
೧
“ಜಗಕೆಲ್ಲ ಬಿದ್ದಿತ್ತೊ ಇಷ್ಟು ಹೊತ್ತಿರುಳೆಂಬ
ಕಂಪಾದುದೊಂದು ಕನಸು!
ಹಗಲಿನ್ನು ಬಂದು ಬೆಳಕಿನ ಸೊಬಗು ಬೆಳಗುವದು-
ಕನಸು ಆಗುವುದು ನನಸು!
೨
ಕನಸು ಕನಸೆಂದು ಕಂಗಳರು ಕನಕರಿಸುವರು
ಕನಸು ಕನಸಾಗಬಹುದೇ?
ಜನಿಸದಿರೆ ಕನಸಿನೊಳು ನನಸು, ನನಸಿನ ಜಗವು
ಕನಸಾಗಿ ಸಾವಬಹುದೇ ?
೩
“ಕನಸು ನನಸಿನ ಕಸುಕು, ನನಸು ಕನಸಿನ ನಸುಕು”
ಎಂಬ ಸವಿಗವನವನ್ನು
ಇನಿದಾಗಿ ಕಟ್ಟುತಿಹ ಕವಿಯಾಗಿ ಒಪ್ಪುವದು
ಬೆಳಗುಮುಂಜಾವು ಮುನ್ನು!
೪
ಚಿಕ್ಕಿಯಾಗಿರುಳೆಲ್ಲ ಮುಗಿಲಲ್ಲಿ ನಗೆಮೊಗದಿ
ಆಟವನ್ನಾಡಿ ದಣಿದು
ಹಕ್ಕಿಯಾಗೀಗ ಸಲೆ ಹಾಡುವನು ಇಂಪಾಗಿ
ದೇವ ತಾ ಮನದಿ ತಣಿದು!
೫
ಅಂದಲರ ಕಂಪಿನಲಿ ತಣ್ಣೆಲರ ತಂಪಿನಲಿ
ಪಾಡುಗಳ ಪೆಂಪಿನಲ್ಲಿ
ಕೆಂದಳಿರ ಕೆಂಪಿನಲಿ ಸೊಬಗೊಗೆವ ಸೊಂಪಿನಲಿ
ಮೈದೋರ್ವಲಂಪಿನಲ್ಲಿ!
೬
ಒಪ್ಪಾಗಿ ಚಿಗುರುತಿಹ ಮೂಡಲದ ಬೆಳಕಿನೊಳು
ಸೊಗಸುಳ್ಳ ಮನದಲಿಂದು
ಬಪ್ಪುತಿರುವದು ಬೆಳಗು ಮುಂಜಾವು ನುಣ್ಪುಳ್ಳ
ಬೆಳಕನೀರಿಂದ ಮಿ೦ದು!
೭
ಚೊಕ್ಕಟವದೆ೦ತಹದೊ ಈ ಬಗೆಯ ಬೆಳಗುಮುಂ-
ಜಾವಿನಾ ಸೊಬಗು-ಸೊಗಸು!
ಅಕ್ಕ ನಸುಕೇ! ಅಕ್ಕರದಿ ನಕ್ಕು ನನ್ನಯೀ
ಅ೦ತರ೦ಗವನ್ನು ನಗಿಸು!
*****
















