Home / ಕಥೆ / ಕಾದಂಬರಿ / ಸಂಗಪ್ಪನ ಸಾಹಸಗಳು – ೪

ಸಂಗಪ್ಪನ ಸಾಹಸಗಳು – ೪

ಚತುರ ಸಿಂಹ ಸಾಹಸಿ ಸಂಗಪ್ಪನಿಗೆ ಊರ ಹತ್ತಾರು ಜನರ ಎದುರು ಹೀಗೆ ಅವಮಾನವಾದ ಮೇಲೆ ಮುಂದಿನ ಕಾರ್ಯಾಚರಣೆ ಏನಿರಬಹುದು ಅಂತ ನಿಮಗೆಲ್ಲ ಕುತೂಹಲ ಬಂದಿದ್ದೀತು; ಅಧ್ವಾನದ ಆಂಗ್ಲ ಬಯ್ಗಳಿಗೇ ಸಂಗಪ್ಪನ ಸಾಹಸವನ್ನು ಸೀಮಿತಗೊಳಿಸಿದರಲ್ಲ ಅಂತ ನಿರಾಶೆಯೂ ಆಗಿರಬೇಕೇನೋ ಅಥವಾ ಎಂಥೋನಾದ್ರೂ ಹಾಗೆಲ್ಲ ಇಂಗ್ಲೀಷ್ ಮಾತಾಡ್ತಾನ ಅಂತಲೂ ಅನುಮಾನ ಬಂದಿರಲೇಬೇಕು… ಹೀಗೆ ಏನೆಲ್ಲ ಆಗಿರ್ಬೇಕು. ಒಂದು ಮಾತು ನೋಡಿ; ಇಂಥ ಬರವಣಿಗೆ ಲಕ್ಷಣವೇ ಇದು. ಒಬ್ಬ ವ್ಯಕ್ತಿಯ ಕೊಂಕು ನಡವಳಿಕೆ ಮನಸ್ಸಿಗೆ ಮುಟ್ಟಬೇಕಾದ್ರೆ ಸ್ವಲ್ಪ ಉತ್ಪ್ರೇಕ್ಷೆ ಇದ್ರೆ ತಪ್ಪಲ್ಲ. ಇಂಥ ಉತ್ಪ್ರೇಕ್ಷೆ ನೈಜತೆಯ ಅನುಭವಕ್ಕೆ ಒಂದು ಸಾಧನ ಆಗೋ ಹಂಗೆ ಇರ್ಬೇಕು; ಅದು ತಾನೇ ತಾನಾಗಿ ವಿಜೃಂಭಿಸಿ ಉಳಿದದ್ದು ಗೌಣವಾಗಬಾರದು. ಆದ್ದರಿಂದ ಆ ಬಗ್ಗೆ ಏನೂ ತಲೆ ಕೆಡಿಸ್ಕೊಳ್ಳೋದು ಬೇಡ. ಈಗ ನಿಜವಾಗಿ ನಮ್ಮ ತಲೆ ತಿನ್ನಬೇಕಾಗಿರೋದು ಅಥವಾ ತಿನ್ತಾ ಇರೋದು ಸಂಗಪ್ಪನ ಸ್ಥಿತಿಯೇನು? ಆತ ಮುಂದೇನು ಮಾಡಿದ? ಇವನ ವಾಕಿಂಗ್ ಸ್ಟಿಕ್ ಸಿಟ್ಟಿನ ಭಂಗಿಗಳಿಗೆ ಪ್ರೇಕ್ಷಕರ ಅನಂತರದ ಪ್ರತಿಕ್ರಿಯೆಗಳೇನು?… ಇತ್ಯಾದಿ, ಇತ್ಯಾದಿ ಪ್ರಶ್ನೆಗಳು ನಮ್ಮ ಮುಂದಿವೆ. ಇಂಥ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಕೊಂಡಾಗ ಒಂದು ಸನ್ನಿವೇಶ ಸೃಷ್ಟಿಯೂ ಆಯ್ತು; ಘಟನೆಗಳ ನೈಜ ಬೆಳವಣಿಗೇನೂ ಆಯ್ತು. ಈಗ ಮತ್ತೆ ಅಲ್ಲಿಗೇ… ಅಂದರೆ ಸಂಗಪ್ಪ ಬಿದ್ದೆದ್ದು ಬಡಬಡಿಸುತ್ತಾ ಇದ್ದ ಜಾಗಕ್ಕೇ ಬರೋಣ.

ತನ್ನ ಹತ್ತಾರು ಪ್ರಜೆಗಳ ಎದುರು ಭಂಗಕ್ಕೊಳಗಾದ ಸಂಗಪ್ಪ ಗಾಯಗೊಂಡ ಸರ್ಪವಾಗಿದ್ದ. ಬರೀ ಆಗಿದ್ದ ಅಂದರೆ ಸಾಲದು; ಅದನ್ನು ಬಾಯಲ್ಲಿ ಆಡಿ ತೋರಿಸಿಕೊಂಡ; “ಇವ್ನು ನನ್ನ ಕೆಣಕಿ ಉಳ್ಯೋದ್ನ ನಾನೂ ನೋಡ್ತೀನಿ. ನಾನು ಸರ್ಪ ಇದ್ದಂಗೆ ಸರ್ಪ! ಇವತ್ತು ಗಾಯ ಮಾಡಿದ್ದೀಯ ಹಾವಿನ ದ್ವೇಷ ಹನ್ನೆರಡು ವರ್ಷ ಅಂತ ಗೊತ್ತಿಲ್ವೇನೊ” ಎಂದು ಕಿರುಚುತ್ತಿರುವಾಗ್ಲೆ ಎಲ್ಲಿಂದಲೋ ರಾಜೇಂದ್ರನ ಬಾಯಿಂದ ರಾಗವಾಗಿ ಕೇಳಿ ಬಂತು; “ನನ್ನ ರೋಷ ನೂರು ವರುಷ”.

ಇನ್ನು ರೇಗಾಡ್ತ ಇದ್ರೆ ಅಷ್ಟೇನೂ ಪ್ರಯೋಜನ ಇಲ್ಲಾಂತ ಗೊತ್ತಾಯ್ತು. ಅವನ ಮೇಲಿನ ಸಿಟ್ಟನ್ನ ಸುತ್ತ ನಿಂತಿದ್ದ ಜನಗಳ ಮೇಲೆ ತಿರುಗಿಸಿದ; ಏನ್ ನೋಡ್ತಾ ನಿಂತಿದ್ದೀರೋ, ನಾನ್ ಬಿದ್ದು ಸಾಯ್ತಿದ್ದೀನಿ. ಸುಮ್ಮೆ ನಿಂತವ್ರೆ; ಬರ್ರೊ ಈ ಧೂಳು ಪಾಳು ಒರುಸ್ರೆ” ಎಂದು ಸುಗ್ರೀವಾಜ್ಞೆ ಹೊರಡಿಸಿದ್ದೇ ತಡ ಕಪಿಸೇನೆಯ ಥರಾ ಜನ ನುಗ್ಗಿ ಬಂದು ಮುತ್ತಿದರು; ಎಲ್ಲರೂ ಇವನನ್ನು ಹಿಡಕೊಂಡು ಧೂಳು ಹೊಡೆದವರೇ. ತಲೆಯೆಂದರೆ ತಲೆ, ಮೈಯ್ಯಂದರೆ ಮೈ ಎಲ್ಲಾ ಕಡೆ ಕುಟ್ಟಿದವರೇ, ಅಷ್ಟರಲ್ಲಿ ಊರಿನ ಇನ್ನಿಬ್ಬರು ತರುಣರು (ರಾಮು, ಭೀಮು) ಆಗಮಿಸಿದರು; ನೋಡಿದರು. ಈ ಸಂದರ್ಭಾನ ಮತ್ತಷ್ಟು ಮೋಜುಗೊಳಿಸಬೇಕು ಅಂತ ನಿರ್ಧರಿಸಿದ್ದೇ ತಡ, ಧೂಳು ಹೂಡೀತಾ ಇದ್ದೋರೆ ಕೂಗಿ ಹೇಳಿದರು:

“ನಿಮ್ಗೇನ್ ತಲೆ ನೆಟ್ಟಗೈತೇನ್ರಯ್ಯಾ? ಸಾವ್ಕಾರ್ರಿಗೆ, ಈ ಊರಿನ ಚೇರ್ಮನ್ರಿಗೆ ಬಟ್ಟೆ ತುಂಬ ಧೂಳು ತುಂಬೊಂಡಿದ್ದಾಗ ಕೈಯ್ಯಾಗ್ ಹೊಡುದ್ರೆ ಹೋಗುತ್ತ? ನಿಮಗೆ ಅವ್ರ ಬಗ್ಗೆ ಗೌರವ ಇದ್ರೆ, ಮರ್ಯಾದೆ ಕೊಡ್ಬೇಕು ಅಂತಿದ್ರೆ, ಬಟ್ಟೆ ಬಿಚ್ಚಿ ಒಗೀರಯ್ಯ”.

ಸಂಗಪ್ಪನಿಗೂ ಸರಿ ಅನ್ನಿಸ್ತು. ಆ ಹುಡುಗರೇ ಹಂಗೆ ಹೇಳ್ಬೇಕಾದ್ರೆ ತಾನು ಜನ್ರಿಂದ ಆ ಕೆಲ್ಸ ತಗೊಳ್ಳದಿದ್ರೆ ಮರ್ಯಾದೆಗೆ ಕುಂದು ಅಂತ ಭಾವಿಸಿ ಬಿಟ್ಟ. ಈ ಜಮೀನ್ದಾರಿ ದೌಲತ್ತೇ ಅಂಥೋದು ನೋಡಿ; ಅದರ ಪರಿಣಾಮ ಏನಾದ್ರೂ ಆಗ್ಲಿ, ಸತ್ತರೂ ಗತ್ತು ತೋರ್ಸೊ ಮತ್ತು ಬಂದಿರುತ್ತೆ ಅವ್ರಿಗೆ. “ಆ ನೆನ್ನೆ ಮೊನ್ನೆ ಹುಡುಗ್ರ ಹತ್ರ ಹೇಳಿಸಬೇಕೆನ್ರಯ್ಯ ನೀವು, ವರ್ಷಾನುಗಟ್ಲೆ ಸೇವೆ ಮಾಡಿ ಸರ್ವೀಸಾಗಿದ್ರೂ ಮರ್ಯಾದೆ ತೋರ್ಸೋದು ಗೊತ್ತಾಗ್ಲಿಲ್ವ ನಿಮ್ಗೆ..” ಎಂದು ಎಗರಾಡುತ್ತಿರುವಾಗಲೇ ಒಬ್ಬ ಎಗರಿ ಹತ್ತಿರ ಬಂದು ಗುಂಡಿ ಬಿಚ್ಚಿದ; ಮತ್ತೊಬ್ಬ ಜುಬ್ಬ ತೆಗೆದ; ಇನ್ನೊಬ್ಬ ನೆಟ್ ಬನಿಯನ್ ತೆಗೆದ; ಸಂಗಪ್ಪ ಕೂಡ್ಲೆ ತೊಣಚೆ ಹೊಕ್ಕವನ ಥರಾ ಚೀರಿದ: “ಲೆ… ಲೆ… ಕೊಡೊ ಇಲ್ಲಿ ಅದುನ್ನ; ಕೊಡೋ ಇಲ್ಲಿ” ಇವನ ಚೀರಾಟದ ತೀಕ್ಷ್ಣತೆಗೆ ಚೇಳು ಕಚ್ಚಿದವನಂತೆ ನೆಟ್ ಬನಿಯನ್ ಎಸೆದ ಆ ರೈತ. ಸಂಗಪ್ಪ ತಕ್ಷಣ ಅದರ ಒಳಜೇಬಿಗೆ ಕೈಹಾಕಿ ನೋಟಿನ ಕಂತೆ ಹೊರತೆಗೆದು ಆಮೇಲೆ ಅದನ್ನು ಕೊಟ್ಟ ಕೈಯ್ಯಲ್ಲಿ ಹಣ ಹಿಡಿದು ಸುತ್ತ ಮುತ್ತ ಠೀವಿಯಿಂದ ನೋಡುತ್ತಿರುವಾಗಲೆ ಒಂದಿಬ್ಬರು ರೈತರು ಇವನ ಪಂಚೆ ಎಳೆದರು. ಒಟ್ಟಿನಲ್ಲಿ ನಿಕ್ಕರ್ ಒಂದನ್ನು ಬಿಟ್ಟು, ಬುಡುಮೆಕಾಯಿ ದೇಹದ ಸಾವ್ಕಾರನನ್ನೂ ಅಲ್ಲೇ ಬಿಟ್ಟು ಬಟ್ಟೆ ಒಗೆಯೋಕೆ ಓಡಿದರು. ಇವನ ಹತ್ರವೇ ನಿಂತಿದ್ರೆ ಅದಕ್ಕೂ ಬಯ್ದುಬಿಟ್ಟಾನು ಅಂತ ಎಲ್ಲರೂ ಬಾವಿಯ ಬಳಿಗೆ ಬಂದು ಒಂದೇ ಪಂಚೇನ ಐದಾರು ಜನ ಸ್ಪರ್ಶ ಮಾಡಿ ಪುಣ್ಯ ಕಟ್ಟಿಕೊಂಡರು. ಒಬ್ಬನಂತೂ ಹಣ ಇಟ್ಕೊಳ್ತಿದ್ದ ನೆಟ್ ಬನೀನಿನ ಜೇಬಿಗೆ ನಮಸ್ಕರಿಸಿ, ಆ ಜಾಗದಲ್ಲೇ ತಿಕ್ಕಿದ್ದೂ ತಿಕ್ಕಿದ್ದೆ. ಇದೆಲ್ಲ ನಡೀತಿರುವಾಗ ರಸ್ತೆಯಲ್ಲಿ ಗಿಡ್ಡು ದೇಹದ, ದೊಣ್ಣೆಮೂಗಿನ, ಪೊರಕೆ ಮೀಸೆಯ ಗುಜ್ಜಾನೆ ಮರಿಯಂಥ ಸಂಗಪ್ಪ ಕೈಯಲ್ಲಿ ಹಣ ಹಿಡಿದು ನಿಂತಿದ್ದ.

ಬಟ್ಟೆ ಒಗೆದುಕೊಂಡು ಬಂದವರು ‘ನಡೀರಿ ಬುದ್ದಿ’ ಎಂದಾಗ ನಿಕ್ಕರ್ ಸಹಿತ ನಗ್ನ ಮೆರವಣಿಗೆ ಹೊರಟಿತು. ತಮ್ಮ ಪ್ಲಾನು ಫಲಿಸಿದ್ದು ಕಂಡು ರಾಮು ಭೀಮು ಅಲ್ಲಿಂದ ಜಾಗ ಖಾಲಿ ಮಾಡಿದರು; ಒದ್ದೆ ಬಟ್ಟೆಗಳನ್ನು ಅತ್ತೊಬ್ಬರು ಇತ್ತೊಬ್ಬರು ಹಿಡಕೊಂಡಿರುವಾಗ ಮಧ್ಯದಲ್ಲಿ ಸಾವ್ಕಾರ ಬರ್ತಿದಾನೆ. ಹಿಂದೆ ಒಂದು ಗುಂಪು.

ಊರೊಳಗೆ ಬರೋ ಹೊತ್ತಿಗೆ ಸಾವ್ಕಾರನಿಗೆ ಗೊತ್ತಾಯ್ತು, ಈ ಜನರೆದುರು ಹೀಗೆ ಹೋಗೋದ್ರಿಂದ ತನ್ನನ್ನು ತಾನೇ ಅನಾವರಣ ಮಾಡ್ಕೊಂಡೆ ಅಂತ. ಅದು ಯಾರೋ ತುಂಟ ತರುಣರ ಮಾತಿಗೆ ಹಿಂಗೆಲ್ಲ ಮಾಡ್ದೆ ಇದ್ರೆ ಆಗಿತ್ತೇನೋ ಅನ್ನಿಸಿತು. ಯಾಕೆಂದರೆ ಎಲ್ಲರೂ ಈಗ ತನ್ನ ಕಡೆ ನೋಡೋರೆ, ಗುಸುಗುಸು ಅನ್ನೋರೆ. ತಾನಾಗಿ ನಡೆದದ್ದನ್ನು ಸಾರಿದಂತಾಯ್ತಲ್ಲ ಅಂತ ಬೀದಿಯಲ್ಲಿ ಭಂಗಗೊಂಡ ಸಂಗಪ್ಪ ಸಿಡಿಲಾದ. ಅದೊಂದೆ ದಾರಿ ಎಂದು ಭಾವಿಸಿ ಸಿಡಿದ.

“ಲೋ ಯಾವೋನಾದ್ರೂ ಆ ರಾಜೇಂದ್ರನ ಅಪ್ಪನ್ನ ಕರ್ಕಂಡ್ ಬರ್ರೊ”.

ಆಗ ಒಬ್ಬ ಹೇಳಿದ; “ಆಯಪ್ಪ ಸತ್ತೋಗಿ ಎಲ್ಡೊರ್ಸ ಆಯ್ತಲ್ಲ ಬುದ್ದಿ.”

“ನಾನ್ ಹೇಳಿದ್ರೆ ಎದ್ರು ಮಾತಾಡ್ತೀಯೇನೋ ಕತ್ತೆ ಮಗ್ನೆ, ಕರ್ಕಂಡ್ ಬಾ ಅಂದ್ರೆ ಕರ್ಕಂಡ್ ಬರ್ಬೇಕು” – ಮತ್ತೆ ಸಿಡಿದ ಸಂಗಪ್ಪ.

ಜನ ಮುಖ ಮುಖ ನೋಡಿಕೊಂಡರು. ಅಷ್ಟರಲ್ಲಿ ಊರ ಶಾನುಭೋಗರು ಬಂದರು. ಈಗ ಶಾನುಭೋಗಿಕೆ ಇಲ್ಲ. ಆದರೆ ಅವರ ಮನೆತನವೇ ಹಿಂದಿನಿಂದ ಶಾನುಭೋಗಿಕೆ ಮಾಡಿದ್ದರಿಂದ, ಇವರೂ ಸ್ವಲ್ಪ ಕಾಲ ನಡೆಸಿದ್ದರಿಂದ ಈಗಲೂ ‘ಶಾನುಭೋಗರು’ ಅನ್ನೋದೆ ಖಾಯಮ್ಮಾಗಿ ಉಳಿದಿದೆ. ಮೊದಲೇ ಚಾಣಾಕ್ಷ ಬುದ್ಧಿ; ವಿಷಯ ಅವರಿಗೆ ಅರ್ಥವಾಯ್ತು. ಹತ್ತಿರಕ್ಕೆ ಬಂದರು. ಕೈ ಹೊಸಗಿ, ಕಳ್ಳ ನಗೆ ಚಿಮ್ತಾ “ಅದೆಂಗಾಗುತ್ತೆ ಸಾವ್ಕಾರ್ರೆ, ಸತ್ತೋರ್ನ ಕರ್ಕಂಡ್ ಬರೋದು.. ಹಿಹ್ಹಿಹ್ಹಿ” ಎಂದು ಹಲ್ಲು ಗಿಂಜಿದರು.

ತನ್ನ ಬೆಪ್ಪುತನಕ್ಕೆ ತನಗೇ ನಾಚಿಕೆಯಾಯ್ತು. ಆದರೆ ತಾನು ಬೆಪ್ಪ ಅಂತ ಬಹಿರಂಗವಾಗಿ ಒಪ್ಪಿಕೊಳ್ಳೋಕೆ ಆಗುತ್ತ ಎಲ್ಲಾದ್ರು?… ನೋಡಿ, ಒಬ್ಬ ಹೊಸದಾಗಿ ಸೈಕಲ್ ಕಲ್ತೋನು ಇದ್ನಂತೆ, ಅವ್ನಿಗೆ ಸೈಕಲ್ ಹತ್ತಿದ ಮೇಲೆ ಇಳ್ಯೋದು ಸ್ವಲ್ಪ ಕಷ್ಟ; ಆದರೆ ಸ್ವಲ್ಪ ದೊಡ್ಡ ಮನುಷ್ಯ. ಒಂದು ಸಾರಿ ಊರ ನಡುವೇನೆ ಸೈಕಲ್ ಇಳ್ಯೋಕೆ ಹೋಗಿ ಬಿದ್ದುಬಿಟ್ಟ. ಯಾರೊ ಕೇಳಿದ್ರು “ಇದೇನ್ ಸ್ವಾಮಿ ಬಿದ್ರಿ?” ತಕ್ಷಣ ಆತ ಹೇಳಿದ: “ನಾನು ಇಳ್ಯೋದೆ ಹಿಂಗೆ ಕಣಯ್ಯ”… ಈಗ ಸಂಗಪ್ಪನೂ ಹೀಗೇ ಏನಾದ್ರೂ ಮಾಡಬೇಕಾಯ್ತು. “ನಂಗಷ್ಟೂ ಗೊತ್ತಾಗಲ್ವ ಶಾನುಭೋಗ್ರೆ, ಹಂಗಂದ್ರೆ ಬದ್ಕಿರೋವ್ರಲ್ಲೇ ಯಾರ್ನಾದ್ರೂ ಕರ್ಕಂಡ್ ಬಾ ಅಂತ ಅರ್ಥ ಅಷ್ಟೆ. ನನ್ನೇನ್ ಅಷ್ಟು ಬೆಪ್ಪತಕ್ಕಡಿ ಅಂಡ್ಕೊಂಡೇನು” ಎಂದ.

ಶಾನುಭೋಗ್ರು ಒಳಗೇ ನಕ್ಕರು: “ಅದ್ಸರಿ ಬಿಡಿ; ಆದ್ರೆ ಆ ರಾಜೇಂದ್ರನ ಮನೇಲಿ ಯಾರಿದಾರೆ ಹೇಳಿ, ಅವ್ರಮ್ಮನೇ ಹಿರಿಯೋಳು. ಹೆಣ್ಣೆಂಗ್ಸ್ ಹತ್ರ ಏನ್ ಗಲಾಟೆ…”

“ಹಣ್ಣೆಂಗ್ಸಾದ್ರೇನು ಗಂಡೆಂಗ್ಸಾದ್ರೇನು ತಕ್ಕ ಶಾಸ್ತಿ ಮಾಡೇಕು, ಮರ್ಯಾದೆ ತೆಗೀಬೇಕು.”

ಈ ಅಳತೆಗೆಟ್ಟ ಮೈ ಬಿಟ್ಟುಕೊಂಡು ಸಂಗಪ್ಪ ನಡುಬೀದೀಲಿ ನಿಂತು ದೃಶ್ಯ ವೈಭವವನ್ನು ಮೆರೀತಾ ಇದ್ರೆ ಅಷ್ಟು ಸರಿಯಲ್ಲ ಅನ್ನಿಸಿ ಶಾನುಭೋಗರು ಹೇಳಿದರು:

“ಸಾವ್ಕಾರ್ರೆ, ನಿಂತ ನಿಲುವಿಗೇ ಎಲ್ಲಾ ಯಾಕೆ? ಮನೇಗ್ ನಡೀರಿ. ಅಲ್ಲಿ ಏನಾರ ತೀರ್ಮಾನ ಮಾಡಿದ್ರಾಯ್ತು.”

ಇವರು ಹೀಗೆ ಹೇಳುತ್ತಿರುವಾಗ ಉರಿಬಿಸಿಲಲ್ಲಿ ಸಂಗಪ್ಪನಿಗೆ ಏನೋ ಜ್ಞಾನೋದಯವಾದಂತಾಗಿ “ಆ ಸೈಕಲ್ ಯಾವೋನ್ದೊ?” ಎಂದು ಕೇಳಿದ. ಯಾರೋ ಹೇಳಿದರು: “ಅದೇ ಸೈಕಲ್‌ಷಾಪ್ ಸೀನಣ್ಣಂದು.”

ಮುಖದ ಮೇಲೆ ಸುರಿಯೊ ಬೆವರು ಒರೆಸಿಕೊಳ್ಳ “ಕರ್ಕಂಡ್ ಬರ್ರೊ ಆ ನನ್ನ ಮಗುನ್ನ” ಎಂದು ಮನೆಯ ಕಡೆ ಹೊರಟ; ಪಕ್ಕದಲ್ಲಿ ಶಾನುಭೋಗರು; ಹಿಂದೆ ಪ್ರಜೆಗಳು! ರಾಜಾಧಿರಾಜ ಮಾರ್ತಾಂಡ ತೇಜ (ಕೊತ್ತುಂಬರಿ ಬೀಜ?) ಸಾಹಸ ಸಿಂಹ ಸಂಗಪ್ಪ ಯಥಾ ಪ್ರಕಾರ ನಿಕ್ಕರ್ ಸಹಿತ ನಗ್ನ ಮೆರವಣಿಗೆಯಲ್ಲಿ ಮನೆಗೆ ಬಿಜಯಂಗೈದ.

ಹೆಂಡತಿಗೆ ಪರಮಾಶ್ಚರ್ಯ! ತಾನು ಮಾತ್ರ ನೋಡಿದ ರೂಪದಲ್ಲಿ ಇದೇನು ತನ್ನ ಪ್ರತ್ಯಕ್ಷ ದೈವ ಪತಿರಾಯರು ಆಗಮಿಸಿದರಲ್ಲ ಅಂತ ಮಾತೇ ಹೊರಡಲಿಲ್ಲ. ಇತರೆಯವರೂ ಈ ರೂಪದಲ್ಲಿ ಸಂಗಪ್ಪನನ್ನು ನೋಡಿರಬೇಕೆಂಬ ಸುಳುಹೂ ಗೊತ್ತಿದ್ದರೂ ಪತಿವ್ರತಾ ಶಿರೋಮಣಿ ಪತ್ನಿ ಹಾಗೆಲ್ಲ ಯೋಚಿಸಲಾದೀತೆ ಗಂಡನ ಬಗ್ಗೆ. ಆದ್ದರಿಂದ ಇದು ತನಗೆ ಮಾತ್ರ ಆದ ವಿರಾಟ್ ದರ್ಶನ ಅನ್ನೋ ಆರೋಪಿತ ಭ್ರಮೆಯಲ್ಲೇ ಬೀಗ್ತಾ, ಇದ್ಯಾಕೆ ಇವತ್ತು ಊರಿಂದೂರಿಗೇ ವಿರಾಟ್‌ ದರ್ಶನ ಸೌಭಾಗ್ಯವನ್ನು ಕರುಣಿಸಿದರು ಎಂದು ಚಿಂತೆ ಮಾಡ್ತ, ಕೇಳೋಣ ಅಂದುಕೊಂಡಳು. ಆದ್ರೆ ಸಂಗಪ್ಪ “ಏನ್ ಹಂಗ್ ನೋಡ್ತೀಯಾ ಯಾವತ್ತೂ ನೋಡಿಲ್ದೋಳಂಗೆ? ಇಷ್ಟು ಜನ ಎದುರಿಗೆ ಹಂಗ್ ತಿನ್ನೋಳಂಗೆ ನೋಡ್ತೀಯ ನನ್ನ, ಮೊದ್ಲು ಬಟ್ಟೆ ಕೊಡು” ಎಂದ.

ಪಾಪ! ತನ್ನ ಶರೀರ ಶ್ರೀಮಂತಿಕೆಯನ್ನು ತನ್ನ ಹೆಂಡತಿ ಎಲ್ಲರ ಎದುರು ಸವಿಯುತ್ತಿದ್ದಾಳೆಂದು ಭಾವಿಸಬೇಕೆ ಈ ಭೂಪತಿ!
ಬಟ್ಟೆ ಬರುವುದರೊಳಗೆ ಶಾನುಭೋಗರು ಉಪದೇಶ ಪ್ರಾರಂಭಿಸಿದ್ದರು.

“ಹೇಗೋ ಸಮಾಧಾನವಾಗಿ ಎಲ್ಲಾ ಪರಿಹಾರ ಮಾಡ್ಕೊಳ್ಳಿ ದೇವರು ದೊಡ್ಡೋನು. ಈ ಹುಡುಗು ಮುಂಡೇವ್ನ ಅವ್ನು ಸುಮ್ನೆ ಬಿಡೊಲ್ಲ…”

“ಅವ್ನು ಏನಾರ ಮಾಡವರ್ಗೂ ನಾನ್ ಕೈಕಟ್ಟಿಕಂಡ್ ಕುಂತಿರಕಾಗ್ತೈತ? ಅವ್ನ್ ಹೆಸ್ರಿನಾಗೇ ಏನಾರ ಮಾಡ್ಬಿಟ್ರಾಯ್ತು” – ಸಂಗಪ್ಪ ತನ್ನ ಮಾಮೂಲಿ ಧಾಟಿಯಲ್ಲಿ ವಿಚಾರ ಮಂಡಿಸಿದ.

ಅಷ್ಟರಲ್ಲಿ ಸೈಕಲ್‌ ಷಾಪ್ ಸೀನಣ್ಣ ಬಂದ.

“ಏನೋ ಸೀನ ?” – ಸಂಗಪ್ಪ ಶುರು ಮಾಡಿದ.

“ನೀವೇ ಹೇಳ್ರಿ ಸ್ವಾಮಿ”

“ಏನ್ ನಾನ್ ಹೇಳಾದು ನಿನ್ನ ವಿಷ್ಯ? ನಿನ್ನ ವಿಷ್ಯ ನೀನೇ ಹೇಳ್ಬೇಕು. ಅದನ್ನೆಲ್ಲ ಹೇಳಾಕೆ ನಾನೇನು ನಿನ್ನ ಆಳು ಅಂಡ್ಕೊಂಡ. ಆಂ?”

ಸೀನಣ್ಣನಿಗೆ ದಿಕ್ಕೇ ತೋಚದಂತಾಯಿತು. ಕಡೆಗೆ ಶಾನುಭೋಗರೇ ಸಹಾಯಕ್ಕೆ ಬಂದರು:

“ಅವ್ನು ಹೇಳಿದ್ದು ಕರೆಸಿದ್ದು ಯಾಕೆ ಹೇಳಿ ಅಂತ, ಅಷ್ಟೆ…”

“ಹಂಗನ್ನಿ ಮತ್ತೆ ಏನೇನೋ ಒದರ್ತಾನೆ ಕತ್ತೆ.. ಅಲ್ವೊ ಸೀನ. ಆ ರಾಜೇಂದ್ರನಿಗೆ ಹೆಂಗೊ ಕೊಟ್ಟೆ ಸೈಕಲ್ನ?”

“ಒಳಗಡೆ ಇತ್ತು; ನೂಕ್ಕೊಂಡು ಹೊರಗಡೆ ತಂದ್‌ಕೊಟ್ಟೆ..”

“ನಿನ್ ತಲೆ! ಇನ್ನೊಂದ್ಸಾರಿ ಅವ್ನಿಗೆ ಕೊಟ್ರೆ ಊರು ಬಿಡುಸ್ತೀನಿ ಊರು. ತಿಳೀತಾ?”

“ತಿಳೀತು.”

“ನಮ್ಮೂರ್ನಾಗಿರ್ಬೇಕು ಅಂತಿದ್ರೆ ಆ ರಾಜೇಂದ್ರನಿಗೆ ಯಾವತ್ತೂ ಬಾಡಿಗೆಗೆ ಸೈಕಲ್ ಕೊಡ್ಬೇಡ. ಕೇಳಿದ್ರೂ ಖಡಾಖಂಡಿತವಾಗಿ ಹೇಳ್ಬಿಡು…”

“ಗಲಾಟೆಗೆ ಬಂದ್ರೆ…”

“ನೀನೇನ್ ಪಕೋಡ ತಿನ್ತಾ ಇರ್ತೀಯೇನೋ. ಸರ್ಯಾಗಿ ಬುದ್ದಿ ಕಲ್ಸು, ತಾಕತ್ತಿಲ್ಲಾಂದ್ರೆ ನನ್ ಹತ್ರ ಬಾ…”
* * *

ಮೂರೇ ದಿನಕ್ಕೆ ತನಗೆ ತಾಕತ್ತಿಲ್ಲ ಅಂತ ಸೀನಣ್ಣ ಬಂದ. ರಾಜೇಂದ್ರ, ಭೀಮು, ರಾಮು ಮುಂತಾದ ಅವರ ಗುಂಪು ಗಲಾಟೆ ಮಾಡ್ತು ಅಂತ ಹೇಳಿದ. ಸಂಗಪ್ಪನಿಗೆ ಸಮಸ್ಯೆಯಾಯ್ತು. ಅವ್ರನ್ನ ಕರೆಸಿ ಹೇಳೋದು, ಹೇಳಿದ ಮೇಲೂ ಅವರು ಎದುರಾಗಿ ನಿಲ್ಲೋದು ಅವಮಾನ ಅನ್ನಿಸಿ ಎದುರೇ ನಿಂತಿದ್ದ ಸೀನಣ್ಣನಿಗೆ ಹೇಳಿದ: “ನಿನಗೆ ಇಷ್ಟು ಸಣ್ಣ ಸಮಸ್ಯೆ ಎದುರಿಸೋಕೆ ಆಗ್ದೆ ಇದ್ರೆ ಊರು ಬಿಟ್ಟುಬಿಡು. ದೂಸ್ರಾ ಮಾತಾಡ್ಬೇಡ.”

“ಹಂಗಂದ್ರೆ ಹೆಂಗೆ ಸ್ವಾಮಿ; ಹುಟ್ಟಿದೂರು…”

“ನಾನೂ ಹುಟ್ಟಿಲ್ವೇನೋ ಇದೇ ಊರ್ನಾಗೆ, ನನ್ನ ಮರ್ಯಾದೆ ಉಳ್ಸೋಕೆ ಆಗ್ದೆ ಇದ್ರೆ ನೀವೆಲ್ಲ ಇದ್ರೆಷ್ಟು ಹೋದ್ರೆಷ್ಟು, ಇದೇ ಕಡೇ ಮಾತು ತಿಳ್ಕಾ.”

“ಹಂಗಂದ್ರೆ ಹೆಂಗೆ…”
“ತಿರ್ಗಾ ಅದೇ ಮಾತಾಡ್ತೀಯಲ್ಲ? ಊರ್ ಬಿಡ್ದಿದ್ರೆ ಸೈಕಲ್‌ ಷಾಪ್ ಬಿಡು.”
“ಹಂಗ್ ಮಾಡಿದ್ರೆ ನಮ್ಮ ಹೊಟ್ಟೆಪಾಡು…”
“ನಿನಗ್ ಮಾತ್ರ ಅಲ್ಲ ಹೊಟ್ಟೆ ಇರಾದು. ನಂಗೂ ಇದೆ.”
“ಅದು ಊರ್ಗೆಲ್ಲ ಗೊತ್ತು ಸ್ವಾಮಿ.”
“ಏನೊ? ಏನಂದೆ?”
“ಅದೇ ಸ್ವಾಮಿ ನಿಮ್ಮ ಹೊಟ್ಟೆ ವಿಷ್ಯ ಊರೆಲ್ಲ ಗೊತ್ತು ಅಂದೆ. ಮೂರು ದಿನ್ದಿಂದ ಊರಾಗೆಲ್ಲ ನಿಮ್ಮ ಹೊಟ್ಟೇದೇ ಸುದ್ದಿ…”

ಸಂಗಪ್ಪನಿಗೆ ಸಿಟ್ಟು ನೆತ್ತಿಗೇರಿತು; “ಏನ್ ದೆವ್ವ ಹಿಡ್‌ದೈತೇನೋ ಈ ಊರ್ನೋರ್ಗೆ?”

“ಹಂಗಲ್ಲ ಸ್ವಾಮಿ, ಎಲ್ರೂ ಹೊಟೇನೆ ವರ್ಣನೆ ಮಾಡ್ತಾ ಅವ್ರೆ. ಇಂಥ ಬಾಗ್ಗೇವು ಯಾರಿಗುಂಟು ಸ್ವಾಮಿ? ಸಾವಿರಕ್ಕೆ ಒಬ್ರಿಗೆ ಸಿಕ್ತೈತೆ ಅಷ್ಟೆ. ಹಿಂದಿನ ಕಾಲ್ದಾಗೆ ರಾಜರನ್ನು ಹೊಗಳ್ತಿದ್ದರಂತೆ. ಈಗ ನಿಮ್ಮ ಹೊಟೇನಾ…”

“ಇರು ಸ್ವಲ್ಪ” – ಸೀದಾ ಎದ್ದವನೆ ಸಂಗಪ್ಪ ಒಳಬಂದ, ಬಟ್ಟೆ ಬಿಚ್ಚಿದ. ಕನ್ನಡಿ ಎದುರು ನಿಂತ; ತನ್ನ ಹೊಟ್ಟೆ ನೋಡಿಕೊಂಡ. ಹೊಕ್ಕಳು ಮುಟ್ಟಿಕೊಂಡ; ಬೀಗಿದ; ಬಟ್ಟೆ ಹಾಕ್ಕೊಂಡು ಹೊರಬಂದ.

“ಲೇ ಸೀನ, ಒಂದ್ ಕೆಲ್ಸ ಮಾಡು. ಆ ಪದ್ಯಾನ ಏನಾರ ಮಾಡಿ ಇಸ್ಕಂಡ್ ಬಾ. ನೀನು ಊರಲ್ಲೇ ಇರ್ಬಹುದು. ಇಲ್ದಿದ್ರೆ ಗೊತ್ತೇ ಐತಲ್ಲ?” – ಎಂದು ಆಜ್ಞಾಪಿಸಿ ಕಳಿಸಿದ.
* * *

ಸೀನಣ್ಣ ಬೆಪ್ಪನಾಗಿ ಬಂದ. “ರಾಜೇಂದ್ರಪ್ಪ ಪದ್ಯ ಕೊಡ್ಲಿಲ್ಲ; ಬೇಕಿದ್ರೆ ಆ ಸಾವ್ಕಾರ್ನೆ ಬಂದು ಕೈಮುಗುದು ಕೇಳಿದ್ರೆ ಕೊಡ್ತೀನಿ ಅಂದ ಸ್ವಾಮಿ” ಎಂದು ವರದಿ ಒಪ್ಪಿಸಿದ. ಸಂಗಪ್ಪನ ಸಂಯಮ ಛಿದ್ರವಾಯ್ತು. ಸಿಟ್ಟು ಸೀನಣ್ಣನ ಕಡೆಗೆ ತಿರುಗಿತು. “ಮೊದ್ಲು ನೀನು ಸೈಕಲ್‌ ಷಾಪ್ ಮುಚ್ಚು, ಅದಿದ್ರೆ ಅಲ್ವೇನೊ ಆ ಬೋಳಿಮಕ್ಕಳು ಸೈಕಲ್ ಕೇಳೋದು; ತುಳ್ಯೋದು; ಎಂದು ಮತ್ತೆ ಗರ್ಜಿಸಿದ.

ಸೀನಣ್ಣನಿಗೆ ಆಕಾಶವೇ ಬಿದ್ದಂತಾಯ್ತು. ಆದರೂ ಎದೆಗುಂದಲಿಲ್ಲ. ಊರು ತಿರುಗಿದವನು, ಮಾತು ಬಲ್ಲವನು, ಮೊದಲೇ ಲೆಕ್ಕ ಹಾಕಿಕೊಂಡು ಬಂದಿದ್ದ. ಅಷ್ಟೇ ಅಲ್ಲ, ರಾಮು, ಭೀಮು, ರಾಜೇಂದ್ರ ಮುಂತಾದವರೂ ಉಪಾಯ ಹೇಳಿದ್ದರು; ಅದನ್ನೇ ಪಾಠ ಒಪ್ಪಿಸಿದರು.

“ಹಂಗಂದ್ರಾಗ್ತೈತಾ ಸ್ವಾಮಿ, ನೀವು ಹಿಂಗ್ ಮಾಡಿದ್ರೆ ಅವ್ರೇನ್ ಮಾಡ್ತಾರೆ ಗೊತ್ತ ಸ್ವಾಮಿ, ನಂಗ್ ಹೇಳಿದ್ರು – ಆ ಸಾವ್ಕಾರ ಸೈಕಲ್ ಷಾಪ್ ಮುಚ್ಚುವ ಅಂದ್ರೆ ನಮಗೆ ಹೇಳು, ನಾವೇ ಕೊಂಡ್‌ಕಂಡು ನಡ್ಸೇ ತೀರ್ತೇವೆ. ಸಂಗಪ್ಪ ಅಲ್ಲ ಅವ್ರಪ್ಪ ಮಂಗಪ್ಪ ಬಂದ್ರೂ ಬಿಡಾಕಿಲ್ಲ ಅಂದ್ರು ಸ್ವಾಮಿ. ನಾನು ಹೇಳ್ದೆ ಅಂಥ ಸಂದರ್ಬೇನಾರ ಬಂದ್ರೆ ನಮ್ಮ ಸಾವ್ಕಾರ್ರು ಸುಮ್ಮೆ ಇರ್ತಾರ? ಅವ್ರೇ ಕೊಂಡ್ಕೊಂಡಾದ್ರೂ ನಿಮ್ಮ ಮ್ಯಾಲೆ ಸೇಡು ತೀರಿಸ್ಕಂತಾರೆ – ಅಂತ ಅವ್ರು – ಕಂಡಿದ್ದೀವಿ ಬಿಡೊ ಆ ಸಂಗಪ್ಪನ್ನ – ಅಂದ್ಬಿಡಾದ?”

ಸಂಗಪ್ಪನಿಗೆ ಏನು ಮಾಡೋಕೂಂತೆ ತೋಚಲಿಲ್ಲ. ತಕ್ಷಣ ಅನಾಯಾಸವಾಗಿ ಹಲ್ಲು ಕಡಿದ; “ಹಂಗಂದ್ರೇನೋ ಬೋಳಿಮಕ್ಳು, ಅವ್ರ್‌ಗೇ ಕೊಂಡ್‌ಕೊಳ್ಳೊ ತಾಕತ್ತಿದ್ರೆ ನಾನ್ ಸುಮ್ಕಿರ್ತೀನಾ? ಎಷ್ಪವೊ ನಿನ್ ಸೈಕಲ್ಲು?” – ಕೇಳಿದ.

“ಆರೂವರೆ ಸ್ವಾಮಿ.”
“ಏನೋ ಹಂಗಂದ್ರೆ ?”
“ಆರು ಚನ್ನಾಗವೆ; ಇನ್ನೊಂದು ಮುರ್ದು ಬಿದ್ದೈತೆ.”
“ಎಷ್ಟು ಆಗ್ತೈತೊ ಸೆಕೆಂಡ್ ಹ್ಯಾಂಡ್ ರೇಟು ಈಗ್ಲೆ ತಗಂಡ್ ಹೋಗು.”

“ಹಂಗಂದ್ರಾಗ್ತೈತಾ ಸ್ವಾಮಿ, ಅವ್ರಂತೂ ಹೇಳೇಬಿಟ್ಟವ್ರೆ. ಹಟಕ್ಕಾದ್ರೂ ನಿಮ್ಮ ರೇಟಿಗಿಂತ ಜಾಸ್ತಿ ಕೊಟ್ಟು ತಗಂಡೇ ತಗೋತೀವಿ ನಿಮ್ಮೆದುರಿಗೆ ಸೈಕಲ್ ತುಳಿದು, ಅವ್ರಿವರ ಕೈಲಿ ತುಳ್ಸಿ ನಿಮಗೆ ಅವ್ಮಾನ ಮಾಡ್ತೀವಿ – ಅಂತ.”

“ಓ… ಅಷ್ಟೊಂದು ಹೆಚ್ಚಿಬಿಟ್ರಾ? ಲೇ ಸೀನ, ಅವ್ರಿಗೆ ಹೆಂಗೋ ಕೊಡ್ತೀಯ ನೀನು? ನಂಗೇ ಕೊಡಬೇಕು. ಆ ಜುಜುಬಿಗಳ ಮುಂದೆ ನಾನು ಸಣೋನಾಗಕಾಗ್ತೈತಾ? ಹೊಸಾ ಸೈಕಲ್ ಬೆಲೆಗಿಂತ ಹೆಚ್ಚೆ ಕೊಡ್ತೀನಿ. ತಗೊಂಡ್ ಹೋಗಲೆ ನೋಡಾನ” ಎಂದವನೆ ಸಂಗಪ್ಪ ಒಳಹೋಗಿ ನೋಟುಗಳನ್ನು ತಂದು, ಸೀನಣ್ಣನ ಎದುರೇ ಎಣಿಸಿಕೊಟ್ಟ.

“ಹೋಗೊ, ಏನಾರ ವ್ಯಾಪಾರ ಸಾಪಾರ ಮಾಡ್ಕ ಇನ್‌ಮ್ಯಾಲೆ. ಆ ಸೈಕಲ್‌ಷಾಪ್ ಮಾತ್ರ ಮುಚ್ಬೇಕು. ಆ ಸೈಕಲ್ಲೆಲ್ಲ ಈಗ್ಲೆ ತಂದು ನಮ್ಮ ಗೋಡನ್ನೊಳಗೆ ಬಿಸಾಕು. ಒಂದ್ ನಿಮಿಷ ತಡಮಾಡಿದ್ರೆ ತಲೇಗ್ ಎರಡು ಬಿಗೀತೀನಿ.”

ಸೀನಣ್ಣ ಸಂತೋಷವಾಗಿ ಹೋದ. ಸೈಕಲ್ಲುಗಳೆಲ್ಲ ಗೋಡನ್ನಿಗೆ ಬಂದು ಬಿದ್ದದ್ದನ್ನು ಸಂಗಪ್ಪ ಕಣ್ಣಾರೆ ಕಂಡ. ತನ್ನ ಸಾಹಸಕ್ಕೆ ತನಗೇ ಖುಷಿಯಾಗಿ ಹೆಮ್ಮೆಯೆನಿಸಿ ಮನೆಗೆ ಬಂದು ನಿಂತು “ಬಾರೆ ಇಲ್ಲಿ” ಎಂದು ಹೆಂಡತೀನ ಕೂಗಿದ.

ಹೆಂಡತಿ ಹತ್ತಿರ ಬಂದು ನಿಂತಾಗ ತಲೆ ಮೇಲೆತ್ತಿ ಅವಳ ಮುಖವನ್ನೇ ನೋಡುತ್ತ ಗೋಡೆಯ ಮೇಲೆ ಕೈ ಇಟ್ಟು ಸ್ವಿಚ್ ಒತ್ತಿದ… ವ್ಹಾ…!”
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...