ಇತಿಹಾಸ ಪ್ರಸಿದ್ಧ ಊರಿಗೆ ಹೋದೆ;
ಆ ಊರಿನ ಕರಿಯ
ಹರಿದ ಬಾಳಿನ ಗೆಳೆಯ
ತೋರಿಸಿದ ಒಂದೊಂದೇ ಸ್ಥಳ.

ಕನಸು ಕಲ್ಲೊಳಗೆ ಮೂಡಿದ ಮೂರ್‍ತಿ
ಭೂತ ಬೆಟ್ಟವಾದ ಕೋಟೆಯ ಕೀರ್‍ತಿ
ಸೀತೆ ಸ್ನಾನ ಮಾಡಿದ ಪುರಾಣ
ರಾಮ ತಂಗಿದ್ದ ಆವರಣ.

ಎಲ್ಲ ನೋಡಿ ಎದುರುನಿಂತಿದ್ದ ಕರಿಯನನ್ನು ಕೇಳಿದೆ:
“ಈ ಊರಲ್ಲಿ ಸ್ಮಶಾನ ಎಲ್ಲಿದೆ?”
ನಿಟ್ಟುಸಿರು ಬಿಟ್ಟು ಕರಿಯ ಹೇಳಿದ:
“ನಿಮ್ಮ ಜೊತೆ ಓಡಾಡಿ ಈಗ ಎದುರು ನಿಂತಿದೆ.”
*****