ಎಳೆತನದಿನಿ೦ದುವರೆಗೀ ಜಗದ ಬೆರಗ ನಾ-
ನಳಿಯದಂತಿರಿಸಿಹವು ವಸ್ತು ವ್ಯಕ್ತಿ
ಅಲ್ಪವಿವು ಸಾಮಾನ್ಯವೆನೆ ಪ್ರಕಟಗೈಯುತ್ತ
ತಮ್ಮತುಲ ಸುಖದುಃಖವೀವ ಶಕ್ತಿ.
ತನಗೆ ತನ್ನರಿವಷ್ಟೆ; ಮಿಕ್ಕುದರ ತಿಳಿವೆಲ್ಲ
ಭ್ರಮೆಯೆನಿಸುವೀ ತೋರ್ಕೆಯರಿವರಾರು?
ನೆಚ್ಚಿದರ ವಂಚಿಸುವ ವಿಷಯಗಳ ಸಂಚಿನೊಳು
ಮುದದ ಹದುಳವ ಭವದಿ ಪಡೆವರಾರು?
ಅದರಿನರಸುವರಲ್ತೆ ಋದ್ಧ ಸತ್ವರು ಸ್ವಯಂಜ್ಯೋತಿಷ್ಪದ
ನಿರ್ಬಲರಿಗೆಮಗಾಯಿತವರ ಕರುಣೆಯೊಳಿಂಥ ದೇವಮಂದಿರ ಶಿಲ್ಪ ಕಲ್ಪದ ಹದ.
*****

















