ಭ್ರಮಣ – ೧೪

ಭ್ರಮಣ – ೧೪

ವೇಗವಾಗಿ ಬಂದ ಜೀಪು ಪೋಲೀಸ್ ಸ್ಟೇಷನ್‌ನೆದುರು ನಿಂತಿತು. ಅವರು ಬರುತ್ತಿದ್ದಂತೆ ಕುರ್ಚಿಯಲ್ಲಿ ಕುಳಿತ ಎಸ್.ಐ. ಶಿಸ್ತಿನಿಂದ ಎದ್ದು ನಿಂತ. ಸುತ್ತೂ ನೋಡುತ್ತಾ ಕೇಳಿದ ತೇಜಾ

“ಏನೂ ಕೆಲಸವಿಲ್ಲ! ಈ ಪೋಲಿಸ್ ಸ್ಟೇಷನ್ ಮುಚ್ಚಿಬಿಟ್ಟರೆ ಒಳ್ಳೆಯದೇನೋ… ನಾನು ಗುಂಡು ತಾತನ ಮನೆಯಲ್ಲಿ ಅಥವಾ ನನ್ನ ಮನೆಯಲ್ಲಿ ನಮ್ಮ ಸಂಘದವರೊಡನೆ ಹರಟೆ ಹೊಡೆಯುತ್ತಿರುತ್ತೇನೆ. ಏನಾದರೂ ಕೆಲಸವಿದ್ದರೆ ಅಲ್ಲಿ ಹೇಳಿಕಳಿಸಿ” ಬಹು ಬೇಸರದ ದನಿಯಲ್ಲಿ ಹೇಳಿದ ತೇಜ. ಮತ್ತೆ ಹೊರಗಡಿ ಇಡಲು ಹೋಗುತ್ತಿದ್ದಾಗ ಏನೋ ಹೇಳಲು ಆಳಕುತ್ತಿರುವಂತೆ ಕಂಡ ಎಸ್.ಐ. ಅವನ ಕಡೆ ತಿರುಗಿ ಕೇಳಿದ ತೇಜಾ

“ಏನಾದರೂ ಬೇಕಾಗಿತ್ತೆ?”

“ಕೆಲಸವಿಲ್ಲ ಸರ್ ನಾವು ಹೋಗಬಹುದೇ” ಎಸ್.ಐ.ನ ಪರವಾಗಿಯೂ ಎಚ್.ಸಿ.ಯೇ ಮಾತಾಡಿದ್ದ. ಕೈಗಡಿಯಾರ ನೋಡಿಕೊಂಡ ತೇಜ, ಆರಾಗಲು ಇನ್ನೂ ಹತ್ತು ನಿಮಿಷವಿತ್ತು. ಉದಾಸೀನ ದನಿಯಲ್ಲಿ ಹೇಳಿದ.

“ಹೋಗಿ! ಹೇಗೂ ನಾನು ಇವತ್ತು ರಾತ್ರಿಯೆಲ್ಲಾ ಇಲ್ಲೇ ಇರುತ್ತೇನೆ” ಎನ್ನುತ್ತಾ ಹೊರಗಡಿ ಇಟ್ಟ. ಯಾರ ಮುಖದಲ್ಲಿ ಎಂತಹ ಬದಲಾವಣೆಯಾಗಿದೆ ಎಂಬುವುದು ನೋಡಲು ಹೋಗಲಿಲ್ಲ. ತೇಜಾ, ಅವನ ಮೊದಲಿನ ಗುರಿ ತಾನಿವತ್ತು ರಾತ್ರಿ ಬಂಡೇರಹಳ್ಳಿಯ ಮನೆಯಲ್ಲೇ ಇರುತ್ತೇನೆಂಬುವುದು ಸಿದ್ದಾನಾಯಕ್‌ನಿಗೆ ಗೊತ್ತಾಗಬೇಕು.

ಮುಖ್ಯರಸ್ತೆಯಲ್ಲಿ ಯಾರೊಡನೆಯೋ ಹರಟುತ್ತಾ ನಿಂತ ಗುಂಡು ತಾತ ಅವನನ್ನು ನೋಡುತ್ತಲೇ ಮುಗುಳ್ನಗೆ ನಗುತ್ತಾ ಹತ್ತಿರ ಬಂದ. ಸಂಜೆಯ ಸಮಯವಾದುದರಿಂದ ರಸ್ತೆಯಲ್ಲಿ ಅತ್ತ ಇತ್ತ ಸಾಕಷ್ಟು ಜನ ನಡೆದಾಡುತ್ತಿದ್ದರು.

“ಇಲ್ಲೇನು ಮಾಡುತ್ತಿದ್ದೀರಿ ಮನೆಯಲ್ಲಿ ಕೂತೂ ಮಾತಾಡುವ ಬನ್ನಿ” ಹಗುರ ದನಿಯಲ್ಲಿ ಹೇಳಿದ ತೇಜಾ.

“ಯಾರ ಮನೆಯಲ್ಲಿ?” ಕೇಳಿದ ತಾತ.

“ನನ್ನ ಮನೆಯಲ್ಲೇ, ಅಲ್ಲಾದರೆ ಯಾವ ಗದ್ದಲವೂ ಇರುವುದಿಲ್ಲ” ಹೇಳಿದ ತೇಜಾ.

“ಅದನ್ನು ಮೊದಲು ಸ್ವಚ್ಛ ಮಾಡಿಸಬೇಕು. ಎಷ್ಟೋ ದಿನಗಳಿಂದ ಯಾರೂ ಅತ್ತ ಹಾದೇ ಇಲ್ಲ” ಹೇಳಿದ ತಾತ.

“ಯಾರೊಡನಾದರು ಆಳಿಗೆ ಹೇಳಿ ಕಳುಹಿಸು. ಇವತ್ತು ರಾತ್ರಿ ನಾನಿಲ್ಲೆ ಇರುತ್ತೇನೆ”

ತೇಜಾನ ಮಾತು ಮುಗಿಯುತ್ತಿದ್ದಂತೆ ಯಾರನ್ನೊ ಕೂಗಿ ಕರೆದ ಆತ ಆಳಿಗೆ ಬೇಗ ಒಂದು ಮನೆ ಸ್ವಚ್ಛಗೊಳಿಸುವಂತೆ, ಅಡಿಗೆ ಮಾಡುವಂತೆ, ಇವತ್ತು ರಾತ್ರಿ ಸಾಹೇಬರು ಇಲ್ಲೇ ಇರುತ್ತಾರೆಂದು ಹೇಳಿ ಕಳುಹಿಸಿದ. ಮಾತು ಮುಗಿಯುತ್ತಿದ್ದಂತೆ ಅವನೆದುರು ನಿಂತಿದ್ದ ಹದಿನಾರು ವರ್ಷದ ಹುಡುಗ ಓಡಿದ.

ಇಬ್ಬರು ನಿಧಾನವಾಗಿ ತೇಜಾನ ಮನೆಯ ಕಡೆ ನಡೆಯತೊಡಗಿದರು. ಸ್ವಲ್ಪ ದೂರ ಹೋದ ಮೇಲೆ ಮೌನವನ್ನು ಸಹಿಸಲಾರದೇ ಕೇಳಿದ ತಾತ.

“ಯಾಕೆ ಇವತ್ತು ಇಲ್ಲೇನಾದರೂ ವಿಶೇಷವಿದೆಯೇ?”

ಚಿಕ್ಕ ಓಣಿಯಲ್ಲಿ ಅವರು ನಡೆಯುತ್ತಿದ್ದರು ಸುತ್ತೂ ನೋಡಿ ಮೆಲ್ಲನೆ ಹೇಳಿದ ತೇಜ

“ನಮ್ಮ ಗುಂಪಿನಲ್ಲಿನ ಮೂವರು ನಂಬಿಕಸ್ಥರು, ಧೈರ್ಯವಂತರು, ಮಾತು ಕಡಿಮೆ ಆಡುವಂತಹವರನ್ನು ಕರೆದುಕೊಂಡು ಬಾ”

ಒಂದೂ ಅರ್ಥವಾಗದಂತೆ ತೇಜಾನ ಮುಖ ನೋಡಿದ ತಾತ.

“ಅಂತಹ ಯುವಕರು ನಮ್ಮ ಗುಂಪಿನಲ್ಲಿಲ್ಲವೇ?” ಅವನ ನೋಟ ಗಮನಿಸಿದವನಂತೆ ಕೇಳಿದ ತೇಜಾ.

“ಇದ್ದಾರೆ, ಮೂವರಲ್ಲ ಹತ್ತು ಜನ ಇದ್ದಾರೆ. ಆದರೆ ಯಾಕೆ?” ಅಚ್ಚರಿಯ ದನಿಯಲ್ಲಿ ಕೇಳಿದ ತಾತ. ಅವರಾಗಲೇ ನಡೆಯುತ್ತಾ ತೇಜಾನ ಮನೆಯ ಹತ್ತಿರ ಬಂದಿದ್ದರು. ಬೇರೆಯ ಸಂದಿನಿಂದ ಬಂದ ಮನೆಯ ಆಳು ಬೀಗ ತೆಗೆಯುತ್ತಿದ್ದಳು.

“ಮೊದಲು ನಾವು ಕೂಡುವ ಕೋಣೆ ಸ್ವಚ್ಛ ಮಾಡೆಂದು ಹೇಳು” ಹೇಳಿದ ತೇಜಾ. ಅದನ್ನೇ ಅವನು ಕೂಗಿ ಆಳಿಗೆ ಹೇಳಿದ.

“ಅದೆಲ್ಲಾ ಆಮೇಲೆ ಹೇಳುತ್ತೀನಿ. ನನಗೆ ಮೂವರು ನಾ ಹೇಳಿದಂತಹ ಗುಣವುಳ್ಳ ಯುವಕರು ಬೇಕಷ್ಟೆ, ಹೆಚ್ಚು ಜನರ ಗದ್ದಲ ಬೇಡ, ನಾನಿಲ್ಲಿರುವುದು ತಿಳಿದು ಎಲ್ಲರೂ ಬಂದಾರು ಅದೂ ಆಗಬಾರದು. ನಿನ್ನ ಬುದ್ಧಿ ಉಪಯೋಗಿಸಿ ನಾ ಹೇಳಿದ ಹಾಗೆ ಮಾಡು ಹೇಳಿದ ತೇಜಾ.

ಅವನ ಮಾತು ಮುಗಿಯುತ್ತಿದ್ದಂತೆ ಗುಂಡುತಾತ ಹೋಗಲು ಒಂದು ಹೆಜ್ಜೆ ಮುಂದಿಟ್ಟಾಗ ಅವನ ರಟ್ಟೆ ಹಿಡಿದು ಹೇಳಿದ ತೇಜಾ.

“ಈಗಲೇ ಅಲ್ಲ. ನಾವಿಬ್ಬರು ಐದು ನಿಮಿಷ ಮನೆಯಲ್ಲಿ ಕುಳಿತ ಮೇಲೆ ಹೋಗು. ನಿನಗಿನ್ನೊಂದು ವಿಷಯ ಹೇಳಬೇಕು”

ಅವರಿಬ್ಬರೂ ಮನೆಯೊಳಬಂದಾಗ ರಭಸವಾಗಿ ಕಸಗುಡಿಸುತ್ತಿರುವ, ಧೂಳು ಜಾಡಿಸುತ್ತಿರುವ ಸದ್ದು ಕೇಳಿಸುತ್ತಿತ್ತು. ತಾತನಲ್ಲಿ ಕೌತುಕ ಬೆಳೆಯುತ್ತಿತ್ತು. ಒಂದು ಕೋಣೆಯ ಕೆಲಸ ಮುಗಿಸಿದ ಮೇಲೆ ಹೊರಬಂದ ಆಳು ಆ ಕೋಣೆ ಸ್ವಚ್ಛಗೊಂಡಿದೆ ಎಂದು ಹೇಳಿದಳು. ಇಬ್ಬರೂ ಒಂದು ಕುರ್ಚಿಗಳಲ್ಲಿ ಕುಳಿತ ಮೇಲೆ ಮಾತಾಡಿದ ತೇಜಾ.

“ನೀನು ನಡುವೆ ಪ್ರಶ್ನೆಗಳನ್ನು ಕೆಳದಂತೆ ನಾ ಹೇಳಿದ ಹಾಗೆ ಮಾಡು. ಆಮೇಲೆ ಅದ್ಯಾಕೆಂಬುವುದು ನಿನಗೇ ಗೊತ್ತಾಗುತ್ತದೆ. ಮೊದಲು ನಾಯಕನಿಗೆ ನಾನೀ ರಾತ್ರಿ ಇಲ್ಲೇ ಇರುತ್ತೇನೆಂಬುವುದು ತಿಳಿಯಬೇಕು. ಅದು ನಾ ಹೇಳಿಸಿದಂತಿರಬಾರದು. ನೀನು ಸರಾಯಿಖಾನೆಗೆ ಹೋಗುತ್ತಿಯಾ?”

“ಅಪರೂಪಕ್ಕೆ… ಮನೆಗೆ ತರಿಸಿ ಕುಡಿಯುತ್ತೇನೆ” ತನ್ನ ಅಭ್ಯಾಸವನ್ನು ಒಪ್ಪಿಕೊಂಡ ತಾತ.

“ನಿನ್ನ ಬಳಿ ಕೆಂಪು ರುಮಾಲು ಇದೆಯೇ?”

ಈ ಪ್ರಶ್ನೆಗಳು ಅರ್ಥವಿಲ್ಲದಂತೆ ಎನಿಸಿದವು ತಾತನಿಗೆ, ಆದರೂ ತಲೆಹರಟೆ ಮಾಡದೇ ಹೇಳಿದ

“ನಾನು ಹೆಚ್ಚು ಸುತ್ತುವುದು ಅದನ್ನೇ?”

ಅವನ ಮಾತು ಮುಗಿಯುತ್ತಲೇ ಮಾತಾಡಿದ ತೇಜಾ.

“ನಾ ಹೇಳಿದಂತಹ ಮೂವರು ಹುಡುಗರನ್ನು ಇಲ್ಲಿಗೆ ಕಳಿಸಿ ಕೆಂಪುರುಮಾಲು ಸುತ್ತಿ ಸರಾಯಿಖಾನೆ ಎದುರು ನಿಲ್ಲು, ಜನರ ಗದ್ದಲದಿಂದ ದೂರ ನಿಲ್ಲಬೇಕು. ಒಬ್ಬ ನಿನ್ನ ಬಳಿ ಬಂದು ನಿನಗೆ ಮಾತ್ರ ಕೇಳಿಸುವಂತೆ ‘ತೇಜಾ’ ಎನ್ನುತ್ತಾನೆ. ಅದನ್ನು ಕೇಳಿದ ಕೂಡಲೇ ‘ನಮಸ್ಕಾರ’ ಅನ್ನು, ಅದಾದ ಮೇಲೆ ನೀನು ಅವನ ಹಳೆಯ ಸ್ನೇಹಿತನಂತೆ ಮಾತಾಡುತ್ತಾ ಇಲ್ಲಿಗೆ ಕರೆದುಕೊಂಡು ಬಾ. ಆದಷ್ಟು ನೀವಿಬ್ಬರೂ ಇಲ್ಲಿ ಬರುತ್ತಿರುವುದು ಯಾರೂ ನೋಡದಿದ್ದರೆ ಒಳ್ಳೆಯದು. ಅರ್ಥವಾಯಿತೆ”

ಈ ಮಾತುಗಳೆಲ್ಲಾ ಗೊಂದಲಮಯವಾಗಿ ಕಂಡವು ತಾತನಿಗೆ ಮನದಲ್ಲಿ ಎಷ್ಟೋ ಪ್ರಶ್ನೆಗಳು ಏಳುತ್ತಿದ್ದವು. ಬಹು ಕಷ್ಟಪಟ್ಟು ಅವನ್ನು ಕಡೆಗಣಿಸಿ ಹೇಳಿದ

“ಅರ್ಥವಾಯಿತು”

ಅವನ ಮುಖಭಾವವನ್ನೇ ಗಮನಿಸುತ್ತಿದ್ದ ತೇಜಾ ಅವನು ಮಾಡಬೇಕಾದ ಕೆಲಸವನ್ನು ಇನ್ನೊಮ್ಮೆ ವಿವರಿಸಿದ. ಅದೆಲ್ಲಾ ಮತ್ತೆ ಕೇಳಿದ ಮೇಲೆ ನಾಯಕ ಯಾವುದಾದರೂ ಸಂಚು ಹೂಡಿತ್ತಿರಬಹುದೆನಿಸಿತು ತಾತನಿಗೆ.

ಅವನು ಹೋದಮೇಲೆ ಗಂಗವ್ವನಿಗೆ ಒಂದು ಲೋಟಾ ಕಾಫಿ ಮಾಡಿ ಕೊಡುವಂತೆ ಹೇಳಿ ಯೋಚನೆಯಲ್ಲಿ ತೊಡಗಿದ. ಇವರುಗಳೊಡನೆ ಮಾತು ಮುಗಿಸಿದ ಕೂಡಲೇ ಪೋಲಿಸ್ ಸ್ಟೇಷನ್‌ಗೆ ಹೋಗಿ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವರೊಡನೆ ಮಾತಾಡಬೇಕು. ಅದರ ಅವಶ್ಯಕತೆ ಯಾಕೆಂದರೆ ಇದರಲ್ಲಿ ಸಿದ್ಧಾನಾಯಕನೂ ಸೇರಿಕೊಂಡಿದ್ದಾನೆ.

ಯೋಚಿಸಿದ್ದನ್ನೇ ಮತ್ತೆ ಯೋಚಿಸಿ ಬೇಸರವಾದ ತೇಜಾ ರಿವಾಲ್ವರನ್ನು ತೆಗೆದು ಅದರಲ್ಲಿ ಇರುವ ಗುಂಡುಗಳನ್ನು ಪರೀಕ್ಷಿಸಿಕೊಂಡ. ಅದನ್ನು ಮುಚ್ಚಿ ಕೈಯಲ್ಲಿ ಎರಡು ಮೂರು ಸಲ ಆಡಿಸಿ ಮತ್ತೆ ಟೊಂಕದಲ್ಲಿ ಸೇರಿಸಿದ. ಆಗ ಗಂಗವ್ವ ಕಾಫಿಯ ಲೋಟ ಹಿಡಿದು ಬಂದಳು. ಏನೋ ನೆನಪಾದಂತೆ ಕೇಳಿದ

“ಈಗ ಹಾಲು ಎಲ್ಲಿಂದ ತಂದಿ?”

“ಇಲ್ಲೇ ಒಬ್ಬರ ಮನೆಯಲ್ಲಿ ಎಮ್ಮೆಗಳಿವೆ ದಣಿ ಅವರು ಹಾಲು ಮಾರುತ್ತಾರೆ”

“ಹಣ?” ಕೇಳಿದ ತೇಜ.

“ನೀವು ಕೊಟ್ಟು ಹೋಗಿದ್ದೀರಲ್ಲ ಅದರಲ್ಲೇ ತಂದೆ” ಹೇಳಿದಳವಳು. ತಾನು ಅವಳಿಗೆ ಯಾವಾಗ ಹಣ ಕೊಟ್ಟದ್ದು ನೆನಪಾಗಲಿಲ್ಲ ತೇಜಾನಿಗೆ. ಪರ್ಸಿನಿಂದ ಐವತ್ತು ರೂಪಾಯಿಯ ಒಂದು ನೋಟನ್ನು ತೆಗೆದು ಅವಳಿಗೆ ಕೊಡುತ್ತಾ ಹೇಳಿದ ತೇಜ,

“ತಾತ ಮತ್ತು ಹುಡುಗರು ಬರುತ್ತಾರೆ ಇನ್ನೂ ಕಾಫಿ ಬೇಕಾಗಬಹುದು”

“ಊಟ”

“ಬೇಡ! ಏನಾದರೂ ಫಲಹಾರ ಮಾಡು”

ಅವನ ಮಾತು ಮುಗಿಯುತ್ತಿದ್ದಂತೆ ಅಲ್ಲಿಂದ ಹೋದಳು ಗಂಗವ್ವ. ತೇಜಾ ಕಾಫಿ ಕುಡಿದು ಮುಗಿಸಿದ ಸ್ವಲ್ಪ ಹೊತ್ತಿನಲ್ಲಿ ಮೂವರು ಯುವಕರು ಒಬ್ಬರ ಹಿಂದೆ ಒಬ್ಬರು ಬಂದರು. ವಿನಯವಾಗಿ ನಮಸ್ಕರಿಸಿದ ಅವರು ತೇಜಾ ಹೇಳಿದ ಮೇಲೆ ಕುಳಿತರು. ಅವರ ಮೇಲೆ ಪರೀಕ್ಷಾತ್ಮಕ ನೋಟ ಹಾಯಿಸಿದ. ಮೊದಲು ಬಹಳ ಸಲ ನೋಡಿದರೂ ಈಗಿನ ಅವನ ನೋಟವೇ ಬೇರೆಯಾಗಿತ್ತು. ಮೂವರ ವಯಸ್ಸೂ ಇಪ್ಪತ್ತೆರಡನ್ನು ದಾಟಿರಲಾರದು. ಇಬ್ಬರದು ಸಾಮ ಮಾಡಿದಂತಹ ದೇಹಧಾರ್ಡ್ಯ. ಒಬ್ಬನು ಸಾಮಾನ್ಯ ಮೈಕಟ್ಟಿನವ ವಿಧೇಯ ವಿದ್ಯಾರ್ಥಿಗಳಂತೆ ಕುಳಿತಿದ್ದ. ಅವರು ಅವನ ಮಾತಿಗಾಗೇ ಕಾಯುತ್ತಿದ್ದಂತಿದ್ದರು. ಅವರ ಕಡೆಯೇ ನೋಡುತ್ತ ಕೇಳಿದ ತೇಜಾ

“ನೀವು ಪತ್ತೇದಾರಿ ಕಾದಂಬರಿಗಳನ್ನು ಓದುತ್ತೀರಾ?”

ಸಾಮಾನ್ಯ ಮೈಕಟ್ಟಿನವ ಹೇಳಿದ “ನಾನು ಓದುತ್ತೇನೆ ಸರ್!”

ಮಿಕ್ಕಿಬ್ಬರು ಓದುವುದಿಲ್ಲವೆಂದು ಹೇಳಿದರು. ಆ ಪ್ರಶ್ನೆ ಯಾಕೆಂಬುವುದು ಅವರಿಗೆ ಗೊತ್ತಾಗಲಿಲ್ಲ.

“ನೀವು ಪತ್ತೇದಾರಿ ಕೆಲಸವನ್ನು ಮಾಡಬಲ್ಲಿರಾ?”

ಆ ಪ್ರಶ್ನೆಯಿಂದ ಅವರು ತಮಗ್ಯಾವುದೋ ವಿಶಿಷ್ಟ ಕೆಲಸ ಹಚ್ಚಲಿದ್ದಾರೆಂದೆನಿಸಿತು.

“ಮಾಡುತ್ತೇವೆ ಸರ್” ಎಂದ ಸಾಮ ಮಾಡಿದಂತಹ ದೇಹವುಳ್ಳ ವ್ಯಕ್ತಿ ಮಿಕ್ಕಿಬ್ಬರೂ ಅದೇ ತರಹದ ಉತ್ತರ ಕೊಟ್ಟರು.

“ಇವತ್ತು ಯಾರಾದರೂ ಹೊಸಬರನ್ನು ನಮ್ಮೂರಿನಲ್ಲಿ ಗಮಿಸಿದ್ದೀರಾ?” ಕೇಳಿದ ತೇಜ.

ಅದಕ್ಕೆ ಆ ಮೂವರಿಂದಲೂ ನಕಾರಾತ್ಮಕ ಉತ್ತರವೇ ಬಂದಿತು. ಅವರಿಗೆ ಯೋಚಿಸಲು ಸ್ವಲ್ಪ ಸಮಯ ಕೊಟ್ಟು ಕೇಳಿದ ತೇಜಾ.

“ಸಿದ್ದಾನಾಯಕ್‌ನ ಮನೆ ಮುಂದೆಯಾಗಲಿ, ಅದರ ಆಸುಪಾಸಿನಲ್ಲಾಗಲಿ ಯಾರಾದರೂ ಹೊಸ ವ್ಯಕ್ತಿ ಸುಳಿದಾಡುತ್ತಿರುವುದನ್ನು ನೋಡಿದ್ದೀರಾ?”

“ನಾ ನೋಡಿದ್ದೆ ಸರ್! ಯಾರೋ ಇಬ್ಬರು ಅವನ ಮನೆಯ ಬಾಗಿಲೆದುರು ನಿಂತು ಮಾತಾಡುತ್ತಿದ್ದರು. ಆಮೇಲೆ ನಾಯಕರೊಡನೆ ಆ ಇಬ್ಬರೂ ಅವರ ಮನೆಯಲ್ಲಿ ಹೋದರು” ಕೂಡಲೇ ಏನೋ ನೆನಪಾದಂತೆ ಹೇಳಿದ ಸೊಣಕಲು ವ್ಯಕ್ತಿ.

“ಅವರು ಇಲ್ಲಿಗೆ ಹೊಸಬರೆ?” ಕೇಳಿದ ತೇಜಾ.

“ಮೊದಲೆಂದೂ ಇಲ್ಲಿ ನೋಡಿದ ನೆನಪಿಲ್ಲ ಸರ್! ಯಾವುದೋ ಕೆಲಸದ ನಿಮಿತ್ತ ಅವರ ಬಳಿ ಬಂದಿರಬಹುದೆಂದುಕೊಂಡೆ” ವಿವರಣೆ ನೀಡಿದನವ.

“ಅವರನ್ನು ಗಮನಿಸಲು ಏನು ಕಾರಣ?” ಕೇಳಿದ ತೇಜಾ

ಅದಕ್ಕೂ ಕೂಡಲೇ ಉತ್ತರಿಸಿದ ಸೊಣಕಲು ವ್ಯಕ್ತಿ

“ಕಟ್ಟು ಮಸ್ತಾದ ಆಳುಗಳು ಸರ್! ಒಬ್ಬನು ಮೀಸೆಯನ್ನು ವಿಚಿತ್ರವಾಗಿ ತಿರುವಿದ್ದ”

“ಅವರನ್ನೀಗ ನೋಡಿದರೆ ಗುರುತಿಸಬಲ್ಲೆಯಾ?”

“ಖಂಡಿತ ಸರ್!” ಆತ್ಮವಿಶ್ವಾಸದಿಂದ ಹೇಳಿದನಾ ವ್ಯಕ್ತಿ.

ಅವನ ಮಾತು ಮುಗಿಯುತ್ತಿದ್ದಂತೆ ತಾತ ಮತ್ತು ಕುಶಾಲ ಬಂದರು. ಕುಶಾಲನನ್ನು ತಕ್ಷಣ ಗುರುತಿಸುವುದು ಕಷ್ಟ, ಹೊಲಸಾದ ಪಂಚೆ, ಅದರ ಮೇಲೆ ಕೆಂಪು ಚೌಕಗಳಿರುವ ಪೂರ್ತಿ ತೋಳಿನ ಬುಶರ್ಟ್, ತಲೆಗೆ ಸುತ್ತಿದ ಟವಲ್ ಅವನನ್ನು ಪೂರ್ತಿ ಹಳ್ಳಿಗನನ್ನಾಗಿ ಮಾಡಿಬಿಟ್ಟಿತ್ತು. ಮುಂಬಾಗಿಲನ್ನು ಹಾಕಿ ಅವರನ್ನು ಸೇರಿಕೊಂಡ ಕುಶಾಲ್. ಅವನು ಹತ್ತಿರ ಬರುತ್ತಿದ್ದಂತೆ ಅಲ್ಲಿದ್ದವರಿಗೆ ಹೇಳಿದ ತೇಜಾ.

“ಇವರು ಇನ್ಸ್‌ಪೆಕ್ಟರ್ ಕುಶಾಲ್… ನೀನು ನಾಯಕನ ಮನೆ ಎದುರು ನೋಡಿದ್ದನ್ನೆಲ್ಲಾ ಇವರಿಗೆ ಹೇಳು. ಆಮೇಲೆ ಇವರು ಏನು ಮಾಡಬೇಕೆಂಬುವುದು ವಿವರಿಸುತ್ತಾರೆ. ನಾನೀಗ ಪೋಲೀಸ್ ಸ್ಟೇಷನ್‌ಗೆ ಹೋಗಿ ಬರುತ್ತೇನೆ” ಎಂದ ತೇಜಾ ಅಲ್ಲಿಂದ ಎದ್ದ.

ತನ್ನೊಡನೆ ಪಕ್ಕಾ ಹಳ್ಳಿಗನಂತೆ ಹರಟುತ್ತಾ ಬಂದ ಈತ ಇನ್ಸ್‌ಪೆಕ್ಟರ್‌ನೇ ಎಂದು ಕಣ್ಣಗಲಿಸಿ ನೋಡಿದ ತಾತ. ಯುವಕರಿಗೂ ಆಶ್ಚರ್ಯ. ಆರಾಮಕುರ್ಚಿಯಲ್ಲಿ ಕೂಡುತ್ತಾ ಕೇಳಿದ ಕುಶಾಲ.

“ಹೇಳು ಮರಿ ನೀನೇನು ನೋಡಿದಿ”

ತೇಜಾ ಪೋಲಿಸ್ ಸ್ಟೇಷನ್ ಸೇರಿದಾಗ ಅಲ್ಲಿದ್ದ ಒಬ್ಬನೇ ಕಾನ್ಸ್ ಟೇಬಲ್ ಟೇಬಲಿನ ಮೇಲೆ ತಲೆ ಇಟ್ಟು ಒರೆಗಿದ್ದ. ತೇಜಾನ ಬೂಟುಗಾಲಿನ ಸದ್ದು ಕೇಳಿಸುತ್ತಲೇ ಶಾಕ್ ಹೊಡೆದವನಂತೆ ಎದ್ದು ನಿಂತ.

“ನೀನಿಲ್ಲಿಂದ ಕದಲಬೇಡ” ಎಂದು ಹೇಳಿದ ತೇಜಾ, ತನ್ನ ಕೋಣೆ ಸೇರಿ ಒಳಗಿನಿಂದ ಬಾಗಿಲು ಹಾಕಿ ಬಂದು ಸ್ಕ್ವಾಡಿನ ಮುಖ್ಯಸ್ಥರ ಮನೆಗೆ ಫೋನ್ ಮಾಡಿದ.

“ಹಲೋ” ಅತ್ತ ಕಡೆಯಿಂದ ಹೆಣ್ಣು ಕಂಠ ಕೇಳಿ ಬಂದಿತು.

“ಚೀಫ್ ಇದ್ದಾರೆಯೇ ನಾನು ಬಂಡೇರಹಳ್ಳಿಯಿಂದ ಮಾತಾಡುತ್ತಿದ್ದೇನೆ” ಹೇಳಿದ ತೇಜ. ಕೆಲ ಕ್ಷಣಗಳಲ್ಲೇ ಅತ್ತಕಡೆಯಿಂದ ಅವರ ದನಿ ಕೇಳಿ ಬಂತು.

“ನಾನು ಸರ್ ತೇಜಾ! ಇನ್ನೊಂದು ಸಮಸ್ಯೆ! ಫೋನಿನಲ್ಲಿ ಹೇಳಬಹುದೇ?”

ಅದು ಮುಖ್ಯವೆಂಬಂತೆ ಆತುರದ ದನಿಯಲ್ಲಿ ಹೇಳಿದ.

“ಹೇಳು! ನಮ್ಮ ಮಾತು ಯಾರೂ ಕೇಳಲಿಕ್ಕಿಲ್ಲ” ಎಂದರವರು. ಕೇಳಿದರೂ ಚಿಂತೆ ಇಲ್ಲ ತಾನು ಏನೇ ಆಗಲಿ ಅವರ ಸಲಹೆ ಪಡೆಯಲೇಬೇಕೆಂದು ಹೇಳಿದ.

ಇದೀಗ ಕ್ರಾಂತಿಕಾರಿಯರ ಮುಸುಕಿನಲ್ಲಿ ಒಂದು ದರೋಡೆಕೋರರ ತಂಡ ಬಂದಿದೆ. ಅವರು ನಾಯಕನ ಸಲಹೆ ಮೇಲೆ ನನ್ನ ಮುಗಿಸಲು ಬಂದಿದ್ದಾರೆಂಬ ಇನ್‌ಫರ್‌ಮೇಷನ್ ಬಂದಿದೆ. ನಾನೆಲ್ಲಾ ಸಿದ್ಧತೆಯಲ್ಲಿದ್ದೇನೆ. ಕುಶಾಲ ನನ್ನ ನೋಡಲು ಬಂದಿದ್ದ ಅವನೂ ನನ್ನ ಜತೆಗಿದ್ದಾನೆ ಏನು ಮಾಡಲಿ”

“ಅವರಷ್ಟು ಜನರಿದ್ದಾರೆ?” ಕೂಡಲೇ ಪ್ರಶ್ನಿಸಿದರು ಮುಖ್ಯಸ್ಥರು.

“ಐವರು ಇದ್ದ ಹಾಗಿದೆ”

“ಅವರಲ್ಲಿ ಮೂವರನ್ನು ಮುಗಿಸಿಬಿಡು. ನಾಯಕ ಮತ್ತಿಬ್ಬರನ್ನು ಬಂಧಿಸಿ ಇಲ್ಲಿಗೆ ಕಳಿಸು. ನಿನ್ನ ಆಪರೇಷನ್ ಯಾವಾಗ ಆರಂಭವಾಗುತ್ತದೆ”

“ಇನ್ನೂ ಗೊತ್ತಿಲ್ಲ ಸರ್!”

“ಸರಿ ನಾನೊಂದು ಗಂಟೆ ಬಿಟ್ಟು ಕಲೆಕ್ಟರ್‌ಗೆ ಫೋನ್ ಮಾಡುತ್ತೇನೆ. ಆತ ಅಲ್ಲಿ ವ್ಯಾನ್ ಕಳಿಸುತ್ತಾನೆ ಅವರನ್ನೆಲ್ಲಾ ಅದರಲ್ಲಿ ಹಾಕಿ ಕಳಿಸಿಬಿಡು”

“ಅವರು ರಾಮನಗರದಲ್ಲೆ…”

“ಇಲ್ಲ, ನೇರವಾಗಿ ಇಲ್ಲಿಗೆ ಕಳಿಸುವಂತೆ ಹೇಳುತ್ತೇನೆ. ಆದರೆ ಆ ಮಿಕ್ಕಿಬ್ಬರೂ ನಾಯಕನ ವಿರುದ್ಧ ಸಾಕ್ಷಿ ಕೊಡಬೇಕು. ಅವರನ್ನು ಒದ್ದು ನಿಜವನ್ನು ಬೊಗಳಿಸು”

“ಥ್ಯಾಂಕ್ಯೂ ಸರ್”

“ಬೆಸ್ಟ್ ಆಫ್ ಲಕ್ ಅಂಡ್ ಟೇಕ್ ಕೇರ್” ಎಂದ ಅವರು ಸಂಪರ್ಕ ಮುರಿದರು. ಬಾಗಿಲು ತೆಗೆದು ಹೊರಬಂದ ತೇಜಾ, ಈ ಮುಖ್ಯಸ್ಥರು ಎಷ್ಟು ಸುಲಭವಾಗಿ ಮುಗಿಸಿಬಿಡು ಎನ್ನುತ್ತಾರೆ ಎಂದುಕೊಳ್ಳುತ್ತಾ ಮನೆ ಸೇರಿದ.

ಅಲ್ಲಿ ಕುಶಾಲ ಹೇಳುವುದೆಲ್ಲಾ ಮುಗಿದಂತೆ ಕಾಣುತ್ತಿತ್ತು. ಅವರು ತನಗಾಗೇ ಕಾಯುತ್ತಿದ್ದಂತಿದ್ದರು. ತೇಜಾ ಬರುತ್ತಲೇ ಎಲ್ಲರಿಗೂ ಫಲಹಾರ ತಂದುಕೊಟ್ಟಳು ಗಂಗವ್ವ. ಅದು ತಿಂದಮೇಲೆ ಎಲ್ಲರಿಗೂ ಕಾಫಿ ಕೊಡುತ್ತಿದ್ದಾಗ ಅವಳಿಗೆ ಮನೆಗೆ ಹೋಗುವಂತೆ ಹೇಳಿದ ತೇಜಾ, ಆಗಲೇ ಹತ್ತೂವರೆಯಾಗಲು ಬಂದಿತ್ತು. ಪೂರ್ತಿ ಬಂಡೇರಹಳ್ಳಿ ಮಲಗಿಬಿಟ್ಟಂತೆ ಭಾಸವಾಗುತ್ತಿತ್ತು. ಕಾಫಿ ಕುಡಿದಾದ ಮೇಲೆ ತೇಜಾನೆಡೆ ತಿರುಗಿ ಮಾತಾಡಿದ ಕುಶಾಲ.

“ನನ್ನ ಪ್ರಕಾರ ಅವರೊಂದು ವೇಳೆ ದಾಳಿ ಮಾಡುವುದಿದ್ದರೆ ರಾತ್ರಿ ಹನ್ನೆರಡರ ನಂತರವೇ ಮಾಡುತ್ತಾರೆ. ಇಲ್ಲಿ ಇಬ್ಬರಿರಲಿ, ಅವರು ಬೇರೆ ಬೇರೆ ಕೋಣೆಯಲ್ಲಿರಬೇಕು. ನೀ ಹೇಳುವವರೆಗೆ ಅವರು ಅಲ್ಲಿಂದ ಹೊರಬರಬಾರದು. ನಾನು ಅವರನ್ನು ಹೊರಗೆ ಗಮನಿಸುತ್ತಿರುತ್ತೇನೆ. ತಾತಾ ನೀ ಮನೆಗೆ ಹೋಗಿ ಮಲಗು”

“ಇಲ್ಲ… ಇಲ್ಲ. ನಾನ್ಯಾಕೆ ಮಲಗಲಿ ನಾನೂ ನಿಮ್ಮ ಜತೆಗಿರುತ್ತೇನೆ” ಅವನ ಮಾತು ಮುಗಿದ ಕೂಡಲೇ ಹಠಹಿಡಿದವನಂತೆ ಹೇಳಿದ ಗುಂಡು ತಾತ

“ಸರಿ! ಅವರೂ ಇಲ್ಲೇ ಯಾವುದೋ ಕೋಣೆಯಲ್ಲಿರಲಿ ಮುಂದೆ?” ಕೇಳಿದ ತೇಜಾ.

ಒಂದು ವೇಳೆ ಅವರಿಲ್ಲಿಗೆ ಬರದೇ ಬೇರಾವುದಾದರೂ ಮನೆಗೆ ದರೋಡೆಗೆ ಹೋಗುತ್ತಿದ್ದರೆ ನಿನಗೆ ಕೂಡಲೇ ತಿಳಿಸುತ್ತೇವೆ” ಹೇಳಿದ ಕುಶಾಲ

“ದರೋಡೆ ಮಾಡುವಂತಹ ಮನೆಗಳು ಇಲ್ಲಿ ಯಾವುವೂ ಇಲ್ಲ. ದರೋಡೆ ಮಾಡುವುದೇ ಇದ್ದರೆ ನಾಯಕನ ಮನೆಯಲ್ಲಿ ದರೋಡೆ ಮಾಡಬೇಕಷ್ಟೆ” ಹೇಳಿದ ತಾತ.

“ಒಂದು ಕೆಲಸ ಮಾಡುವ, ಅವರನ್ನು ಗುರುತಿಸುವ ಇವನು ಒಬ್ಬನೇ ಅಲ್ಲದೇ ಬೇರೆ ಯಾರಾದರೂ ಹೊಸಬರು ಅನುಮಾನಾಸ್ಪದ ವ್ಯಕ್ತಿಗಳು ಕಾಣಿಸುತ್ತಾರೇನೋ ಎಂದು ಇಲ್ಲಿರುವ ಮತ್ತೊಬ್ಬನೊಡನೆ ಹೋಗಲಿ, ಇಲ್ಲೊಬ್ಬನಿದ್ದರೆ ಸಾಕು. ಹೇಗೂ ತಾತನೂ ಇಲ್ಲೇ ಇರುತ್ತೇನೆನ್ನುತ್ತಿದ್ದಾರೆ ಕುಶಾಲ ನೀನು ಇನ್ನೊಂದು ದಿಕ್ಕಿಗೆ ಒಬ್ಬನನ್ನು ಜತೆಗೆ ಕರೆದೊಯ್ಯಿ” ಹೇಳಿದ ತೇಜಾ. ಅದಕ್ಕೆ ಎಲ್ಲರೂ ಒಪ್ಪಿಕೊಂಡರು. ಸೊಣಕಲು ವ್ಯಕ್ತಿ ಮತ್ತವನ ಜತೆಗೆ ಹೋಗುವವರೆಡೆ ನೋಡುತ್ತಾ ಮತ್ತೆ ಮಾತು ಮುಂದುವರೆಸಿದ ತೇಜಾ.

“ಅಂತಹ ಯಾರೇ ಆಗಲಿ ಕಾಣಿಸಿದರೆ, ಅವರನ್ನು ನೀನು ಗುರುತಿಸಿದರೆ, ಕೂಡಲೇ ಸಂದುಗೊಂದಲುಗಳಲ್ಲಿಂದ ಇಲ್ಲಿ ಬಂದು ತಿಳಿಸಬೇಕು. ಯಾರೂ ಅವರ ಗಮನ ಸೆಳೆಯಬಾರದು. ನೀವು ಯಾರಿಗೂ ಅನುಮಾನ ಬರದಂತೆ ಅವರನ್ನು ಹುಡುಕಬೇಕು”

ಅವನ ಮಾತು ಮುಗಿಯುತ್ತಲೇ ಕುಶಾಲ ಮಾತಾಡಿದ

“ಈಗ ರಸ್ತೆಯ ಮೇಲೆ ಜನಸಂಚಾರವಿರುವುದಿಲ್ಲ. ನೀವು ಹೆಚ್ಚು ಯಾರಿಗೂ ಕಾಣದಂತೆ ಕತ್ತಲಲ್ಲಿ, ಬೀದಿ ದೀಪವಿದ್ದರೆ ಅದರ ಬೆಳಕಿನಿಂದ ತಪ್ಪಿಸಿಕೊಂಡು ನಡೆಯಬೇಕು ಅರ್ಥವಾಯಿತೆ”

“ಒಂದು ಅನುಮಾನ ಸರ್” ಹೇಳಿದ ಸೊಣಕಲು ವ್ಯಕ್ತಿ.

“ಒಂದು ವೇಳೆ ಹೇಗೊ ನಮ್ಮನ್ನು ನೋಡಿ ಅವರೇ ಬಂದು ನಮ್ಮನ್ನು ಮಾತಾಡಿಸಿದರೆ?”

“ಮಾತಾಡಿ, ಈ ಊರಿನ ನೀವು ಸ್ನೇಹಿತರು ನಿದ್ದೆ ಬರುತ್ತಿಲ್ಲ ತಿರುಗುತ್ತಿದ್ದೇವೆಂದು ಹೇಳಿ ಹಾಗೆ ಮಾತಾಡಲು ಸಾವಿರ, ಲಕ್ಷ ವಿಷಯಗಳಿವೆ. ಒಂದು ಮಾತು ಚೆನ್ನಾಗಿ ನೆನಪಿಡಿ ನಿಮಗೆ ಅನುಮಾನವಿದೆ ಎಂಬುವುದು ನೋಟದಿಂದಲೂ ಗೊತ್ತಾಗಬಾರದು. ಅವರು ಇತ್ತಕಡೆ ಬರುತ್ತಿದ್ದರೆ ಹಿಂಬಾಲಿಸುವುದನ್ನು ಬಿಟ್ಟುಬಿಡಿ. ನನಗನಿಸಿದಂತೆ ಅವರು ಸುಮ್ಮಸುಮ್ಮನೆ ನಿಮ್ಮೊಡನೆ ಜಗಳ ತೆಗೆಯಲಿಕ್ಕಿಲ್ಲ. ಹಾಗೇನಾದರೂ ಆದರೇ ಅವರನ್ನು ಚೆನ್ನಾಗಿ ತದಕಿ ಓಡಿಹೋಗದಂತೆ ಹಿಡಿದು ಸಹಾಯಕ್ಕೆ ಜನರನ್ನು ಕರೆಯಿರಿ. ಅರ್ಥವಾಯಿತೆ”

ಸೊಣಕಲು ಯುವಕ ಮತ್ತು ಒಳ್ಳೆಯ ದೇಹದಾರ್ಡ್ಯದ ಯುವಕರು ಅರ್ಥವಾಯಿತೆಂಬಂತೆ ತಲೆ ಹಾಕಿದರು.

ಬಾಗಿಲ ಬಳಿ ಹೋದ ತೇಜಾ, ಕುಶಾಲನನ್ನು ಕರೆದು ಬೇರಾರಿಗೂ ಕೇಳಿಸದಹಾಗೆ ಸ್ಕ್ವಾಡಿನ ಮುಖ್ಯಸ್ಥರು ಹೇಳಿದ ವಿಷಯ ಹೇಳಿದ. ಅದರಿಂದ ಅವನ ಮುಖದಲ್ಲಿ ಸಂತಸ ತುಂಬಿ ಬಂದಂತೆ ಕಂಡಿತು, ಹೇಳಿದ.

“ಮುಗಿಸುವ ಕೆಲಸವನ್ನು ನಾನು ಮಾಡುತ್ತೇನೆ”

ಲೋಕದ ಅಪರಾಧಿಗಳನ್ನೆಲ್ಲಾ ಮುಗಿಸಿಬಿಡಬೇಕೆನ್ನುವುದು ಅವನ ವಾದ.

“ಅದನ್ನು ಆಮೇಲೆ ನಿರ್ಣಯಿಸುವ. ನಮಗೆ ನಾಯಕ ವಿರುದ್ಧ ಸಾಕ್ಷಿ ಕೊಡಲು ಇಬ್ಬರು ಅಪರಾಧಿಯರು ಬೇಕೇ ಬೇಕು” ಎಂದ ತೇಜ.

ಆ ನಿರ್ಣಯ ತೆಗೆದುಕೊಂಡ ಮೇಲೆ ಇಬ್ಬರಿಬ್ಬರ ಎರಡು ತಂಡಗಳು ಸ್ವಲ್ಪ ಸಮಯದ ಅಂತರ ಬಿಟ್ಟು, ಮನೆಯಿಂದ ಹೊರಬಿದ್ದವು. ಅವರು ಹೋದಮೇಲೆ ಬಾಗಿಲ ಬೋಲ್ಟ್ ಎಳೆದು ಬಂದ ಯುವಕ. ಅವರಿಗೆ ಯಾವ ಯಾವ ಕೋಣೆಯಲ್ಲಿ ಸುಮ್ಮನೆ ಮಲಗಿರಬೇಕೆಂಬುವುದು ತೋರಿಸಿದ ತೇಜಾ ಎಂತಹದೇ ಸದ್ದಾದರೂ ಹೊರಬರಬಾರದೆಂದು ತಾನು ಕರೆಯುವವರೆಗೆ ಅವರು ಸುಮ್ಮನಿರಬೇಕೆಂದು ಆದೇಶಿಸಿದ. ಅದನ್ನು ಪಾಲಿಸಲು ಅವರುಗಳು ತಮ್ಮ ತಮ್ಮ ಕೋಣೆಗೆ ಹೋದರು. ಮಂಚದಲ್ಲಿ ಉರುಳಿದ ತೇಜಾನ ಕಾಯುವಿಕೆ ಆರಂಭವಾಯಿತು.

ಇಡೀ ಬಂಡೇರಹಳ್ಳಿ ಮಲಗಿ ಸುಖ ನಿದ್ದೆಯಲ್ಲಿರುವಂತೆ ಕಂಡುಬರುತ್ತಿತ್ತು. ಸೊಣಕಲು ವ್ಯಕ್ತಿ ಮತ್ತು ಅವನ ಸಂಗಡಿಗ ಕತ್ತಲಲ್ಲಿ, ಬೆಳಕಿದ್ದರೆ ಅದರಿಂದ ತಪ್ಪಿಸಿಕೊಳ್ಳುತ್ತಾ ಕಣ್ಣಗಲಿಸಿ ತಮ್ಮ ಹುಡುಕಾಟದಲ್ಲಿ ತೊಡಗಿದರು. ಯಾವ ಮಾತೂ ಇಲ್ಲದೇ ನಿಧಾನವಾಗಿ ಬೀಳುತ್ತಿದ್ದ ಅವರ ಹೆಜ್ಜೆಗಳು. ಅವರಿಬ್ಬರಲ್ಲಿ ಇಂತಹ ಪತ್ತೇದಾರಿ ಕೆಲಸ ಮಾಡುತ್ತಿದ್ದೇವಲ್ಲ ಎಂಬ ಹುರುಪು ಹುಟ್ಟಿಬಂದಿತ್ತು. ತಮ್ಮ ಕೈಗೆ ಅವರು ಸಿಕ್ಕರೆ ತದಕುವ ಅವಕಾಶ ಕೊಡಬೇಕಾಗಿತ್ತು ತೇಜಾ ಸಾಹೇಬರು ಎಂದುಕೊಳ್ಳುತ್ತಿದ್ದ ದಷ್ಟಪುಷ್ಟ ಮೈಕಟ್ಟಿನ ವ್ಯಕ್ತಿ.

ಬಹು ನಿಧಾನವಾಗಿ ನಡೆದರೂ ಇಡೀ ಬಂಡೇರಹಳ್ಳಿಯನ್ನು ಎರಡು ಗಂಟೆಯೊಳಗೆ ಸುತ್ತು ಹಾಕಿಬಿಡಬಹುದು. ಹಾಗೆ ಅವರು ಒಂದು ಗಂಟೆ ನಡೆದರೂ ಯಾವ ಅನುಮಾನಾಸ್ಪದ ವ್ಯಕ್ತಿಯೂ ಕಾಣಲಿಲ್ಲ. ಅವರಲ್ಲಿ ನಿರಾಸೆ ಹುಟ್ಟತೊಡಗಿತ್ತು. ಇನ್ಸ್‌ಪೆಕ್ಟರ್ ಸಾಹೇಬರು ಇಲ್ಲದ್ದನ್ನು ಊಹಿಸಿಕೊಂಡಿರ ಬೇಕೆಂದು ಗುಸುಗುಸು ಮಾತಾಡಿಕೊಂಡರು. ಹಾಗವರು ಸಂದುಗೊಂದುಗಳಿಂದ ನಡೆಯುತ್ತಿರುವಾಗ ಒಂದು ಗುಡಿಸಲಿನಿಂದ ಮಾತುಗಳು ಕೇಳಿಸಿದವು. ಬದಿಯಲ್ಲಿ ನಿಂತು ಗಮನವಿಟ್ಟು ಕೇಳಿದ ಸೊಣಕಲು ವ್ಯಕ್ತಿ. ಎರಡೂ ಗಂಡು ಕಂಠಗಳೇ, ತನ್ನ ಮಿತ್ರನ ಕೈ ಹಿಡಿದು ಎಳೆದ ಹಾಗೇ ಅವರು ಸ್ವಲ್ಪ ದೂರ ಹೋದ ಮೇಲೆ ಬಹು ಮೆಲ್ಲನೆ ಹೇಳಿದ.

“ಇಲ್ಲೇ ಕಾಯುವ”

“ಯಾರೋ ಕುಡುಕರು ಕುಡಿಯುತ್ತಾ ಕುಳಿತಿರಬಹುದು ಅಷ್ಟೆ. ಮೆಲ್ಲನೆ ಹೇಳಿದ ಆ ಇನ್ನೊಬ್ಬ ಯುವಕ. ತೇಜಾ ಬಂದಾಗಿನಿಂದ ಸಮಯವಲ್ಲದ ಸಮಯದಲ್ಲಿ ಕಳ್ಳತನದಿಂದ ಸರಾಯಿ ಮಾರಾಟವಾಗುತ್ತದೆ ಎಂಬುವುದು ಇಬ್ಬರಿಗೂ ಗೊತ್ತಿತ್ತು.

“ಅದೇ ಅವರು ಕುಡಿತ ಮುಗಿಸಿ ಹೊರಬೀಳುತ್ತಾರೆ. ಅವರಾರೆಂದು ನೋಡುವ” ಹೇಳಿದ ಸೊಣಕಲು ವ್ಯಕ್ತಿ. ಅವನ ಸಂಗಡಿಗನಿಗೆ ಇನ್ನು ಹುಡುಕಾಟ ಸಾಕೆನಿಸಿತ್ತು. ಇಬ್ಬರೂ ಕತ್ತಲು ಮಯವಾಗಿರುವ ಸ್ಥಳವನ್ನು ಹುಡುಕಿ ಕಾಯುತ್ತಾ ಕುಳಿತರು. ಸೊಣಕಲು ದೇಹದವನ ನೋಟ ಆ ಗುಡಿಸಲಿನಿಂದ ಕದಲಲಿಲ್ಲ.
* * *

ಕುಶಾಲ ರಸ್ತೆಗೆ ಬಂದಾಗ ಅಲ್ಲೊಬ್ಬರು ಇಲ್ಲೊಬ್ಬರು ಓಡಾಡುತ್ತಿದ್ದರು ಸುತ್ತೂ ಒಮ್ಮೆ ನೋಟ ಹಾಯಿಸಿ ಇಲ್ಲಿ ಅನೈತಿಕ ಕೆಲಸಗಳನ್ನು ಮಾಡುವ ಸ್ಥಳವೆಲ್ಲಿದೆ ಎಂದು ತನ್ನ ಜತೆಗಿದ್ದ ಯುವಕನಿಗೆ ಕೇಳಿದ. ತಾವು ಹುಡುಕುವುದು ಹಳ್ಳಿಯಲ್ಲೊ ಕಾಡಿನಲ್ಲೋ ಎಂದು ಗೊತ್ತಾಗದ ಆ ಯುವಕ ಅದು ಎಲ್ಲಿರಬಹುದೆಂಬ ದಿಕ್ಕನ್ನು ಬೆರಳು ಮಾಡಿ ತೋರಿಸಿದ. ಬೆಳಕಿನಿಂದ ದೂರವಾಗುತ್ತಾ ಇಬ್ಬರೂ ಅತ್ತ ನಡೆಯತೊಡಗಿದರು. ಹತ್ತು ನಿಮಿಷದ ದಾರಿ ಸವೆಸುತ್ತಿರುವಂತೆ ಗುಡಿಸಲುಗಳಿಂದ ಹಳ್ಳಿಯ ತಮ್ಮದೇ ತರಹ ಮನೆಗಳಿಂದ ಮುಕ್ತರಾಗಿ ಅವರು ಕಲ್ಲು, ಮುಳ್ಳು ಗಿಡಗಳಿರುವ ಮೈದಾನಕ್ಕೆ ಬಂದಿದ್ದರು. ಕತ್ತಲಲ್ಲೂ ಅಲ್ಲಲ್ಲಿ ಬಂಡೆಗಳು ಕಾಣಿಸುತ್ತಿದ್ದವು. ಅಲ್ಲಿ ಆಸುಪಾಸು ವಾಸಿಸುವ ಜನರು ಬಯಲಿಗೆ ಹೋಗಲು ಆ ಸ್ಥಳವನ್ನು ಉಪಯೋಗಿಸುತ್ತಿದ್ದರು.

ಬಂಡೆಗಳ ದಿಕ್ಕಿಗೆ ಹೋಗುವ ಕಾಲ್‌ದಾರಿ. ಅದೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಗಿಡಗಂಟೆಗಳ ಕಾರಣ, ನೆಲದ ಮೇಲಿನ ಸಣ್ಣ ಸಣ್ಣ ಕಲ್ಲು ಬಂಡೆಗಳ ಕಾರಣ ಅವರು ನಡೆಯುತ್ತಿರುವ ಸದ್ದು ಸ್ಪಷ್ಟವಾಗಿ ಕೇಳಿಬರುತ್ತಿತ್ತು. ತನ್ನ ಜತೆಗಿದ್ದ ಯುವಕನ ಭುಜದ ಮೇಲೆ ಕೈ ಹಾಕಿ ಬಹು ಮೆಲ್ಲನೆ ಹೇಳಿದ ಕುಶಾಲ.

“ಸದ್ದಾಗದಂತೆ ಮೆಲ್ಲನೆ ನಡಿ, ಒಂದುವೇಳೆ ಯಾವುದಾದರೂ ಆಕಾರ ಕಂಡು ಬಂದರೆ ಬಯಲಿಗೆ ಕುಳಿತವನಂತೆ ಕುಳಿತು ಬಿಡು.”

“ಎಲ್ಲಾ ಮುಳ್ಳು ಗಿಡಗಳು ದಾರಿ ಅಷ್ಟು ಸರಿಯಾಗಿಲ್ಲ” ಮೆಲ್ಲನೆ ಹೇಳಿದ ಆ ಯುವಕ.

“ನಿನಗೆ ಕಾಲ್‌ದಾರಿ ಗೊತ್ತಿರಬಹುದು. ಅದರಲ್ಲಿ ನಡಿ, ನಾ ನಿನ್ನ ಹಿಂದಿರುತ್ತೇನೆ” ಎಂದ ಕುಶಾಲ್.

ಆ ಯುವಕ ಮುಂದೆ ನಡೆಯಲಾರಂಭಿಸಿದ ಅವನ ಹಿಂದೆ ಕುಶಾಲ. ಅಸ್ಪಷ್ಟವಾಗಿ ಕಾಣುತ್ತಿರುವ ಬಂಡೆಗಳ ನಂತರ ಭಯಂಕರವಾಗಿ ಹರಡಿದ ಕಾಡು ಕಂಡುಬರುತ್ತಿತ್ತು. ಅಲ್ಲಿಯ ಜನರು ಮಾಡಿದ ಹೇಸಿಗೆಯ ವಾಸನೆ ಮೂಗಿಗಪ್ಪಳಿಸುತ್ತಿತ್ತು. ಹುಳು ಹುಪ್ಪಟೆಗಳು ಮಾಡುತ್ತಿದ್ದ ಸದ್ದು ಬಿಟ್ಟು ಬೇರಾವ ಸದ್ದೂ ಕೇಳಿಬರುತ್ತಿರಲಿಲ್ಲ. ಮುಂದೆ ಹೋದ ಹಾಗೆಲ್ಲ ಹೇಸಿಗೆ ವಾಸನೆ ಹೆಚ್ಚಾಗುತ್ತಿತ್ತು. ಇದೆಲ್ಲಿಯ ಹಿಂಸೆಯಲ್ಲಿ ಸಿಕ್ಕಿಕೊಂಡೆ ಎಂದುಕೊಳ್ಳುತ್ತಿದ್ದ ಯುವಕ. ಪ್ರತಿ ಹೆಜ್ಜೆಗೆ ಅವನಲ್ಲಿ ಅಸಹನೆ ಹೆಚ್ಚಾಗುತ್ತಿತ್ತು. ದುರ್ನಾತದ ಕಾರಣ ಕುಶಾಲನಿಗೆ ವಾಕರಿಕೆ ಬರುವಂತಾಗುತ್ತಿತ್ತು. ಬಹು ಕಷ್ಟಪಟ್ಟು ಬಾಯಿಂದ ಸದ್ದು ಹೊರಡದಂತೆ ನುಂಗಿಕೊಂಡ. ಅಂತಹ ವಾಸನೆಗೆಲ್ಲಾ ಅಭ್ಯಸಿತವಾಗಿತ್ತಾ ಯುವಕನ ಮೂಗು.

ಹದಿನೈದು ನಿಮಿಷದ ಬಹು ಮೆಲ್ಲನೆಯ ನಡುಗೆಯ ಪರಿಣಾಮವಾಗಿ ಅವರು ಒಂದು ದೊಡ್ಡ ಬಂಡೆಗೆ ಸಮೀಪವಾಗುತ್ತಿದ್ದರು ಅಸ್ಪಷ್ಟವಾಗಿ ಕೇಳಿಬರುತ್ತಿದ್ದ ಮಾತುಗಳು ಕುಶಾಲನ ಕಿವಿಗಳನ್ನು ನಿಮಿರಿಸಿದ್ದವು. ತನ್ನ ಆಯುಧವನ್ನು ತಡವಿ ನೋಡಿಕೊಂಡು ಯುವಕನ ಕಿವಿಯ ಬಲಿ ತಲೆ ತಂದು ಕೇಳಿದ

“ನಿನಗೇನಾದರೂ ಕೇಳಿಸುತ್ತಿದೆಯೋ?”

ಯುವಕನಿಗೂ ಅಸ್ಪಷ್ಟ ಮಾತುಗಳು. ಕೇಳಿಸಿದ್ದವು. ಅವನು ರೋಮಾಂಚನಗೊಂಡವನಂತೆ ಹೇಳಿದ.

“ಹುಂ! ಯಾರಿರಬಹುದು”

“ಮೆಲ್ಲನೆ ಮಾತಾಡು. ಈಗ ಪೂರ್ತಿ ಬಗ್ಗಿ ಆ ಬಂಡೆಯ ಕಡೆ ನಡಿ. ಮಾತುಗಳು ಸ್ವಲ್ಪ ಸ್ಪಷ್ಟವಾಗಿ ಕೇಳಿಸುತ್ತಿದ್ದ ಹಾಗೇ ನಾವಿಬ್ಬರೂ ಬದಿಗೆ ಸರಿದು ಪ್ಯಾಂಟು ಬಿಚ್ಚಿ ಕಕ್ಕಸಿಗೆ ಕುಳಿತಂತೆ ಕೂಡಬೇಕು. ಅರ್ಥವಾಯಿತ” ಅವನ ಮಾತು ಮುಗಿಯುತ್ತಲೇ ಮತ್ತೆ ಕಿವಿಯ ಬಳಿ ಹೇಳಿದ ತೇಜಾ.

ಮುಂದೆ ಇದ್ದ ಯುವಕ ಬಗ್ಗಿ ಒಂದು ಹೆಜ್ಜೆ ಹಾಕಿದ. ಹಿಂದಿದ್ದ ಕುಶಾಲ ಎಷ್ಟು ಬಗ್ಗಬೇಕು ತೋರಿಸುವವನಂತೆ ಅವನನ್ನು ಇನ್ನೂ ಬಗ್ಗಿಸಿದ. ಅದಕ್ಕವನು ಮಾತಾಡಲಿಲ್ಲ. ಇನ್ನೂ ಬಗ್ಗಿದ. ಇಬ್ಬರೂ ಹಾಗೆ ಮುಂದೆ ನಡೆಯತೊಡಗಿದ್ದರು. ಒಂದೊಂದು ಹೆಜ್ಜೆ ಮುಂದೆ ಬಿಳುತ್ತಿದ್ದಂತೆ ಮಾತುಗಳು ಇನ್ನೂ ಸ್ಪಷ್ಟವಾಗತೊಡಗಿದವು. ಯುವಕನ ಹೃದಯಬಡಿತ ಜೋರಾಯಿತು. ಮಾತುಗಳು ಸ್ಪಷ್ಟವಾಗಿ ಕೇಳಿಸತೊಡಗಿದಾಗ ಯುವಕನನ್ನು ಒಂದು ಕಡೆ ಹೋಗುವಂತೆ ನೂಕಿದ್ದ. ಈಗ ತಾನೇನು ಮಾಡಬೇಕೆಂಬುದು ಸ್ಪಷ್ಟವಾದಂತೆ ಕಲ್ಲು ಮುಳ್ಳುಗಳ ದಾರಿಯಲ್ಲಿ ಸ್ವಲ್ಪ ದೂರ ಸಾಗಿ ಪ್ಯಾಂಟು ಬಿಚ್ಚತೊಡಗಿದ. ಅವನ ಆಕಾರವನ್ನು ಗಮನಿಸುತ್ತಿದ್ದ ಕುಶಾಲನಿಗೆ ಅವನಿನ್ನೂ ದೂರ ಹೋಗಬೇಕಾಗಿತ್ತೆನಿಸಿತು. ತನ್ನ ಇರಾದೆ ಬದಲಿಸಿ ಅವನ ಕಡೆಗೆ ನಡೆದ. ಕುಶಾಲ ತನ್ನತ್ತಲೇ ಬರುತ್ತಿರುವುದು ಕಂಡು ಆಶ್ಚರ್ಯವಾಯಿತು ಯುವಕನಿಗೆ ಆದರೂ ಏನೂ ಹೇಳುವಹಾಗಿಲ್ಲ. ಪ್ಯಾಂಟು ಕಾಚಾ ಬಿಚ್ಚಿ ಕುಳಿತ ಅವನಿಗೆ ನಾಚಿಕೆ ಎನಿಸಿತು. ಎದ್ದು ಮತ್ತೆ ತನ್ನ ಕೆಳಬಟ್ಟೆಯನ್ನು ಮೇಲೇರಿಸುತ್ತಿದ್ದಾಗ ಅವನ ಹತ್ತಿರ ಬಂದಿದ್ದ ಕುಶಾಲ ಮೆಲ್ಲನೆಯ ದನಿಯಲ್ಲಿ ಹೇಳಿದ.

“ಇನ್ನೂ ದೂರ ನಡಿ! ಯಾವದಾದರೂ ಪೊದೆಯ ಹಿಂದೆ ಇಬ್ಬರೂ ಕಲಿತು ಬಯಲಿಗೆ ಬಂದವರಂತೆ ಕೂಡುವ.”

ಮಾತು ಮುಗಿಸಿದ ಕುಶಾಲ ಯಾವದಾದರೂ ಪೊದೆ ಕಾಣುವದೇನೋ ನೋಡಲು ಕಣ್ಣಗಲಿಸಿ ಹೆಜ್ಜೆಗಳನ್ನು ಮುಂದೆ ಹಾಕತೊಡಗಿದ. ಕಾಲ್ ದಾರಿ ಇಂದ ಅವರಾಗಲೇ ಸಾಕಷ್ಟು ದೂರ ಬಂದಿದ್ದರು. ಪೊದೆಯಂತಹ ಮುಳ್ಳಿನ ಗಿಡ ಒಂದು ಹತ್ತಿರವಾದಾಗ ಕೆಳ ಬಟ್ಟೆ ಬಿಚ್ಚಿ ಕಕ್ಕಸಿಗೆ ಕುಳಿತವನಂತೆ ಕೂಡುತಾ ಯುವಕನ ಕಡೆ ನೋಡಿದ. ಅವನು ತನ್ನ ಕೆಳ ಬಟ್ಟೆ ಕಳಚಲು ಹಿಂದು ಮುಂದಾಗುತ್ತಿದ್ದ. ಎದ್ದ ಕುಶಾಲ ಅವನ ಹತ್ತಿರ ಬಂದು ಗದರುವಂತಹ ದನಿಯಲ್ಲಿ ಉಸರಿದ.

“ಪ್ಯಾಂಟು ಬಿಚ್ಚಿ ಕೂಡು! ಅವರ ಬಳಿ ಟಾರ್ಚ್ ಇರಬಹುದು. ಕೂಡು ಯಾತರ ನಾಚಿಕೆ” ಗಾಡಾಂಧಕಾರವಿದ್ದರೂ ಇನ್ಸ್‌ಪೆಕ್ಟರ್‌ ಸಾಹೇಬರೆದುರು ಕಕ್ಕಸಿಗೆ ಕುಳಿತಂತೆ ಕೂಡುವದೇ ಅವನ ನಾಚಿಕ ಕುಶಾಲನ ಎಂಬ ಗದರುವಿಕೆಯಿಂದ ಮಾಯವಾಯಿತು. ಪ್ಯಾಂಟು ಬಿಚ್ಚತೊಡಗಿದ. ಅವನಿಂದ ದೂರ ಸರಿದು ಕುಳಿತ ಕುಶಾಲನ ಕಿವಿಗಳು ನಿಮಿರಿದ್ದವು. ಹತ್ತಿರದಲ್ಲೇ ಎಂಬಂತೆ ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತಿದ್ದವು. ಯುವಕನ ಹೃದಯ ಬಡಿತ ಅವನಿಗರಿವಿಲ್ಲದಂತೆ ಜೋರಾಯಿತು. ಈ ಇನ್ಸ್‌ಪೆಕ್ಟರ್‌ ಬಹು ಬುದ್ಧಿವಂತ ನೆಂದುಕೊಂಡ. ಕುಶಾಲನಿಗೆ ತನ್ನ ಊಹೆ ಸರಿಯಾದದ್ದು ಸಂತಸವನ್ನು ಹುಟ್ಟಿಸಿತ್ತು.

“ಎಲ್ಲಾ ಮೊದಲು ನಾವೆಂದುಕೊಂಡಂತೇ ಆಗಬೇಕು. ಹೊರಗಿರುತ್ತೇನೆ ನೀವಿಬ್ಬರೂ ಕೆಲಸ ಮುಗಿಸಿ ಬನ್ನಿ.” ಹೇಳಿದ ಒಬ್ಬ.

“ಇಲ್ಲಾ ನೀನೇ ಹೊರಗಿರು ನಾ ಒಳಹೋಗುತ್ತೇನೆ” ಒಂದು ಕಂಠ.

“ನೀನು ಕುಡಿಯಬೇಡವೆಂದರು ಕುಡಿದಿ ಅದಕ್ಕೆ ಈ ಇಲ್ಲದ ಜಗಳ” ಇನೊಂದು ಕಂಠ

“ಈ ಇನ್ಸ್‌ಪೆಕ್ಟರನ ಬಳಿ ರಿವಾಲ್ವರ್ ಇದ್ದೇ ಇರುತ್ತದೆ.” ಮತ್ತೊಂದು ಕಂಠ

“ನಾಯಕರು ಕೊಟ್ಟ ರಿವಾಲ್ವರ್ ನನ್ನ ಬಳಿ ಇದೆ.” ಮೊದಲ ಕಂಠ. ಮೂವರು ಮಾತ್ರ ಬಂಡೆಗಳ ಹಿಂದೆ ಇದ್ದಾರೆಂಬುವುದು ಸ್ಪಷ್ಟವಾಯಿತು ಕುಶಾಲನಿಗೆ.

“ನಡಿಯಿರಿ! ಆಗಲೇ ಬಹಳ ಹೊತ್ತಾಯಿತು” ಎರಡನೆ ಕಂಠ.

ಕಲ್ಲು ಬಂಡೆಗಳ ಸದ್ದು. ಅದರ ಮೇಲಿಂದ ನಡೆಯುತ್ತಿರುವಂತಹ ಸದ್ದು. ಆ ಹೆಜ್ಜೆಗಳ ಸದ್ದು ದೂರವಾಗತೊಡಗಿತು. ಕುಶಾಲ್ ಮತ್ತು ಯುವಕ ಕುಳಿತ ವಿರುದ್ಧ ದಿಕ್ಕಿನಲ್ಲಿ ಟಾರ್ಚಿನ ಬೆಳಕು ಆಗಾಗ ಅತ್ತ ಇತ್ತ ಹರಿದಾಡಿದಂತೆ ಕಂಡುಬರುತ್ತಿತ್ತು. ಈ ಇನ್ಸ್‌ಪೆಕ್ಟರ್ ಹೇಳಿದ ಮಾತು ಎಷ್ಟು ನಿಜವೆನಿಸಿತು ಯುವಕನಿಗೆ. ಅವರು ಬಂದ ಕಾಲ್‌ದಾರಿಯ ಬಳಿ ಟಾರ್ಚಿನ ಬೆಳಕು ಕತ್ತಲನ್ನು ಸರಿಸುತ್ತಿದ್ದ ಹಾಗೆ ಮೂರು ಆಕಾರಗಳು ಅಸ್ಪಷ್ಟವಾಗಿ ಕಾಣಿಸಿದ್ದವು. ಕಾಲದಾರಿಗೆ ಇಳಿದ ಕೂಡಲೇ ಒಂದು ಸಲ ನಾಲ್ಕು ದಿಕ್ಕಿನಲ್ಲಿ ಹರಿದಾಡಿತು ಟಾರ್ಚಿನ ಬೆಳಕು. ಪೊದೆಯಂತಹ ಗಿಡದ ಹಿಂದೆ ಇನ್ನೂ ಅವಿತ ಆ ಯುವಕ. ಅವನಿಗೆ ಭಯವಿಲ್ಲ. ಇದೊಂದು ರೋಮಾಂಚನ ಹುಟ್ಟಿಸುವಂತಹ ಘಟನೆ. ಇನ್ನೆರಡು ಸಲ ಸುತ್ತಲೂ ಹರಿದಾಡಿದ ಬೆಳಕು ಕಾಲ್‌ದಾರಿಯ ಮೇಲೆ ಕೇಂದ್ರಿಕೃತವಾಯಿತು. ಮುಂದೇನು ಎಂದು ಯೋಚಿಸುತ್ತಿದ್ದ ಯುವಕ. ಅವನ ನಾಚಿಕೆ ಯಾವಾಗಲೋ ದೂರವಾಗಿಬಿಟ್ಟಿತ್ತು. ಕುಶಾಲನ ಮೂಗಿಗೆ ಈಗ ಯಾವ ಹೊಲಸು ವಾಸನೆಯೂ ಬರುತ್ತಿರಲಿಲ್ಲ.
* * *

ಸೊಣಕಲು ಯುವಕ ಮತ್ತವನ ಸಂಗಡಿಗನ ಸಹನ ಮುಕ್ತಾಯವಾಗುವಂತೆ ಆ ಗುಡಿಸಲಿನಿಂದ ಇಬ್ಬರು ಹೊರಬಿದ್ದರು. ಅವರ ಹೆಜ್ಜೆಗಳು ರಸ್ತೆಯ ಕಡೆಗೇ ಬೀಳುತ್ತಿದ್ದವು. ಅದನ್ನು ನೋಡಿ ಇನ್ನೂ ದೂರ ಸರಿದು ಯಾರಿಗೂ ಕಾಣದಂತೆ ಗಾಢ ಕತ್ತಲಲ್ಲಿ ಅವಿತು ಕುಳಿತರು ಯುವಕರು. ತಮ್ಮದೇ ಗುಂಗಿನಲ್ಲಿ ರಸ್ತೆಗೆ ಬಂದ ಅವರು ಯಾರ ಪರಿವೆಯೂ ಇಲ್ಲದಂತೆ ನಡೆಯುತ್ತಿದ್ದರು. ಬೀದಿ ದೀಪದ ಬೆಳಕಿನಲ್ಲಿ ಅವರು ಬಂದಾಗ ಸೊಣಕಲು ಯುವಕನ ಹೃದಯಬಡಿತ ಜೋರಾಯಿತು. ಆ ಇಬ್ಬರಲ್ಲಿ ಒಬ್ಬ ತಾನು ನಾಯಕನ ಮನೆ ಎದುರು ಕಂಡ ಮೀಸೆಯವ. ಅವರು ದೂರವಾಗುವವರೆಗೂ ಸುಮ್ಮನಿದ್ದ ಅವನು ತನ್ನ ಸ್ನೇಹಿತನ ಕಿವಿಯಲ್ಲಿ ಉಸುರಿದ.

“ಇವರೇ ಅವರು”

ಅದನ್ನು ಕೇಳಿ ಅವನೂ ಕಣ್ಣಗಲಿಸಿ ಅವರನ್ನು ನೋಡಿದ. ಅವರಿಬ್ಬರೂ ದರೋಡೆಕೋರರಂತೆಯೇ ಕಾಣುತ್ತಿದ್ದರು. ಒಮ್ಮೆಲೆ ಅವನ ಕಾಯುವಿಕೆಯ ಬೇಸರ ಮಾಯವಾಯಿತು. ತಾನು ಒಳ್ಳೆಯ ಪತ್ತೇದಾರನಾಗಬಲ್ಲೆ ಎನಿಸಿತು. ಸೊಣಕಲು ಯುವಕನಿಗೆ ಅವರು ಇನ್ನೂ ಮುಂದೆ ಹೋಗುವವರೆಗೂ ತಡೆದು ಯಾರಿಗೂ ಕಾಣದಂತೆ ಅವರನ್ನು ಹಿಂಬಾಲಿಸ ತೊಡಗಿದರು.

ಅವರು ತೇಜಾನ ಮನೆಯ ಕಡೆ ಹೋಗುವ ದಾರಿ ದಾಟಿ ಬಯಲಿನ ಕಡೆ ಹೆಜ್ಜೆ ಹಾಕುತ್ತಿದ್ದಾಗ ಇಬ್ಬರಿಗೂ ನಿರಾಸೆಯಾಯಿತು. ಆ ಇಬ್ಬರಲ್ಲಿ ಯಾರೂ ಹೆಚ್ಚು ಕುಡಿದವರಂತೆ ಕಾಣುತ್ತಿರಲಿಲ್ಲ. ಅವರನ್ನು ಹಿಂಬಾಲಿಸಿ ಏನು ಮಾಡುವದು ಎಂಬ ಯೋಚನೆ ಸೊಣಕಲು ವ್ಯಕ್ತಿಯ ತಲೆಯಲ್ಲಿ ಹಾಯುತ್ತಿದ್ದಾಗ ಎದುರಿನಿಂದ ಮೂವರು ಬರುತ್ತಿರುವದು ಕಾಣಿಸಿತು. ಏನು ಮಾಡಬೇಕೆಂದು ತೋಚದೇ ಕತ್ತಲಲ್ಲಿ ಒಂದಾಗುವಂತೆ ಗೋಡೆಗಾನಿ ನಿಂತರು. ಎಷ್ಟು ಯತ್ನಿಸಿದರು ತಾವು ಅವರ ಕಣ್ಣಿಗೆ ಬೀಳುವದು ಖಂಡಿತವೆನಿಸಿದಾಗ ತಾವು ಹಿಂಬಾಲಿಸುತ್ತಿದ್ದ ಇಬ್ಬರು, ಮುಂದಿನಿಂದ ಬರುತ್ತಿದ್ದ ಮೂವರು ಕೆಲ ಕ್ಷಣಗಳು ನಿಂತು ಏನೋ ಮಾತಾಡಿಕೊಳ್ಳುತ್ತಿರುವದು ಕಾಣಿಸಿತು. ಒಮ್ಮೆಲೆ ಯಾವದೋ ಯೋಚನೆ ಹೊಳೆದಂತೆ ತನ್ನ ಜತೆಗಿದ್ದವನ ಕೈ ಹಿಡಿದು ಲಗುಬಗೆಯಿಂದ ಹಿಂದೆ ಹೆಜ್ಜೆ ಹಾಕಿದ. ಇವನೇನು ಮಾಡುತ್ತಿದ್ದಾನೆ ತಿಳಿಯದವನಂತೆ ಅವನನ್ನು ಹಿಂಬಾಲಿಸಿದ ಧಾಂಡಿಗ ಯುವಕ, ಹಲವು ಹೆಜ್ಜೆಗಳು ಲಗುಬಗೆಯಿಂದ ಕ್ರಯಿಸಿದಾಗ ಒಂದು ಹೊಲಸು ಹಾಕುವ ಸಂದು. ಅದು ಮುಂದಿನ ಒಂದು ದಾರಿಗೆ ಸೇರಿಕೊಳ್ಳುತ್ತಿತ್ತು. ಅದನ್ನು ಈಗ ಬಹು ಅಪರೂಪದ ಜನರು ಮಾತ್ರ ಉಪಯೋಗಿಸುತ್ತಿದ್ದರು. ಅದೀಗ ಹೊಲಸನ್ನು ಹಾಕುವ ಜಾಗವಾಗಿ ತಯಾರಾಗಿತ್ತು. ಇಬ್ಬರೂ ಆ ಸಂದಿನಲ್ಲಿ ಹೋಗಿ ನಿಂತರು.
* * *

ತಾವು ಹಿಂಬಾಲಿಸುತ್ತಿರುವ ಮೂವರು ಇನ್ನಿಬ್ಬರೊಡನೆ ಮಾತಾಡಿದ್ದನ್ನು ಗಮನಿಸಿದ್ದರು ಕುಶಾಲ್ ಮತ್ತು ಅವನೊಡನೆ ಇದ್ದ ಯುವಕ. ಮಾತು ಮುಗಿಸಿದ ಅವರು ತಮ್ಮ ಕಡೆಯೇ ಬರುತ್ತಿದ್ದಾಗ ಅವರಿಗೆ ಕಾಣದಂತೆ ಅಡಗಲು ಅಲ್ಲಿ ಸಾಕಷ್ಟು ಸ್ಥಳವಿತ್ತು ತಕ್ಷಣ ನಿರ್ಣಯ ತೆಗೆದುಕೊಂಡ ಕುಶಾಲ ಅವನ ಕಿವಿಯಲ್ಲಿ ಉಸುರಿದ.

“ಅವರ ಮೇಲೆ ನಿಗಾ ಇಡು. ಯಾವಾಗಲೂ ಹಿಂದೆ ಕೂಡ ನೋಡುತ್ತಿರು ನಾನ್ಯಾರನ್ನಾದರೂ ಕಳುಹಿಸುವೆನು ಅವರು ತಪ್ಪಿಸಿಕೊಳ್ಳಬಾರದು ನಿನ್ನಲ್ಲಿ ಹಗ್ಗವಿದೆತಾನೆ”

“ಇದೆ”

“ಯಾರನ್ನಾದರೂ ಕಳಿಸುತ್ತೇನೆ ಆವರೆಗೂ ಏನೂ ಮಾಡಬೇಡ. ನಮ್ಮವರು ಬಂದ ಮೇಲೂ ಹುಶಾರಾಗಿ ಕೆಲಸ ಮಾಡಿ ಅವರಲ್ಲಿ ಆಯುಧ ಇರಬಹುದು” ಎಂದ ಕುಶಾಲ ಅವನನ್ನು ಮರೆತವನಂತೆ ಲಗುಬಗೆಯಿಂದ ಹೆಜ್ಜೆಯ ಸಪ್ಪಳವಾಗದ ಹಾಗೆ ಗಾಢ ಕತ್ತಲಲ್ಲಿ ಆ ಮೂವರನ್ನು ಹಿಂಬಾಲಿಸ ತೊಡಗಿದ. ಅವನಿಂದ ದೂರದಲ್ಲಿ ಹಾದು ಹೋದ. ಅವರು ತಮ್ಮದೇ ಗುಂಗಿನಲ್ಲಿರುವಂತೆ ಕಂಡರು. ಕುಶಾಲನ ಹೆಜ್ಜೆಯ ಗತಿ ತೀವ್ರವಾಯಿತು.
* * *

ಹೊಲಸು ಹಾಕುವ ಸಂದಿನಲ್ಲಿ ನಿಂತ ಯುವಕರ ಮುಂದಿನಿಂದಲೇ ಹೋದರು ಆ ಮೂವರು ಧಾಂಡಿಗರು, ಏನು ಮಾಡಬೇಕೆಂಬುವುದು ತೋಚದಾಯಿತವರಿಗೆ. ಮುಂದೆ ಹೋದ ಆ ಮೂವರನ್ನು ಹಿಂಬಾಲಿಸುವದೊ ಅಥವಾ ಕುಡಿದು ಗುಡಿಸಿಲಿನಿಂದ ಹೊರ ಬಂದ ಇಬ್ಬರನ್ನೋ! ಸಂದಿನಿಂದ ಹೊರ ಬಂದ ಅವರು ಇನ್ಸ್‌ಪೆಕ್ಟರ್ ಮನೆಯ ಕಡೆ ಹೋಗುತ್ತಿರುವ ಮೂವರನ್ನು ನೋಡುತ್ತಾ ನಿಂತಾಗ ಒಮ್ಮೆಲೆ ಹಿಂದಿನಿಂದ ಹೆಜ್ಜೆಯ ಸದ್ದು ಕೇಳಿ ಬರಲಾರಂಭಿಸಿತು. ಚಕಿತರಾದಂತೆ ಹಿಂತಿರುಗಿದರು. ಅರೆ ಕತ್ತಲೆಯಲ್ಲಿ ಕುಶಾಲನನ್ನು ಅವರು ಗುರುತಿಸಿದರು. ಅವರ ಹತ್ತಿರ ಬರುತ್ತಲೇ ಆತುರದ ದನಿಯಲ್ಲಿ ಹೇಳಿದ ಕುಶಾಲ್.

“ಆ ಇಬ್ಬರನ್ನೂ ಹಿಂಬಾಲಿಸುತ್ತಿದ್ದಾನೆ ನಿಮ್ಮ ಮಿತ್ರ ವೆಂಕಟ್. ಓಡಿ ಹೋಗಿ ಆ ಇಬ್ಬರನ್ನು ಬಂಧಿಸಿ ಜಾಗ್ರತೆ ಅವರು ತಪ್ಪಿಸಿಕೊಳ್ಳಬಾರದು.”

ಆತುರದಲ್ಲಿ ಹೇಳಿದರು ಬಹು ಮೆಲ್ಲನೆ ಮಾತಾಡಿದ. ಮಾತು ಮುಗಿಸಿ ತೇಜಾನ ಮನೆ ಇರುವ ಗಲ್ಲಿಯಲ್ಲಿ ಹೋದ ಆ ಮೂವರ ಹಿಂದೆ ಬಿದ್ದ ಕುಶಾಲ್. ಸೊಣಕಲು ಯುವಕ ಮತ್ತು ದೃಢಕಾಯ ಅವರ ಸ್ನೇಹಿತರಿರುವ ದಿಕ್ಕಿನಲ್ಲಿ ಓಡಿದರು.
* * *

ಕಾಯುವಿಕೆ ತೇಜಾನಲ್ಲಿ ಬಹಳ ಬೇಸರ ಹುಟ್ಟಿಸುತ್ತಿತ್ತು. ಎಷ್ಟೋಸಲ ಅವನು ಕಲ್ಯಾಣಿ ಕೊಟ್ಟ ಮಾಹಿತಿ ತಪ್ಪಾಗಿರಬಹುದೇ? ನಾಯಕ್ ಬೇರಾವದಾದರೂ ಸಂಚನ್ನು ಹೂಡಿರಬಹುದೇ? ಎಂದು ಯೋಚಿಸುವಂತೆ ಮಾಡಿತ್ತು. ಇಲ್ಲಾ ಕಲ್ಯಾಣಿ ಇಲ್ಲಿನ ಜನರನ್ನು ಅವರ ಮನೋಭಾವವನ್ನು ಚೆನ್ನಾಗಿ ಬಲ್ಲಳು. ಅವಳ ಊಹೆ ತಪ್ಪಾಗಿರಲು ಸಾಧ್ಯವಿಲ್ಲ. ಕಾಯಬೇಕು ಕಾಯುವದೇ ತಮ್ಮ ಕೆಲಸವೆಂಬುವದ್ದನ್ನು ತನಗೆ ತಾನು ಜ್ಞಾಪಿಸಿಕೊಂಡ. ಈಗ ಬೇಸರವನ್ನು ಓಡಿಸಲು ಒಂದೇ ಉಪಾಯವೆಂದು ತೋಚಿತವನಿಗೆ ಕಲ್ಯಾಣಿ ಬಗ್ಗೆ ತಮ್ಮ ಭವಿಷ್ಯದ ಬಗ್ಗೆ, ಅವರಿಂದ ಜನ್ಮತಾಳಲಿರುವ ಭಗತಸಿಂಗ್‌ನ ಬಗ್ಗೆ ಯೋಚಿಸುವದು. ಮನವನ್ನು ಅತ್ತ ತಿರುವಿದಾಗ ಸಮಯ ಸುಲಭವಾಗಿ ಸರಿಯಲಾರಂಭಿಸಿತು.

ಗುಂಡು ತಾತನಲ್ಲಂತೂ ಚಡಪಡಿಕೆ ಹೆಚ್ಚಾಗಿತ್ತು. ಕಾಯುವಿಕೆಯ ಬೇಸರದಿಂದ ಅವನು ಮುಕ್ತನಾಗಲು ಎಲ್ಲವನ್ನು ಮರೆತು ಮಲಗಲು ಯತ್ನಿಸಿದ ಆದರೆ ನಿದ್ದೆಯೂ ಅವನ ಹತ್ತಿರ ಸುಳಿಯಲಿಲ್ಲ. ಈ ಕಾಯುವಿಕೆ ವ್ಯರ್ಥ ಏನೂ ಆಗುವುದಿಲ್ಲ. ಈ ತೇಜಾ ಇಲ್ಲದ್ದನೇನೋ ಊಹಿಸಿಕೊಂಡಿದ್ದಾನೆ ಎನಿಸತೊಡಗಿತು. ತನ್ನ ಚಡಪಡಿಕೆಯನ್ನು ಬಹು ಕಷ್ಟದಿಂದ ನಿಯಂತ್ರಣದಲ್ಲಿಟ್ಟುಕೊಂಡು ತನ್ನಲ್ಲಿ ಇದ್ದ ಬದ್ದ ಸಹನೆಯನ್ನೆಲ್ಲಾ ಕೂಡಿಹಾಕಿ ಕಾಯುತ್ತಿದ್ದ.

ಕಾದು, ಕಾದು ಬೇಸತ್ತ ಇನ್ನೊಂದು ಕೋಣೆಯಲ್ಲಿದ್ದ ಯುವಕ ಏನೂ ಆಗುವುದಿಲ್ಲ, ಬಂಡೇರಹಳ್ಳಿಯಲ್ಲಿ ಇಂತಹ ಘಟನೆ ನಡೆಯುವುದೆಂದರೇನು ಎಲ್ಲರ ತಲೆ ಕೆಟ್ಟಿದೆ. ಹೇಗಾದರೂ ರಾತ್ರಿ ಕಳೆದು ಬೆಳಿಗ್ಗೆ ಎದ್ದು ಮನೆಗೆ ಹೋದರಾಯಿತು ಎಂದುಕೊಳ್ಳುತ್ತಿದ್ದ. ಅಷ್ಟಾದರೂ ಅವನ ಯೋಚನೆ ತೇಜಾ ಮತ್ತು ಅವನ ವ್ಯಕ್ತಿತ್ವದ ಸುತ್ತಲೂ ಸುಳಿದಾಡುತ್ತಿತ್ತು. ಅವನಿಂದ ಬಹಳ ಆಕರ್ಷಿತನಾದ ಆ ಯುವಕ ಇಂತಹ ವ್ಯಕ್ತಿ ಏನೂ ಇಲ್ಲದೇ ಇಂತಹ ಯೋಜನೆ ಹಾಕುವದು ಸಾಧ್ಯವೇ ಎಂದುಕೂಡ ಯೋಚಿಸುತ್ತಿದ್ದ. ಬೆಳಗಾಗಲು ಕಾಯುತ್ತಿದ ಅವನಲ್ಲಿ ಏನೆಲ್ಲಾ ಯೋಚನೆಗಳು ಸುಳಿದಾಡಿ ಹೋಗುತ್ತಿದ್ದವು.

ಮುಂಬಾಗಿಲ ಬಳಿ ಸದ್ದಾದಾಗ ಒಮ್ಮೆಲೆ ಆ ಮೂವರ ಎಲ್ಲಾ ಅವಯವಗಳು ಒಮ್ಮೆಲೇ ಚುರುಕಾದವು. ಬೇಸರವೆಲ್ಲಾ ಮರೆತರು. ತನ್ನ ರಿವಾಲ್ವರನ್ನು ಮುಟ್ಟಿಕೊಂಡು ಕಾಯುತ್ತಿದ್ದ ತೇಜಾ, ಮುಂದೆ ಕೇಳಿ ಬಂದ ಸದ್ದು ಸ್ವಲ್ಪ ಜೋರಾಯಿತು. ಅದರೊಡನೆಯೇ ಒಳಗಿನ ಬೋಲ್ಟು ಬಿಚ್ಚಿಕೊಂಡ ಶಬ್ದ. ರಿವಾಲ್ವರ್ ಹಿಡಿದು ಹಾಸಿಗೆಯಿಂದ ಎದ್ದ ತೇಜಾ ಮುಂಬಾಗಿಲು ಕಾಣುವಂತಹ ಸ್ಥಳದಲ್ಲಿ ಬಂದು ನಿಂತ. ಕಿರ್ರನೆ ಸದ್ದು ಮಾಡುತ್ತಾ ಒಂದು ಬಾಗಿಲು ಮಾತ್ರ ತೆಗೆದುಕೊಂಡಿತು. ಕತ್ತಲಲ್ಲಿ ಒಬ್ಬರ ಹಿಂದೆ ಒಬ್ಬರು ಮೂವರು ಒಳನುಗ್ಗಿದರು. ಹಜಾರದಲ್ಲಿ ಬಂದ ಮೇಲೆ ಒಬ್ಬ ಟಾರ್ಚ್ ಬೆಳಗಿಸಿದ. ಅದನ್ನು ಕಂಡು ಒಮ್ಮೆಲೆ ಮರೆಯಾದ ತೇಜಾ, ಬೆಳಕು ಮನೆಯ ಸುತ್ತು ಮುತ್ತು ಒಂದೆರಡು ಸಲ ಹರಿದಾಡಿತು. ಬೆಳಕು ಬೇರೆಯಡೆ ಇದ್ದಾಗ ನೋಡಿದ ತೇಜಾ, ಮುಂಬಾಗಿಲಿನಿಂದ ಇನ್ನೂ ಒಳಗೆ ಬಂದಿದ್ದರಾ ಮೂವರು. ಒಬ್ಬನ ಕೈಯಲ್ಲಿ ಮಾತ್ರ ರಿವಾಲ್ವರಿತ್ತು.

“ಬನ್ನಿ ನಾನಿಲ್ಲಿದ್ದೇನೆ” ಎಂದ ತೇಜಾ.

ಆ ಮಾತಿನಿಂದ ಅವರು ದಂಗಾದಂತೆ ಕಂಡಿತು. ಮಾತು ಬಂದ ಕಡೆ ಗುಂಡು ಹಾರಿತು. ರಿವಾಲ್ವರ್ ಹಿಡಿದವ. ಒಮ್ಮೆಲೆ ಮುಂದೆ ಬಂದ ತೇಜಾ ಅವನ ಎದೆಯ ನಡುವೆ ತನ್ನ ರಿವಾಲ್ವರನ ಬುಲೆಟನ್ನು ತೂರಿಸಿದ. ಅದರ ಹಿಂದೆಯೇ ಎತ್ತರದ ದನಿಯಲ್ಲಿ ಆಜ್ಞಾಪಿಸಿದ.

“ಹೊರಗೆ ಬನ್ನಿ ಮುಂದಿನ ಬಾಗಿಲು ಹಾಕಿ”

ಅಂತಹ ಆಜ್ಞೆಗಾಗೇ ಕಾಯುತ್ತಿದ್ದ ಯುವಕ ಮಿಂಚಿನ ಗತಿಯಲ್ಲಿ ಮುಂಬಾಗಿಲ ಬಳಿ ಬಂದ, ದೀಪ ಹೊತ್ತಿಸಿದ ತೇಜ. ಒಮ್ಮೆಲೆ ಬಂದ ಬೆಳಕಿನಲ್ಲಿ ತಮ್ಮ ಸಂಗಡಿಗ ಶವವಾಗಿ ಬಿದ್ದದ್ದನ್ನು ಕಂಡರವರು. ಓಡಲು ದಾರಿ ಇಲ್ಲದಂತೆ ಯುವಕ ಮುಂಬಾಗಿಲ ಬಳಿ ನಿಂತಿದ್ದ. ಭಯದ ಕಾರಣ ಅವನ ಕಡೆ ಓಡಿದ ಒಬ್ಬ ಅವನ ತೊಡೆಯಲ್ಲಿ ತೇಜಾನ ರಿವಾಲ್ವರನಿಂದ ಹೊರಟ ಬುಲೇಟ್ ಸೇರಿತು. ನೋವಿನಿಂದ ಕಿರುಚಿ ತೊಡೆಯನ್ನು ಹಿಡಿದುಕೊಂಡು ಕುಳಿತನವ, ಗಾಬರಿಯಿಂದ ಅವನನ್ನೇ ನೋಡುತ್ತಿದ್ದ ಕೊನೆಯವನಿಗೆ ಹೇಳಿದ ತೇಜಾ,

“ನೀನೂ ಅಲ್ಲಿಂದ ಅಲ್ಲಾಡಿದರೆ ಸಾಯುತ್ತಿ”

ಒಮ್ಮೆಲೆ ರಭಸವಾಗಿ ಬಾಗಿಲು ತಳ್ಳಲಾಯಿತು. ಈ ಅನಿರೀಕ್ಷಿತ ಘಟನೆಯಿಂದ ಎರಡು ಹೆಜ್ಜೆ ಮನೆಯೊಳ ಬಂದ ಯುವಕ. ಆಗ ಗುರಿ ಇಟ್ಟು ತೇಜಾ ರಿವಾಲ್ವರ್ ಹಿಡಿದಾಗ ಒಳಬಂದ ಕುಶಾಲ.

“ಇದೇನಿದು ಹೀಗೆ ನುಗ್ಗುವುದೇ ಒಂದು ಕ್ಷಣ ಹೆಚ್ಚು ಕಡಿಮೆಯಾಗಿದ್ದರೆ ನೀನು ಸಾಯುತ್ತಿದ್ದಿ.”

ಆ ಮಾತನ್ನು ಕೇಳಿಸಿಕೊಳ್ಳದವನಂತೆ ತೊಡೆ ಹಿಡಿದು ಕುಳಿತವನ ಮುಖಕ್ಕೆ ತನ್ನ ಬೂಟುಗಾಲಿನಿಂದ ಜೋರಾಗಿ ಒದ್ದು ಮಾತಾಡಿದ ಕುಶಾಲ

“ನೀವು ಪ್ಲಾನ್ ಯಾಕೆ ಬದಲಾಯಿಸಿದಿರಿ? ಹೊರಗೆ ಒಬ್ಬ ಕಾವಲಿರುವದಾಗಿ ಯೋಜನೆ ಹಾಕಿದ್ದರಲ್ಲ.”

ನೋವಿನಿಂದ ಇನ್ನೊಂದು ಕೂಗು ಹೊರಟಿತವನ ಬಾಯಿಯಿಂದ ಏನೂ ಮಾತಾಡಲಿಲ್ಲ. ಮತ್ತೊಮ್ಮೆ ಒದ್ದು ಕೋಪಾವೇಶದಲ್ಲಿ ಹೇಳಿದ ಕುಶಾಲು.

“ಬೇಗ ಬಾಯಿಬಿಡು ಇಲ್ಲದಿದ್ದರೆ ಕೊಂದುಬಿಡುತ್ತೇನೆ”

“ಮನೆ ಹತ್ತಿರ ಬಂದಾಗ ಯಾರೂ ಕಾವಲಿರುವ ಅವಶ್ಯಕತೆ ಇಲ್ಲವೆಂದು ಎಲ್ಲಾರೂ ಒಳಬಂದೆವು ಸ್ವಾಮಿ.”

“ಕುಶಾಲ ನೀನು, ಇವನು ಕಲೆತು ಇವರ ಬಾಯಿಬಿಡಿಸಿ. ಸಿದ್ದಾನಾಯಕ್‌ ಇವರಿಗೆ ಎಷ್ಟು ಹಣ ಕೊಟ್ಟಿದ್ದಾನೆಂದು ತಿಳಿಯಬೇಕು.”

“ಇವರುಗಳು ಹೇಳಿದ್ದಾರೆ ಈ ರಿವಾಲ್ವರ್ ನಾಯಕ್ ಕೊಟ್ಟಿದೆಂದು” ತೇಜಾ ಮಾತು ಪೂರ್ತಿ ಮಾಡುವ ಮುನ್ನ ಸಿಟ್ಟಿನ ದನಿಯಲ್ಲಿಯೇ ಹೇಳಿದ ಕುಶಾಲ್.

“ಅದೇ ಎಲ್ಲಾ ವಿವರ ಸಂಗ್ರಹಿಸಿ ನಾ ಪೋಲೀಸ್ ಸ್ಟೇಷನ್‌ಗೆ ಹೋಗಿ ಬರುತ್ತೇನೆ” ಎಂದ ತೇಜಾ ಅಲ್ಲಿಂದ ಹೊರಬಿದ್ದ.

ಯುವಕ ಮತ್ತು ಕುಶಾಲ ಇಬ್ಬರನ್ನೂ ಒಳತಂದು ಬಾಯಿಬಿಡಿಸುವ ಕೆಲಸ ಆರಂಭಿಸಿದರು. ದಂಗುಬಡಿದಂತೆ ಇದ್ದೆಲ್ಲವನ್ನೂ ನೋಡುತ್ತಿದ್ದ ತಾತ ಚೇತರಿಸಿಕೊಂಡು ಅವರುಗಳು ಹೇಳಲಿರುವ ಮಾತುಗಳನ್ನು ಕೇಳಲು ಸಿದ್ಧನಾದ. ಬುಲೆಟ್ ಸೇರಿದ ಕಾಲಿನ ಕಡೆ ತೋರಿಸುತ್ತ ಯುವಕನಿಗೆ ಹೇಳಿದ ಕುಶಾಲ.

“ಅದನ್ನು ತಿರುವು ನೋಡುವ, ಮುರಿದು ಕೈಗೆ ಬರುತ್ತದೇನೋ”

ಅತಿ ಆನಂದದಿಂದ ಆ ಕಾಲನ್ನು ಹಿಡಿದು ಪೂರ್ತಿ ತಿರುವಿದ ಆ ಯುವಕ. ಆ ಬಂದಿಯ ಆರ್ತನಾದ ಇಡೀ ಬಂಡೇರಹಳ್ಳಿಗೆ ಕೇಳುವಂತಿತ್ತು.

“ಈಗ ಮಾತಾಡು ಇಲ್ಲದಿದ್ದರೆ ಬರೀ ನೋವಿನಿಂದ ಸಾಯುತ್ತಿ. ಬೇಗ ಬೇಗ ಎಲ್ಲವನ್ನು ಹೇಳು ಇಲ್ಲಿಗೆ ನಿಮ್ಮನ್ನು ನಾಯಕ್ ಹೇಗೆ, ಕರೆ ತಂದ? ತೇಜಾನನ್ನು ಕೊಲಲ್ಲು ಎಷ್ಟು ಹಣ ಕೊಟ್ಟ? ನಿಮ್ಮ ಅವನ ಸಂಬಂಧ ಎಷ್ಟು ಹಳೆಯದು. ಎಲ್ಲಾ ಹೇಳು.”

ತಾತ ತನ್ನ ಸಂಗಡಿಗನನ್ನು ನೋಡಿದ, ಈಗ ಹಿಂಸೆಗೆ ಗುರಿಯಾಗುತ್ತಿರುವ ಇವನನ್ನು ನೋಡುತ್ತಿದ್ದವ ಕೈಯಲ್ಲಿ ಒಮ್ಮೆಲೆ ಒಂದು ಬರ್ಜಿ ಪ್ರತ್ಯಕ್ಷವಾಯಿತು. ಹತ್ತಿರದಲ್ಲೆ ಇದ್ದ ಯುವಕನ ಮೇಲೆ ದಾಳಿ ಮಾಡಲು ಹೋದ ಆವರೆಗೆ ರಿವಾಲ್ವರನ್ನು ಜೇಬಿನಲ್ಲಿ ಇಟ್ಟುಕೊಂಡುಬಿಟ್ಟಿದ್ದ ಕುಶಾಲ ಯುವಕ ಬರ್ಜಿ ಏಟಿನಿಂದ ತಪ್ಪಿಸಿಕೊಂಡು ಅವನು ಆಯುಧವಿದ್ದ ಕೈಯನ್ನು ಬಲವಾಗಿ ಹಿಡಿದ. ಅವಸರದಲ್ಲಿ ಮಾಡಿದ ಆ ಕೆಲಸದಿಂದಾಗಿ ಅವನ ಎಡಭುಜಕ್ಕೆ ಬರ್ಜಿಯ ಏಟು ಬಿತ್ತು. ಅದೇ ಕ್ಷಣದಲ್ಲಿ ಕುಶಾಲ ಬಲವಾಗಿ ಅವನ ಹೊಟ್ಟೆಗೆ ಒದ್ದ. ಈ ಕಲಹವನ್ನು ನೋಡುತ್ತಿದ್ದ ತಾತ ಎದ್ದು ಅವನ ಕೈಯಲ್ಲಿದ ಚೂರಿಯನ್ನು ಬಿಡಿಸಿದ. ಕೆಳಗೆ ಬಿದ್ದ ಅದನ್ನು ತಾತ ತೆಗೆದುಕೊಳ್ಳುತ್ತಿದ್ದಂತೆ ಹೇಳಿದ ಕುಶಾಲ.

“ನಿನಗೇನೂ ಆಗಿಲ್ಲ. ಹೊಡಿ ಇವನನ್ನು ಎಷ್ಟು ಹೊಡೆಯಬಲ್ಲೆಯೋ ಹೊಡಿ.”

ಯುವಕನ ಭುಜಕ್ಕಾದ ಗಾಯದಿಂದ ರಕ್ತ ಬಂದು ಅವನ ಶರ್ಟ್ ನೆನೆಯಲಾರಂಭಿಸಿತ್ತು. ಅದನ್ನು ಲೆಕ್ಕಿಸದೇ ಅವನು ತನ್ನ ರೋಷವನ್ನೆಲ್ಲಾ ಅವನ ಮೇಲೆ ಕಾರಲಾರಂಭಿಸಿದ. ತೀವ್ರವಾದ ಹಿಂಸೆಗೆ ಗುರಿಯಾದ ಅವರು ತಮ್ಮ ತಮ್ಮ ಜಾತಕವನೆಲ್ಲಾ ಉಗುಳತೊಡಗಿದ್ದರು.
* * *

ಬಡಕಲು ಯುವಕ, ವೆಂಕಟ್ ಮತ್ತೊಬ್ಬ ಕಲೆತು ಆ ಇಬ್ಬರನ್ನು ಬಂಧಿಸುವದು ಕಷ್ಟವಾಗಲಿಲ್ಲ. ಆ ಇಬ್ಬರು ಕೈಗಳಿಗೆ ಹಗ್ಗ ಕಟ್ಟಿ ಇಷ್ಟಬಂದಂತೆ ಒದೆಯುತ್ತಾ ಹೊಡೆಯುತ್ತಾ ಇಡೀ ಬಂಡೇರಹಳ್ಳಿಯನ್ನೇ ಎಬ್ಬಿಸುವಂತೆ ಮಾತಾಡಿಸುತ್ತಾ ಅವರು ಆ ಇಬ್ಬರನ್ನೂ ತೇಜಾನ ಮನೆಗೆ ಕರೆತಂದರು.

ಬಂದಿಗಳ ಬಾಯಿಯಿಂದ ನಾಯಕನ ವೃತ್ತಾಂತ ಕೇಳಿ ದಂಗಾದರು ಗುಂಡು ತಾತ. ಆ ಯುವಕರಿಗೂ ಅದನ್ನು ನಂಬುವದು ಕಷ್ಟವಾಗಿ ತೋರಿತು. ಅವರುಗಳ ಪ್ರಕಾರ ಈ ಬಂಡೇರಹಳ್ಳಿಯ ಪಂಚಾಯತಿ ಪ್ರೆಸಿಡೆಂಟ್ ಸಿಫಾನಾಮರ್ ಬರೀ ಬಂಡೇರಹಳ್ಳಿಯಲ್ಲಿ ಅಲ್ಲದೇ ಆಸುಪಾಸಿನ ಹಳ್ಳಿಗಳಲ್ಲೂ ಆದ ಘೋರಗಳಿಗೆ ಅವನೇ ಕಾರಣ. ಅದಕ್ಕೆ ಪೂರಕವೆಂಬಂತೆ ಮೊದಲಿನಿಂದ ಬಂಡೇರಹಳ್ಳಿಯಲ್ಲಿ ನಡೆದ ಘಟನೆಗಳನ್ನು ಆಸುಪಾಸಿನ ಹಳ್ಳಿಗಳಲ್ಲಿ ಆದ ಕೊಲೆಗಳ ವಿವರವನ್ನು ಕೊಟ್ಟರು. ಅಷ್ಟೆಲ್ಲಾ ಕೇಳಿದ ಮೇಲೆ ಅದನ್ನು ಯಾರೇ ಆಗಲಿ ನಂಬದೇ ಇರುವದು ಅಸಾಧ್ಯ. ಯುವಕರನ್ನೊಳಗೊಂಡು ಮುದಿಯ ಗುಂಡು ತಾತನಿಗೂ ಅವನನ್ನು ಕೊಂದು ಹದ್ದು ನಾಯಿಗಳಿಗೆ ಆಹಾರ ಮಾಡಿಬಿಡಬೇಕೆಂದೆನಿಸುತ್ತಿತ್ತು.
* * *

ತೇಜಾ ಪೋಲೀಸ್‌ಸ್ಟೇಷನ್ ತಲುಪಿದಾಗ ಅಲ್ಲಿ ಪೋಲೀಸ್ ವ್ಯಾನೊಂದು ನಿಂತಿತು. ಒಳಗೆ ಮಲಗಿದ್ದವರನ್ನು ಎಬ್ಬಿಸುವದರಲ್ಲಿ ತೊಡಗಿದ್ದ ಹೊಸ ಪೇದೆಯೊಬ್ಬ, ತೇಜಾನನ್ನು ನೋಡುತ್ತಲೇ ಅಲ್ಲಿದ್ದ ಕುರ್ಚಿಯೊಂದರಲ್ಲಿ ಕಾಲು ಚಾಚಿ ಕುಳಿತಿದ್ದ ಇನ್ಸ್‌ಪೆಕ್ಟರ್‌ ಎದ್ದು ಕೈ ಮುಂದೆ ಚಾಚಿ ಹೇಳಿದ.

“ಇನ್ಸ್‌ಪೆಕ್ಟರ್ ಮುನಿಸ್ವಾಮಿ! ನೀವು ಇನ್ಸ್ ಪೆಕ್ಟರ್ ತೇಜಾ ಇರಬಹುದು”

“ಹೌದು” ಎಂದು ತೇಜಾ ಮುಖವೆಲ್ಲಾ ನಗುತುಂಬಿ ಹಾರ್ದಿಕವಾಗಿ ಅವನ ಕೈ ಕುಲುಕಿದ.

“ಈಗತಾನೆ ಬಂದೆ ಪಟ್ಟಣದಿಂದ ಮೆಸೇಜ್ ಬಂತು. ಕೆಲಸ…”

“ಬಹಳ ಮುಖ್ಯವಾದದ್ದು ಒಳಗೆ ಬನ್ನಿ ಮಾತಾಡುವ… ನಿಮ್ಮ ಜತೆ ಎಷ್ಟು ಜನರಿದ್ದಾರೆ?” ಅವನ ಮಾತನ್ನು ತಡೆಯುತ್ತಾ ಕೇಳಿದ ತೇಜಾ ಒಬ್ಬ ಎಸ್.ಐ. ಒಬ್ಬ ಎಚ್.ಸಿ. ಮೂವರು ಕಾನ್‌ಸ್ಟೇಬಲ್ಸ್” ಅವನನ್ನು ಹಿಂಬಾಲಿಸುತ್ತಾ ಹೇಳಿದ ಇನ್ಸ್ ಪೆಕ್ಟರ್ ಮುನಿಸ್ವಾಮಿ, ಅದಕ್ಕೆ ನಗುತ್ತಾ ಹೇಳಿದ ತೇಜಾ,

“ನನ್ನ ಪೋಲೀಸ್ ಸ್ಟೇಷನ್ನಲ್ಲಿ ಇರುವವರಷ್ಟೆ”

ಅದಕ್ಕೇನು ಹೇಳಬೇಕೊ ತೋಚಲಿಲ್ಲ. ರಾಮನಗರದಿಂದ ಬಂದ ಇನ್ಸ್‌ಪೆಕ್ಟರ್‌ನಿಗೆ. ಇಬ್ಬರೂ ಕೋಣೆಯಲ್ಲಿ ಬಂದು ಕುಳಿತ ಮೇಲೆ ಕೇಳಿದ ತೇಜಾ. “ನಿಮಗೆ ಏನಂತ ಮೆಸೇಜ್ ಬಂತು?”

“ಇಲ್ಲಿ ಕೆಲ ಅಪರಾಧಿಗಳಿದ್ದಾರೆಂದು ಅವರನ್ನು ನೇರವಾಗಿ ಪಟ್ಟಣಕ್ಕೆ ತರಬೇಕೆಂದು” ಹೇಳಿದ ಇನ್ಸ್‌ಪೆಕ್ಟರ್‌ ಮುನಿಸ್ವಾಮಿ.

“ಅಷ್ಟೇನೇ?” ಕೇಳಿದ ತೇಜಾ

“ಅಷ್ಟೆ. ಇನ್ನೂ ಏನಾದರು……”

ಅವನ ಮಾತನ್ನು ನಡುವೆ ತಡೆಯುತ್ತಾ ಒಂದು ನಿಮಿಷ” ಎಂದ ತೇಜಾ ರಿಸೀವರನ್ನು ಎತ್ತಿಕೊಂಡು ಸ್ಕ್ವಾಡಿನ ಮುಖ್ಯಸ್ಥರ ಮನೆಯ ನಂಬರ್ ಅದುಮತೊಡಗಿದ. ಅಚ್ಚರಿಯಿಂದ ಅವನನ್ನೇ ನೋಡುತ್ತಾ ಕುಳಿತ ರಾಮನಗರಿಂದ ಬಂದ ಇನ್ಸ್‌ಪೆಕ್ಟರ್‌, ಅತ್ತ ಕಡೆಯಿಂದ ಎರಡು ರಿಂಗ್ ಕೇಳಿ ಬರುತ್ತಲೇ ರಿಸೀವರನ್ನು ಎತ್ತಿ ಅದರ ಮೂಲಕ ಸ್ಕ್ವಾಡಿನ ಮುಖ್ಯಸ್ಥರ ಕಂಠ ಕೇಳಿ ಬಂತು. ಇನ್ನೂ ಮಲಗಿಲ್ಲವೇ ಎಂಬ ಅಚ್ಚರಿಯನ್ನು ಅದಮುತ್ತಾ ಮಾತಾಡಿದ ತೇಜಾ.

“ನಾನು ಸರ್ ತೇಜಾ ಬಂದಿಗಳೆಲ್ಲಾ ಸಿಕ್ಕಿಬಿದ್ದಿದ್ದಾರೆ. ಒಬ್ಬನನ್ನು ನಾನು ಸೆಲ್ಸ್ ಡಿಫೆನ್ಸ್‌ಗಾಗಿ ಮುಗಿಸಬೇಕಾಯಿತು. ನೀವು ಹೇಳಿದಂತೆ ರಾಮನಗರದಿಂದ ಇನ್ಸ್‌ಪೆಕ್ಟರ್‌ ಮುನಿಸ್ವಾಮಿಯವರು ಬಂದಿದ್ದಾರೆ. ನಾಯಕರ ವಿರುದ್ಧ ಎಲ್ಲಾ ಪುರಾವೆಗಳು ಸಿಕ್ಕಿವೆ ಏನು ಮಾಡಲಿ”

“ಏನು ಮಾಡುತ್ತೀರಿ. ಅವರನ್ನು ಅರೆಷ್ಟು ಮಾಡಿ ಕರೆತನ್ನಿ, ಕುಶಾಲ್ ಅಲ್ಲೆ ಇದ್ದಾನೆಯೋ?”

“ಇದ್ದಾನ ಸರ್. ಅವನು ಬಂದಿಗಳೊಡನೆ ನನ್ನ ಮನೆಯಲ್ಲೇ ಇದ್ದಾನೆ.”

“ಆ ರಾಮನಗರದ ಇನ್ಸ್‌ಪೆಕ್ಟರ್‌ನಿಗೆ ಫೋನ್ ಕೊಡು”

ತಮ್ಮ ಮಾತು ಕೇಳದಂತೆ ರಿಸೀವರ್‌ನ ಮೇಲೆ ಕೈ ಇಟ್ಟು ಹೇಳಿದ ತೇಜಾ.

“ಸ್ಕ್ವಾಡಿನ ಚೀಫ್, ನಿಮ್ಮೊಡನೆ ಮಾತಾಡಬೇಕಂತೆ”

ಅದನ್ನು ಕೇಳಿದವನೇ ಮುನಿಸ್ವಾಮಿ ಲಗುಬಗೆಯಿಂದ ಎದ್ದು ರಿಸೀವರ್ ಎತ್ತಿಕೊಂಡ. ಅವನು ಅತ್ತಕಡೆಯ ಮಾತುಗಳನ್ನು ಕೇಳುತ್ತಾ ಎಲ್ಲದ್ದಕ್ಕೂ ಬರೀ “ಎಸ್ ಸರ್” ಎನ್ನುತ್ತಿದ್ದನಷ್ಟೆ. ಮಾತು ಮುಗಿಸಿದ ಅವನು ರಿಸೀವರನ್ನು ಮತ್ತೆ ತೇಜಾನ ಕೈಗೆ ಕೊಟ್ಟ. ಅದನ್ನು ತೆಗೆದುಕೊಂಡು ಹೇಳಿದನವ.

“ನಾನು ಸರ್ ತೇಜಾ.”

“ನಾನಾ ಇನ್ಸ್‌ಪೆಕ್ಟರ್‌ನಿಗೆ ಎಲ್ಲಾ ಹೇಳಿದ್ದೇನೆ. ಆ ನಾಯಕನ ಮನೆಯನ್ನು ರೈಡ್ ಮಾಡಿ.”

“ಸರಿ ಸಾರ್!”

“ವೆರಿ ಗುಡ್ ವರಿ ವೆಲ್‌ಡನ್” ಸ್ಕ್ವಾಡಿನ ಮುಖ್ಯಸ್ಥರ ಮಾತಿನಲ್ಲಿ ಪ್ರಶಂಸೆ ತುಂಬಿತ್ತು. ವಿನಯವಾಗಿ ಹೇಳಿದ ತೇಜಾ,

“ಥ್ಯಾಂಕ್ಯೂ ಸರ್!”

“ಗುಡ್‌ನೈಟ್” ಎಂದ ಅವರು ರಿಸೀವರ್ ಕೆಳಗಿಟ್ಟರು. ತೇಜಾನು ಅದನ್ನು ಫೋನಿನ ಮೇಲಿಡುತ್ತಾ ರಾಮಸ್ವಾಮಿಯ ಕಡೆ ನೋಡಿದ.

“ನಡೆಯಿರಿ ಕೆಲಸ ಆರಂಭಿಸುವ” ಎಂದನಾತ.

ಇಬ್ಬರೂ ಕೋಣೆಯಿಂದ ಹೊರಬಂದರು. ತೇಜಾನ ಪೇದೆಯರು ಎದ್ದಿದ್ದರು. ಅವರಲ್ಲಿ ಒಬ್ಬನಿಗೆ ತನ್ನ ಮನೆಯನ್ನು ಎಸ್.ಐ.ಗೆ ತೋರಿಸುವಂತೆ ಹೇಳಿ ಅಲ್ಲಿದ್ದ ಬಂದಿಗಳನ್ನೆಲ್ಲಾ ಕರೆತರುವಂತೆ ಆದೇಶಿಸಿದ. ಎಸ್.ಐ.ಯೊಡನೆ ಎಚ್.ಸಿಯನ್ನು ಕೂಡಾ ಕರೆದುಕೊಂಡು ಬಂದಿಗಳನ್ನು ಕರೆತರಲು ಹೋದನಾ ಪೇದೆ. ಕಟ್ಟಡದ ಹೊರಬಂದು ತಣ್ಣನೆಯ ಗಾಳಿಯನ್ನು ಹೀರುತ್ತಾ ನಿಂತರು ಇನ್ಸ್‌ಪೆಕ್ಟರರಿಬ್ಬರು.

ಮುಂದಿನ ಕೆಲಸಗಳು ತುರಾತುರಿಯಲ್ಲಿ ನಡೆದವು. ಬಂದಿಯರೊಡನೆ ಒಂದು ಶವವನ್ನು ಹೊತ್ತು ತಂದರು ಪೋಲೀಸಿನವರು. ಒಬ್ಬ ಬಂದಿ ಬಹು ಕಷ್ಟದಿಂದ ಒಂದು ಕಾಲಮೇಲೆ ನಡೆಯುತ್ತಿದ್ದ. ಮಾರುವೇಶದಲ್ಲಿದ ಕುಶಾಲನನ್ನು ಗುರುತಿಸಲಿಲ್ಲ ಮುನಿಸ್ವಾಮಿ. ಕುಶಾಲನ ಬಗ್ಗೆ ಸ್ಕ್ವಾಡಿನ ಮುಖ್ಯಸ್ಥರು ಫೋನಿನಲ್ಲಿ ಹೇಳಿದರು. ಸರಕಾರಿ ಸಮವಸ್ತ್ರದಲ್ಲಿದ್ದ ಅವನನ್ನು ಗುರುತಿಸಿ ತಾನೇ ಕೈ ಮುಂದೆ ಮಾಡಿ ಹೇಳಿದ ಕುಶಾಲ್.

“ಇನ್ಸ್‌ಪೆಕ್ಟರ್ ಕುಶಾಲ್”

ಅದನ್ನು ಕುಲುಕುತ್ತಾ ಪ್ರಶಂಸೆಯ ದನಿಯಲ್ಲಿ ಹೇಳಿದ ಮುನಿಸ್ವಾಮಿ.

“ಇನ್ಸ್‌ಪೆಕ್ಟರ್ ಮುನಿಸ್ವಾಮಿ… ನಿಮ್ಮನ್ನು ಗುರುತಿಸುವದೇ ಕಷ್ಟ. ಬಹಳ ದೊಡ್ಡ ಕೆಲಸ ಸಾಧಿಸಿದ ಹಾಗಿದೆ.”

ಅದಕ್ಕೆ ಕುಶಾಲ ನಗುತ್ತಾ ಹೇಳಿದ

“ಗುರುತಾಗದ ಹಾಗೇ ಕೆಲಸ ಮಾಡುವದು ನನ್ನ ಅಭ್ಯಾಸ”

ಶವವನ್ನು ರಾಮನಗರದ ಆಸ್ಪತ್ರೆಯಲ್ಲಿ ಹಾಕಿ ಗಾಯಗೊಂಡ ಕೈದಿಗೆ ಪಟ್ಟಣದಲ್ಲೇ ಚಿಕಿತ್ಸೆ ಕೊಡಿಸುವುದೆಂದು ನಿರ್ಧಾರವಾಯಿತು. ಮೂವರು ಇನ್ಸ್‌ಪೆಕ್ಟರು, ಎಸ್.ಐ., ಎಲ್ಲರೂ ತೇಜಾನ ಜೀಪಿನಲ್ಲಿ ಕುಳಿತರು. ತೇಜಾನೇ ಡ್ರೈವಿಂಗ್ ವೀಲ್‌ನೆದುರು ಕುಳಿತು ಅದನ್ನು ರಭಸವಾಗಿ ಓಡಿಸುತ್ತಾ ನಾಯಕ್‌ರ ಮನೆ ಎದುರು ತಂದು ಅಕ್ಕಪಕ್ಕದವರು ನಿದ್ದೆಯಿಂದ ಏಳುವಂತಹ ಕರ್ಕಶ ಬ್ರೇಕ್ ಹಾಕಿದ. ಅದು ನಿಲ್ಲುತ್ತಿದ್ದಂತೆ ಬುಡು ಬುಡನೆ ಇಳಿದರು ಪೋಲಿಸಿನವರೆಲ್ಲಾ. ಮುಂದೆ ಓಡಿದ ಕುಶಾಲ ನಾಯಕರ ಮನೆಯ ಬಾಗಿಲು ಮುರಿಯುವಂತೆ ಬಡಿಯತೊಡಗಿದ. ಬಾಗಿಲು ತೆಗೆದು ಅಲ್ಲಿ ನಾಯಕರಿಲ್ಲ ಎಂದ ಆಳು ಅವನನ್ನು ತಳ್ಳಿಕೊಂಡು ಒಳನುಗ್ಗಿದ ಕುಶಾಲ್. ಅವನ ಹಿಂದೆ ತೇಜಾ ಅಳಕುತ್ತಲೇ ಮೆಲ್ಲಗೆ ಅಡಿ ಇಟ್ಟ, ರಾಮನಾಗರದ ಇನ್ಸ್‌ಪೆಕ್ಟರ್‌ ಮುನಿಸ್ವಾಮಿ. ಆ ಗದ್ದಲ್ಲದ ಕಾರಣ ಮನೆಯವರೆಲ್ಲಾ ಎದ್ದು ಬಿಟ್ಟು ಬಾಯಿಗೆ ಬಂದ ಹಾಗೆ ಕೂಗುವದು, ಕಿರಚುವದು ಬೈಯ್ಯುವದು ಅಳುವದು ಮಾಡುತ್ತಿದ್ದರು. ಅದನ್ನು ಕೇಳಿಸಿಕೊಳ್ಳದವರಂತೆ ಆ ಇಬ್ಬರು ಇನ್ಸ್‌ಪೆಕ್ಟರರು ನಾಯಕನಿಗಾಗಿ ಮನೆಯಲ್ಲಾ ಶೋಧಿಸಲಾರಂಭಿಸಿದರು. ಕೊನೆಗೂ ಬಚ್ಚಲ ಮನೆಯಲ್ಲಿ ಅಡಗಿ ಕೊಂಡಿದ್ದ ನಾಯಕನ ಕೈಗಳಿಗೆ ಬೇಡಿ ತೊಡಿಸಿದ ಕುಶಾಲ, ಅವನನ್ನು ಜೀಪಿನಲ್ಲಿ ಹಾಕಿಕೊಂಡು ಬಂಡೇರಹಳ್ಳಿ ಪೋಲೀಸ್ ಸ್ಟೇಷನ್‌ಗೆ ತಂದರು.

ಅಲ್ಲಿ ಮಿಕ್ಕ ಖೈದಿಯರನ್ನೂ ವ್ಯಾನಿನಲ್ಲಿ ಕೂಡಿ ಹಾಕಲಾಯಿತು. ಈಗ ನಾಯಕ್‌ನಲ್ಲಿ ಸಿಟ್ಟು ಹೋಗಿ ಭಯ ತುಂಬಿಬಂದಿರುವುದು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು.

ಎಸ್. ಐ. ಮತ್ತು ಪೇದೆಯರು ಹಿಂದೆ ಬಂಧಿಯರ ಕಾವಲಿಗೆ ವ್ಯಾನಿನಲ್ಲಿ ಏರಿದರು. ಮುಂದೆ ಡ್ರೈವರ್‌ನ ಬದಿಗೆ ಬಂದು ಕುಳಿತ ಇನ್ಸ್ ಪೆಕ್ಟರ್‌ ಮುನಿಸ್ವಾಮಿ, ತೇಜಾ ಮತ್ತು ಕುಶಾಲ ಆತನ ಕೈಯನ್ನು ಹಾರ್ದಿಕವಾಗಿ ಕುಲಕಿದರು. ಬಂಧಿಯರ ಸಮೇತ ವ್ಯಾನು ರಾಮನಗರಕ್ಕೆ ಅಲ್ಲಿಂದ ಪಟ್ಟಣಕ್ಕೆ ಪಯಣ ಆರಂಭಿಸಿತು.

ವ್ಯಾನು ಹೋಗುತ್ತಿರುವುದನ್ನೇ ನೋಡುತ್ತಿದ್ದರು ಗುಂಡು ತಾತ ಮತ್ತು ಅವರಿಗೆ ಸಹಾಯ ಮಾಡಿದ ಯುವಕರು, ಹಾರ್ದಿಕವಾಗಿ ಅವರೆಲ್ಲರ ಕೈಕುಲಕಿ ಧನ್ಯವಾದಗಳನ್ನು ಹೇಳಿದರು ತೇಜಾ ಮತ್ತು ಕುಶಾಲ. ಹೋಗುತ್ತಿದ್ದ ಅವರನ್ನೇ ನೋಡುತ್ತಾ ಹೇಳಿದ ಕುಶಾಲ್

“ಇನ್ನೂ ಒಳೆಯವರೇ ಹೆಚ್ಚಿದ್ದಾರೀ ಲೋಕದಲ್ಲಿ”

ಅವರು ಮುಂದಿನ ಓಣಿಯಲ್ಲಿ ಕಣ್ಮರೆಯಾದರು ತೇಜಾ ಜೀಪಿನ ಕಡೆ ಹೋಗಲು ತಿರುಗಿದಾಗ ಒಬ್ಬ ಮುದುಕಿ ಕೋಲೂರುತ್ತಾ ಅವರ ಬಳಿ ಬಂದಳು. ಈ ಅಪರಾತ್ರಿಯಲ್ಲಿ ಇವಳಿಲ್ಲಾಕೆ ಬಂದಳು ಎಂದುಕೊಳ್ಳುತ್ತಿರುವಾಗ ನಡಗುವ ದನಿಯಲ್ಲಿ ಹೇಳಿದಳವಳು.

“ನನ್ನ ರಾಮನಗರದವರೆಗೆ ಬಿಡುತ್ತೀರಾ ಸ್ವಾಮಿ!”

“ನಾವು ರಾಮನಗರಕ್ಕೆ ಹೋಗುತ್ತಿಲ್ಲ. ಅವಳ ಮೇಲೆ ಕರುಣೆ ಬಂದರೂ ವಿಧಿ ಇಲ್ಲದಂತೆ ಹೇಳಿದ ತೇಜಾ.

“ಪಾಪ ಏನು ಕೆಲಸವೋ ಬಿಟ್ಟು ಹೋಗುವ ನಮಗೆ ಸ್ವಲ್ಪ ತಡವಾಗಬಹುದು” ಎಂದ ಕುಶಾಲ್. ತನ್ನ ಪೋಲೀಸ್‌ಸ್ಟೇಷನ್ ಕಡೆ ನೋಡಿದ ತೇಜಾ, ಪೇದೆಯರಾರು ಬಾಗಿಲಲ್ಲಿ ಕಾಣಲಿಲ್ಲ. ತಾವೂ ವ್ಯಾನಿನ ಹಿಂದೆ ಹೊರಟು ಹೋಗಿರಬೇಕೆಂದು ಅವರು ಮಲಗುವ ತಯಾರಿಯಲ್ಲಿರಬಹುದು ಎಂದುಕೊಳ್ಳುತ್ತಾ ಮುದುಕಿಗೆ ಹಿಂದೆ ಕೂಡುವಂತೆ ಹೇಳಿದ ತೇಜಾ. ಅವಳು ಕೂಡುತ್ತಿದ್ದಂತೆಯೇ ಜೀಪು ರಭಸವಾಗಿ ಮುಂದೆ ಸಾಗಿತು. ಜೀಪು ನಡೆಸುತ್ತಲೇ ನೋವಿನ ದನಿಯಲ್ಲಿ ಹೇಳಿದ ತೇಜಾ.

“ನೀನಿಲ್ಲ್ಯಾಕೆ ಬಂದಿ ಕಲ್ಯಾಣಿ”

ದಿಗ್ಭ್ರಾಂತನಾದಂತೆ ಹಿಂತಿರುಗಿ ನೋಡಿದ ಕುಶಾಲ ಅವನ ಮುಖದಲ್ಲಿ ಅಪನಂಬಿಕೆ ತುಂಬಿಬಂದಿತ್ತು.

“ನಿನ್ನ ಕೆಲಸ ನೋಡಲು ನಿನ್ನ ರಕ್ಷಿಸಲು. ಪುರಾಣಗಳ ಪ್ರಕಾರ ಪತಿಯನ್ನು ರಕ್ಷಿಸುವದೂ ಪತ್ನಿಯ ಧರ್ಮವಲ್ಲವೇ” ಹೇಳಿದಳು ಮುದುಕಿಯ ವೇಶದಲ್ಲಿದ್ದ ಕಲ್ಯಾಣಿ.

“ನೀನಿಗಳನ್ನು ಹೇಗೆ ಗುರುತಿಸಿದಿ?” ಅಪನಂಬಿಕೆ ತುಂಬಿದ ದನಿಯಲ್ಲಿ ಕೇಳಿದ ಕುಶಾಲ.

“ನನ್ನ ಮನಸ್ಸು ಹೇಳಿತು. ನಂತರ ಅವಳಲ್ಲಿ ಇರುವ ಎ.ಕೆ. ಘಾರ್ಟಿಸೆವನ್ ಅದನ್ನು ಖಚಿತ ಪಡಿಸಿತು” ಇನ್ನೂ ಸಿಟ್ಟಿನಲ್ಲೇ ಇದ್ದ ತೇಜಾ.

“ಎ.ಕೆ. ಫಾರ್ಟಿಸೆವನ್!” ಉದ್ಧರಿಸಿದ ಕುಶಾಲ.

ವಾಹನದ ವೇಗ ಕಡಿಮೆ ಮಾಡಿ ತಗ್ಗು ದಿಣ್ಣೆಗಳನ್ನು ನೋಡುತ್ತಾ ಜೀಪನ್ನು ಓಡಿಸುತ್ತಿದ್ದ ತೇಜಾ.

“ಅವಳು ತಲೆ ತುಂಬಾ, ಮೈಯೆಲ್ಲಾ ಸೆರಗೂ ಹೊದ್ದಿರುವದು ನೋಡಿ ಹೆಗಲಿಗಿರುವ ಬ್ಯಾಗಿನ ಕಡೆ ಗಮನ ಹರಿಸಿದೆ. ಅದರಲ್ಲಿ ಆಯುಧವಿದೆ… ನೋಡು ಕಲ್ಯಾಣಿ ನೀನು ಆದಷ್ಟು ರೆಷ್ಟು ತೆಗೆದುಕೊಳ್ಳಬೇಕಾದ ಸಮಯವಿದು. ಅದನ್ನು ಅರ್ಥಮಾಡಿಕೊ” ಒಂದೇ ಮಾತಿನಲ್ಲಿ ಇಬ್ಬರೊಡನೆಯೂ ಮಾತಾಡಿದ ತೇಜಾ.

“ಅರ್ಥಮಾಡಿಕೊಂಡೇ ಬಂದದ್ದು ತೇಜಾ! ನಾವಿಬ್ಬರೂ ಶಪಥಗಳು ಮಾಡಿದ್ದು ನೆನಪಿಲ್ಲವೇ?” ಕೇಳಿದಳು ಕಲ್ಯಾಣಿ.

“ನಿನ್ನದು ಅತಿಯಾಗಿದೆ ನನ್ನ ಹುಚ್ಚನನ್ನಾಗಿ ಮಾಡಿಬಿಡುತ್ತಿ” ನಿಸ್ಸಹಾಯ ದನಿಯಲ್ಲಿ ಹೇಳಿದ ತೇಜಾ, ಅವನ ಮಾತು ಅರ್ತನಾದದಂತಿತ್ತು.

“ಈ ಲೋಕದಲ್ಲಿ ಹುಚ್ಚರಾಗಿ ಬಿಡುವದೇ ವಾಸಿ ಯಾವದನ್ನೂ ಮನಸ್ಸಿಗೆ ಹಚ್ಚಿಕೊಳ್ಳದಂತೆ ಆರಾಮವಾಗಿರಬಹುದು….. ನೀ ಪಟ್ಟ ಶ್ರಮವೆಲ್ಲಾ ವ್ಯರ್ಥ. ನಾಯಕ್‌ನಿಗೆ ಏನೂ ಆಗುವುದಿಲ್ಲ ಅವನೇ ಪಂಚಾಯತಿ ಪ್ರಸಿಡೆಂಟ್‌ನಾಗಿ ಮುಂದುವರೆಯುತ್ತಾನೆ. ಯಾಕೆಂದರೆ ಇದು ಸ್ವತಂತ್ರದೇಶ! ಇಲ್ಲಿ ನಿಲ್ಲಿಸು. ನನ್ನವರು ಕಾದಿರುತ್ತಾರೆ” ಹೇಳಿದಳು ಕಲ್ಯಾಣಿ.

“ಮನೆಗೆ ಬರುವದಿಲ್ಲವೇ?” ಕೇಳಿದ ತೇಜಾ

“ಇಲ್ಲ ಅಲ್ಲಿ ಬಂದರೆ ಅಪ್ಪ ಅಮ್ಮನನ್ನು ಬಿಟ್ಟು ಬರುವದು ಕಷ್ಟವಾಗುತ್ತದೆ. ಇಲ್ಲೇ ನಿಲ್ಲಿಸು” ಆತುರದ ದನಿಯಲ್ಲಿ ಹೇಳಿದಳು ಕಲ್ಯಾಣಿ. ಒಮ್ಮೆಲೆ ಬ್ರೇಕನ್ನು ಹಾಕಿದ ತೇಜ, ಜೀಪಿನಿಂದಿಳಿಯುತ್ತಾ ಹೇಳಿದಳು ಕಲ್ಯಾಣಿ.

“ಇಂತಹ ವಿಷಯಗಳಲ್ಲಿ ನಾ ಹೇಳಿದ ಹಾಗೆ ಕೇಳು ತೇಜಾ ಇಲ್ಲದಿದ್ದರೆ ಅನಾಹುತವಾಗಿ ಹೋಗುತ್ತದೆ”

ಗಾಡಾಂಧಕಾರ, ಕಾಡಿನಲ್ಲಿ ಹೋಗುತ್ತಿರುವ ಕಲ್ಯಾಣಿಯ ಆಕಾರವನ್ನು ತದೇಕಚಿತ್ತದಿಂದ ನೋಡುತ್ತಿದ್ದ ಕುಶಾಲ್. ಆಗಲೇ ಅವಳ ದೇಹದಿಂದ ಸೀರೆ ಮಾಯವಾಗಿತ್ತು. ಕಾಡಿನಲ್ಲಿ ಅವಳು ಕಣ್ಮರೆಯಾದ ಮೇಲೆ ಮಿತ್ರನ ಕಡೆ ತಿರುಗಿದ.

“ಎಂತಹ ಸಾಹಸ……”

ಅವನ ಮಾತು ಆರಂಭವಾಗುತ್ತಿದಂತೆ ಸ್ಟೇರಿಂಗ್ ವಿಲ್‌ನ ಮೇಲೆ ತಲೆಯಿಟ್ಟು, ಅಳತೊಡಗಿದ ತೇಜಾ, ಅವನ ಅಳುವಿನ ದನಿ ಕಾಡಿನಲ್ಲಿ ಬಹು ದೂರದವರೆಗೆ ಹರಿದು ಬಂದಿತ್ತು. ಅವನ ವ್ಯಥೆಯನ್ನು ಅರ್ಥ ಮಾಡಿಕೊಂಡವನಂತೆ ಬೆನ್ನು ನೀವತೊಡಗಿದ ಕುಶಾಲ. ಪ್ರೇಮ ಮನುಷ್ಯನನ್ನು ಎಷ್ಟು ಬದಲಾಯಿಸಿಬಿಡುತ್ತದೆ ಎನಿಸಿತವನಿಗೆ. ಎಷ್ಟು ವರ್ಷಗಳಿಂದ ತಾನವನನನ್ನು ನೋಡುತ್ತಿದ್ದೇನೆ. ಈವರೆಗೆ ಅವನ ಕಣ್ಣಲ್ಲಿ ಒಂದು ಹನಿ ನೀರು ಬಂದದ್ದನೂ ನೋಡಿಲ್ಲ. ಈಗ ಮಗುವಿನ ಹಾಗೆ ಅಳುತ್ತಿದ್ದಾನೆ. ಅಳು ನಿಲ್ಲಿಸಿ ತನ್ನನ್ನು ತಾನು ಸಂಭಾಳಿಸಿಕೊಂಡು ಹೇಳಿದ ತೇಜಾ

“ಐಯಾಮ್ ಸಾರಿ”

“ನಾನರ್ಥಮಾಡಿಕೊಳ್ಳಬಲ್ಲೆ!… ನಾನಿಲ್ಲೇ ಬಟ್ಟೆ ಬದಲಾಯಿಸಿ ಬಿಡುತ್ತೇನೆ. ಇನ್ನೊಮ್ಮೆ ನಿಲ್ಲಿಸುವ ಅವಶ್ಯಕತೆ ಇರುವದಿಲ್ಲ” ಎಂದ ಕುಶಾಲ ಜೀಪಿನಿಂದಿಳಿದು. ಹಿಂದಿನ ಸೀಟಿನ ಕೆಳಗೆ ಇಟ್ಟ ತನ್ನ ಪ್ಯಾಂಟು, ಶರ್ಟನ್ನು ತೆಗೆದು ಬಟ್ಟೆ ಬದಲಾಯಿಸುವ ಕೆಲಸದಲ್ಲಿ ತೊಡಗಿದ.

“ಆ ಬಟ್ಟೆಗಳನ್ನು ಇಲ್ಲಿ ತಾ ನಾನು ಮತ್ತೆ ಮರೆತುಬಿಟ್ಟರೆ ಕಷ್ಟ” ಬಹು ಬೇಗ ತೇಜನ ದನಿ ಮಾಮೂಲಿಗೆ ಬಂದಿತು. ದೇವನಹಳ್ಳಿಯಲ್ಲಿ ಯಾರಿಂದ ಬಟ್ಟೆ ಪಡೆದನೊ ಅವರಿಗೆ ಹಿಂತಿರುಗಿಸುವದು, ಮರೆತರೆ ಮತ್ತೆ ಇಲ್ಲದ ತಲೆಹರಟೆ ಎಂದುಕೊಳ್ಳುತಾ ಬಿಚ್ಚಿದ ಪಂಚೆ ನಿಲುವಂಗಿ ಮತ್ತು ಟವಲನ್ನು ಒಂದು ಕಡೆ ಸುತ್ತಿ ಅವನ ಬಳಿ ಬಂದು ಕುಳಿತ. ಸ್ಟಾರ್ಟ್ ಆದ ಜೀಪು ಮುಂದೋಡತೊಡಗಿತು. ಇಷ್ಟು ರಾತ್ರಿಯಾದುದಕ್ಕೆ ಇವನ ತಂದೆ ಏನೆಂದುಕೊಳ್ಳುತ್ತಾರೋ ಎಂಬ ಯೋಚನೆ ಬಂದಾಗ ತಾನು ಮರೆತದ್ದೇನೋ ನೆನಪಾಯಿತು ಕುಶಾಲನಿಗೆ ಮಾತನ್ನು ಬೇರೆ ದಿಕ್ಕಿಗೆ ಕೂಡ ತಿರುಗಿಸಿದಂತಾಗುತ್ತದೆ ಎಂದುಕೊಳ್ಳುತ್ತ ಹೇಳಿದ.

“ಇಂತಹ ಶೂರ ಸ್ವಾತಂತ್ರ್ಯಯೋಧರು ಹೀಗೆ ಮೂಲೆಗುಂಪಾಗಿ ದೇವನಹಳ್ಳಿಯಲ್ಲಿ ಕುಳಿತಿರಬಾರದು”

ತನ್ನದೇ ಯೋಚನೆಯಲ್ಲಿ ತೊಡಗಿದ್ದ ತೇಜಾ ಕೇಳಿದ.

“ಹಾಗಾದರೆ ಏನು ಮಾಡಬೇಕು?”

“ಅದು ಇಡೀ ದೇಶಕ್ಕೆ ಗೊತ್ತಾಗಬೇಕು” ಕೂಡಲೇ ಉತ್ತರಿಸಿದ ಕುಶಾಲ.

“ಅದರಿಂದೇನಾಗುತ್ತದೆ?”

“ಏನಾಗುತ್ತದೆ ಎಂದರೆ? ಅವರ ಬದುಕಿನಿಂದ ಈಗಿನ ಪೀಳಿಗೆಯವ ಒಬ್ಬನಾದರೂ ನಿಜವಾದ ದೇಶ ಭಕ್ತನಾದರೆ ಸಾಕು” ಮತ್ತೆ ಅವನ ಪ್ರಶ್ನೆಗೆ ಕೂಡಲೇ ಉತ್ತರಿಸಿದ ಕುಶಾಲ.

“ಅದಕ್ಕೆಲ್ಲಾ ಅಪ್ಪ ಒಪ್ಪುವುದಿಲ್ಲ.” ಬೇರಾವುದೋ ಯೋಚನೆ ಯಲ್ಲಿರುವಂತೆ ಹೇಳಿದ ತೇಜಾ.

“ನನ್ನ ಬಹಳ ಜನ ಸ್ನೇಹಿತರಿದ್ದಾರೆ. ನಾವು ಅವರಿಗೂ ಉಪಕಾರ ಮಾಡಿದಂತಾಗುತ್ತದೆ. ಯಾವಾಗಲೂ ಒಳ್ಳೆ ಸ್ಟೋರಿ ಬೇಕು ಒಳ್ಳೆಯ ಸ್ಟೋರಿ ಬೇಕೆಂದು ಬಡಕೊಳ್ಳುತ್ತಿರುತ್ತಾರೆ. ಇದಕ್ಕಿಂತ ಒಳ್ಳೇ ಸ್ಟೋರಿ ಅವರಿಗೆ ಸಿಗಲಾರದು. ಹೇಗಾದರೂ ಅಪ್ಪನನ್ನು ಒಪ್ಪಿಸು. ಹಳೆಯ ಫೋಟೋಗಳನ್ನು ಅವರಿಗೆ ಕೊಡು ಅವರದನ್ನು ಮತ್ತೆ ಹಿಂತಿರುಗಿಸುತ್ತಾರೆ. ಈ ಸಲ ಬೇಡಿಕೆಯಂತಹ ದನಿಯಲ್ಲಿ ಮಾತಾಡಿದ ಕುಶಾಲ.

“ಆ ಫೋಟೋಗಳನ್ನು ತೆಗೆದುಕೊಂಡು ಏನು ಮಾಡಬೇಕಾಗಿದೆ. ಅವನ್ನು ಬಿಸಾಡು ಎಂದವರು ಅವನ್ನು ನನಗೆ ಕೊಟ್ಟಿದು. ನಾನೇ ಅದನ್ನು ಜಾಗ್ರತೆಯಾಗಿ ತೆಗೆದಿಟ್ಟಿದ್ದೇನೆ” ಹೇಳಿದ ತೇಜಾ. ಅವನ ಮನಸ್ಸು ಸ್ವಲ್ಪ ಹಗುರವಾಗಿತ್ತು.

“ಹಾಗಾದರೆ ಇನ್ನೂ ಒಳ್ಳೆಯದಾಯಿತು. ದೇವನ ಹಳ್ಳಿಯಂತಹ ಕುಗ್ರಾಮದಲ್ಲಿ ಅವರಂತಹ ವ್ಯಕ್ತಿ ಇದ್ದಾರೆಂದು ಲೋಕಕ್ಕೆಲ್ಲಾ ಗೊತ್ತಾಗಲಿ.”

ಆ ಮಾತಿಗೆ ಯಾವ ರೀತಿಯಲ್ಲೂ ಪ್ರತಿಕ್ರಿಯಿಸಲಿಲ್ಲ ತೇಜಾ, ತನ್ನ ಮನಸ್ಸಿನಲ್ಲಿದ್ದದ್ದು ನೇರವೇರಿದಂತೆ ಕುಶಾಲ ಮಾತಾಡಲಿಲ್ಲ. ಸ್ವಲ್ಪದೂರ ಸಾಗಿದ ಮೇಲೆ ತನಗೆ ತಾನೇ ಹೇಳಿಕೊಳ್ಳುವಂತೆ ಮಾತಾಡಿದ ತೇಜಾ.

“ನನ್ನದೂ ಎಂತಹ ಜೀವನ ಗಂಡ ಪೋಲಿಸ್ ಇನ್ಸ್‌ಪೆಕ್ಟರ್ ಹೆಂಡತಿ ಏಕೆ ಫಾರ್ಟಿ ಸೇವನ್ ಹಿಡಿದು ಕಾಡಿನಲ್ಲಿ ಅಲೆದಾಡುವ ಕ್ರಾಂತಿಕಾರಿ. ಇದು ಯಾವಾಗ ಎಲ್ಲಿ ಕೊನೆಗೊಳ್ಳುತ್ತದೆಯೋ”

ಸಮಾಧಾನ ಹೇಳುವಂತಹ ದನಿಯಲ್ಲಿ ಮಾತಾಡಿದ ಕುಶಾಲ.

“ಒಂದಲ್ಲ ಒಂದು ದಿನ ಎಲ್ಲಾ ಸರಿ ಹೋಗುತ್ತದೆ”

ಅವನ ಮಾತಿನಲ್ಲಿ ಅವನಿಗೇ ನಂಬಿಕೆ ಇಲ್ಲದಂತೆ ಧ್ವನಿಸಿತದು. ವ್ಯಂಗ್ಯದ ನಗೆಯೊಡನೆ ಹೇಳಿದ ತೇಜಾ.

“ಹೌದು! ಒಂದಲ್ಲ ಒಂದು ದಿನ ಎಲ್ಲಾ ಸರಿಹೋಗುತ್ತದೆ. ಅವಳು ಕಾಡಿನಲ್ಲಿ ಸಾಯುತ್ತಾಳೆ. ನಾನು ಅದೇ ಕಾಡಿನಲ್ಲಿ ಹುಚ್ಚನಾಗಿ ಅಲೆಯುತ್ತಿರುತ್ತೇನೆ.”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ಥಾನಪಲ್ಲಟ
Next post ಅಚ್ಚರಿ ಕಚ್ಚಿದ ಬದುಕು

ಸಣ್ಣ ಕತೆ

 • ದೇವರು ಮತ್ತು ಅಪಘಾತ

  ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

 • ಕರೀಮನ ಪಿಟೀಲು

  ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಸಾವಿಗೊಂದು ಸ್ಮಾರಕ

  ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys