ಅನಿಸುತ್ತದೆ ನನ್ನ ಕಥಾನಾಕನನ್ನು ಹೀಗೆ
ಒಂಟಿಯಾಗಿ ಬಿಡಬಾರದಾಗಿತ್ತು ಎಂದು. ಆದರೆ
ಬಿಟ್ಟಿದ್ದನೆಲ್ಲಿ ಇವುನು ನನ್ನನ್ನು ವರ್ಷಗಟ್ಟಲೆ
ಸದಾ ತಲೆಯೊಳಗೆ ಹೊಕ್ಕು ಊಟ ನಿದ್ದೆಗೆ ಬಿಡದೆ
ಮಳೆಗೆ ಸೋರುವ ಬಿಸಿಲಿಗೆ ಸುಡುವ ಬಾಡಿಗೆಮನೆಯಲ್ಲೂ
ಮಂಚದ ಮೇಲೆ ಅಥವ ಧೂಳು ತುಂಬಿದ ಮೇಜಿನಮೇಲೆ
ಎಲ್ಲೆಂದರಲ್ಲಿ ಕಾಗದದ ಚೂರುಗಳಲ್ಲಿ ಅರ್ಧಂಬರ್ಧ
ಇಳಿಸಿಕೊಂಡು ಹೊಡೆದು ಹಾಕಿಸಿಕೊಂಡು ಹೇಗು ಹೇಗೋ
ಮೈಗೂಡಿಸಿಕೊಂಡು ಕ್ರಮೇಣ ತನ್ನ ಸ್ವರ್ಗದ ಆನ್ವೇಷಣೆಯಲ್ಲಿ
ಹೊರಟುಹೋದವನು ಮರಳಿ ಕೈಗೆಟಕುವುದಿಲ್ಲ.
ಅನಿಸುತ್ತದೆ ಹಾಗೆ ಬರೆಯಬಾರದಾಗಿತ್ತು ಬೇರೆ ರೀತಿ
ಹೇಳಬಹುದಾಗಿತ್ತು ಎಂದು. ಅನಿಸುವ ಹೊತ್ತಿಗಾಗಲೆ
ಕೈಮೀರಿ ಹೋಗಿತ್ತು. ಹಾಗಾಗುತ್ತದಲ್ಲವೇ ಒಮ್ಮೊಮ್ಮೆ?
ಇಲ್ಲದಿದ್ದರೆಲ್ಲಿಯ ಮಹಾಭಾರತ ಯುದ್ಧ?
ಎಲ್ಲಿಯ ಮಹಾಪ್ರಸ್ಥಾನ?
*****