ಇನಿಯನೊಲುಮೆಯ ಹುಚ್ಚು
ಕುದಿಯಲ್ಲಿ ಸಿಕ್ಕಿ
ಏನಾದೆನೇ ಸಖಿ ಏನಾದೆನೇ!
ತೀರದಾಸೆಯ ಬೆಂಕಿ-
ಯುರಿಯಲ್ಲಿ ಉಕ್ಕಿ
ಪಾತ್ರೆಯಾಚೆಗೆ ಸುರಿದ ಹಾಲಾದೆನೇ!

ಮರಳು ಕನಸಿನ ಕೀಲು
ಕುದುರೆ ಬೆನ್ನೇರಿ
ಏನಾದೆನೇ ಸಖಿ ಏನಾದೆನೇ!
ತಾರೆಗಳ ಮೇರೆಗಳ
ಮೀರುತ್ತ ಹಾರಿ
ಸಾಕಿದೂರಿನ ಹೊಸಿಲ ಹೊರಗಾದೆನೇ!

ನನ್ನ ಮೂಲವ ಹುಡುಕಿ
ದಿವದ ಹೊರಗಿಣುಕಿ
ಏನಾದೆನೇ ಸಖಿ ಏನಾದೆನೇ!
ನನ್ನ ಮರ್ತ್ಯಳ ಮಾಡಿ
ಗರತಿನಿಷ್ಠೆಗೆ ಹೂಡಿ
ಗುರಿ ಕೊಡುವ ಧೀರನ ಸ್ತುತಿಯಾದೆನೇ!
*****

ಪುಸ್ತಕ: ನಿನಗಾಗೇ ಈ ಹಾಡುಗಳು

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)