ತಿರುಗಿದೆನು ಕರುನಾಡ ವರೆಯಿಡುತ ಪೂರವಕೆ
ಉರುಭಯಂಕರವಾಯ್ತು ನಡುಗಿತೆದೆಯುಡುಗಿ ಬಲ
ಪಡುವಲಿನ ಹೊಡೆತದಲಿ
ವಡಲೊಡೆದು ಬೇರೆನಿಸಿ
|| ಸಡಲಿರಲು ಪ್ರೇಮಬಂಧ ||

ಮರುಗಿದೆನು ಹಂಪೆಯಲಿ ಸೊರಗಿದೆನು ಸುಯಿಲಿಡುತ
ಅರಿಯಿರಿದ ರೂಪಗಳ ತಡವರಿಸಿ ತಬ್ಬಿದೆನು
ಮೃಡನಲ್ಲಿ ಬೇಡಿದೆನು
ಬಿಡುಯೆಂದು ಹಣೆಗಣ್ಣ
|| ಸುಡುಯೆಂದು ಸತ್ಯ ಕುರುಹ ||

ತಾಳಿದಾವೇಶಗಳು ಬಾಳದೆಯೆ ಅಳಿದಿಹುವು
ಬೀಳದಲೆ ತರ್ಪಣದ ಜಲ ಮೊಳೆಯುವುವೆ ಬೀಜ!
ಮೂಜಗದ ಭಂಡಾರ
ಸೋಜಿಗದ ಕರುನಾಡು
|| ಈ ಜಗದ ಚಿತ್ರ ಭಿತ್ತಿ ||

ಚಾಳೀಸೆ ಕಂಗಳಲಿ ಕಾಣಿಸವೆ ! ಕರುಹುಗಳು
ಸಾಲದೀವಿಗೆಯಿಟ್ಟು ತೋರಣವ ಸಿಂಗರಿಸಿ
ಸೋಗೆಗಂಗಳ ಭಾಗ್ಯ
ಬಾಗಿ ಬಳುಕುತ ಬಹಳು
|| ಈಗಲಿದೊ ಹರಕೆ ಫಲಿಸಿ ||

ಎಣಿಸುತಿದೆ ಹೆಜ್ಜೆಗಳ ಮಹಿಷರ ಶಿರವನ್ನು
ಚಿಣಿಚಿಣನೆ ಚಿಗಿದೋಡೆ ಧಾರ್ವಾಡ ಹೃದಯವದು
ಉರ್ವಿಯನು ಮೆಟ್ಟುವೆನು
ಓರ್ವನೆನೆ ದಕ್ಖಿಣನು
|| ಮರ್ಮದಲಿನಾಡು ಕರೆಯೆ ||

ಸೆಣಸಲೆನೆ ಭಾರತಿಗೆ ಕರ್ಣಾಟ ಖಡ್ಗವಿದೆ
ಹಣೆಗಿಡಲು ತಿಲಕಕ್ಕೆ ಕರುನಾಡ ಕತ್ತುರಿಯು
ತನ್ನಿರವ ನೋಡಲಿಕೆ ಕನ್ನಡದ ಕನ್ನ ಡಿಯು
|| ಇನ್ನುಂಟೆ ತಾಯ್ಗೆ ಕೊರತೆ ||

ಶರಧಿಗಳ ಸಂತವಿಸಿ ಹರಿದ ಕಾವ್ಯಗಳೆಲ್ಲಿ
ಚಿರದಿನಕೆ ಬೆಳಕೀವ ಲಾವಣ್ಯ ರೂಹೆಲ್ಲಿ
ಯಾವಲ್ಲಿ ಅಡಗಿಹವು
ಯಾವಗಿರಿ ಗುಹೆಯಲ್ಲಿ
|| ಭಾವನೆಗೆ ನಿಲುಕದಂತೆ ||

ಕರುನಾಡ ನಡುವಲಿದೆ, ಹೇಮಗಿರಿ ಅಡರದನು
ಹಿರಿಯರೆಮಗಿಟ್ಟಿರುವ ಭಂಡಾರ ನಿಲುಕುವುದು
ಕಂಡವನು ಕೆಳಗಿಳಿದು
ಮಂಡಲಕೆ ಬಿತ್ತಿದರೆ.
|| ಮಂಡಿಗೆಯ ಭೂಮ ಮಹಿಗೆ ||

ಪಾಳೆಯಗಳಲ್ಲಲ್ಲಿ ಅಲೆಯಿಟ್ಟ ನಾಡಲ್ಲಿ
ಏಳಿಗೆಯ ಕಂಪಿಲ್ಲ ಬೆಳವಿಗೆಯ ಸೊಂಪಿಲ್ಲ
ತಿಳಿವಿನಾ ಶಾಂತಿಯಲಿ
ಕೊಳೆಯುವುದು ದಿವ್ಯಛವಿ
|| ಇಳೆಯೆಲ್ಲ ಮೇಳೈಸಲು ||

ಏಳಿರೇಳೇಳಿರಿ ಬೇಲೂರ ಪುತ್ಥಳಿಯ
ಪೌಳಿಯನು ಹಂಪೆಯಲಿ, ತೊಳೆದಿಟ್ಟು ಎಲ್ಲೋರ
ತಿದ್ದಿಟ್ಟು ತಿಳಿರಂಗ
ಹೊತ್ತಿಟ್ಟು ಗೋದೆಯಲಿ
|| ಸುತ್ತಿಸುವ ತೆಪ್ಪೋತ್ಸವ ||

ಕೊಂಕಣರ ಶ್ರೀಧಾಟಿ ಪಡುವಣರ ಪದ ಸರಣಿ
ತೆಂಕಣರ ನಯನೀತಿ ನಡುವಣರ ಜೀವಕಳೆ
ಬೆಳೆಯಲಿದು ಕರುನಾಡು
ಬೆಳೆಸಿಡುವ ಗುಟ್ಟಿದುವೆ
|| ತಿಳಿದವರು ಕಂಡತೆರನು ||

ಬಹುದಿನದ ಕಾಂತಿಯಿದೆ ಶ್ರೀ ಕೃಷ್ಣ ರೂಪದಲಿ
ವಹಿಸಿರಿದ ಹೃದಯದಲಿ ಬೆಳೆವಹಿಯ ಸಜ್ಜೆಯಲಿ
ಬಾಳುವಿರಿ ಬಲು ದಿನದ
ಏಳಿಗೆಯ ಸೊಡರುರಿದು
|| ಕೇಳಿರಿದು ಬೆಳೆವ ಗುಟ್ಟು ||

ಮುಂದಿನಾ ಮಧು ಯುಗವು ಮೊಗ್ಗಿನೊಳಗಡಗಿಹುದು
ಮುಂದದನು ಆಳುವರು ನಿಮ್ಮೊಳಗೆ ಜನಿಸುವರು
ಬೊಮ್ಮ ವರ್ತನೆಯಲ್ಲಿ
ಮುಮ್ಮೊದಲು ಬೆಳೆದಿಹರು
|| ನಿಮ್ಮವರು ಹಿರಿಯರೆಲ್ಲ ||

ಒಂದಾಗಿರೊಂದಾಗಿ ಕಂಕಣದ ಬಂಧದಲಿ
ಒಂದಾಗಿ ಮುಂದಿರುತ ವಿಶ್ವಕರ್ಣಾಟಕ
ವಿಶ್ವಾಸದಾರತಿಯ
ವಿಶ್ವಕೆನಲೆತ್ತಲಿದು
||ಶ್ರೀ ವಿಶ್ವಕರ್ಣಾಟಕ ||
*****