Home / ಕಥೆ / ಕಾದಂಬರಿ / ಸಂಗಪ್ಪನ ಸಾಹಸಗಳು – ೧೩

ಸಂಗಪ್ಪನ ಸಾಹಸಗಳು – ೧೩

ಬೆಳಗ್ಗೆ ಎದ್ದವರು ಎದ್ದ ಹಾಗೆ ಶಾನುಭೋಗರು ಸಂಗಪ್ಪನ ಮನೆಗೆ ಬಂದರು. ಸಂಗಪ್ಪ ಶಯನಗೃಹವನ್ನಿನ್ನೂ ಬಿಟ್ಟಿರಲಿಲ್ಲ. ಅವನ ಹೆಂಡತಿಗೆ ಶಾನುಭೋಗರ ಮೇಲೆ ಸಿಟ್ಟೇ ಬಂದಿತು. ರಾತ್ರಿ ಸಂಗಪ್ಪ ಅದೆಲ್ಲಿ ಹೋಗಿದ್ದನೊ ಬೆಳಗಿನ ಜಾವದಲ್ಲಿ ಮನೆಗೆ ಬಂದಿದ್ದ. ಯಾವೋಳ ಮಗ್ಗಲಲ್ಲಿ ಇದ್ದು ಎದ್ದು ಬಂದನೊ ಎಂದು ಈ ಹೆಂಡತಿ ಸಿಡುಗುಡ್ತಾನೆ ಬಾಗಿಲು ತೆಗೆದಿದ್ದಳು. ಸಂಗಪ್ಪ ಸುಮ್ಮನೆ ಇದ್ದಾನ? ಚೆನ್ನಾಗಿ ರಮಿಸಿದ; ಎಲ್ಲಾ ಮರೆಸಿದ; ಮಗ್ಗುಲಲ್ಲಿ ಮಲಗಿದ. ಇಬ್ಬರೂ ಇನ್ನೂ ಎದ್ದೇ ಇರಲಿಲ್ಲ; ಶಾನುಭೋಗರು ಬಂದು ಬಾಗಿಲು ತಟ್ಟಿದರು. ಕಣ್ಣೊರೆಸಿಕೊಂಡು ಹೊರಬಂದ ಆಕೆಗೆ “ತುಂಬಾ ಅರ್ಜೆಂಟ್ ಕೆಲ್ಸ ಇತ್ತು ಕಣಮ್ಮ” ಎಂದರು. ‘ಹೆಂಡ್ತಿಯಾದ ನನಗೇ ಇಲ್ಲ ಅರ್ಜೆಂಟ್ ಕೆಲ್ಸ ಈ ಜುಟ್ಟಯ್ಯನಿಗೇನೊ’ ಎಂದುಕೊಳ್ತಾ ಒಳ ಹೋಗಿ ಸಂಗಪ್ಪನನ್ನು ಏಳಿಸಿದಳು; ಸಂಗಪ್ಪ ಆಕಳಿಸಿಕೊಂಡು ಬಂದ. “ಏನ್ ಶಾನುಭೋಗರೆ, ಇನ್ನೂ ಏಳಾಕಿಲ್ಲ ಬಂದ್ಬಿಟ್ರಿ?” ಎಂದ. “ನೀನು ಏಳ್ದಿದ್ರೆ ಊರೇ ಎದ್ದಿರಲ್ಲ ಅಂತೇನ್ ಸಾವ್ಕಾರ್ರೆ? ಇರ್ಲಿ ಒಂದು ವಿಷ್ಯ ಮಾತಾಡ್ಬೇಕು. ಬೇಗ ಮುಖ ತೊಕ್ಕಂಡ್ ಬಾ” ಎಂದರು ಇವರು. ಅವನೊ ಮಹಾ ಸೋಮಾರಿತನ ತೋರಿಸಿದ: “ಹಿಂಗೇ ಹೇಳ್ರಿ ಅದೇನು… ಮುಖ ತೊಳೀದಿದ್ರೇನಂತೆ” ಎಂದು ಕೂತೇಬಿಟ್ಟ. ಶಾನುಭೋಗರು ಒತ್ತಾಯಿಸಿದರು: “ಸುಮ್ನೆ ಎದ್ದೋಗಿ ತೊಳ್ಕಂಡ್ ಬಾ. ಯಾವದೊ ತುಂಬಾ ಒಳ್ಳೆ ವಿಷಯ ಮಾತಾಡುವಾಗ ಇದು ಬೇರೆ ಅಪಶಕುನ”.

ಸಂಗಪ್ಪ ಎದ್ದ: ಮುಖ ತೊಳೆದ; ತೊಳೀತ ಯೋಚಿಸಿದ. ಯಾಕೆ ಎಂದೂ ಹಿಂಗಾಡದ ಶಾನುಭೋಗ ಇವತ್ತು ಎದ್ದೋನೆದ್ದಂಗೆ ಬಂದವ್ನೆ? ಆ ಪುಂಡರು ಏನಾರ ಮಾಡಿರಬವ್ದಾ…?

ಸಂಗಪ್ಪ ಬಂದು ಕೂತಾಗ ಶಾನುಭೋಗರೇ ಮಾತಿಗೆ ಶುರು ಮಾಡಿದರು: “ಅಲ್ಲ, ಸಾವ್ಕಾರ, ಈಗೇನೊ ನೀನು ದೊಡ್ಡ ಮನುಷ್ಯನಾಗ್ಬಿಟ್ಟೆ, ಸರ್ಕಾರಕ್ಕೆ ಒಂದ್ ಮಾತ್ ಹೇಳಿದ್ರೆ ಸಾಕು ಕೆಲ್ಸ ನಡ್ಯುತ್ತೆ. ಅಷ್ಟೊಂದು ಹೆಸರು ಮಾಡಿದೆ. ಯಾರಿಗೊತ್ತು ಮುಂದಿನ ಸಾರಿ ಮಿನಿಸ್ಟರಾದ್ರೂ ಆಗ್ಬಹುದು…”

“ಅವೆಲ್ಲ ನಮಗ್ಯಾಕೆ ಬಿಡಿ ಸ್ವಾಮಿ, ಮಿನಿಸ್ಟರಾಗಬಾರದು; ಮಿನಿಸ್ಟರನ್ನ ಮಾಡೊ ಶಕ್ತಿ ಉಳಿಸ್ಕೊಂಡಿರ್ಬೇಕು. ನಾವು ಅಲ್ಲಿ ಅಧಿಕಾರ ನಡೆಸೋದಲ್ಲ ಮುಖ್ಯ ಅಧಿಕಾರ ಇರೋರು ನಮ್ಮಂಗೆ ನಡೆಯೊ ಹಂಗೆ ಮಾಡೋದು ಮುಖ್ಯ. ಇದು ನನ್ನ ತತ್ವ ಹೆಂಗೈತ? ಏನಂತೀರಾ?” – ಸಂಗಪ್ಪ ತನ್ನ ಫಿಲಾಸಫಿ ಮಂಡಿಸಿದ.

“ಅದೇನೊ ಚನ್ನಾಗೈತೆ. ಆದರೆ ಇಲ್ಲೀವರೆಗೆ ನೀನು ಮಾಡಿದ್ದು ಲೌಕಿಕ ಲಾಭದ ಕೆಲಸ. ನೀನು ಸತ್ತ ಮೇಲೆ ಏನೂಂತ ಯೋಚ್ನೆ ಮಾಡಿದ್ದೀಯಾ? ಆಮೇಲೆ ನರಕಾನೊ, ಸ್ವರ್ಗಾನೊ, ಅಂತರಪಿಶಾಚೀನೊ…”

“ಯೇ ಬಿಡ್ತು ಅನ್ರಿ ಶಾನುಭೋಗರೆ, ಅದೇನಾದಾತು ನೋಡೇ ಬಿಡ್ತೀನಿ. ಇಷ್ಟೆಲ್ಲ ಮಾಡಿದ್ದೀನಿ, ಇನ್ನು ಸ್ವರ್ಗ ಬಿಟ್‌ಬಿಡ್ತೀನ? ಅಲ್ಲಿ ಹೋಗಿ ದೇವೇಂದ್ರನ್ನೇ ಇಳಿಸಿಬಿಡ್ತೀನಿ ಬೇಕಾದ್ರೆ.”

“ಅಲ್ಲ ಈ ಸ್ವರ್ಗ ಏನ್ ಸುಮ್ನೆ ಸಿಗುತ್ತ?”

“ಅದಿರ್ಲಿ, ವಿಷಯ ಏನು ಹೇಳಿ, ಎದ್ದೇಳೋಕಿಲ್ಲ ಸಾವು, ಸ್ವರ್ಗ ಏನೇನೊ ಮಾತಾಡ್ತೀರಲ್ಲ! ಏನ್ ಸಮಾಚಾರ?”

“ನೋಡಿ ಸಾವ್ಕಾರ್ರೆ, ಸುತ್ತು ಬಳಸು ಮಾತು ಬೇಡ. ಇಲ್ಲಿವರೆಗೆ ನೀವು ಮಾಡಿದ್ದು ಇಲ್ಲಿನ ಸುಖಕ್ಕಾಯ್ತು. ಅಲ್ಲಿನ ಸುಖಕ್ಕೂ ಇಲ್ಲೇ ಏನಾದ್ರೂ ಮಾಡ್ಬೇಕು. ನೀವು ನಿಮಗೆ ಸಹಾಯ ಮಾಡಿದ ನಾನು ಮುಂದೆ ಮೋಕ್ಷ ಕಾಣ್ಬೇಕು… ರಾತ್ರಿ ಏನಾಯ್ತು ಗೊತ್ತ? ನಮ್ಮೂರಿನ ದೇವರುಗಳು ಕನಸಲ್ಲಿ ಬಂದು ಕಣ್ಣೀರಿಟ್ಟವು. ಗಾಂಧಿ ಗುಡಿ ಕಟ್ಟೋಕಾಯ್ತು ನಮ್ಮ ಸಾವ್ಕಾರನಿಗೆ. ನಮ್ಮ ಗುಡಿಗಳು ಬಿದ್ದು ಹೋಗಿದ್ದರೂ ಕಣ್ಣು ಕಾಣ್ಸೋಲ್ವ? ಅಂತ ಕೇಳಿದವು. ಅದ್ರಿಂದ ನಾನು ಹೇಳೋದಿಷ್ಟೆ; ಮೊದಲು ಈ ದೇವಸ್ಥಾನಗಳ ಜೀರ್ಣೋದ್ದಾರ ಆಗ್ಬೇಕು.”

ಸಂಗಪ್ಪ ಬೆವರಿದ. ದೇವರುಗಳೇ ಕಣ್ಣೀರಿಟ್ಟ ಮೇಲೆ ತನಗೇನೋ ಕಾದಿದೆ ಎಂದುಕೊಂಡ. ಅಷ್ಟರಲ್ಲಿ ಹೆಂಡತಿ ಒಳಗಡೆಯಿಂದ “ಇದು ಏನೇನೊ ಮಾಡಿದ್ದಾಯ್ತು. ಅದನ್ನಾರ ಮಾಡ್ರಿ ಅಂದಳು. ಸಂಗಪ್ಪ ಮರು ಮಾತಾಡದೆ ಘೋಷಿಸಿಬಿಟ್ಟ; “ಜೀರ್ಣೋದ್ದಾರ ಮಾಡೋದೆ ಅಲ್ಲ. ಹೊಸ ಹೊಸ ದೇವಸ್ಥಾನಾನೂ ಕಟ್ಟಿಸ್ತೀನಿ.”

ಸರಿ, ಕೆಲಸ ಪ್ರಾರಂಭವಾಯ್ತು. ಆಸ್ತಿಕ ಮಹಾಶಯರ ಮನಸ್ಸಿಗೆ ಎಷ್ಟೋ ನೆಮ್ಮದಿಯಾಯ್ತು. ಹರಿಜನ ಪೂಜಾರಿ ಮಾಡಿದಾಗ ಒಳಗೇ ಬೇಜಾರಿಟ್ಟುಕೊಂಡಿದ್ದವರೂ ಈ ಸಾರಿ “ಸಾವ್ಕಾರ್ರು ಸರ್ಯಾದ ಕೆಲ್ಸ ಮಾಡ್ತಿದ್ದಾರೆ” ಎಂದು ಬಾಯ್ತುಂಬ ಹೊಗಳಿದರು. ರಾಜೇಂದ್ರನ ಬಳಗಕ್ಕೂ ರಾಚಿದರು. ‘ಎಂಥ ಪುಣ್ಯದ ಕೆಲಸ ಇದು, ಮೆಚ್ಚೋದಿಕ್ಕೂ ಪಡಕೊಂಡು ಬರ್ಬೇಕು’ ಅಂತ ಹೇಳಿದರು. ಇಷ್ಟಾದರೂ ಒಂದು ಸಮಸ್ಯೆ ತಂದೇಬಿಟ್ಟ ಸಂಗಪ್ಪ.

ಸ್ವರ್ಗದ ಚಿಂತೆ ಮಾಡುವಾಗ್ಲೂ ಸಂಗಪ್ಪ ಲೌಕಿಕದ ಚಿಂತೆ ಬಿಡೋನಲ್ಲ. ಒಂದೇ ಏಟಿನಲ್ಲಿ ಎರಡು ಹಕ್ಕಿ ಹೊಡೀಬೇಕು ಅನ್ನೋ ಲೆಕ್ಕಾಚಾರ ಹಾಕಿದ. ಶಾನುಭೋಗರ ಮುಂದೆ ತನ್ನ ಆಲೋಚನೆ ಏನೂಂತ ಹೇಳಿದ:

“ಈ ಸಾರಿ ಹೊಸ ದೇವಸ್ಥಾನದ ಪ್ರಾರಂಭೋತ್ಸವ ಯಾರಿಂದ ಗೊತ್ತ? ಒಬ್ಬ ಹರಿಜನ ನಾಯಕನಿಂದ; ಒಬ್ಬ ಹರಿಜನ ಮಂತ್ರೀನ ಕರೀತೀನಿ. ಹೇಗಿದೆ ಪ್ಲಾನು?”

ಶಾನುಭೋಗರು ತಲೆಮೇಲೆ ಕೈ ಇಟ್ಟುಕೊಂಡರು; ನಿಟ್ಟುಸಿರುಬಿಟ್ಟರು; ಆಮೇಲೆ ಹೇಳಿದರು: “ಇದೇನು ನಿಮಗೆ ಹರಿಜನರ ಹುಚ್ಚು? ದೇವಸ್ಥಾನದ ವಿಷಯದಲ್ಲೂ ಅವ್ರೇ ಆಗ್ಬೇಕ?”

“ಹುಚ್ಚಲ್ಲ ಶಾನುಭೋಗರೆ; ಕಾಲ ಹೆಂಗಿದೆಯೊ ಹಂಗೆ ಹೊಂದ್ಕೊಂಡಂಗೆ ಹೊರಗಡೆ ಕಾಣುಸ್ಬೇಕು. ಇಲ್ದಿದ್ರೆ ದೊಡ್ಡ ದೊಡ್ಡ ಲೀಡರುಗಳ್ನೆಲ್ಲ ಕಂಟ್ರೋಲಿಗೆ ತಗಳ್ಳಾಕ್ ಎಲ್ಲಾಗ್ತೈತೆ?”

“ಏನೊ ಸ್ವಾಮಿ. ಇದು ನನಗೆ ಸರಿಕಾಣೋಲ್ಲ. ಬೇರೆ ಜನರೂ ಅಸಮಾಧಾನ ಪಡ್ತಾರೆ. ಆಮೇಲೆ ನಿಮ್ಮ ದೇವಸ್ಥಾನಕ್ಕೆ ಯಾರೂ ಬರೋದೆ ಇಲ್ಲ. ಚೆನ್ನಾಗಿ ಯೋಚ್ನೆ ಮಾಡ್ರಿ.

“ನೋಡಿ ಶಾನುಭೋಗರೆ, ಯಾರಿಗೆ ಹೆಚ್ಚು ಹೊಟ್ಟೆ ಹಸ್ದಿರುತ್ತೊ, ಯಾರು ಹೆಚ್ಚು ತುಳಿಸ್ಕಂಡಿರ್ತಾರೋ ಅವ್ರೆ ಸಡನ್ನಂತ ತಿರುಗಿ ಬೀಳೋದು. ಅಂಥೋರು ಅಂದ್ರೆ ಹರಿಜನರೇ ಅಲ್ವೇ? ಇತ್ತ ಇವರಿಗೂ ಸಂತೋಷ ಆಗ್ಬೇಕು. ಅತ್ತ ಇತರೆ ಜನಕ್ಕೆ ದೇವರ ದೆಸೆಯಿಂದ ನನ್ನ ಬಗ್ಗೆ ಗೌರವಾನೂ ಇರ್ಬೇಕು. ಸಂಪ್ರದಾಯ – ಕ್ರಾಂತಿ ಎರಡೂ ಮಾಡ್ತೀನಿ ನಾನು.”

“ಅದು ಹೇಗೆ?”

“ದೇವಸ್ಥಾನದ ರಿಪೇರಿ ಮಾಡ್ಸಿದ್ದು, ಹೊಸದು ಕಟ್ಸಿದ್ದು ಸಂಪ್ರದಾಯ. ಹರಿಜನರಿಂದ ಪ್ರಾರಂಭೋತ್ಸವ ನಡ್ಸೋದು ಕ್ರಾಂತಿ. ಹೇಗಿದೆ ನನ್ನ ವಿಚಾರ?”

“ನಿಮ್ಮ ವಿಚಾರವೇನೋ ಚೆನ್ನಾಗಿದೆ; ಆದರೆ ಇದು ನನ್ನೊಬ್ಬನ ವಿಚಾರ ಅಲ್ಲ ನಾನ್ ಹೇಳ್ತಿರೋದು. ಜನಗಳ ವಿಚಾರ. ಅಂತೂ ಅತುರ ಬೇಡ ಸಾವ್ಕಾರ್ರೆ” ಎಂದು ಶಾನುಭೋಗರು ಎದ್ದು ಹೋದರು.

ಸಂಗಪ್ಪ ತನ್ನ ಪಟ್ಟು ಬಿಡೋ ಆಸಾಮಿ ಅಲ್ಲ; ಹರಿಜನ ಮಂತ್ರಿಗಳನ್ನು ಭೇಟಿ ಮಾಡಿಯೇಬಿಟ್ಟ.

ಮಂತ್ರಿಗಳು “ಏನ್ ಬಂದದ್ದು ಸಾವ್ಕಾರ್ರು?” ಎಂದರು.

“ತಮ್ಮ ಬಳಿ ಒಂದು ಕೆಲ್ಸವಿತ್ತು;” ಬಂದ.

“ಏನೆಂಥ ಕೆಲ್ಸ? ಹೇಳಿ.”

“ನಮ್ಮೂರಿಗೆ ನಿಮ್ಮ ಪಾದ ಬೆಳೆಸ್ಬೇಕೂಂತ ಕೇಳೋಕೆ ಬಂದಿದ್ದೀನಿ.”

“ಯಾಕೆ? ಏನು? ಯಾವತ್ತು? ಹೇಳಿ ಎಲ್ಲಾ.”

“ನೋಡಿ, ನೀವು ನಮ್ಮ ನಾಡಿನ ಹರಿಜನ ನಾಯಕರು, ಹರಿಜನರಲ್ಲೇ ಉತ್ತಮರು…”

“ಯಾವನ್ರೀ ಹೇಳಿದ್ದು ಹಂಗೆ? – ಗುಂಡು ಹಾರಿಸಿದಂತೆ ಬಂತು ಮಂತ್ರಿಗಳ ಮಾತು: “ಹರಿಜನ ನಾಯಕನಂತೆ; ಯಾಕೆ ಬೇರೆಯವರಿಗೆ ನಾಯಕನಲ್ಲವೆ? ನನಗೆ ಅವ್ಮಾನ ಮಾಡ್ತಿದ್ದೀರಿ ಎಲ್ಲರೂ ಸೇರಿ. ನಾನು ಎಲ್ಲರ ನಾಯಕ; ನಾಡಿನ ನಾಯಕ. ಕೇವಲ ಹರಿಜನ ನಾಯಕ ಅಲ್ಲ.” – ಇಷ್ಟು ಹೇಳಿ ಬುಸುಗರೆಯುತ್ತ ಕೂತರು.

ಸಂಗಪ್ಪ ಜುಬ್ಬದ ಗುಂಡಿ ಬಿಚ್ಚಿ ಸುಧಾರಿಸಿಕೊಂಡ. ಆಮೇಲೆ ತಕ್ಷಣ ಮಾತು ಹೊರಳಿಸಿದ: “ನಿಮ್ಮ ಮಾತು ನಿಜ ಸರ್. ನೀವು ನಾಡಿನ ನಾಯಕರು, ಹರಿಜನ, ಹರಿಜನ ಅಂದು ಸುಮ್ಕೆ ತಪ್ಪು ಪ್ರಚಾರ ಮಾಡ್ತಾರೆ. ಈಗ ನೋಡಿ, ಬೇರೆಯವರು, ಅದೇ ಹರಿಜನರ ಲೀಡರ್ ಜನಗಳು ಹರಿಜನ ಹರಿಜನ ಅಂತ ಒಂದೆ ಉಸಿರಿಗೆ ಬಡ್ಕೊಳ್ಳೋವಾಗ ನೀವು ಜನತೆ ಎಲ್ಲಾ ಜನತೆ ಅಂತ ವಿಶಾಲ ಭಾವನೆಯಿಂದ ಹೇಳ್ತಿದ್ದೀರಿ. ನೀವು ಎಲ್ಲ ಜನರ ನಾಯಕರು ಅಂತ ಹೇಳೋದು ನಮಗೂ ಒಳ್ಳೇದೇ ಆಯ್ತು… ವಿಷಯ ಇಷ್ಟೆ ತಾವು ನಮ್ಮೂರಿನ ಹೊಸ ದೇವಸ್ಥಾನದ ಪ್ರಾರಂಭೋತ್ಸವ ನೆರವೇರಿಸ್ಬೇಕು. ಇಷ್ಟೇ ನನ್ನ ಮನವಿ ಇಲ್ಲ ಅನ್ನಬಾರದು.”

ಮಂತ್ರಿಗಳು ಆ ವೇಳೆಗೆ ಆಯಾಸದಿಂದ ಸುಧಾರಿಸಿಕೊಂಡಿದ್ದರು; ನಿಧಾನವಾಗಿ ಹೇಳಿದರು: “ನೋಡಿ, ಏನೇ ಮಾಡಿದ್ರೂ ಹರಿಜನರಿಗೆ ಈ ದೇಶದಲ್ಲಿ ಉನ್ನತ ಸ್ಥಾನ ಕೊಡಲ್ಲ. ನನಗೆ ಕೊಟ್ಟಂಗೆ ಕ್ಯಾಬಿನೆಟ್ ಮಂತ್ರೀನೊ, ಇಲ್ಲ ಚೋಟು ಮಂತ್ರಿನೋ ಮಾಡಿ ಕಣ್ಣು ಒರೆಸ್ತಾರೆ. ದೇವಸ್ಥಾನಕ್ಕಿರ್ಲಿ ಹೋಟಲಿಗೇ ಹರಿಜನರನ್ನ ಬಿಟ್ಟುಕೊಳ್ಳದೆ ಇರುವಾಗ ನೀವು ನನ್ನನ್ನು ದೇವಸ್ಥಾನದ ಪ್ರಾರಂಭೋತ್ಸವಕ್ಕೆ ಕರೀತಿದ್ದೀರಿ. ಒಳ್ಳೆ ಕೆಲ್ಸ, ಬರ್ತೀನಿ; ಬಂದೇ ಬರ್ತೀನಿ.”

ಸಂಗಪ್ಪ ಊರಿಗೆ ಬಂದದ್ದು ಗೊತ್ತಾದ ಕೂಡಲೆ ಒಂದಷ್ಟು ಜನ ಊರಿನ ಹಿರಿಯರು ಬಂದರು. ಹರಿಜನರಿಂದ ಪ್ರಾರಂಭೋತ್ಸವ ಮಾಡ್ಸಿದ್ರೆ ಹೆಂಗಾಗ್ತೈತೆ – ಎಂದು ರಾಗ ಎಳೆದರು. ಸಂಗಪ್ಪ ಈಗಾಗ್ಲೆ ತಾನು ಮಂತ್ರಿಗಳನ್ನು ಒಪ್ಪಿಸಿ ಬಂದಿರೋದನ್ನು ಹೇಳಿದ; ಬದಲಾವಣೆ ಅಸಾಧ್ಯ ಎಂದ; ಬೇರೇನಾದರೂ ಯೋಚಿಸೋಣ ಎಂದೂ ಸೂಚಿಸಿದ. ಜನಕ್ಕೆ ಗೊತ್ತಾಯ್ತು ಇವನು ಪಟ್ಟು ಬಿಡೊಲ್ಲ ಅಂತ. ಅವರು ಒಟ್ಟಾರೆ ಇಷ್ಟು ಹೇಳಿದರು:

“ನಿಮ್ಮ ಕಷ್ಟ ನಮಗೂ ಗೊತ್ತಾಗ್ತೈತ; ಹರಿಜನ ಮಂತ್ರೀನ ಕರೆಸಿ; ಎಷ್ಟಾದ್ರೂ ಮಂತ್ರಿಗಳು; ಬ್ಯಾಡ ಅಂಬಾಕೆ ಹೆಂಗಾಗ್ತೈತೆ, ನಮ್ಮೂರಾನೆ ಯಾವನಾದ್ರೂ ಆಗಿದ್ರೆ ಸ್ವಲ್ಪ ಇರಿಸು ಮುರಿಸು ಆಗೋದು. ಅದೇನೊ ಗಾಂಧೀಗುಡಿಗೆ ಅಂತ ಮಾಡಿದ್ರಿ, ನಮ್ಗೂ ಅಷ್ಟೊಂದೇನೂ ಅನ್ನುಸ್ಲಿಲ್ಲ. ಆದ್ರೆ ಈಗ ಪ್ರಾರಂಭ ಆದ್ಮಲೆ ಗುಡಿ ಶುದ್ಧಿಗೆ ಏನಾರ ಯೋಚ್ನೆ ಮಾಡ್ರಿ.”

ಶಾನುಭೋಗರು ತಕರಾರು ತೆಗೆದ ದಿನದಿಂದ ಸಂಗಪ್ಪನೂ ಯೋಚನೆ ಮಾಡಿದ್ದ. ಪ್ರಾರಂಭೋತ್ಸವದ ಮಾರನೇ ದಿನ ಪ್ರಾಯಶ್ಚಿತ್ತಾರ್ಥ ಪೂಜೆ ಮಾಡಿಸಬಹುದೇನೊ ಎಂದು ಯೋಚಿಸಿದ. ಜನರೂ ಹೀಗಂದ ಮೇಲೆ ಶಾನುಭೋಗರಿಗೆ ಹೇಳಿಕಳಿಸಿ ಜನಕ್ಕೆ ಹೇಳಿದ. “ಎಲ್ಲಾ ನನಗೆ ಬಿಟ್ಟು ನೀವಿನ್ನು ಹೋಗಬಹುದು. ನನ್ನ ಮೇಲೆ ನಂಬಿಕೆ ಇಡಿ. ಈ ವಿಷಯ ಸುಮ್ನೆ ಹರುಡ್ತಾ ಹೋಗ್ಬೇಡಿ.”

ಶಾನುಭೋಗರು ತಾವು ಜನಕ್ಕೆ ಸುದ್ದಿ ಮುಟ್ಟಿಸಿದ್ದು ಇಷ್ಟಾದರೂ ಫಲ ನೀಡಿತೆಂದು ಸಂತೋಷಪಟ್ಟು ಸಂಗಪ್ಪನಿಗೆ ಹೇಳಿದರು: “ಒಂದು ಕೆಲ್ಸ ಮಾಡೋಣ. ನಿಮ್ಮ ಪ್ರಾರಂಭೋತ್ಸವ ನಡೀಲಿ, ಮಾರನೇ ದಿನ ಗುಡಿ ಶುದ್ಧಿ ಮಾಡಿ, ಕಾಶಿಯಿಂದ ಪುರೋಹಿತರನ್ನು ಕರೆಸಿ ನಮ್ಮ ಪ್ರಾರಂಭೋತ್ಸವ ನಡ್ಸೋಣ.

ಸಂಗಪ್ಪನಿಗೇನು ಎಲ್ಲಾ ಸುಸೂತ್ರವಾಗಿ ನಡೆದರೆ ಸರಿ; ಒಪ್ಪಿದ; ಭರ್ಜರಿಯಾಗಿ
ಮಾಡೋಣ ಎಂದ.
* * *

ಮತ್ತಿನ್ನೇನು ಹೇಳೋದು? ಎಲ್ಲಾ ಪೂರ್ವ ನಿಶ್ಚಿತ ಯೋಜನೆಯಂತೆಯೇ ನಡೀತು. ಇಂಥ ವಿಷಯಗಳಿಗೆ ಏನನ್ನೋದು? ಅಂತೂ ಹರಿಜನ ಮಂತ್ರಿಯಿಂದ ಪ್ರಾರಂಭೋತ್ಸವ, ಪೂಜೆ ಆದ ಮಾರನೇ ದಿನವೇ ಸತ್ಕುಲ ಸಂಜಾತರು ವಿಗ್ರಹವನ್ನು ತುಪ್ಪದಲ್ಲಿ ತೊಳೆದು ಶುದ್ಧಿ ಮಾಡಿದರು; ಸಂಗಪ್ಪ ಸರ್ವಕ್ಕೂ ಸಾಕ್ಷಿಯಾಗಿ ನಿಂತಿದ್ದ.

ಇನ್ನೇನು ಕೆಲಸ ನನಗಲ್ಲಿ ?
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...