ಎಷ್ಟೋ ವರ್ಷಗಳಿಂದ
ಧ್ಯಾನದೊಳಗೆ
ಲೀನವಾದಂತಿತ್ತು ಬೆಟ್ಟ.

ನಾನು ಕುತೂಹಲದಿಂದ
ಹತ್ತಿಹೋದೆ, ತುತ್ತ-
ತುದಿಗೇರಿದಾಗ ಮೈ-ಮನ
ಹಗುರಾದಂತೆ ಅನಿಸಿತು;

ನೋವುಗಳು ತಂತಾನೆ
ಕಳಚಿಕೊಂಡವು
ದುಃಖ ಹೆಬ್ಬಂಡೆಯಾಗಿ
ಉರುಳಿಹೋಯಿತು.

ಉಲ್ಲಾಸದ ನಗೆ ನಕ್ಕು
ಹೂವು-ಹುಲ್ಲು ಪೊದೆಗಳಿಗೆ
ಕೂಗಿ ಹೇಳಿದೆ-
ನನಗೀಗ ಬದುಕುವ
ಮನಸ್ಸಾಗಿದೆ.

ಬೆಟ್ಟ ಪಿಸುಗುಟ್ಟಿತು
ನನಗೀಗ ಜ್ಞಾನೋದಯವಾಗಿದೆ.
*****