ಈಗಷ್ಟೇ ನಡುರಾತ್ರಿ
ಬಿ.ಪಿ. ಸದ್ದುಗಳೆಲ್ಲ
ಒಂದೊಂದಾಗಿ ಅಡಗುತ್ತಿವೆ
ಬ್ರೇನ್ ಹೆಮರೇಜಕ್ಕೆ ಹತ್ತಿರವಿದ್ದ
ಉದ್ಯಮಿಗಳು ಇನ್ನೂ
ಲೆಕ್ಕಾಚಾರದಲ್ಲಿದ್ದಾರೆ

ಇರಲಿ ನಾಳಿನ ಜಗಳಕ್ಕೆಂದು
ಹೊಸಪದಗಳಿಗೆ ಹುಡುಕಾಡುವ
ಬುದ್ದಿ ಜೀವಿಗಳು ನೆತ್ತಿಯೊಳಗೆ ಕಣ್ಣಿಟ್ಟು
ಏನೋ ಸಾಧನೆಗೆ ಉರಿಯುತ್ತ
ಹೊರಳಾಡುತ್ತಿದ್ದಾರೆ.

ಜಾಗತೀಕರಣದ ನೆಪಮಾಡಿ
ಬೇಡವಾದುದೆಲ್ಲ ನಮ್ಮ ಅಂಗಳಕೆ
ಬಂದು ಬೀಳುತ್ತಿವೆಯಲ್ಲ ಎಂದೇ ಹೊರಗೆ
ಭಾಷಣ ಮಾಡಿದವರು
ರಾತ್ರಿ ಇನ್ನೂ ಇಸ್ತ್ರಿ ಮಾಡುತ್ತಿದ್ದಾರೆ

ಮೌಲ್ಯಗಳು ಗಾಳಿಗೆ ತೂರಿ
ಕನಸಿನಂಗಳಕೆ ಚಂದಿರನ ಕರೆದು ನಾಗಾಲೋಟದ ಕುದುರೆ ಏರಿ
ಇದ್ದುದೆಲ್ಲ ಇಲ್ಲದಂತೆ
ಇಲ್ಲದ್ದೆಲ್ಲ ಇದ್ದಂತೆ ಕಾಣುವ ಹದಿಹರೆಯದವರು
ಇನ್ನೂ ಕನವರಿಸುತ್ತಿದ್ದಾರೆ.

ವೇದಿಕೆಯ ಮೇಲೆ
ಮಹಿಳಾವಾದ ಸ್ವಾತಂತ್ರ್ಯ ಸಮಾನತೆ
ಭಾಷಣಮಾಡಿ ಏನೋ ಸಾಧಿಸಿದಂತೆ
ಮನೆಯವರೊಂದಿಗೆ ವಿರೋಧ
ಕಟ್ಟಿಕೊಂಡ ಆಕೆ
ನಾಳೆ ಕೋರ್ಟಿಗೆ
ಯಾವುದಕ್ಕೊ ಅರ್ಜಿಸಲ್ಲಿಸಲು
ಕಣ್ಣೀರು ಚೀರಾಟ ಭರಾಟೆಗಳಲಿ
ಏನೇನೋ ಗೀಚಾಡುತ್ತಿದ್ದಾಳೆ

ಬೆಳಗಾದರೆ ಮತ್ತೆಲ್ಲ
ರಾಕ್ಷಸೀ ಚಟುವಟಿಕೆಗಳು
ಬಿಸಿಲು ಉರಿಬಿಸಿಲು ಬಿಸುಲ್ಗುದುರೆಯ
ಧಗೆ ಇವರುಗಳ ಒಳಹೊರಗೆಲ್ಲ

ರಾತ್ರಿಯೇ ನಿನ್ನ ಕತ್ತಲೆಯ
ಕಪ್ಪು ಹರವು ತೆಕ್ಕೆಯೊಳಗೆ
ಇವರನ್ನೆಲ್ಲಾ ಎಳೆದು ತಬ್ಬಿ
ಸುಮ್ಮನೆ ಮಲಗಿ ಬಿಡಬಾರದೆ
*****
ಪುಸ್ತಕ: ಇರುವಿಕೆ

ಲತಾ ಗುತ್ತಿ
Latest posts by ಲತಾ ಗುತ್ತಿ (see all)