ಮುಸ್ಸಂಜೆಯ ಮಿಂಚು – ೨

ಮುಸ್ಸಂಜೆಯ ಮಿಂಚು – ೨

ಅಧ್ಯಾಯ ೨ ಸೇವೆಗೆ ಮುಡಿಪಾಗಿಟ್ಟಳು ರಿತು

ರಿತು ಬರುವುದನ್ನೇ ಕಾಯುತ್ತಿದ್ದ ತನುಜಾ, “ಇಂಟರ್‌ವ್ಯೂ ಏನಾಯ್ತೊ ಇಷ್ಟೊತ್ತಾದ್ರೂ ಬರಲಿಲ್ಲವಲ್ಲ, ಗಾಡಿ ಬೇರೇ ಇವತ್ತೇ ಕೆಟ್ಟುಹೋಗಿದೆ. ಎಷ್ಟು ಹೊತ್ತಿಗೆ ಅಲ್ಲಿಗೆ ಹೋದಳೋ? ಬರೋಕೆ ಆಟೋ ಸಿಕ್ತೋ ಇಲ್ಲವೋ? ಸಿಟಿಯಿಂದ ದೂರ ಬೇರೆ ಇದೆ. ಏನು ಮಾಡುತ್ತಾಳೋ? ಮನು ಬೇರೆ ಊರಿನಲ್ಲಿಲ್ಲ. ಅವರಿದ್ದಿದ್ದರೆ ಅವರೇ ಹೋಗಿ ಮಗಳ ಕರ್‍ಕೊಂಡು ಬಂದುಬಿಡುತ್ತಿದ್ದರು. ನನಗೀ ಆತಂಕವೇ ಇರ್‍ತಾ ಇರ್‍ಲಿಲ್ಲ. ಕಾಲ ಎಷ್ಟು ಮುಂದುವರಿದ್ರೇನು? ಈ ಹೆಣ್ಣು ಹೆತ್ತವರ ಆತಂಕ ಮಾತ್ರ ಕಡಿಮೆಯಾಗಲ್ಲ. ಈ ಹುಡುಗಿ ಒಂದು ಪೋನ್ ಆದ್ರೂ ಮಾಡಬಾರದೇ? ಮೊಬೈಲ್ ಬೇರೆ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಎಲ್ಲದರಲ್ಲೂ ಕಟ್ಟುನಿಟ್ಟು, ಸಂದರ್ಶನ ನಡೆಯುವಾಗ ಫೋನ್ ಬರಬಾರದು ಅಂತ ಆಫ್ ಮಾಡಿಕೊಂಡಿದ್ದಾಳೆ. ಆಮೇಲಾದ್ರೂ ಆನ್ ಮಾಡಿಕೊಳ್ಳಬಾರದೇ? ಯಾವಾಗ ಈ ಅಮ್ಮನ ಆತಂಕ ಅರ್ಥಮಾಡಿಕೊಳ್ಳುತ್ತಾಳೋ? ಮೊದಲಿನಿಂದಲೂ ನಿರ್ಭಿಡೆ. ಧೈರ್ಯವಂತೆ, ಎದೆಗಾರಿಕೆ ಅಪ್ಪನ ಥರ ಮೈಗೂಡಿಸಿಕೊಂಡುಬಿಟ್ಟಿದ್ದಾಳೆ. ಹೆಣ್ಣೆಂಬ ಯಾವ ಅಳುಕೂ ಆಕೆಯಲ್ಲಿಲ್ಲ. ಎಷ್ಟು ಹೊತ್ತಿಗಾದ್ರೂ ಒಬ್ಳೇ ಬಂದುಬಿಡುತ್ತಾಳೆ. ‘ಈ ಕಾಲಕ್ಕೆ ಹೀಗೆ ಇರಬೇಕು ತನು. ಅದೆಲ್ಲ ನಿನ್ನ ಕಾಲಕ್ಕಾಯ್ತು. ಇವತ್ತು ಒಂಟಿಯಾಗಿಯೇ ಹುಡುಗಿಯರು ಎಲ್ಲವನ್ನೂ ಎದುರಿಸಬೇಕು. ಸದಾ ಒಬ್ಬರನ್ನ ಜತೆಗೆ ಕರ್‍ಕೊಂಡು ಹೋಗೋದು, ರಾತ್ರಿ ಒಳಗೆ ಮನೆಗೆ ಬಂದು ಸೇರಿಕೊಳ್ಳೋದು, ತಲೆ ತಗ್ಗಿಸಿಕೊಂಡು ಎಲ್ಲವನ್ನೂ ಸಹಿಸೋ ಕಾಲ ಇದಲ್ಲಮ್ಮ. ಈಗ ಕಾಲ ಬದಲಾಗಿದೆ. ಹೆಣ್ಣು-ಗಂಡು ಅನ್ನೋ ಭೇದ ಇಲ್ದೆ ಎಲ್ಲಾ ಕಡೆ ಬೆರೆಯೋ ಕಾಲ. ಹೆಣ್ಣು ಅನ್ನೋದನ್ನೇ ಮರೆಯೋ ಕಾಲ ಇದು ತನು’ ಅಂತ ಭಾಷಣನೇ ಪ್ರಾರಂಭಿಸಿಬಿಡುತ್ತಾರೆ. ಆದ್ರೆ ನನ್ನ ಚಿಂತೆ ಎಲ್ಲಿ ಅರ್ಥವಾಗಬೇಕು ಈ ತಂದೆ-ಮಗಳಿಗೆ? ಇನ್ನೂ ಅವಳ ಆಲೋಚನಾ ಸರಣಿ ಮುಂದುವರೀತಾನೇ ಇತ್ತೇನೋ? ಅಷ್ಟರಲ್ಲಿ ಬೈಕ್ ನಿಂತ ಸದ್ದಾಗಿ ಹೊರಗೋಡಿದಳು.

“ಬಾಯ್ ಜಸ್ಸು, ನಾಳೆ ಮೀಟ್ ಮಾಡ್ತೀನಿ, ಬರ್‍ತಿಯಾ” ಎಂದು ಜಸ್ವಂತ್‌ಗೆ ಕೈಬೀಸಿದಳು ಬೈಕ್ ಇಳಿದು.

ತನುಜಳನ್ನು ಕಂಡವನೇ ಜಸ್ವಂತ್ – “ಹಾಯ್ ಆಂಟಿ, ನಾಳೆ ಪಾರ್‍ಟೀಲಿ ಸಿಕ್ತೀನಿ, ಬಾಯ್” ಎಂದವನೇ ಬೈಕ್ ಸ್ಟಾರ್ಟ್ ಮಾಡಿ ಹೊರಟೇಬಿಟ್ಟ. ಅವನನ್ನು ಮಾತನಾಡಿಸಿ, ಒಳ ಕರೆಯುವ ವ್ಯವಧಾನವೂ ಇಲ್ಲದ ತನುಜಾ ರಿತುವಿನ ಮೇಲೆ ಒಮ್ಮೆಲೇ ರೇಗಿಕೊಂಡಳು.

“ಕೂಲ್ ಡೌನ್ ಮಮ್ಮಿ, ಕೂಲ್ ಡೌನ್. ನಂಗೊತ್ತು, ನೀನು ಕಾಯ್ತಾ ಇರ್‍ತಿಯಾ, ಗಾಬರಿ ಆಗ್ತೀಯಾ ಅಂತ. ಆದ್ರೆ ನೀನು ಯಾವಾಗ ಬದಲಾಗೋದು? ಇವತ್ತು ಒಬ್ಬೊಬ್ಬರೇ ಫಾರಿನ್‌ಗೆ ಹುಡುಗೀರು ಹಾರೋ ಕಾಲ ಅಮ್ಮ. ಒಂದೆರಡು ದಿನ ಬರ್‍ದೆ ಇದ್ರೂ ಗಾಬರಿ ಆಗಬಾರದು. ಎಲ್ಲೋ ಹೋಗಿರ್‍ತಾಳೆ ಅಂತ ಧೈರ್ಯವಾಗಿರಬೇಕು” ಅಮ್ಮನನ್ನು ಕೆಣಕಿದಳು.

“ಒಂದೆರಡು ದಿನ ಬರ್‍ದೆ ಹೋದ್ರೂ ಗಾಬರಿ ಆಗಬಾರದಾ? ಒಂದೆರಡು ದಿನ ಇರಲಿ, ಒಂದು ಗಂಟೆ ತಡವಾದ್ರೂ ನನ್ನೆದೆ ಹೊಡ್ಕೊತಾ ಇರುತ್ತೆ. ನನ್ನ ಸಂಕಟ ನಿಂಗೆ ಹ್ಯಾಗೆ ಗೊತ್ತಾಗಬೇಕು? ಅದಿರಲಿ, ಇಂಟರ್‌ವ್ಯೂ ಹ್ಯಾಗಾಯ್ತು?”

“ಇಂಟರ್‌ವ್ಯೂ ನಡೆದ್ರೆ ತಾನೇ ಹೇಗಾಯ್ತು ಅಂತ ಹೇಳೋಕೆ. ಎಷ್ಟೊಂದು ಜನ ಇಂಟರ್‌ವ್ಯೂಗೆ ಬಂದಿದ್ದರು ಗೊತ್ತಾ? ಅಮ್ಮಾ, ಪಾಪ ಅವರಿಗೆಲ್ಲ ಅದೆಷ್ಟು ನಿರಾಶೆ ಆಯ್ತೋ. ಅಮ್ಮ ನೀನು ಜೀವನದಲ್ಲೇ ಕೇಳಿರಲ್ಲ, ಇವತ್ತು ನಂಗಾಗಿರೊ ಆನುಭವಾನ. ಅದೇನಾಯ್ತು ಗೊತ್ತಾ ಅಮ್ಮ?” ಎನ್ನುತ್ತ ಅಲ್ಲಿ ನಡೆದದ್ದನ್ನೆಲ್ಲ ಸಾದ್ಯಂತ ವಿವರಿಸಿದಳು.

ಮಂತ್ರಮುಗ್ಧಳಾಗಿ ಹೋದಳು ತನುಜಾ. ಹೀಗೂ ಉಂಟೇ? ಈ ರೀತಿಯೂ ನಡೆಯಬಹುದೇ ಎನಿಸಿತು. ಅವರು ಮಾಡಿದ್ದರಲ್ಲಿ ತಪ್ಪೇನೂ ಇಲ್ಲ. ಅವರ ಬುದ್ಧಿವಂತಿಕೆಯನ್ನು ಮೆಚ್ಚಲೇಬೇಕು. ನಿಜವಾದ ಅಂತಃಕರಣವುಳ್ಳವರಿಗೆ ಅವಕಾಶ ಕೊಡುವ ಸಲುವಾಗಿ ಮಾಡಿದ ಅವರ ನಾಟಕ ತನ್ನ ಮಗಳಂಥ ಹೃದಯವಂತ ಹುಡುಗಿಗೆ ಸಹಾಯವಾಯಿತಲ್ಲವೇ?

“ಏನಮ್ಮಾ, ಏನೂ ಮಾತಾಡ್ತಾನೇ ಇಲ್ಲ. ಆಮೇಲೇನಾಯ್ತು ಗೊತ್ತಾ ಅಮ್ಮ. ‘ಇಷ್ಟೊಂದು ಕ್ವಾಲಿಫಿಕೇಶನ್ ಇರೋ ನೀನು ಯಾಕಮ್ಮಾ ಈ ಕೆಲ್ಸಕ್ಕೆ ಬಂದೆ? ನಿಂಗೆ ಇನ್ನೂ ಒಳ್ಳೆಯ ಅವಕಾಶ, ಒಳ್ಳೆಯ ಸಂಬಳ ಇರೋ ಕೆಲ್ಸ ಸಿಕ್ತಾ ಇತ್ತಲ್ಲ’ ಅಂತ ಅಂದ್ರಮ್ಮ! ನಾನೆಲ್ಲಿ ಅವರ ಕೆಲ್ಸನಾ ಮಧ್ಯದಲ್ಲಿಯೇ ಬಿಟ್ಟು ಹೋಗ್ತಿನೋ ಅನ್ನೋ ಅನುಮಾನ ಕಾಡಿರಬೇಕು. ಅದಕ್ಕೆ ನಾನೇನು ಹೇಳ್ದೆ ಗೊತ್ತಮ್ಮಾ? ನನ್ನಮ್ಮ ನಂಗೆ ಆದರ್ಶ, ಅಮ್ಮನ ಆದರ್ಶಾನೇ ನನ್ನ ದೇಹದಲ್ಲಿ ತುಂಬಿಕೊಂಡಿದೆ. ಸೇವೆಯೇ ನನ್ನ ಗುರಿ, ನನ್ನ ಧ್ಯೇಯ’ ಅಂತ ಹೇಳಿದೆ. ಅವರಿಗೆ ಎಷ್ಟು ಸಂತೋಷವಾಯ್ತು ಗೊತ್ತಾ ಅಮ್ಮಾ? ನೀನು ಅಜ್ಜಿಗೆ ಮಾಡ್ತಾ ಇದ್ದ ಸೇವೆನೇ ನನ್ನ ಕಣ್ಣ ಮುಂದಿದೆ ಅಮ್ಮಾ” ಅಮ್ಮನ ಭುಜಕ್ಕೆ ಒರಗಿ ಹೇಳುತ್ತಿದ್ದರೆ ಮಗಳ ತೋಳು ಸವರುತ್ತಾ, “ಅದು ನಿನ್ನ ದೊಡ್ಡ ಗುಣ ರಿತು. ನಿಂಗೆ ಸೇವಾ ಮನೋಭಾವ ಹುಟ್ಟಿನಿಂದಲೇ ಬಂದುಬಿಟ್ಟಿದೆ. ನೀನು ಚಿಕ್ಕ ಹುಡುಗಿಯಿಂದಲೂ ಅಷ್ಟೆ, ಭಿಕ್ಷುಕರೇನಾದ್ರೂ ಬೇಡ್ತಾ ಇದ್ರೆ ಮನೇಲಿದ್ದ ತಿಂಡಿನೆಲ್ಲ ಹಾಕಿಬಿಡ್ತಾ ಇದ್ದೆ. ಎಷ್ಟೋ ಸಾರಿ ನಿನ್ನ ಕೈಲಿದ್ದ ದುಡ್ಡನ್ನೇ ಕೊಟ್ಟುಬಿಡ್ತಾ ಇದ್ದೆ. ಬೇರೆಯವರ ಕಷ್ಟಕ್ಕೆ ಕರಗಿ ಹೋಗಿಬಿಡ್ತಾ ಇದ್ದೆ. ಎಲ್ಲರೂ ಒಂದೇ ಎಂಬ ಮನೋಭಾವ ಆಗ್ಲೆ ನಿಂಗಿತ್ತು. ಕೆಲಸದ ಲಕ್ಷ್ಮಿ ಮಗಳನ್ನ ಜತೆಯಲ್ಲಿಯೇ ಕೂರಿಸಿಕೊಂಡು ತಿಂಡಿ ತಿನ್ತಿದ್ದೆ. ನಿನ್ನ ಮಂಚದ ಮೇಲೆ ಮಲಗಿಸಿಕೊಳ್ತಾ ಇದ್ದೆ. ಇದೇ ಸ್ವಭಾವ ನಂಗೆ ತುಂಬಾ ಇಷ್ಟವಾಗ್ತಾ ಇದ್ದದ್ದು.

ಅದು ನೀನು ಕಲಿಸಿದ ಪಾಠವೇ ಅಲ್ವೇನಮ್ಮಾ? ತಿಂಡಿ ಆದ ಕೂಡಲೇ ಎಲ್ಲರಿಗೂ ಕೊಡುವಂತೆ ಲಕ್ಷ್ಮಿಗೂ ಕೊಟ್ಟು, ಬಿಸಿ ಬಿಸಿ ತಿಂದು ಆಮೇಲೆ ಕೆಲ್ಸ ಮಾಡು ಅಂತಿದ್ದೆ. ನೀನು ಕೂಡ ಯಾವತ್ತೂ ಯಾರಿಗೂ ಭೇದ ಮಾಡಿದವಳಲ್ಲ. ಊರಿಂದ ತೋಟದಾಳು ಕೆಂಚ ಬಂದಾಗಲೂ ಟೇಬಲ್ ಮೇಲೆ ಕೂರಿಸಿ ಊಟ ಹಾಕ್ತಿದ್ದೆ. ಮೇಲಿದ್ದ ಗೆಸ್ಟ್ ರೂಮನ್ನೇ ಅವನಿಗೂ ಮಲಗೋಕೆ ಬಿಟ್ಟುಕೊಡ್ತಿದ್ದೆ. ನಿಂಗೆ ಮನೆಗೆ ಬಂದ ಎಲ್ಲರೂ ಒಂದೇ ಅನ್ನೋ ಭಾವನೆ ಇತ್ತು. ಇದನ್ನೇ ನೋಡ್ತಾ ಬೆಳೆದ ನಂಗೆ ಬೇರೆ ಭಾವನೆ ಹೇಗಮ್ಮಾ ಬರೋಕೆ ಸಾಧ್ಯ?” ಭಾವುಕಳಾಗಿ ನುಡಿದಳು.

ಪ್ರೀತಿಯಿಂದ ರಿತುವಿನ ಹಣೆಗೆ ಮೃದುವಾಗಿ ಮುತ್ತನಿರಿಸಿದ ತನು, “ಜಸ್ವಂತ್ ಎಲ್ಲಿ ಸಿಕ್ದ ನಿಂಗೆ?” ಕೇಳಿದಳು.

“ಎಷ್ಟೊ ಹೊತ್ತು ಕಾದರೂ ಆಟೊ ಸಿಗಲಿಲ್ಲ. ಅದಕ್ಕೆ ಅವನ ಮೊಬೈಲ್‌ಗೆ ಫೋನ್ ಮಾಡಿದೆ, ಬಂದು ಕರ್‍ಕೊಂಡು ಹೋಗು ಅಂತ. ನಂಗೆ ಕೆಲ್ಸ ಸಿಕ್ಕಿದ್ದು ಅವನಿಗೂ ಸಂತೋಷವಾಗಿದೆ ಅಮ್ಮ. ಮೊದ್ಲು ಮನೆಯವರಿಗೆ ತಿಳಿಸಿಬಿಡು ಅಂತ ಬಿಟ್ಟುಹೋದ. ಇಲ್ಲದಿದ್ದರೆ ಎಲ್ಲೆಲ್ಲ ಸುತ್ತಿಸೋಕೆ ಕರ್‍ಕೊಂಡು ಹೋಗ್ತಾ ಇದ್ದನೋ? ನಾಳೆ ಅಂತೂ ಪಾರ್ಟಿ ಕೊಡಿಸಲೇಬೇಕಂತೆ. ಸಂಬಳ ಆದ ಮೇಲೆ
ಕೊಡಿಸ್ತೀನಿ ಕಣೋ ಅಂದ್ರೂ ಕೇಳ್ತಾ ಇಲ್ಲ” ದೂರುವಂತೆ ಹೇಳಿದಳು.

“ಹೋಗ್ಲಿ ಬಿಡು ರಿತು. ನಾವು ಇತ್ತೀಚಿಗೆ ಎಲ್ಲೂ ಹೊರಗೆ ಹೋಗೇ ಇಲ್ಲ. ನಾಳೆ ಎಲ್ಲರೂ ಒಟ್ಟಿಗೆ ಹೋದರಾಯ್ತು.” ಹೊರಗೆ ಹಾರ್‍ನ್ ಕೇಳಿಸಿದಾಗ, “ನಿಮ್ಮ ಅಪ್ಪ ಬಂದ್ರು ಅಂತ ಕಾಣುತ್ತೆ. ಮೊದ್ಲು ವಿಷಯ ತಿಳಿಸಿಬಿಡು. ಎಷ್ಟು ಸಂತೋಷಪಡ್ತಾರೋ ಮನು.”

ಹಾಗೆಂದ ಕೂಡಲೇ ಅಮ್ಮನ ತೆಕ್ಕೆ ಬಿಟ್ಟು ಒಂದೇ ಉಸುರಿಗೆ ಹೊರಗೆ ಹಾರಿದಳು. ಮನುವನ್ನು ತಬ್ಬಿಕೊಂಡೇ ಒಳಬರುತ್ತಾ ಎಲ್ಲವನ್ನೂ ವರದಿ ಮಾಡತೊಡಗಿದಳು.

“ಪಪ್ಪಾ, ನಾನು ಇಂಟರ್‌ವ್ಯೂಗೆ ಹೊರಟಾಗಲೇ ನನ್ನ ಗಾಡಿ ಕೈಕೊಟ್ಟಿತು. ಆಟೋ ಹಿಡಿದು ಅಲ್ಲಿಗೆ ಹೋಗೋದ್ರೊಳಗೆ ಎಲ್ಲಿ ಲೇಟಾಗುತ್ತೋ ಅಂತ ಭಯ ಆಗಿತ್ತು. ಆದ್ರೆ ಇನ್ನೂ ಒಂದು ಗಂಟೆ ಇಂಟರ್‌ವ್ಯೂ ಲೇಟ್ ಅಂತ ಹೇಳಿದ ಮೇಲೆ, ಕೂತ್ಕೊಂಡು ಬೇಸರವಾಗಿ ಹಾಗೆ ಅಲ್ಲಿದ್ದ ಗಾರ್ಡನ್ ಸುತ್ತಿ ಬರೋಣ ಅಂತ ಹೊರಟೆ. ಅಲ್ಲೊಂದು ಅಜ್ಜಿ ಸಿಕ್ತು. ನಮ್ಮಜ್ಜಿ ಥರಾನೇ ಇತ್ತು. ಚೆನ್ನಾಗಿ ಮಾತನಾಡಿಸಿದೆ. ಆಮೇಲೆ ಇಂಟರ್‌ವ್ಯೂ ನಡೆಯೋ ಜಾಗಕ್ಕೆ ಬಂದ್ರೆ ಒಬ್ಬಾತ ನರಳ್ತಾ ಇದ್ದಾರೆ. ನಂಗೆ ಗಾಬರಿ ಆಯ್ತು. ನೀರು ಕುಡಿಸಿ ಆಸ್ಪತ್ರೆಗೆ ಹೋಗೋಣ, ಬನ್ನಿ ಅಂತ ಕರ್‍ಕೊಂಡು ಹೋಗೋಕೆ ರೆಡಿಯಾದೆ. ಆದ್ರೆ ಅವರು ಇಲ್ಲೇ ಡಾಕ್ಟರ್‌ ಇದ್ದಾರೆ ಬಾಮ್ಮ ಅಂತ ಕರ್‍ಕೊಂಡು ಅಲ್ಲಿಗೆ ಹೋದ್ರೆ, ಆ ಮನುಷ್ಯ ಕುದುರೆಯಂತೆ ಎದ್ದು ನಿಂತುಬಿಡೋದೇ ? ಕಂಗ್ರಾಟ್ಸ್ ಬೇರೆ ಹೇಳ್ತಾ ಇದ್ದಾರೆ. ನಂಗಂತೂ ಏನೂ ಅರ್ಥಾನೇ ಆಗ್ತಾ ಇಲ್ಲ. ಅಷ್ಟರೊಳಗೆ ಇನ್ನೊಬ್ಬರು ಬಂದು ಎಲ್ಲವನ್ನೂ ವಿವರಿಸಿದರು. ಹೊಸ ರೀತಿ ಇಂಟರ್‌ವ್ಯೂ ಇದು. ಪ್ರಾಕ್ಟಿಕಲ್ ಇಂಟರ್‌ವ್ಯೂ ಮಾಡಿದ್ದೇವೆ. ನೀವು ಸೆಲೆಕ್ಟ್ ಆಗಿದ್ದೀರಾ. ನಾಳೆಯಿಂದಲೇ ಕೆಲ್ಸಕ್ಕೆ ಬನ್ನಿ ಅಂದ್ರಪ್ಪ.”

“ಗುಡ್, ವೆರಿಗುಡ್, ನನ್ನ ಮಗಳು ಅಂದ್ರೆ ಹಾಗೇನೇ. ಎಲ್ಲರಿಗಿಂತ ವಿಶೇಷ. ನಂಗೆ ಗೊತ್ತಿತ್ತು. ನೀನು ನಿನ್ನ ಮೊದಲನೆಯ ಇಂಟರ್‌ವ್ಯೂನಲ್ಲೇ ಗೆಲ್ತಿಯಾ ಅಂತ. ಕಂಗ್ರಾಜುಲೇಷನ್” ಹೆಮ್ಮೆಯಿಂದ ಹೇಳಿದ ಮನು.

“ಅಲ್ವೆ ರಿತು, ನಿನ್ನ ಥರಾನೇ ಬೇರೆಯವರು ಆ ಸಮಯದಲ್ಲಿನಡ್ಕೊಂಡಿದ್ದರೆ ಏನು ಮಾಡ್ತಾ ಇದ್ದರಂತೆ? ಯಾರನ್ನು ಆರಿಸಿ ಕೆಲ್ಸ ಕೊಡ್ತಾ ಇದ್ರಂತೆ?” ಅಷ್ಟು ಹೊತ್ತಿನಿಂದ ಕೊರೆಯುತ್ತಿದ್ದ ಅನುಮಾನವನ್ನು ಹೊರಹಾಕಿದಳು ತನುಜಾ.

“ಇನ್ನೂ ಒಂದೆರಡು ಪರೀಕ್ಷೆ ಮಾಡ್ತಾ ಇದ್ರು ಅಂತ ಕಾಣುತ್ತೆ. ಅಷ್ಟೆಲ್ಲ ಮಾಡಿದವರು ಇದನ್ನು ಆಲೋಚನೆ ಮಾಡಿರಲ್ವ? ನಿಜಕ್ಕೂ ಅಮ್ಮ ಅವರ ಪ್ಲಾನ್‌ನ ಮೆಚ್ಚಲೇಬೇಕು. ಇವರು ಹೀಗೆ ಮಾಡ್ದೆ ಹೋಗಿದ್ದಿದ್ದರೆ ನಿಜವಾಗಿ ಯಾರಿಗೆ ಸೇವೆ ಮಾಡಬೇಕು ಅಂತ ಆಸೆ ಇರುತ್ತೋ ಅವರಿಗೆ ಅಲ್ಲಿ ಅವಕಾಶ ಸಿಗ್ತಾ ಇರ್‍ಲಿಲ್ಲ. ಕೆಲವರಂತೂ ರೆಕ್ಮೆಂಡ್ ಲೆಟರ್ ತಂದಿದ್ರು. ಮಿನಿಸ್ಟರ್ ಕೈಯಿಂದ ಫೋನ್ ಮಾಡಿಸ್ತೀನಿ ಅಂತ ಇದ್ರು ಅಂತ ಅವರೇ ಹೇಳಿದ್ರು. ಯಾರ ಶಿಫಾರಸ್ಸೂ ಇಲ್ಲಿ ನಡೆಯೋಲ್ಲ ಅಂತನೂ ಹೇಳಿದ್ರು. ಈ ಕಾಲದಲ್ಲೂ ಇದೆಲ್ಲ ಇದೆ ಅಂದ್ರೆ ನಂಬೋಕೆ ಆಗ್ತಾ ಇಲ್ಲ. ಒಂದು ವೇಳೆ ಅವರ ಭರವಸೆ, ನಿರೀಕ್ಷೆಗಳು ಸುಳ್ಳಾಗಿಬಿಟ್ರೆ? ನನ್ನಿಂದ ಅದನ್ನು ಉಳಿಸಿಕೊಳ್ಳೋಕೆ ಆಗದೆ ಇದ್ರೆ?” ಅನುಮಾನ ವ್ಯಕ್ತಪಡಿಸಿದಳು.

“ಛೇ, ಛೇ, ಹಾಗೆನ್ನಬೇಡ ರಿತು. ಆತ್ಮವಿಶ್ವಾಸಾನ ಕಳ್ಕೋಬೇಡ. ನೀನು ಯಾವತ್ತೂ ಸೋಲೋದಿಲ್ಲ ಅನ್ನೋ ಭರವಸೆ ನಮಗಿದೆ. ನೀನು ಸೋಲ್ಲೂ ಬಾರದು, ನಿನ್ನ ಜತೆ ಸದಾ ನಾವು ಇರ್‍ತೀವಿ” ಮಗಳ ಬೆನ್ನು ತಟ್ಟುತ್ತ ಮನು ಅಭಿಮಾನಿಸಿದ.

“ಹೌದು ರಿತು, ನೀನು ಯಾವತ್ತೂ ಗೆಲುವಿನ ಹೆಜ್ಜೆನೇ ಇಡ್ತಾ ಇರಬೇಕು. ಅದೇ ನಮ್ಮಾಸೆ ಕೂಡ. ಈಗ ಆ ದೇವರು ನಿಂಗೆ ಕೊಟ್ಟಿದ್ದನ್ನೆಲ್ಲ ವಾಪಸ್ಸು ಮಾಡುವ ಅವಕಾಶ ಬಂದಿದೆ. ಪ್ರಾಮಾಣಿಕವಾಗಿ, ನಿಸ್ಪೃಹವಾಗಿ ಆ ವೃದ್ಧರ ಸೇವೆ ಮಾಡು. ನಿನ್ನಂಥ ಮೊಮ್ಮಗಳೋ ಮಗಳೋ ನಮಗಿರಬಾರದಿತ್ತೇ ಅನ್ನೋ ಭಾವನೆ ಬರುವಂತೆ ಅವರನ್ನು ನೀನು ಪ್ರೀತಿ ಮಾಡಬೇಕು. ನೊಂದ ಒಡಲುಗಳು ಅವು. ಅವಕ್ಕೆ ನಿನ್ನಂಥವರಿಂದ ತಂಪೆರೆಯಬೇಕು. ಯಾರ ಮನಸ್ಸನ್ನೂ ನೋಯಿಸದಂತೆ ನಡೆದುಕೊ. ಒಟ್ಟಿನಲ್ಲಿ ನನ್ನ ಮಗಳು ತಪ್ಪು ಮಾಡೋಲ್ಲ ಅನ್ನೋ ನಂಬಿಕೆನಾ ನೀನು ಉಳಿಸಿಕೊಡಬೇಕು. ಯಾರಿಂದಲೂ ನಿನ್ನ ಬಗ್ಗೆ ಕೆಟ್ಟ ಮಾತು ಬರಬಾರದು. ಸೇವೇನೇ ನಿನ್ನ ಉಸಿರಾಗಬೇಕು. ನಿನ್ನ ಹೆತ್ತವರನ್ನು, ನಿನ್ನ ಅಜ್ಜಿಯನ್ನು ಅವರಲ್ಲಿ ಕಾಣು” ತನುಜಾ ಗಂಭೀರಳಾಗಿ ಮಗಳಿಗೆ ಉಪದೇಶಿಸಿದಳು.

“ಖಂಡಿತ ಅಮ್ಮಾ. ನಾನು ಬಯಸಿ ಬಯಸಿ ಪಡೆದಂಥ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ತೀನಿ ಅಮ್ಮ. ನಿನ್ನ ನಂಬಿಕೆಗೆ, ವಿಶ್ವಾಸಕ್ಕೆ ಖಂಡಿತ ಬೆಲೆ ಇರೋ ಹಾಗೆ ಮಾಡ್ತೀನಿ ಅಮ್ಮ” ಆತ್ಮವಿಶ್ವಾಸದಿಂದ ರಿತುವಿನ ಮೊಗ ಬೆಳಗುತ್ತಿತ್ತು.

“ಅಮ್ಮ ಮಗಳು ಇಬ್ರೇ ಮಾತಾಡ್ತಾ ಇರ್‍ತಿರೋ ನನ್ನ ಕಡೆನೂ ಸ್ವಲ್ಪ ಗಮನ ಹರಿಸ್ತೀರೋ?” ಮನು ಕೆಣಕಿದ.

“ಸ್ಸಾರಿ ಮನು, ರಿತುಗೆ ಕೆಲ್ಸ ಸಿಕ್ಕಿದ ಸಂತೋಷದಲ್ಲಿ ನಿಮ್ಮನ್ನ ವಿಚಾರಿಸಿಕೊಳ್ಳೋದೇ ಮರೆತುಬಿಟ್ಟೆ. ಎಲ್ಲಾ ಹೇಗಾಯ್ತು? ಚಿಕ್ಮಾವ, ಚಿಕ್ಕತ್ತೆ ಹ್ಯಾಗಿದ್ದಾರೆ? ಊಟ ಮಾಡ್ತೀರೋ ಅಥವಾ ಸ್ವಲ್ಪ ಕಾಫಿ ಕುಡಿದು ರಿಲ್ಯಾಕ್ಸ್ ಆಗ್ತಿರೋ?’ ಹೊರಗಿನಿಂದ, ಅಷ್ಟುದೂರದಿಂದ ಬಂದ ಮನುವನ್ನು ವಿಚಾರಿಸದೆ, ಪ್ರಯಾಣದ ಆಯಾಸ ಪರಿಹರಿಸಿಕೊಳ್ಳಲು ಬಿಡದ ರಿತುವಿನ ಸಂಭ್ರಮದಲ್ಲಿ ಆತನನ್ನು ಮರೆತೇಬಿಟ್ಟೆ. ತನ್ನನ್ನೇ ಬಯ್ದುಕೊಂಡಳು ತನುಜಾ.

“ಸದ್ಯಕ್ಕೆ ಸ್ಟ್ರಾಂಗ್ ಕಾಫಿ ಕೊಡು. ಚಿಕ್ಕಮ್ಮ-ಚಿಕ್ಕಪ್ಪ ಇಬ್ರೂ ನಿನ್ನನ್ನ, ರಿತುನಾ ತುಂಬಾ ಕೇಳಿದರು. ನೀವಿಬ್ಬರೂ ಬರ್‍ಲಿಲ್ಲ ಅಂತನೂ ಬೇಸರಪಟ್ಕೊಂಡರು. ಇರೋ ಒಬ್ಬನೇ ಮಗನ ಮದ್ವೆ ನೀವಿಬ್ಬರೂ ತಪ್ಪಿಸಿಕೊಂಡಿರಲ್ಲ ಅಂತ ನಾ ಬರೋವರೆಗೂ ಪೇಚಾಡಿಕೊಳ್ತಾ ಇದ್ರು.”

“ಏನ್ ಮಾಡೋದು ಹೇಳಿ, ನಂಗೂ ಆಸೆ ಇತ್ತು, ಮದ್ವೇಲಿ ಓಡಾಡಬೇಕು ಆಂತ. ರಿತುದೂ ಇಂಟರ್‌ವ್ಯೂ ಇಲ್ಲೆ ಇದ್ದಿದ್ರೆ ಇಬ್ರೂ ಬರಬಹುದಿತ್ತು. ಹೋಗ್ಲಿ ಬಿಡಿ, ರಾಹುಲ್ ಮಗುವಿನ ನಾಮಕರಣಕ್ಕೆ ಎಲ್ರೂ ಒಟ್ಟಿಗೆ ಹೋಗಿ ಬರೋಣ” ಎಂದಳು ತನುಜಾ.

“ಮತ್ತೊಂದು ವಿಷಯ ಗೊತ್ತಾ ತನೂ? ಚಿಕ್ಕಮ್ಮ-ಚಿಕ್ಕಪ್ಪ ಇಬ್ರೂ ರಾಹುಲ್ ಜತೆ ಇರಲ್ವಂತೆ. ನಾವಿಬ್ಬರೂ ಬೇರೆ ಮನೆ ಮಾಡ್ಕೊಂಡು ಇರ್‍ತೀವಿ. ಗಂಡ-ಹೆಂಡತಿ ಜಾಲಿಯಾಗಿರಲಿ. ಇಷ್ಟು ದಿನ ರಾಹುಲ್ ಓದು, ಕೆಲ್ಸ ಅಂತ ಒದ್ದಾಡಿದ್ದೆ ಆಯ್ತು. ಈಗಲಾದರೂ ರಾಮ, ಕೃಷ್ಣ ಅಂತ ಹಾಯಾಗಿರ್‍ತೀವಿ ಅಂತ ಹೇಳಿ ಚಿಕ್ಕ ಮನೆ ಬಾಡಿಗೆಗೆ ತಗೊಂಡಿದ್ದಾರೆ ತನು. ರಾಹುಲ್ ಅಂತೂ ಎಷ್ಟು ಬೇಡ ಅಂದ್ರೂ ಕೇಳ್ಲಿಲ್ಲ. ರಾಹುಲ್ ಅಂತೂ ತುಂಬ ನೊಂದುಕೊಂಡಿದ್ದಾನೆ. ಒಳ್ಳೆಯ ಕೆಲ್ಸ ಸಿಕ್ತು. ಕೈತುಂಬಾ ಸಂಪಾದನೆ ಮಾಡ್ತಾ ಇದ್ದೀನಿ. ಈಗ್ಲಾದ್ರೂ ಚೆನ್ನಾಗಿ ಅಪ್ಪ-ಅಮ್ಮನ್ನ ನೋಡ್ಕೊಳೋಣ ಅಂದ್ರೆ, ಮಗ-ಸೊಸೆ ಅಂತ ಯಾವ ಮಮಕಾರನೂ ಇಲ್ದೆ ಬೇರೆ ಮನೆ ಮಾಡಿದ್ದಾರೆ. ಜನ ಏನು ಅಂದ್ರೋತಾರೆ? ನೆಂಟರಿಷ್ಟರ ಮುಂದೆ ನನ್ನ ಚೀಪ್ ಮಾಡ್ತಾ ಇದ್ದಾರೆ ಅಂತ ಮದ್ವೇಲೂ ಬೇಸರದಿಂದಿದ್ದ. ಈ ಚಿಕ್ಕಮ್ಮ-ಚಿಕ್ಕಪ್ಪ ಅದ್ಯಾಕೆ ಹಾಗೆ ಮಾಡ್ತಾ ಇದ್ದಾರೋ ಏನೋ?” ಬೇಸರಪಟ್ಟುಕೊಂಡೇ ಹೇಳಿದ.

“ಹೋಗ್ಲಿ ಬಿಡಿ. ಅವರಿಷ್ಟ, ನಾಳೆ ಒಟ್ಟಿಗೆ ಇದ್ದು ಹೊಂದ್ಕೊಳ್ಳಲ್ಲ ಅಂತ ಅವನೇ ಹೆಂಡ್ತಿನ ಕರ್‍ಕೊಂಡು ಬೇರೆ ಹೋದ್ರೆ ಇವರಿಗೆ ತಾನೇ ನೋವು? ಅದಕ್ಕೆ ಮುನ್ನೆಚ್ಚರಿಕೆಯಾಗಿ ತಾವೇ ಬೇರೆ ಇರ್‍ತಾ ಇದ್ದಾರೆ.

“ರಿತು ತಾನೇ ಅಪ್ಪನಿಗೆ ಬಿಸಿಬಿಸಿ ಕಾಫಿ ಮಾಡಿ ತಂದಿತ್ತಳು. “ಅಪ್ಪ, ನಾನು ನಾಳೆನೇ ಡ್ಯೂಟಿಗೆ ಜಾಯಿನ್ ಆಗ್ತೀನಿ. ನಾಳೆ ಒಂದು ದಿನ ನನ್ನ ಡ್ರಾಪ್ ಮಾಡಿ, ಪಿಕ್ ಅಪ್ ಮಾಡಿ, ನಾಡಿದ್ದಿನಿಂದ ನನ್ನ ಗಾಡೀಲೇ ಹೋಗ್ತೀನಿ. ನಾಳೆನೇ ರಿಪೇರಿ ಮಾಡಿಸಬೇಕು. ಇಲ್ದೆ ಇದ್ರೆ ನಂಗೇ ಕಷ್ಟ.”

“ಸರಿ ಮಗಳೇ, ನಾಳೆನೇ ಗಾಡಿನಾ ರಿಪೇರಿಗೆ ಬಿಡ್ತೀನಿ. ಆಲ್ ದಿ ಬೆಸ್ಟ್‌. ಒಳ್ಳೆಯ ವರ್ಕರ್ ಅನ್ನಿಸ್ಕೋ” ಮಗಳನ್ನು ಹಾರೈಸಿದ ಮನು.
* * * *

“ಅಮ್ಮಾ, ಡಬ್ಬಿಗೂ ಚಪಾತಿನೇ ಹಾಕಿಬಿಡು. ಊಟ ಅಂತೂ ತಗೊಂಡು ಹೋಗಿರ್ತಿನಿ. ಮೊದಲನೆಯ ದಿನ ಅಲ್ವಾ? ಆಶ್ರಮದಲ್ಲಿ ಅಡುಗೆ ವ್ಯವಸ್ಥೆ ಇರಬೇಕು, ನೋಡೋಣ ನಾಳೆಯಿಂದ. ಅಪ್ಪಾ ಬೇಗ ಬಾ, ನಂಗೆ ಹೊತ್ತಾಯಿತು. ಮೊದಲನೆಯ ದಿನವೇ ಲೇಟಾಗಿ ಹೋದ್ರೆ ಚೆನ್ನಾಗಿರುತ್ತಾ?” ಚಪ್ಪಲಿ ಮೆಟ್ಟುತ್ತಲೇ ಕೂಗು ಹಾಕಿದಳು ರಿತು.

“ನಿನ್ನ ಪಂಕ್ಚುಯಾಲಿಟಿ ನಂಗೆ ಗೊತ್ತಿಲ್ವಾ? ಮೊದಲನೆಯ ದಿನ ಏನು, ನೀನು ಯಾವತ್ತೂ ಸಮಯಕ್ಕೆ ಸರಿಯಾಗಿ ಹಾಜರಿರ್ತಿಯಾ” ಎನ್ನುತ್ತ ಹೊರಬಂದು ಮನು ಕಾರನ್ನು ಹೊರತೆಗೆದು ಸ್ಟಾರ್ಟ್ ಮಾಡಿದ.

ಓಡುತ್ತಲೇ ಬಂದ ತನುಜಾ, “ಡಬ್ಬಿಗೆ ಚಪಾತಿ ಹಾಕು ಅಂತ ಹೇಳಿ ಈಗ ಓಡಿ ಹೋಗ್ತಾ ಇದ್ದೀಯಾ? ಅಲ್ಲೇನಾದ್ರೂ ಮಧ್ಯಾಹ್ನಕ್ಕೆ ಸಿಗದಿದ್ದರೆ ಏನು ಗತಿ?” ಡಬ್ಬಿಯನ್ನು ಕಿಟಕಿಯಿಂದಲೇ ರಿತುವಿಗೆ ವರ್ಗಾಯಿಸಿದಳು. “ಬಾಯ್ ಅಮ್ಮಾ” ಎನ್ನುತ್ತ ಕೈಬೀಸಿದಳು.

ಆಶ್ರಮದೊಳಗೆ ಕಾಲಿಟ್ಟ ರಿತು ರೋಮಾಂಚಿತಳಾದಳು. ಹಿಂದಿನ ದಿನ ಬಂದಾಗ ಅಂಥ ಭಾವನೆಗಳೇನೂ ಕಾಡಿರಲಿಲ್ಲ. ಆದ್ರೆ ಈಗ ತಾನಿಲ್ಲಿಯೇ ಅಲ್ಲವೇ ಕೆಲಸ ಮಾಡಬೇಕಾದುದು. ಹೆಚ್ಚಿನ ನಿರೀಕ್ಷೆಯೊಂದಿಗೆ ತನ್ನನ್ನು ಬರಮಾಡಿಕೊಳ್ಳುತ್ತಿರುವ ಸಂಸ್ಥೆಯ ಮುಖ್ಯಸ್ಥರಿಗೆ ಮನಸ್ಸಿನಲ್ಲಿಯೇ ಕೃತಜ್ಞತೆಯಿಂದ ನಮಿಸಿದಳು. ಹೊಸ ಜಾಗ, ಹೊಸ ಉದ್ಯೋಗ, ನವಿರೇಳುವ ಭಾವದೊಂದಿಗೆ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಳು.

“ಇವತ್ತಿನಿಂದ ಇಲ್ಲಿನ ಮೇಲ್ವಿಚಾರಣೆಯೆಲ್ಲ ನಿಮ್ಮದೇ. ನಮ್ಮದು ಲಾಭದ ಅಪೇಕ್ಷೆ ಇಲದೆ ಕೇವಲ ಸೇವೆಗಾಗಿ ದುಡಿಯುತ್ತಿರುವ ಸಂಸ್ಥೆ. ಇಲ್ಲಿರುವ ವೃದ್ಧರೆಲ್ಲ ಅನಾಥರಲ್ಲ. ಅವರ ಮಕ್ಕಳಾಗಿ ನಾನು, ನೀವು ಮತ್ತು ಇಲ್ಲಿನ ಸಿಬ್ಬಂದಿಗಳೆಲ್ಲ ಇದ್ದೇವೆ. ಯಾವ ಘಳಿಗೇಲೂ ಅವರನ್ನು ತಿರಸ್ಕಾರವಾಗಿ, ತಾತ್ಸಾರವಾಗಿ ಕಾಣಬಾರದು. ಹಾಗೇನಾದ್ರೂ ಅವರು ನೊಂದುಕೊಂಡರೆ, ಮೇಲೆ ಇರೋ ನನ್ನ ಹೆಂಡತಿಯ, ಆತ್ಮ ನೋಯುತ್ತೆ. ಅವಳ ಆಸೆ, ಸಾಕಾರ ಎಲ್ಲವೂ ಈ ಸಂಸ್ಥೆಯೇ ಆಗಿದೆ. ಈ ಸಂಸ್ಥೆಗಾಗಿ ವಸುಧಾ ತನ್ನ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಳು. ಅವಳ ಕನಸನ್ನು ನಾನು ಮುಂದುವರಿಸಿಕೊಂಡು ಹೋಗ್ತಾ ಇದ್ದೀನಿ. ನೀವೂ ಅದರಲ್ಲಿ ಒಬ್ಬರಾಗಬೇಕು” ಗಂಭೀರವಾಗಿ ಮನಮುಟ್ಟುವಂತೆ ಹೇಳಿದರು. ರಿತು ಸುಮ್ಮನೇ ತಲೆ ಆಡಿಸಿದಳು.

ಪ್ರಾರ್ಥನಾ ಮಂದಿರದಲ್ಲಿ ಎಲ್ಲರೂ ಸೇರಿದ್ದರು. ಅಲ್ಲಿಗೆ ಕರೆದೊಯ್ದು ರಿತುವಿನ ಪರಿಚಯ ಮಾಡಿಸಲಾಯಿತು. ನಿನ್ನೆ ಸಿಕ್ಕಿದಾಕೆ ಗುಂಪಿನಲ್ಲಿದ್ದರೂ ಪರಿಚಯದ ನಗೆ ಬೀರುತ್ತ, ಆತ್ಮೀಯ ನೋಟ ಹರಿಸಿದಾಗ ಪ್ರತಿಯಾಗಿ ರಿತು ಕೂಡ ಅದೇ ನೋಟ ಬೀರಿದಳು. ಎಲ್ಲರಿಗೂ ಕೈಜೋಡಿಸಿ ವಂದಿಸುತ್ತ ತನ್ನನ್ನು ತಮ್ಮಲ್ಲಿ ಒಬ್ಬಳಂತೆ ನೋಡಬೇಕೆಂದು, ತಮ್ಮ ಯಾವುದೇ ಸಮಸ್ಯೆಗಳಿಗೆ ಓಗೊಡಲು ತಾನು ಸದಾ ಸಿದ್ದವೆಂದು ನುಡಿದಾಗ ಹರ್ಷದಿಂದ ಎಲ್ಲರೂ ಚಪ್ಪಾಳೆ ತಟ್ಟುತ್ತ ಸ್ವಾಗತಿಸಿದರು.

ಇಡೀ ಆಶ್ರಮದಲ್ಲಿ ಒಟ್ಟು ನೂರಾ‌ಇಪ್ಪತ್ತು ಜನ ವೃದ್ದರಿದ್ದರು. ಕೆಲವರು ತಾವಾಗಿಯೇ ಸ್ವ-ಸಂತೋಷವಾಗಿ ವೃದ್ದಾಶ್ರಮ ಸೇರಿದ್ದರೆ, ಕೆಲವರು ಪರಿಸ್ಥಿತಿಯ ಒತ್ತಡದಿಂದ, ಮಕ್ಕಳ ನಿರ್ಲಕ್ಷ್ಯದಿಂದ ನೊಂದು ಇಲ್ಲಿ ಸೇರಿದ್ದರು. ಮತ್ತೆ ಕೆಲವರು ನೋಡಿಕೊಳ್ಳುವವರಿಲ್ಲದೆ ನಿರಾಶ್ರಿತರಾಗಿ, ಅನಾಥರಾಗಿ ಇಲ್ಲಿ ಬಂದು ಸೇರಿದ್ದರು. ಒಟ್ಟಿನಲ್ಲಿ ಎಲ್ಲಾ ನದಿಗಳೂ ಸಾಗರವನ್ನು ಸೇರುವಂತೆ, ಕಾರಣಗಳೇನೇ ಇದ್ದರೂ ವೃದ್ದಾಶ್ರಮದ ಸದಸ್ಯರಾಗಿ ತಮ್ಮ ನೋವು-ನಲಿವುಗಳನ್ನು ಹಂಚಿಕೊಳ್ಳುತ್ತ, ಇಲ್ಲಿರುವವರೇ ಪರಮಾಪ್ತರು ಎಂಬಂತೆ ಪರಿಸ್ಥಿತಿಗೆ ಹೊಂದಿಕೊಂಡು ಹೋಗುತ್ತಿದ್ದರು. ಇಂಥವರ ಜತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ತನ್ನ ಸುದೈವವೆಂದೇ ರಿತು ಭಾವಿಸಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಡಿಗಾಯ ಮಹಿಮೆ
Next post ಕಾಲು ದಾರಿಯೆ ಸಾಕು…

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys