ಯಾರಿಗೆ ಗೊತ್ತು ಸುದೀರ್ಘ ಪಯಣದ
ಈ ಹಾದಿ ಹೇಗೆಂದು
ಬಯಸಿದ್ದೆಲ್ಲ ಕೈಗೆಟಕುವದಿದೆಯೆಂದಿದ್ದರೆ…….
ಬಯಸದಿರಿ ಸುಮ್ಮನೆ ನಿರಾಸೆ
ಆಸೆಗಳೇ ತುಂಬಿ ಸೃಷ್ಠಿಯಾಗಿದೆಯೋ !
ಗಾಳಿ ಬೆಳಕು ಸಮುದ್ರದಲೆಗಳೊಳಗೆಲ್ಲ
ಏನೇನೋ ಅಸ್ಪಷ್ಟ ಶಬ್ದಗಳು – ರೇಖೆಗಳು
ಸೃಷ್ಟಿಯೇ ಆಸೆಯ ಬೆನ್ನೇರಿ ಬಂದಿದೆಯೋ !
ಸ್ವತಂತ್ರತೆ ಬಿಚ್ಚಿ ಹಾರಾಡಿ
ಸ್ವೇಚ್ಛೆಯಾಗಿಯೂ ನರಳಾಡುವ ತಳಮಳ

ಈ ಹಾದಿ ಬರಿ ಹಾದಿಯಲ್ಲ
ಪ್ರೀತಿ ಚಿಗಿತರೆ ಚಿಮ್ಮುವ ಸೆಳೆತ
ದ್ವೇಷ ಕೆರಳಿದರೆ ಧಗೆ
ಕಲ್ಲು ಮುಳ್ಳುಗಳ ಎಳೆತ ಒಳಗೊಳಗೇ ಉಮ್ಮಳ.

ಬೆಳಕು ಬೆಳದಿಂಗಳು
ಉತ್ಸಾಹಿ ಸೂರ್ಯಚಂದ್ರರ
ಮದಿರೆದಾಹದ ಮುಗುಳುನಗು
ಪಾರದರ್ಶಕ ಸೆಳೆತ ಕಣ್ಣು ಮುಚ್ಚಾಲೆಯಾಟ
ಬೆಚ್ಚಗಿನ ಇರುವಿಕೆಗೆ
ಆಸೆ ದುಃಖ ದುಮ್ಮಾಣಗಳ
ಮೂಟೆಕಟ್ಟಿ ಪ್ರಪಾತಕ್ಕೆಸೆದು
ಹಸಿರು ಹುಲ್ಲಿನ ಸ್ಪರ್ಷಕೆ
ನೆಮ್ಮದಿಯ ಕ್ಷಣಗಳ ಪುಳಕ.
*****

ಪುಸ್ತಕ: ಇರುವಿಕೆ