ಒಂದು
ನುಡಿಗೆ ಪ್ರಸ್ತಾರ ಹಾಕಿದೆ.

ನಾನು ಬಡವಿ ಆತ ಬಡವ ೬+೬
ಒಲವೆ ನಮ್ಮ ಬದುಕು ೬+ ಪ
ಬಳಸಿ ಕೊಂಡೆ ವದನೆ ನಾವು ೬+೬
ಅದಕು ಇದಕು ಎದಕು ೬+ಪ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಸುಗೆ
Next post ತಳಿರು-ತೋರಣ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

cheap jordans|wholesale air max|wholesale jordans|wholesale jewelry|wholesale jerseys