ಮರೆಯಲಾರೆ ನಿನ್ನ ನೀರೆ
ಮರೆಯಲಾರೆ ಜನ್ಮಕೆ
ಮರೆತು ಹೇಗೆ ಬಾಳಬಹುದೆ
ಆತ್ಮ ಮರೆತು ಅನ್ನಕೆ?
ದೊರವಾದರೇನು ನೀನು
ದೂರ ತಾನೆ ಸೂರ್ಯನು?
ಭಾವನೆಯಲಿ ಕೂಡುವೆ ನೀ
ಕಿರಣದಂತೆ ನನ್ನನು
ಯಾರು ಜರಿದರೇನು ನೀನೆ
ಸಾರ ನನ್ನ ಜೀವಕೆ
ಕನಸಿನಲೆಯ ಏರಿ ಬಂದು
ಉಣಿಸನೀವೆ ಆತ್ಮಕೆ!
ಮೇರೆಯಾಚೆ ಮೌನ ನಿಂತು
ದೈವದಂತೆ ಕಾಯುವೆ
ಬೆಳಕಾದೆಯೆ ಇಲ್ಲಿ ಒಳಗೆ
ನಾನು ನೀನು ಬೇರೆಯೇ?
*****
ಪುಸ್ತಕ: ನಿನಗಾಗೇ ಈ ಹಾಡುಗಳು
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.