ಸಂಗನ ವಿಷಯ ಶುರಮಾಡಿ ಇದೇನು ನಮ್ಮನ್ನು ಮಂಗನೆಂದು ಭಾವಿಸಿದ್ದಾನೆಯ ಈತ? ಸುತ್ತಿ ಬಳಸಿ ಹೇಳುವ ಇವನಾರು? ದೆವ್ವವೊ? ನಟನೊ? ಮಂತ್ರವಾದಿಯೊ? ಎಲ್ಲೆಲ್ಲೂ ಕೊಂಡೊಯ್ದು ಹಿಂಸಿಸುವ ರಾಕ್ಷಸನೊ? – ಎಂದು ಲೇಖನ ಬಗ್ಗೆಯೇ ಅನ್ನಿಸಿಟ್ಟಿತೆ? ಛೆ! ಇರಲಾರದು ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ. ಇಷ್ಟಕ್ಕೂ ಕನ್ನಡದ ಓದುಗರು ಅಷ್ಟು ಕಠಿಣ ಮನಸ್ಕರಲ್ಲ; ಅಥವಾ ಹಾಗನ್ನುವುದಕ್ಕಿಂತ ನಿಷ್ಟುರವಾದಿಗಳಲ್. ಇಲ್ಲದಿದ್ದರೆ ಜನಸಂಖ್ಯಾವೇಗವನ್ನೂ ಮೀರಿಸುವಂತೆ ಸೃಷ್ಟಿಯಾಗುತ್ತಿರುವ ಎಂತೆಂಥದೊ ಸಾಹಿತ್ಯಕ್ಕೆ ನೊಣವಾಗುತ್ತಿದ್ದರೆ ಓದುಗರು? ಹೀಗೆಲ್ಲ ಅಂದರೆ ನಿಜಕ್ಕೂ ಕೋಪ ಬಂದೀತು ಕನ್ನಡಿಗ ಸಹೃದಯ ಬಂಧುಗಳಿಗೆ. ಆದರೆ ಎಲ್ಲ ಓದುಗರನ್ನು ಅಂದೇನು ಪ್ರಯೋಜನ? ನಾವು ಬದುಕುತ್ತಿರುವ ಸಮಾಜದ ಸ್ಥಿತಿಗತಿಗಳಲ್ಲಿ ಅದಕ್ಕೆ ಕಾರಣವಿದೆ. ದುಡಿಯುವ ಜನಕ್ಕೆ ಮನಸ್ಸಿನ ಪಲಾಯನ ಬೇಕು. ಅದಕ್ಕಾಗಿ ರಂಜನೆ ಬೇಕು. ಆಗ ಅಗ್ಗದ ಸಾಹಿತ್ಯವಾದರೇನು? ಅದೇ ಮೋದಕ; ಮಾದಕ. ಹೀಗಿದೆ ನಮ್ಮ ಅಸಮಾನತೆಯ ಸಮಾಜದ ದ್ವಂದ್ವ. ಉತ್ತಮ ಅಭಿರುಚಿಯ ಮಾತೂ ಆಡ್ತೀವೆ. ಅಂಥ ಅಭಿರುಚಿ ಬೆಳೆಸಿಕೊಳ್ಳುವ ಸ್ಥಿತಿಯೊಂದನ್ನು ಸೃಷ್ಟಿಸುವ ಸಾಹಿತ್ಯ ಮತ್ತು ಸಾಹಿತ್ಯೇತರ ಚಳುವಳಿಗಳಲ್ಲಿ ಸ್ವಲ್ಪ ಹಿಂದಿದ್ದೇವೆ. ಇದು ಎರಡೂ ಕಡೆಯ ಕೆಲಸ. ಓದುಗರೂ ಬೆಳೀಬೇಕು; ಸಮಾಜವೂ ಬದಲಾಗಬೇಕು…. ಇರಲಿ ಈಗ ಭಾಷಣ ಬೇಡ. ನಿಮಗೆ ಬೇಸರ ಬೇಡ, ವಿಷಯಕ್ಕೆ – ಅಂದ್ರೆ ಅದೇ ನಮ್ಮ ಸಂಗಪ್ಪನ ವಿಷಯಕ್ಕೆ – ಬರ್ತೇನೆ.
ಸಂಗಪ್ಪ ರಾಕ್ಷಸನೂ ಅಲ್ಲ; ನಟನೂ ಅಲ್ಲ, ಮಂತ್ರವಾದಿಯೂ ಅಲ್ಲ; ದೆವ್ವವೂ ಅಲ್ಲ – ಇವೆಲ್ಲವೂ ಅಲ್ಲ; ಇವೆಲ್ಲವೂ ಹೌದು. ಮತ್ತೆ ಒಗಟಿನಂತಹ ಮಾತು! ಸಂಗಪ್ಪನಂಥವರು ಈ ದೇಶಕ್ಕೆ ಯಾವಾಗ್ಲೂ ಒಗಟು; ಸಮಸ್ಯೆ. ಅದನ್ನು ಬಿಡಿಸಿದರೆ ದಾರಿ ಸ್ಪಷ್ಟ. ಸಂಗಪ್ಪ ಇವೆಲ್ಲವೂ ಹೌದು ಅಂದರೆ ಈ ಎಲ್ಲದರ ಅಂಶಗಳೂ ಅವನಲ್ಲಿದೆ. ಇವೆಲ್ಲವೂ ಇಲ್ಲ ಅಂದ್ರೆ – ಬಿಡಿ ಬಿಡಿಯಾಗಿ ಮತ್ತು ಪ್ರಚಲಿತ ಸ್ಥಾಪಿತಾರ್ಥದಲ್ಲಿ ಅವುಗಳ ರೂಪದಲ್ಲೇ ನಮ್ಮ ಮುಂದಿಲ್ಲ. ನಮ್ಮ ಮುಂದೆ ಅವನೂ ಮನುಷ್ಯ. ನಮ್ಮ – ನಿಮ್ಮಂತೆ ಒಬ್ಬ ಮನುಷ್ಯ. ನಮ್ಮ – ನಿಮ್ಮ ನಡುವೆಯೇ ಇರುವ, ಸಾಕಷ್ಟು ಪ್ರತಿಷ್ಠಿತನಾಗಿರುವ ವ್ಯಕ್ತಿ. ಮನುಷ್ಯನ ಮುಖ ಇದೆ; ಮೈಯ್ಯಿದೆ, ಆದರೆ ಮನಸ್ಸು? ಇಲ್ಲೇ ನೋಡಿ ಇರೋದು ಕರಾಮತ್ತು. ಅವನ ಈ ಮನಸ್ಸಿನಲ್ಲಿ ಮೇಲೆ ಹೇಳಿದ ಅಂಶಗಳೆಲ್ಲ ಶಕ್ತ್ಯಾನುಸಾರ ಇದೆ.
ಈ ಸಂಗಪ್ಪ ಸದ್ಯಕ್ಕೆ ಒಂದು ಹಳ್ಳಿಯ ಚೇರಮನ್. ಈಗೇನು ಯಾರಾದ್ರೂ ಚೇರ್‌ಮನ್ನಾಗಬಹುದು. ಮೊದಲು `ಚಮಚಾಮನ್’ ಆದ್ರೆ ಈಗಿನ ಸಮಾಜದಲ್ಲಿ ಎಂಥ ಸ್ಥಿತಿಗಾದ್ರೂ ಏರಬಹುದು. ಹಾಗಿದೆ ನಮ್ಮ ರಾಜಕೀಯ ಸ್ಥಿತಿ ಅಂತ ನಿರಾಶೆಯಿಂದ ರಾಗ ಎಳೀಬೇಡಿ. ಈ ನಿರಾಸ ಒಳ್ಳೆದಲ್ಲ. ನಿಜ. ಒಮ್ಮೊಮ್ಮೆ ಬದುಕಿನಲ್ಲಿ ಹೀಗೆಲ್ಲ ಅನ್ಸುತ್ತೆ. ಆದ್ರೆ ಹಾಗಂತ ಕೈಚೆಲ್ಲಿ ಕೂತ್ರೆ ಆಯ್ತೆ? ಅಥವಾ ಈ ದೇಶದಲ್ಲಿ ಏನೂ ಸಾಧ್ಯವಿಲ್ಲ ಅಂದ್ಕೊಂಡು ಬೌದ್ಧಿಕ ಚರ್ಚೇಲಿ ನಾಲಿಗೆಗೆ ನಿಟ್ಟುಸಿರಿನ ಗಾಳಿ ಹಾಕಿ ತಂಪಾಗಿ ಹೋದರಾಯ್ತೆ? ಏನಾದ್ರೂ ಮಾಡಬೇಕು. ಸರಿಯಾದ ದಿಕ್ಕು ಅನ್ನಿಸಿದ್ದಕ್ಕಾಗಿ ಸಿದ್ಧರಾಗ್ಬೇಕು; ಸಿದ್ಧಮಾಡ್ಬೇಕು; ಆದ್ರೆ ಇಲ್ಲಿ ಏನಾಗ್ತಿದೆ ಅಂದ್ರೆ ಪ್ರಾಮಾಣಿಕರು ಏನೊ ಒಂಥರಾ ಹತಾಶೆಯಲ್ಲಿ ಹೂತು ಹೋಗೋದು ಜಾಸ್ತಿ. ಪಟ್ಟು ಹಿಡಿದು ಹೋರಾಟ ಕಟ್ಟೋದು ಅಥವಾ ಕಟ್ಟಿಕೊಳ್ತಿರೊ, ಗಟ್ಟಿಯಾಗ್ತಿರೊ ಹೋರಾಟಗಳಲ್ಲಿ ಭಾಗಿಯಾಗೋದರ ಬದಲು ಕೆಲವು ಬುದ್ಧಿಜೀವಿಗಳಿಗೆ ಬೌದ್ಧಿಕ ಚರ್ಚೆಯ ರತಿ ತೀರಾ ಆತಿ. ಇನ್ನು ಕೆಲವರು ಪಟ್ಟು ಹಿಡಿದು ಕೆಲ್ಸ ಸಾಧಿಸ್ತಾರೆ. ಏನೇನೊ ಆಗ್ತಾರೆ. ಆದರೆ ಅವರಿಗೆ ಅವರು ಮಾತ್ರ ಮುಖ್ಯ. ಅದಕ್ಕಾಗಿ ಯಾವುದಕ್ಕೂ ತಯಾರ್. ಮೌಲ್ಯಗಳು ಅದು ಇದು ಅಂದೆ ಎಷ್ಟು ಬೆಲೆ ಅದಕ್ಕೆ? ಯಾವ್ದೋ ವಿದೇಶಿ ಮಾಲು ಇದ್ದಂಗಿದೆ ಈ ಮೌಲ್ಯ ಅನ್ನೋದು ಅಂತಾರೆ. ಈ ಎರಡನೇ ಗುಂಪಿದೆಯಲ್ಲ, ಇದರಲ್ಲಿ ಎಲ್ಲಾದರೂ ಒಂದು ಕಡೆ ನಮ್ಮ ಸಂಗಪ್ಪನ ಸ್ಥಾನ ಇದೆ ಅಂದುಕೊಳ್ಳಬಹುದು. ಅಲ್ಲದೆ ಹತ್ತರತ್ತರ ಸಾವಿರ ಎಕರೆ ಸರದಾರ ಬೇರೆ. ಆತ್ಯಾಧುನಿಕ ಮನೆ ಬೇರೆ. ಇದೆಲ್ಲ ಇರೋದು ಮಾತ್ರ ಹಳ್ಳೀಲಿ. ಅದೇ ಹಳೇ ಹಳ್ಳೀಲಿ. ಅವನ ಹಳ್ಳಿಯೋ ಗಾಳಿಗೆ ಗೋಳಿನ ಪದ ಹೇಳೋ ಮುರುಕು ಗುಡಿಸಲುಗಳು. ಗದರಿಕೊಂಡರೆ ಬಿರುಕು ಬಿಡೊ ಮಣ್ಣಿನ ಮನೆಗಳು, ಊದಿದರೆ ಉದ್ದಗಲ ಬೀಳೊ ಮೂಳೆ ಮೈಗಳು ತುಂಬಿದ್ದ ಪುಣ್ಯಭೂಮಿ! ಇಂಥ ಕಡೆ ರಾಜಾಧಿರಾಜನಾಗಿದ್ದದ್ದೇ ಸಂಗಪ್ಪನ ವೈಶಿಷ್ಟ್ಯ. ‘ಎಲ್ಲರಂಥವನಲ್ಲ ನನ ಗಂಡ’ ಎಂದು ಗೃಹಪತ್ನಿಯಿಂದ ಪ್ರಾರಂಭಿಸಿ ಉಪಪತ್ನಿಯರನೇಕರವರೆಗೆ ಬೀಗುವ ಭಾಗ್ಯ ಕೊಟ್ಟಾತ ಈತ!
ಇಲ್ಲಿಯವರೆಗೆ ಸಂಗಪ್ಪನಿಗೆ ಈ ಊರು ಅಂಥ ಸಮಸ್ಯೆಯೇ ಆಗಿರಲಿಲ್ಲ. ತನ್ನ ಪ್ರತಿಷ್ಠಿತ ಸ್ಥಾನಮಾನದಿಂದ ಇಡೀ ಊರನ್ನೇ ಬಿಗಿಮುಷ್ಟೀಲಿ ಹಿಡಿದು, ಚುನಾವಣೆಯೇ ಇಲ್ಲದೆ ‘ಪ್ರಜಾತಂತ್ರಾತ್ಮಕವಾಗಿ’ ಚೇರ್‌ಮನ್ ಆಗಿ ವಿಜೃಂಭಿಸಿದ. ಇನ್ನು ವ್ಯಾಪಕ ರಾಜಕಾರಣಕ್ಕೆ ಹೋಗೊ ಮನಸ್ಸು ಹಿಂದೆ ಇರಲಿಲ್ಲ. ಅವರ ಈಗ ಕಾಲ ಬದಲಾಗಿದೆ. ಊರಲ್ಲಿ ಡಿಗ್ರಿಪಗ್ರಿ ಓದಿ ಬಂದ ಹುಡುಗರಿದ್ದಾರೆ. ಅವರು ಇವನಿಗೆ ಪ್ರಶ್ನೆಗಳಾಗಿದ್ದಾರೆ. ಹೀಗಾಗಿ ಅವನ ಸಾಹಸ ಪ್ರವೃತ್ತಿಗೆ ಕೆಲ್ಸ ಕೊಡೋದು ಅನಿವಾರ್ಯವಾಗ್ತಿದೆ. ಇಲ್ಲೀವರೆಗೆ ಕೇವಲ ತನ್ನ ಖಾಸಗಿ ಬದುಕಿನ ಸಾಹಸಗಳಲ್ಲಿ ಥ್ರಿಲ್ ಪಡೀತಾ ಇದ್ದದ್ದೇ ಸಾಕಾಗಿತ್ತು. ಹೈಜಂಪ್‌ವರೆಗೆ ಇತ್ಯಾದಿಗಳಿಂದ ಆಟೋಮ್ಯಾಟಿಕ್ ಜಂಪ್‌ವರೆಗೆ ಹಾದು ಬಂದ ಆ ಬದುಕಿನ ಮೋಜನ್ನು ಯಾವ ಬಾಯಲ್ಲಿ ವರ್ಣಿಸಲಿ? ಯಾವ ಪೆನ್ನಲ್ಲಿ ಚಿತ್ರಿಸಲಿ? ಹೇಗಿದ್ದರೂ ಒಂದು ಸ್ಯಾಂಪಲ್ ಕೊಟ್ಟಾಗಿದೆ. ಒಂದಗಳು ಅನ್ನ ಹಿಚುಕಿ ನೋಡಿದರೆ ಸಾಕಲ್ಲವೆ? ಇಷ್ಟಕ್ಕೂ ಖಾಸಗಿ ಸಾಹಸಗಳು ಎಷ್ಟೋ ನಮಗೆ ಗೊತ್ತಾಗೊಲ್ಲ; ಗೊತ್ತಾದರೆ ಅರ್ಧಂಬರ್ಧ; ಇಂಥ ತೊಂದರೆಗಳೆಲ್ಲ ಇದೆ. ಆದರೆ ಸಾರ್ವಜನಿಕ ಕ್ಷೇತ್ರದ ಸಾಹಸಗಳು ಹಾಗಿಲ್ಲ.
ಸಂಗಪ್ಪನಿಗೆ – ಮೊದ್ಲೇ ಹೇಳಿದ ಹಾಗೆ – ಸಾಹಸಕ್ಕೆ ನೆಲ ಹದವಾಗಿದೆ. ಹಳ್ಳಿಯ ವಿದ್ಯಾವಂತ ತರುಣರು ಅವನಿಗೆ ಒಂದು ತಲೆನೋವಾಗಿದ್ದರೆ, ತನ್ನನ್ನು ಕಂಡರೆ ಊರಿಗೆ ಉರೇ ಸಾಷ್ಟಾಂಗ ಬಿದ್ದು ಗೌರವ ತೋರಿಸಬೇಕೆನ್ನುವ ಆತನ ಪ್ರತಿಷ್ಠೆ ಅನೇಕ ವರ್ಷಗಳಿಂದ ಪೂಜೆಗೊಂಡೇ ಬಂದಿತ್ತು. ಆದರೀಗ ತನ್ನ ಮುಂದಿನ ‘ಚಿಣ್ಣಗಳು’ ತನ್ನ ಮುಂದೆ ಚಿನ್ನಿದಾಂಡು ಆಡ್ತಾ ಇದ್ದ ಬಾಲಕರು, ಗೋಲಿ ಆಡ್ತಾ ಇದ್ದ ಬಚ್ಚಾಗಳು ತನಗೇ ಗೋಲಿ ಹೊಡ್ಯೋಕೆ ನೋಡ್ತಿದಾರೆ! ಎಂಥ ಅವಮಾನ! ತನ್ನಷ್ಟಕ್ಕೆ ತಾನು ಅದೇ ಹಳೇ ಭಾವಭಂಗಿಯಲ್ಲಿ ಬೀಗ್ತಾಹೋಗದೆ ಕಾಲಿಗೆ ತೊಡರುವ ಈ ಹುಡುಗರ ಹುಟ್ಟಡಗಿಸಬೇಕು ಎಂದುಕೊಂಡ. ತಾನು ಮನಸ್ಸು ಮಾಡಿದ್ರೆ ಅದೆಷ್ಟು ಹೊತ್ತು ಅಂತ ಹೆಮ್ಮೆಯಿಂದ ಮೀಸೆ ತಿರುವಿದ. ನಿಲುವುಗನ್ನಡಿಯ ಮುಂದೆ ನಿಂತು ಸಮಯ ಸಿಕ್ಕಿದಾಗ ಈ ತರುಣರನ್ನು ಹೇಗೆ ಬಯ್ಯಬೇಕು ಅಂತ ಪ್ರಾಕ್ಟಿಸ್ ಮಾಡಿಕೊಂಡ; ಒಬ್ಬೊಬ್ಬರನ್ನೇ ಹೇಗೆ, ಯಾವ ಭಾಷೇಲಿ ಬಯ್ಯಬೇಕು ಅಂತ ಲೆಕ್ಕ ಹಾಕಿಕೊಂಡ. ಶುರುಮಾಡಿದ. ಮೊದಲು ಕನ್ನಡಿಯಲ್ಲಿ ತನ್ನ ಗಿಡ್ಡ ದೇಹ ನೋಡಿ, ದೊಡ್ಡ ಮೀಸೆಯನ್ನು ತಿರುವಿ “ಕತ್ತೆ ನನ್ ಮಗ್ನೆ, ನನ್ನ ಹತ್ರ ತೋರುಸ್ತೀಯಾ ದೌಲತ್ತು, ನಾನ್ ಯಾರ್ ಗೊತ್ತಾ? I am – ನಾನು ಯಾರ್ ಗೊತ್ತಾ? Stupid; Foolish; ನಾನ್ ಯಾರ್ ತಿಳೀತಾ? Rascal. You me respect give and respect take. ನೀನು ನನಗೆ ಗೌರವ ಕೊಡು ಆಮ್ಯಾಕೆ ಗೌರವ ತಗೊ – ಗೊತ್ತಾಯ್ತೇನಯ್ಯ? ನನ್ ಮುಂದೇ ಓಡಾಡ್ತಿದ್ದೋನು ನಂಗೇ ಎದ್ರಾಡ್ತೀಯೇನಯ್ಯ? ನಾನ್ ಯಾರು ಅಂತ ತಿಳ್ಕೊ. I am who you listen…
–
ಅಡುಗೆ ಮನೆಯಲ್ಲಿದ್ದ ಹೆಂಡತಿ ಗಾಬರಿಯಿಂದ ದೌಡಿ ಬಂದು “ರೀ… ರೀ ಏನಾಯ್ತು? ಏನಾಯ್ತ್ರಿ ನಿಮ್ಗೆ” ಎಂದಾಗಲೇ ಸಂಗಪ್ಪನಿಗೆ ಎಚ್ಚರ.
ತಕ್ಷಣ ಸಿಡಿದ: “ನೀನ್ಯಾಕ್ ಬಂದೆ?”
“ಅರೆ,ಅದೇನ್ರಿ ಯಾತ್ಯಾತ್ರುದೊ ಎರಿಯತ್ತಿರೋರಂಗ್ ಮಾತಾಡ್ತೀರಿ”… ಅದೇ ಗಾಬರಿಯಿಂದ ಕೇಳಿದಳು.
“ಥೂ! ಹಳ್ಳಿಗಮಾರ್! ಹೋಗೆ ಒಳಗೆ, ಬಂದ್ಳು ಇಲ್ಲಿ ಬೆಪ್ ತಕ್ಕಡಿ. ಆ ನನ್ ಮಕ್ಕು ಇಂಗ್ಲಿಷ್ ಕಲ್ತು ಬಂದವ್ರಲ್ಲ, ಅದ್ರಾಗೇ ಗ್ರಾಚಾರ ಬಿಡುಸ್ತೀನಿ ನೋಡ್ತಿರು; ಥಂಡ್ ಹೊಡೀಬೇಕು ನನ್ ಮಾತ್ ಕೇಳಿ” ಎಂದರೂ ಬೆಪ್ಪಾಗಿ ನಿಂತ ಹೆಂಡತಿಗೆ “you in go my badwife” ಎಂದು ಕಿರುಚಿದ್ದೇ ತಡ, ದೆವ್ವ ಕಂಡವಳಂತೆ ಒಳಗೋಡಿದಳು.
ಸಂಗಪ್ಪನಿಗೆ ಹೆಂಡ್ತಿಯ ಮಧ್ಯಪ್ರವೇಶ ಅಪಶಕುನವಾದಂತಾಗಿ, ಗೊಣಗಾಡ್ತ ಚಪ್ಪಲಿ ಹಾಕ್ಕೊಂಡು ವಾಕಿಂಗ್‌ಸ್ಟಿಕ್ ಹಿಡ್ಕೊಂಡ್ ಹೊಲದ ಕಡೆ ಹೋಗೋಣಾಂತ ಹೊರಬಿದ್ದ.
ಹೊರಗಡೆ ಬಂದವನೇ ನಿಂತು ಒಮ್ಮೆ ಸುತ್ತ ಮುತ್ತ ಠೀವಿಯಿಂದ ನೋಡಿದ; ಕೂತಿದ್ದವರು ಸರಕ್ಕನೆ ಎದ್ದು ನಿಂತರು; ಬೀಡಿ ಸೇದುತ್ತಿದ್ದವರು ಆರಿಸಿ ತಪ್ಪಿತಸ್ಥರಂತೆ ನಿಂತರು; ಹಾಗೇ ಅವರನ್ನು ಹಾದು ಹೋಗ್ತ ಸಂಗಪ್ಪ “ಬೀಡಿ ಹೆಚ್ಚಾಯ್ತೇನ್ರಲೇ” ಎಂದ. ಅವರಲ್ಲೊಬ್ಬ “ಹೌದು ಬುದ್ದಿ” ಎಂದ. ಸಂಗಪ್ಪ “ಏನೊ ಬಡ್ಡಿಕೆ ಅಂದಿದ್ದು?” ಎಂದು ಕೆಂಗಣ್ಣು ಬಿಟ್ಟು ನೋಡಿದ. ಪಾಪ ಆ ವ್ಯಕ್ತಿ ಗಡಗಡಿಸ್ತ “ಅದೇ ಬುದ್ದಿ ಬೆಲೆ ಹೆಚ್ಚಾಯ್ತು ಅಂದೆ” ಎಂದ ವಿನಮ್ರವಾಗಿ. “ಹಂಗಾ? ಸರಿ” ಎಂದು ಸಂಗಪ್ಪನ ಸವಾರಿ ಮುಂದುವರೀತು.
ಕನ್ನಡಿಯ ಮುಂದೆ ನಿಂತು ಆಡಿದ ಬಯ್ಗಳನ್ನೇ ಮೆಲುಕ್ತಾ ಊರ ಹೊರಗೆ ಒಂದಿಷ್ಟು ದೂರದಲ್ಲಿ ಹೋಗ್ತಿರುವಾಗ ತೀರ ಹತ್ತಿರದಲ್ಲಿ ‘ಟ್ರಿಣ್’ ಎಂದು ಸೈಕಲ್ ಬೆಲ್ ಕೇಳಿಸಿ ಯಾರಿವನು ಭೂಪ ಅಂತ ದುರುಗುಟ್ಟಿ ನೋಡಿದಾಗ – ರಾಜೇಂದ್ರ ಊರಿನ ಓದಿದ ಯುವಕರಲ್ಲಿ ಒಬ್ಬ – ಸರ್ರನೆ ಸೈಕಲ್ ಮೇಲೆ ಹೋದ.
ಸಂಗಪ್ಪನಿಗೆ ಸಿಡಿಮಿಡಿಯಾಯ್ತು; ರಕ್ತ ಕೊತ ಕೊತ ಅಂತ ಕುದೀತು. ಕಣ್ಣುಗಳು ರಕ್ತ ನುಗ್ಗಿ ಬಂದಂತೆ ಕೆಂಪಾದವು; ಮೈಯಲ್ಲೆಲ್ಲ ಸಿಟ್ಟಿನ ರನ್ನಿಂಗ್ ರೇಸ್! ತನ್ನ ಎದುರು ಸೈಕಲ್ ಮೇಲೆ ಹೋಗೋದೂಂದ್ರೆ ಏನು! ಯಾರೇ ಸೈಕಲ್ ಮೇಲೆ ಬಂದ್ರೂ ಇಳಿದು ಓರೆಯಾಗಿ ಹೋಗೊ ಸಂಪ್ರದಾಯಾನ ಮೀರೋಕೆ ಇವನಿಗೆ ಎಷ್ಟು ಅಧಿಕಾರ! ಹಿಡಿದು ಎರಡು ಕಪಾಳಕ್ಕೆ ಬಾರೋಣಾಂದ್ರೆ ಅದೂ ಆಗ್ಲಿಲ್ಲ. ಹಿಂಗೇ ಬಿಟ್ರೆ ಊರಿನ ಮರ್ಯಾದೆ ಉಳ್ಯಾಕಿಲ್ಲ…
ತಾನು ಅಂದ್ರೆ ಊರು, ತನ್ನ ಮರ್ಯಾದೆ ಅಂದ್ರೆ ಊರ ಮಯ್ಯಾದೆ ಅಂತಲೇ ಅನೂಚಾನವಾಗಿ ಭಾವಿಸ್ಕೊಂಡು ಬಂದಿದ್ದ ಸಂಗಪ್ಪ ಈಗ ತನ್ನ ಸಾಹಸವನ್ನು ವಿಜೃಂಭಿಸಲೇಬೇಕಾಯ್ತು. ಸಾಹಸದ ಮೊದಲ ಕಂತಾಗಿ ಆ ಕ್ಷಣದಲ್ಲೇ ಕೋಪಾವಿಷ್ಟ ಅದುರು ದನಿಯಲ್ಲಿ ಹುಡ್ಡರಿಕೆ ಹಾಕಿದ;
“ಹೋಮ್ ಹೋಯ್.. ಲೋ ಹುಡ್ಗ… ಲೋ ರಾಜ…”
ರಾಜೇಂದ್ರ ಹೋಗ್ತಾನೆ ಇದ್ದ. ಈತ ಕೂಗ್ತಾನೆ ಇದ್ದ. ಅವನ ಸೈಕಲ್ ತುಳಿಯಾಟ ಮತ್ತು ಇವನ ಬಾಯ್ ಕೂಗಾಟದ ನಡುವೆ ಚಾಂಪಿಯನ್‌ಷಿಪ್ ಸ್ಪರ್ಧೆ.
“ಕತ್ತೆ ನನ್ ಮಗ್ನೆ ನಿಲ್ಸೊ ಕಂಡಿದ್ದೀನಿ… ನಿಲ್ಸೊ ಬೇಕೂಫ”
-ಸಾವ್ಕಾರ್ ಸಂಗಪ್ಪ ಕತ್ತೆ ಕಿರುಬನಂತೆ ಕಿರುಚಿದ.
ರಾಜೇಂದ್ರ ಸೈಕಲ್ ನಿಲ್ಲಿಸಿ, ಅದರ ಮೇಲೆ ಕೂತುಕೊಂಡೇ ಹಿಂತಿರುಗಿ ನೋಡಿದ. ಸಾವ್ಕಾರ್ರಿಗೆ ಆತ ನಿಂತಿದ್ದಕ್ಕೆ ಸ್ವಲ್ಪ ಮರ್ಯಾದೆ ಉಳೀತು ಅಂತ ಸಮಾಧಾನವಾದರೂ ಇನ್ನೂ ಸೈಕಲ್ ಮೇಲೆ ಕೂತಿದ್ದಕ್ಕೆ ಕಟ್ರ ಕಡಿದಂತಾಯ್ತು. ಅದೇ ಸಿಟ್ಟಿನಲ್ಲಿ “ನಿಲ್ಲೊ ಬಂದೆ ಅಲ್ಲಿ, ದೊಡ್ಡೋರು ಇರ್ವಾಗ ಮರ್ಯಾದೆ ಕೊಡ್ಬಾರ್ದೇನಯ್ಯ? ಇದೇನ ನೀವೆಲ್ಲ ಓದಿ ಕಲ್ಲಿರೋದು? ಅದ್ಕೇ ಯಾರನ್ನೂ ಓದುಸ್ಬಾರ್ದು. ಎಲ್ಡಕ್ಸರ ಇಂಗ್ಲೀಸ್ ಕಲ್ತು ಹ್ಯಾಟ್ ಬೂಟ್ ಕ್ಯಾಟ್ ಅಂತ ಬಂದು ಊರಿನ ಮರ್ಯಾದೆ ಕಳೀತಾರೆ. ನಿಂತ್ಕ ಬಂದೆ” ಎಂದು ಕಿರುಚಾಡ್ತ ತನ್ನ ರುಬ್ಬುಗುಂಡಿನಂಥ ಗಿಡ್ಡ ದೇಹಾನ ಕುಣಿಸ್ತಾ ದಡಬಡ ಬಂದ. ಸಂಗಪ್ಪ ಹತ್ತಿರಕ್ಕೆ ಬರೋವರ್ಗೂ ಸಿಳ್ಳು ಹಾಕ್ತ ಇದ್ದ ರಾಜೇಂದ್ರ, ಆತ ಹತ್ತಿರಕ್ಕೆ ಬಂದ ಕೂಡ್ಲೆ ಏನ್ ಮಾಡ್ದ ಗೊತ್ತ ? ಟಕ್ ಅಂತ ಒಂದು ಕಣ್ಣು ಹೊಡೆದು ಅತ್ತ ಇತ್ತ ವಾಲಾಡ್ತ ಯಾವುದೋ ಸಿನಿಮಾ ಹಾಡು ಗುನುಗ್ತಾ ಹೊರಟೇಬಿಟ್ಟ. ಇದರಿಂದಂತೂ ಸಂಗಪ್ಪನಿಗೆ ಸಕತ್ ಅವಮಾನವಾಯ್ತು; ತಾಳ್ಮೆ ತಪ್ಪಿತು. ಸುತ್ತಮುತ್ತ ನೋಡಿದ; ಯಾರೂ ಕಾಣಿಸಲಿಲ್ಲ. ನಿಂತಲ್ಲೇ ಒಲೆ ಮೇಲಿನ ಹುರುಳಿಕಾಳಿನ ಥರಾ ಚಿಟಿಚಿಟಿ ಅಂದ. ‘ಹಿಡೀರೊ ಅವ್ನನ್ನ’ ಅಂತ ಆಜ್ಞೆ ಮಾಡೋಕೆ ಯಾರೂ ಹತ್ತಿರದಲ್ಲಿಲ್ಲ; ಸುಮ್ನೆ ಬಿಡೋಕೆ ಮನಸ್ಸಿಲ್ಲ. ಆದ್ರಿಂದ, ಅತಳ ವಿತಳ ಪಾತಾಳದಲ್ಲಿ ಅಡಗಿದರೂ ಬಿಡೊಲ್ಲ ಅನ್ನೋ ನಿರ್ಧಾರದಲ್ಲಿ ಬಾಯಿಗ್ ಬಂದಂಗೆ ಬಯ್ತಾ, ಓಡ್ತಾ ಹಿಂಬಾಲಿಸಿದ; ಇದೇ ಸಮಯ ಅಂತ ರಾಜೇಂದ್ರ ಸೈಕಲ್ ನಿಧಾನ ಮಾಡೋದು, ಸಂಗಪ್ಪ ಹತ್ರ ಬಂದ್ ಕೂಡ್ಲೆ ಓಡ್ಸೋದು – ಹೀಗೆ ಮಾಡಿ ಮತ್ತಷ್ಟು ರೇಗಿಸಿದ. ಈ ರುಬ್ಬುಗುಂಡು ಮತ್ತಷ್ಟು ಛಲದಿಂದ ಉರುಳಿತು. ಇಷ್ಟಕ್ಕೇ ಬಿಟ್ಟರೆ ತಾನು ಸೋತಂತಾಗುತ್ತೆ ಅನ್ನೋ ಅರಿವು ಬಂದು ಏನೇ ಆಗ್ಲಿ ನೋಡೇಬಿಡೋಣ ಅಂತ ಬುಸುಗರೀತಾನೆ ಓಡಿದ. ಈ ಅದ್ಭುತ ಮನರಂಜನೆಯ ಅಪರೂಪದ ದೃಶ್ಯಾನ ದೂರದಿಂದ ನೋಡಿದ ಊರಿನವರು ಏನೋ ಆಗುತ್ತೆ ಅಂತ ರಪರಪ ಬರೋಕೆ ಶುರು ಮಾಡಿದ್ರು, ಅದನ್ನು ಗಮನಿಸಿದ ಸಂಗಪ್ಪ ಮತ್ತಷ್ಟು ಅಭಿಮಾನಧನನಾದ. ರಾಜೇಂದ್ರನೂ ಅಷ್ಟೆ ಈಗ ಸೋತರೆ ಊರಿನವರ ಎದುರೇ ಅವಮಾನ. ಇವ್ನಿಗೆ ಸರ್ಯಾಗಿ ಮಾಡ್ಬೇಕೂಂತ ನಿರ್ಧರಿಸಿ ಸ್ವಲ್ಪ ನಿಧಾನಿಸಿದ. ಇನ್ನೇನು ಸಿಕ್ಕೇಬಿಟ್ಟ, ಹಿಡಿದು ಎರಡು ಬಾರುಸ್ತೀನಿ ಈ ನನ್ ಮಗ್ನಿಗೆ – ಅಂಡ್ಕೊಂಡು ಸಂಗಪ್ಪ ಒಂದು ಕೈಯಲ್ಲಿ ಪಂಚೆ, ಇನ್ನೊಂದು ಕೈಯ್ಯಲ್ಲಿ ವಾಕಿಂಗ್ ಸ್ಟಿಕ್ಕು ಹಿಡಕೊಂಡು ದೌಡಿ ಬಂದ; ಬಂದವನೇ ಸೈಕಲ್ಲಿನ ಹಿಂಭಾಗದ ಕ್ಯಾರಿಯರ್ ಹಿಡಕೊಂಡ. ಇವನು ಹಿಡಕೊಂಡ ಕೂಡಲೇ ರಾಜೇಂದ್ರ ಸೈಕಲ್‌ನ ಅತ್ತ ಇತ್ತ ಆಡಿಸಿ ಸಡನ್ನಾಗಿ ಸ್ಪೀಡು ಮಾಡಿದ. ಓಡಿ ಬಂದು ಹಿಡಿದ ಸಂಗಪ್ಪನಿಗೆ ಆಯ ತಪ್ಪಿ ಕೆಟ್ಟ ಕುಂಬಳದಂತೆ ನೆಲಕ್ಕೆ ಬಿದ್ದ. ಈ ಭವ್ಯ ದೃಶ್ಯ ದರ್ಶನಕ್ಕೆ ಜನರೂ ಬಂದು ಸೇರಿದರು. ಸಂಗಪ್ಪನಿಗಂತೂ ಭೂಮಿಯಾದ್ರೂ ಬಿರುಕು ಬಿಡಬಾರದೆ ಎನ್ನಿಸಿತು. ಇನ್ನು ಯಾವ ರೀತೀಲೂ ತನ್ನ ಸಾಹಸ ತೋರಿಸಲಾಗದೆ, ರಾಜೇಂದ್ರನ ಕಡೆ ನೋಡ್ತ ತಡವರಿಸಿಕೊಂಡು ಮೇಲೇಳ್ತ ತಾನು ಗಟ್ಟಿ ಮಾಡಿದ್ದ ಕನ್ನಡಾಂಗ್ಲ ಬಯ್ಸಳ ಬಾಣ ಬಿಟ್ಟ.
“ಕತ್ತೆ, ನನ್ ಹತ್ರ ತೋರುಸ್ತೀಯಾ ದೌಲತ್ತು, ನಾನ್ ಯಾರ್ ಗೊತ್ತಾ ? I am – ನಾನು – ಯಾರ್ ಗೊತ್ತಾ ? Stupid; Foolish; ನಾನ್ ಯಾರ್ ತಿಳೀತಾ ? Rascal. You me respect give and respect take. ನೀನು ನನಗೆ ಗೌರವ ಕೊಡು ಆಮ್ಯಾಕೆ ಗೌರವ ತಗೊ – ಗೊತ್ತಾಯ್ತೇನಯ್ಯ ? ನನ್ ಮುಂದೇ ಚಡ್ಡಿ ಬಿಟ್ಕಂಡ್ ಓಡಾಡ್ತಿದ್ದೋನು ನಂಗೇ ಎದ್ರಾಡ್ತೀಯೇನಯ್ಯ? ನಾನ್ ಯಾರು ಅಂತ ತಿಳ್ಕೊ. I am who you listen…
ಸಂಗಪ್ಪನ ಸಾಹಸದ ಸಂಕೇತವೆಂಬಂತೆ ವಾಕಿಂಗ್ ಸ್ಟಿಕ್ ಅತ್ತಿತ್ತ ಆಡುತ್ತಿತ್ತು. ಈ ದೊಣ್ಣೆವರಸೆ ತಮ್ಮ ಕಡೆ ತಿರುಗೀತು ಅಂತ ಬಂದ ಜನವೆಲ್ಲ ದೂರ ನಿಂತು ಆದರ್ಶ ಪ್ರೇಕ್ಷಕರಾಗಿದ್ದರು.
*****
ಮುಂದುವರೆಯುವುದು


















