ಮೂಲ: ರವೀಂದ್ರನಾಥ ಠಾಕೂರ್
ಕ್ರಾಸಿಂಗ್ ೧ (The Sun breaks out….. ಎಂಬ ಕಾವ್ಯಖಂಡ)
ಬಂದೇ ಬಿಟ್ಟಿತು ನಾ ಹೊರಡುವ ದಿನ
ಉದಯಿಸಿ ಬಂದ ಸೂರ್ಯ,
ದೇವರ ಬೆರಗಿನ ನೋಟದ ಹಾಗೆ
ಬಾನು ದಿಟ್ಟಿಸಿದೆ ಬುವಿಯ.
ಎಲ್ಲಿಯ ಕರೆಯೋ ಏನೋ ತಿಳಿಯದೆ
ಖಿನ್ನವಾಗಿದೆ ಹೃದಯ,
ಯಾಕೆ ಹೀಗೆ ಅದು ಸೆಳೆವುದೊ ಎದೆಯ
ತಿಳಿಯೆನು ಸಳೆತದ ನೆಲೆಯ.
ಬಿಟ್ಟು ಸಾಗುವೀ ಪರಿಚಿತ ಲೋಕದ
ಕಂಬನಿ ತುಂಬಿದ ದನಿಯೋ,
ಬರಲಿಹ ದೂರದ ದ್ವೀಪದ ಹೂಗಳ
ಪರಿಮಳ ತುಂಬಿದ ಉಸಿರೋ
ಯಾವುದು ನನ್ನನು ಹೀಗೆ ಕರೆಯುವುದು?
ಏನೂ ತಿಳಿಯದು ನನಗೆ
ವಂದನೆ ನಿಗೂಢ ದನಿಗೆ
*****
















