ಮೊದಮೊದಲು ನನ್ನಕ್ಕನ ಕೂಡ
ನಾ ಪಾಟಿ ಚೀಲವ ಹೊತ್ತು
ಶಾಲೆ ಮೆಟ್ಟಿಲು ಹತ್ತಿದ ಕ್ಷಣ
ಮಣಿ ಪಾಟಿಯಲ್ಲಿ ಒಂದೆರಡು
ಕಾಗುಣಿತ ಕಲಿತ ದಿನ

ಮೊದಮೊದಲು ನನ್ನಪ್ಪನ
ಕೈಯಲ್ಲಿ ಕೈಯಿಕ್ಕಿ ನಡೆದು
ದೊಡ್ಡ ದೇವನ ಜಾತ್ರೆ ನೋಡಿ
ದೊಡ್ಡ ಪುಗ್ಗಿಯ ಕೊಂಡು
ನಲಿದ ದಿನ

ಮೊದಮೊದಲು ಮಿಟಾಯಿ ಪ್ರೀತಿಗೆ
ಅಪ್ಪನ ಅಂಗಿಗೆ ಕೈಯಿಕ್ಕಿ
ನಾಲ್ಕಾಣೆ ಕದ್ದು ಸಿಕ್ಕಿ ಬಿದ್ದು
ಬಾಸುಂಡೆ ತಿಂದ ದಿನ

ಮೊದಮೊದಲು ತರುಣಿಯಾದಾಗ
ಮೈಕೈತುಂಬಿ ಮೊಂಡು
ಸೊಗಸುಗಾತಿಯಾದ ದಿನ
ಕನ್ನಡಿಯ ಗಂಟಲ್ಲಿ
ಗಂಟೆಗಟ್ಟಲೆ ಕಳೆದ ದಿನ

ಮೊದಮೊದಲು
ಮನವಾಂಛೆಯ ಗುರಿ ಮುಟ್ಟಿ
ಗುರುವಾಗಿ ಶಿಷ್ಯರಿಗೆ
ಪಾಠ ಮಾಡಿದ ದಿನ

ಮೊದಮೊದಲು
ಮದುವೆಯ ಮಧುರ ಬಂಧನ
ಪತಿಯರಮನೆಯ ಮಾಡಿನಲಿ
ನಲ್ಮೆಯ ನಲ್ಲೆಯಾದ ದಿನ

ಮೊದಮೊದಲು
ಕರುಳ ಕುಡಿಯನು ಪಡೆದು
ತಾಯ್ತನದ ಹಿಗ್ಗಿನಲಿ
ಹೆತ್ತ ಕಂದನ ತುಟಿಗೆ
ಎದೆಯೊತ್ತಿ ಹಾಲುಣಿಸಿದ ದಿನ

ಮೊದಮೊದಲು
ಹೆತ್ತವರ ಮರಣಕ್ಕೆ ಕೊರಗಿ
ಬದುಕ ಬಂಡಿಯ ಸುತ್ತ
ಸಾವಿನ ಹುತ್ತಕ್ಕೆ ಬೆದರಿ
ಸರ್ವವೂ ತೃಣವಾಗಿ ಕಂಡ ದಿನ
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)