ಚಂದ್ರ ಅಣಕಿಸುವಾಗ
ನಾವು ಹೀಗೆ ಕಣ್ಣಲ್ಲಿ ಕಣ್ಣ ಬೆರೆಸಿಯೂ
ಬಾಹುಗಳ ಬಂಧಿಸಿ ಬಿಗಿ
ಹಮ್ಮಿನಲಿ ಕುಳಿತುಕೊಳ್ಳುವುದು
ಸರಿಯೆಂದೇನು ಅನಿಸುತ್ತಿಲ್ಲ

ಚಳಿಹೊದ್ದ ರಾತ್ರಿಯಲಿ
ಎದುರಿಗೆ ಬೆಂಕಿಕಾಯಿಸುತ್ತ
ಎದುರು ಬದರು ಕುಳಿತು ಕೊಳ್ಳುವ ಬದಲು
ಮೈಗೆ ಮೈತಾಗಿಸಿ ಕೂಡ್ರಬಹುದಿತ್ತು
ಯಾವುದೋ ಸಂಪ್ರದಾಯಕೆ ಬೆಚ್ಚಿಬಿದ್ದದ್ದು ಸರಿಯಲ್ಲ

ಆ ರಾತ್ರಿಯಲ್ಲಿ ಮರದ ಆಸರೆ ಪಡೆದ ಹಕ್ಕಿಗಳು ಪ್ರಣಯಿಸುತ್ತಿರುವಾಗ
ಮನುಷ್ಯರಾದ ನಾವು
ಬಯಲ ಆಲಯದಲ್ಲಿ
ಅಹಂ ಹೊತ್ತು ಬೆರೆಯದೇ ಹೋದುದು ಸರಿಯೆನಿಸಲಿಲ್ಲ

ಹತ್ತಿರವಿದ್ದೂ ಎದುರಾದಾಗ
ನಾವು ಬಾಚಿತಬ್ಬಿಕೊಳ್ಳದೇ
ಪ್ರೇಮದ ಕನಸುಗಳ ಬಗೆಗೆ
ತುಟಿ ಬಿಚ್ಚದೇ ಹೋದುದ ಕಂಡು
ಮುಗಿಲಿಗೆ ದಿಗಿಲು ಬಡಿಯುವಂತೆ ಮಾಡಿದ್ದು
ಅಷ್ಟು ಸರಿಯಾದ ಕ್ರಮವಾಗಿರಲಿಲ್ಲ

ಜಾರುವ ಯೌವ್ವನವ ಕಟ್ಟಿಹಿಡಿಯಲಾಗದು
ಮೂರ್ಖ ಬಂಧನಗಳ ಮುರಿಯದೇ
ಕಾಲ ಕಳೆದುದು ಸರಿಯಾದ ನಿರ್ಧಾರವಾಗಿರಲಿಲ್ಲ

ಚಂದ್ರ ಚಂದ್ರಮ ಚಕೋರಿಯೇ
ನದಿಯಾಗುವ ಕಡಲಾಗುವ
ದಂಡೆಯಲ್ಲಿ ಕನಸಿನ ಗೂಡು ಕಟ್ಟುವ
*****