ಅಹಾ! ನೀರೆ!
ದೇವದಾನವರು ಮೇರುಪರ್ವತವನಿಟ್ಟು
ಮ೦ಥಿಸಿದಾಗ,
ಆದಿಶೇಷನ ಹಚ್ಚಿ ಕಡೆದಾಗ,
ವಿಷಜ್ವಾಲೆಯ ನುಂಗಿ ಅಣಿಗೊಂಡಾಗ,-
ಕಲ್ಪತರುವನಿತ್ತೆ! ಕಾಮಧೇನುವನಿತ್ತೆ!
ಚಂದ್ರನನ್ನು ಕರುಣಿಸಿದೆ! ಲಕ್ಷ್ಮಿಯನ್ನು ಧಾರೆಯೆರೆದೆ!
ಅಮೃತವನ್ನು ಬೀರಿದೆ! ಎಣೆಯಾರು ನಿನಗೆ!
ಔದಾರ್ಯದ ಸಾಗರ ನೀನು!
ಆದರೆ ಓ! ನೀರೆ!
ಸಾಮ್ರಾಜ್ಯದ ಸಾಯುಜ್ಯ ಹವಣಿಸಿ
ಬವಣಿಬಟ್ಟು ಹುಟ್ಟುಕಡಿಯುವ ಮಾನವ-ದಾನವನ
ನು೦ಗದಿರು ವಿಷಜ್ವಾಲೆಗಳಿಂದ!
ನಿಜ ಮುಕ್ತಿಯ ರಾಣಿವಾಸವನು ತೋರಿಸವಗೆ!
ಹಸಿರು ತೆರೆಗಳ ಕೆಳಗೆ ಸೆರೆಯಾಗಿ ಸಿಕ್ಕು
ಬಾಳಲುಸಿರಿಲ್ಲದೆ ಹೇಳ ಹೆಸರಿಲ್ಲದೆ
ಬಳಲುತಿಹ ದೀನ ಮಾನವಗೆ ಕರುಣಿಸು,-
ಅಮೃತಶಕ್ತಿಯನು! ಜೀವಿತವನು!
*****



















