ಹೀಗೆಂದರೇನರ್ಥ? ಶಬ್ದ ವ್ಯರ್ಥ-! ಅಷ್ಟೆ ಅರ್ಥ!!
ಅರ್ಥ ಶಾಸ್ತ್ರದ ಕುಟಿಲ ನೀತಿಯೊಮ್ಮೆ
ಮಾನವೀಯತೆ ಬರಡು ಪ್ರೀತಿ-ಎಮ್ಮೆ :
ಕೋಣವೂ ಕರು ಹಾಕಿತೇ? ನವ್ಯ- ನ್ಯೂಜು!
ಬದುಕಲೋ ಸಾಯಲೋ ಭೀತಿಯೊಮ್ಮೆ
ಆದು ಕೂಡ ಗೇಲಿ-ಮೋಜು.
ಹಾಗೆಂದರೂ ‘ಈಸ್ಟು’ ಹೀಗೆಂದರೂ `ವೆಸ್ಟು’
ರೂಸು-ದೇಶ
ಈಸ್ಟು-ವೆಸ್ಟಿಗೆ ಡಿಕ್ಕಿ; ಸಂಸ್ಕೃತಿಯ ಆಟ
ಭಿನ್ನ ವೇಷ.
ಅಗೋ ಅತ್ತ ಬುದ್ಧ ಬಿದ್ದ
ಯೇಸು ಸತ್ತೂ ಎದ್ದ
ಚೈನಾ ದೇಶದೊಳೀಗ ಪಂಚಖಾದ್ಯ.
ಭೂಗೋಲವಿರಬಹುದು ತಾನಖಂಡ
ಭಂಡ ಅದಮಾಡಿಹನು ಪಂಚ ಖಂಡ
ಪಾಖಂಡಿಗೇಕಯ್ಯ ಐಕ್ಯನೀತಿ?
ರಾಜಕೀಯದ ‘ಸ್ಟೈಲು-ಸಭ್ಯ ರೀತಿ-
ಎಲ್ಲ ಬೊರ್ಡರಿನಲ್ಲಿ ಪೀಸು ಪೀಸು
ನಡುನಡುವೆ ಫಾಯ್ರಿಂಗು ಈಸು ಈಸು.
ವ್ಯಾಪಾರ ಮಾಡಿದರೆ ವಿನಾಯತಿ
ಇಲ್ಲವೋ ಐತಿ ಬಾ ಪಂಚಾಯತಿ!
*****

















