ಮಾವಿನ ಮಿಡಿ ಎಲ್ಲಿ ಸಿಗುತ್ತೋ?
ಕಾಯುತ್ತಿದ್ದೆ.
ಉಪ್ಪಿನ ಕಾಯಿಯ ಮಿಡಿ ಈ ಸಲಕ್ಕೆ
ಹಾಕಿಡಬೇಕು.
ಅದೇ ಮೊನ್ನೆ ಹಸಿಹಸಿರು ಮಿಡಿ
ಗುಲಗುಂಜಿಗೆ ಸ್ವಲ್ಪವೇ ದೊಡ್ಡದು
ಪೇಟೆ ಅಂಚಿಗೆ ನನಗೆ ಬೇಕಾದದ್ದು
ಅವನೊಬ್ಬನಲ್ಲಿ ಮಾತ್ರ ಸುರಿದುಕೊಂಡಿದ್ದ.
ಏರುಪೇರಾಗದಂತೆ ಕೈ ಬಾಯಿ
ಸ್ವಚ್ಛವಾಗಿಟ್ಟುಕೊಳ್ಳಬೇಕು
ಮಾಡುವಾಗ ಎಂದಿದ್ದ..

ಭರಣಿಯ ಬಿರಡೆ
ಸ್ವಲ್ಪ ಸಡಿಲವಾದರೂ ಸಾಕು
ಒಳಗಿನ ಉಪ್ಪಿನ ಕಾಯಿಗೆ
ಹುಳು ಬೀಳುವುದು
ಹೊರಗಿನ ಹನಿ ನೀರ ಸೋಂಕು
ಕೆಡಿಸಿಬಿಡುವುದು
ರುಚಿಯ ಸಾರ ಹತ್ತದಂತೆ.

ಘಮಘಮ ಪರಿಮಳಕ್ಕೆ ಎಷ್ಟೊಂದು
ಮೂಗುಗಳು ತೆರೆದುಕೊಳ್ಳುತ್ತವೆ.
ಹುಳಿಖಾರ ಉಪ್ಪಿನದು ಅದೆಂಥಾ ಕರಾಮತ್ತು?

ಇಡಿಗಾಯಿ ಮಿಡಿಗಾಯಿ ಜಿಹ್ವೆಯೊಳಗೆ
ಅಂಟಿ ಮೀಟುವುದು ರಸಗೃಂಥಿಗಳ
ಹದವಾಗಿ ಬಿಸಿಮಾಡಿ ಸೌಟ ಬಳಸಿದರೆ
ಕಾಯ್ದುಕೊಳ್ಳಬಹುದು ಕಾಲಪೂರ್‍ತಿ

ಆಚೆ ಮನೆಗೂ ಇಚೆ ಮನೆಗೂ
ಮತ್ತೆ ಮತ್ತೆ ನಂಟು
ಬೆಸೆಯುವುದು ಮತ್ತೆ ಕಿಚ್ಚು ಹೊತ್ತಿಸುವುದು
ಇದೇ ಉಪ್ಪಿನ ಕಾಯಿ
ಅದಕ್ಕೆ ಪದೇ ಪದೇ ಹೇಳಿಕೊಳ್ಳಬೇಡ
ಉಪ್ಪಿನ ಕಾಯಿ ಬೆರೆಸಿಟ್ಟಿದ್ದನ್ನು
ಮನೆಯಾತ ಎಚ್ಚರಿಸಿದ್ದ.
*****

ನಾಗರೇಖಾ ಗಾಂವಕರ