ಮೂಲ: ಉರ್ಸುಲಾ ಕೋಸಿಯೋಲ್ (ಪೋಲಿಷ್ ಕವಿ)
ಮರ ಹುದುಗುತ್ತದೆ ತನ್ನ ನೆರಳೊಳಕ್ಕೆ
ನಾವೂ ನಮ್ಮ ಭ್ರಮಾಕೂಪಕ್ಕೆ
ಜಾರುತ್ತೇವೆ ಬೆದರಿ
ಧಗಧಗಿಸುವ ಈ ತಾಪಕ್ಕೆ
ನೆರಳೇ ಹಬ್ಬಿರುವಾಗ ಈಗ ಎಲ್ಲ ಜಾಗ
ಗುರುತಿಸಬೇಕಾಗಿದೆ ನಾವು
ನೇಲುವ ಕೈಗಳ ನೆರಳಿನ ಪ್ರತ್ಯೇಕ ಭಾಗ
ಸದ್ಯಕ್ಕೆ
ಈ ವ್ಯಕ್ತಿ
ಮುಕ್ತಾಯಕ್ಕೆ ಮುಖ ಕೊಟ್ಟ ಈ ಅಕ್ಟೋಬರ್ ಧಾತ್ರಿ
ಹಕ್ಕಿ ತೊರೆದ ಹಸುರುಸುರದ ಈ ಟಿಸಿಲು
ಮರವಿರದ
ಪ್ರತಿಧ್ವನಿ ಸಹಸಾ ಬರದ
ಬತ್ತಲೆ ಅರಣ್ಯ ಮತ್ತು ಬಿಸಿಲು
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.